ಸುಪ್ರೀಂ ಕೋರ್ಟನ್ನು ಕೆರಳಿಸಿದ ಭಾರತೀಯ ವೈದ್ಯಕೀಯ ಸಂಘದ ನಿರ್ದೇಶಕರ ಹೇಳಿಕೆ

Update: 2024-04-30 13:05 GMT

ಸರ್ವೋಚ್ಚ ನ್ಯಾಯಾಲಯ | PC : PTI 

ಹೊಸದಿಲ್ಲಿ: ಪತಂಜಲಿ ಆಯುರ್ವೇದ ತನ್ನ ತಪ್ಪುದಾರಿಗೆಳೆಯುವ ಜಾಹೀರಾತುಗಳಿಗಾಗಿ ಪ್ರಕಟಿಸಿರುವ ಕ್ಷಮಾಯಾಚನೆಯಲ್ಲಿ ತನ್ನ ಸಹ ಸಂಸ್ಥಾಪಕ ರಾಮದೇವ್ ಅವರ ಹೆಸರನ್ನು ಉಲ್ಲೇಖಿಸುವ ಮೂಲಕ ಸುಧಾರಣೆಯನ್ನು ಮಾಡಿಕೊಂಡಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಹೇಳಿತು.

ಪತಂಜಲಿ ಆಯುರ್ವೇದ ಹೊರಡಿಸಿದ ಸಾರ್ವಜನಿಕ ಕ್ಷಮೆಯಾಚನೆಯನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠವು, ‘ಒಂದು ಗಣನೀಯ ಸುಧಾರಣೆಯಾಗಿದೆ. ಮೊದಲು ಪತಂಜಲಿ ಮಾತ್ರ ಇತ್ತು, ಈಗ ಹೆಸರುಗಳೂ ಇವೆ. ನಾವಿದನ್ನು ಪ್ರಶಂಸಿಸುತ್ತೇವೆ. ಅವರು ಅರ್ಥ ಮಾಡಿಕೊಂಡಿದ್ದಾರೆ’ ಎಂದು ಹೇಳಿತು.

ಸಾರ್ವಜನಿಕ ಕ್ಷಮೆಯಾಚನೆಯನ್ನು ಪ್ರಕಟಿಸಿರುವ ಪ್ರತಿಯೊಂದೂ ವೃತ್ತಪತ್ರಿಕೆಯ ಮೂಲಪುಟವನ್ನು ದಾಖಲೆಯೊಂದಿಗೆ ಸಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯವು ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರಿಗೆ ಸೂಚಿಸಿತು.

ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಭಾರತೀಯ ವೈದ್ಯಕೀಯ ಸಂಘ (ಐಎಂಎ)ದ ಅಧ್ಯಕ್ಷ ಆರ್.ವಿ.ಅಶೋಕನ್ ಅವರ ಹೇಳಿಕೆಗಳಿಗೆ ಸರ್ವೋಚ್ಚ ನ್ಯಾಯಾಲಯವು ತೀಕ್ಷ್ಣ ಆಕ್ಷೇಪವನ್ನು ವ್ಯಕ್ತಪಡಿಸಿತು.

ಪತಂಜಲಿ ಆಯುರ್ವೇದ ಪರ ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರು ಈ ಹೇಳಿಕೆಗಳನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

ಐಎಂಎ ಅಧ್ಯಕ್ಷರು ಪಿಟಿಐಗೆ ನೀಡಿದ ಸಂದರ್ಶನದ ವಿವರಗಳನ್ನು ತನಗೆ ಸಲ್ಲಿಸುವಂತೆ ಪೀಠವು ರೋಹಟ್ಗಿಯವರಿಗೆ ಸೂಚಿಸಿತು.

