ಶಿಕ್ಷಕರ ಹಗರಣ | ಅಮೆರಿಕ, ಕೆನಡದಲ್ಲಿದ್ದುಕೊಂಡು ವೇತನ ಪಡೆಯುತ್ತಿರುವ ಗುಜರಾತ್ ಸರಕಾರಿ ಶಾಲೆಯ ಶಿಕ್ಷಕರು!

Update: 2024-08-12 17:55 GMT

ಸಾಂದರ್ಭಿಕ ಚಿತ್ರ

ಅಹ್ಮದಾಬಾದ್ : ಸರಕಾರಿ ಶಾಲೆಯ ಶಿಕ್ಷಕರು ಅಮೆರಿಕ ಹಾಗೂ ಕೆನಡಾದಲ್ಲಿ ವಾಸಿಸುವುದರ ಜೊತೆಗೆ ತಮ್ಮ ವೇತನವನ್ನು ಪಡೆದುಕೊಳ್ಳುತ್ತಿರುವುದು ಇತ್ತೀಚೆಗೆ ಗುಜರಾತ್‌ ನಲ್ಲಿ ಬೆಳಕಿಗೆ ಬಂದಿದೆ.

ದಾಖಲೆಯ ಪ್ರಕಾರ ದಂತಾ ತಾಲೂಕಿನ ಪಂಛಾ ಗ್ರಾಮದ ನಿವಾಸಿಯಾಗಿರುವ ಭಾವನಾ ಪಟೇಲ್ ಬನಸ್ಕಾಂತ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ವಾಸ್ತವವಾಗಿ ಅವರು ಅಮೆರಿಕದಲ್ಲಿ ವಾಸವಾಗಿದ್ದಾರೆ. ಪ್ರತಿ ತಿಂಗಳ ವೇತನ ಅವರ ಖಾತೆಗೆ ಜಮೆ ಆಗುತ್ತಿದೆ. ಅವರು ವರ್ಷಕ್ಕೊಮ್ಮೆ ಮಾತ್ರ ಗ್ರಾಮಕ್ಕೆ ಆಗಮಿಸುತ್ತಾರೆ.

ಶಾಲೆ ಪ್ರಾಂಶುಪಾಲರು ಜಿಲ್ಲಾ ಪ್ರಾಥಮಿಕ ಶಿಕ್ಷಣಾಧಿಕಾರಿ, ಶಿಕ್ಷಣ ಇಲಾಖೆ ಹಾಗೂ ಶಿಕ್ಷಣ ಸಚಿವರಿಗೆ ಪತ್ರ ಬರೆದು ಎಚ್ಚರಿಸಿದ ಬಳಿಕ ಭಾವನಾ ಪಟೇಲ್ ಅವರ ಪ್ರಕರಣ ಬೆಳಕಿಗೆ ಬಂದಿದೆ. ಪತ್ರದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ತನಿಖೆಗೆ ಆದೇಶಿಸಿದೆ.

ಇದಾದ ಬಳಿಕ ಕಪಡ್‌ವಂಜ್ ಹಾಗೂ ವಾವ್ ತಾಲೂಕುಗಳಲ್ಲಿ ಮತ್ತೆರೆಡು ಪ್ರಕರಣಗಳು ಬೆಳಕಿಗೆ ಬಂದಿವೆ. ಕಪಡ್‌ವಂಜ್‌ನ ವಾಟಾ ಶಿವಪುರ ಪ್ರಾಥಮಿಕ ಶಾಲೆಯ ಶಿಕ್ಷಕ ಆಶಿಶ್ ಪಟೇಲ್ ಹಾಗೂ ವಾವ್‌ನ ಉಚ್ಪಾ ಗ್ರಾಮದ ಪ್ರಾಥಮಿಕ ಶಾಲೆಯ ಶಿಕ್ಷಕ ದರ್ಶನ್ ಪಟೇಲ್ ಕಳೆದ ಕೆಲವು ತಿಂಗಳಿಂದ ನಿರಂತರ ಗೈರು ಹಾಜರಾಗುತ್ತಿರುವುದು ಪತ್ತೆಯಾಗಿದೆ. ಆದರೆ, ಇಬ್ಬರೂ ತಮ್ಮ ತಿಂಗಳ ವೇತನವನ್ನು ಪಡೆಯುತ್ತಿದ್ದಾರೆ. ಆಶಿಶ್ ಪಟೇಲ್ ಅವರ ಬದಲಿಗೆ ವಿಜಯ್ ಎಂಬ ಹೆಸರಿನ ನಕಲಿ ಶಿಕ್ಷನೋರ್ವ ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದುದರಿಂದ ಇದು ಬೆಳಕಿಗೆ ಬಂದಿದೆ.