ಆ ಸಂದರ್ಶನವನ್ನು ನ್ಯಾಯಾಲಯಕ್ಕೆ ಸಲ್ಲಿಸಿ. ಇದು ಈವರೆಗೆ ನಡೆಯುತ್ತಿರುವುದಕ್ಕಿಂತ ಹೆಚ್ಚು ಗಂಭೀರವಾಗಲಿದೆ. ಹೆಚ್ಚಿನ ಗಂಭೀರ ಪರಿಣಾಮಗಳಿಗೆ ಸಿದ್ಧರಾಗಿರಿ ಎಂದು ಐಎಂಎ ಪರ ವಕೀಲರಿಗೆ ಸೂಚಿಸಿದ ಸರ್ವೋಚ್ಚ ನ್ಯಾಯಾಲಯವು,‘ನೀವು ಗೌರವಯುತವಾಗಿ ನಡೆದುಕೊಂಡಿಲ್ಲ. ನಾವು ಕೇಳಿದ್ದು ನಿಜವಾಗಿದ್ದರೆ,ನ್ಯಾಯಾಲಯ ಏನು ಮಾಡಬೇಕು ಎನ್ನುವುದನ್ನು ನೀವು ಹೇಗೆ ನಿರ್ಧರಿಸುತ್ತೀರಿ?’ಎಂದು ಪ್ರಶ್ನಿಸಿತು.

ಸರ್ವೋಚ್ಚ ನ್ಯಾಯಾಲಯವು ಐಎಂಎ ಮತ್ತು ಖಾಸಗಿ ವೈದ್ಯರನ್ನು ಟೀಕಿಸಿದ್ದು ದುರದೃಷ್ಟಕರ ಎಂದು ಪಿಟಿಐ ಸಂದರ್ಶನದಲ್ಲಿ ಹೇಳಿದ್ದ ಅಶೋಕನ್, ‘ನ್ಯಾಯಾಲಯವು ತನ್ನ ಮುಂದಿರುವ ವಿಷಯದತ್ತ ನೋಡಬೇಕು ಎಂದು ನಾವು ಪ್ರಾಮಾಣಿಕವಾಗಿ ನಂಬಿದ್ದೇವೆ. ಬಹುಶಃ ನ್ಯಾಯಾಲಯದಲ್ಲಿ ತಮ್ಮ ಮುಂದಿರುವ ವಿಷಯ ಇದಲ್ಲ ಎನ್ನುವುದನ್ನು ಅವರು ಪರಿಗಣಿಸಿರಲಿಲ್ಲ. ಕೋವಿಡ್ ವಿರುದ್ಧದ ಸಮರದಲ್ಲಿ ಅನೇಕ ವೈದ್ಯರು ತಮ್ಮ ಜೀವಗಳನ್ನು ತ್ಯಾಗಮಾಡಿದ್ದರು, ಹೀಗಿರುವಾಗ ವೈದ್ಯಕೀಯ ವೃತ್ತಿಯ ವಿರುದ್ಧ ಸಾರಾಸಗಟು ನಿಲುವನ್ನು ತಳೆಯುವುದು ಸರ್ವೋಚ್ಚ ನ್ಯಾಯಾಲಯಕ್ಕೆ ಶೋಭಿಸುವುದಿಲ್ಲ’ ಎಂದು ಹೇಳಿದ್ದರು.

ಸರ್ವೋಚ್ಚ ನ್ಯಾಯಾಲಯವು ಎ.23ರಂದು ವಿಚಾರಣೆ ಸಂದರ್ಭದಲ್ಲಿ ತಾನು ಪತಂಜಲಿಯತ್ತ ಒಂದು ಬೆರಳನ್ನು ತೋರಿಸುತ್ತಿದ್ದರೆ ಉಳಿದ ನಾಲ್ಕು ಬೆರಳುಗಳು ಐಎಂಎಯತ್ತ ತಿರುಗಿವೆ ಎಂದು ವ್ಯಕ್ತಪಡಿಸಿದ್ದ ಅಭಿಪ್ರಾಯದ ಕುರಿತು ಸುದ್ದಿಸಂಸ್ಥೆಯ ಪ್ರಶ್ನೆಗೆ ಅಶೋಕನ್ ಉತ್ತರಿಸುತ್ತಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News