ಮಾಧ್ಯಮದವರು ಶಾಲೆಗೆ ಭೇಟಿ ನೀಡಿದಾಗ ವಿಜಯ್ ಅಲ್ಲಿಂದ ಪರಾರಿಯಾಗಿದ್ದಾನೆ. ಶಾಲೆಯ ಪ್ರಾಂಶುಪಾಲ ಅರ್ಜನ್ ರಾಥೋಡ್ ಈ ಬಗ್ಗೆ ನಿರ್ಲಕ್ಷ ವಹಿಸಿರುವುದನ್ನು ಒಪ್ಪಿಕೊಂಡಿದ್ದಾರೆ. ಈ ವಿಷಯ ತಿಳಿದ ಬಳಿಕ ಕಪಡ್‌ವಂಜ್ ತಾಲೂಕು ಅಬಿವೃದ್ಧಿ ಅಧಿಕಾರಿ ಮಹಿಪತ್ ಚೌಹಾಣ್ ವಿಸ್ತೃತ ತನಿಖೆಗೆ ಆದೇಶಿಸಿದ್ದಾರೆ.

ವಾವ್ ತಾಲೂಕಿನ ಉಚ್ಪಾ ಗ್ರಾಮದ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿರುವ ದರ್ಶನ್ ಪಟೇಲ್ ಕಳೆದ ಎರಡು ವರ್ಷಗಳಿಂದ ಕೆನಡಾದಲ್ಲಿ ವಾಸಿಸುತ್ತಿದ್ದಾರೆ. ಆದರೆ, ವೇತನ ಪಟ್ಟಿಯಲ್ಲಿ ಅವರ ಹೆಸರು ಈಗಲೂ ಇದೆ. ಶಿಕ್ಷಣ ಇಲಾಖೆಯಲ್ಲಿರುವ ಅಧಿಕಾರಿಗಳು ಅವರಿಗೆ ಬೆಂಬಲ ನೀಡುತ್ತಿರುವುದರಿಂದ ಪಟೇಲ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ. ಅಧಿಕೃತ ರಜೆ ಇಲ್ಲದೆ ಇದ್ದರೂ ಹಾಗೂ ಪುನರಾವರ್ತಿತ ಸೂಚನೆ ನೀಡಿದ ಹೊರತಾಗಿಯೂ ಪಟೇಲ್ 2022 ನವೆಂಬರ್ 10ರಿಂದ ಗೈರು ಹಾಜರಾಗಿದ್ದಾರೆ ಎಂದು ಉಚ್ಪಾ ಪ್ರಾಥಮಿಕ ಶಾಲೆಯ ಪ್ರಾಂಶುಪಾಲ ಬಿ.ಬಿ. ಬರೋಟ್ ದೃಢಪಡಿಸಿದ್ದಾರೆ.

ಇದೇ ರೀತಿ ಮೆಹ್ಸಾನ ಜಿಲ್ಲೆಯ ಕಾಡಿ ತಾಲೂಕಿನ ರಾಂಚೋಡ್ಪುರ ಗ್ರಾಮದ ಪ್ರಾಥಮಿಕ ಶಾಲಾ ಶಿಕ್ಷಕಿ ಕವಿತಾ ದಾಸ್ ಕಳೆದ 9 ತಿಂಗಳಿಂದ ಶಾಲೆಗೆ ಬಂದಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮೆಹ್ಸಾನ ಜಿಲ್ಲೆಯ ಪ್ರಾಥಮಿಕ ಶಿಕ್ಷಣ ಅಧಿಕಾರಿ ಡಾ. ಶರದ್ ತ್ರಿವೇದಿ, ‘‘ರಾಂಚೋಡ್ಪುರ ಪ್ರಾಥಮಿಕ ಶಾಲೆಯ ಶಿಕ್ಷಕಿ ಕವಿತಾ ದಾಸ್ ಅವರು ಶಿಕ್ಷಣ ಇಲಾಖೆಯ ಅನುಮತಿ ಪಡೆದು ವಿದೇಶಕ್ಕೆ ತೆರಳಿದ್ದಾರೆ. ಅವರಿಗೆ ಆರಂಭದಲ್ಲಿ 3 ತಿಂಗಳ ರಜೆ ನೀಡಲಾಗಿತ್ತು. ಈ ಅವಧಿಯ ಬಳಿಕ ಶಾಲೆಗೆ ಹಾಜರಾಗದ ಹಿನ್ನೆಲೆಯಲ್ಲಿ ಅವರಿಗೆ ಎರಡು ಬಾರಿ ನೋಟಿಸ್ ನೀಡಲಾಗಿದೆ. ಅವರು ಈ ನೋಟಿಸ್‌ಗೆ ಪ್ರತಿಕ್ರಿಯಿಸದೇ ಇದ್ದರೆ, ನಿಯಮಗಳ ಪ್ರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’’ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News