ನಿಷೇಧ ಪ್ರಶ್ನಿಸುವ ಪಿಎಫ್‌ಐ ಅರ್ಜಿ ವಿಚಾರಣೆಗೆ ನಿರಾಕರಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಯಡಿ ತನ್ನ ಮೇಲೆ ವಿಧಿಸಲಾಗಿರುವ ಐದು ವರ್ಷಗಳ ನಿಷೇಧವನ್ನು ಪ್ರಶ್ನಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ (ಪಿಎಫ್‌ಐ) ಸಂಘಟನೆಯು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ಪಿಎಫ್‌ಐ ಮೊದಲು ಜಾಮೀನಿಗಾಗಿ ಸಂಬಂಧಪಟ್ಟ ಹೈಕೋರ್ಟ್‌ಗೆ ಮನವಿ ಸಲ್ಲಿಸಬೇಕು ಎಂದು ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಬೇಲಾ ತ್ರಿವೇದಿ ಅವರನ್ನೊಳಗೊಂಡ ನ್ಯಾಯಪೀಠ ಹೇಳಿತು.
2022 ಸೆಪ್ಟಂಬರ್ 28ರಂದು, ಕೇಂದ್ರದ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರಕಾರವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯವನ್ನು ದೇಶದ ಭಯೋತ್ಪಾದನೆ ನಿಗ್ರಹ ಕಾನೂನಿನಡಿ ‘‘ಕಾನೂನುಬಾಹಿರ ಸಂಘಟನೆ’’ ಎಂಬುದಾಗಿ ಘೋಷಿಸಿತ್ತು. ದೇಶದಲ್ಲಿ ಭಯವನ್ನು ಹುಟ್ಟಿಸಲು ಮತ್ತು ಆ ಮೂಲಕ ದೇಶದ ಭದ್ರತೆ ಮತ್ತು ಸಾರ್ವಜನಿಕ ವ್ಯವಸ್ಥೆಯನ್ನು ಅಪಾಯಕ್ಕೆ ಗುರಿಪಡಿಸಲು ಪಿಎಫ್‌ಐ ತನ್ನ ಎಂಟು ಸಹ ಸಂಘಟನೆಗಳೊಂದಿಗೆ ಸೇರಿಕೊಂಡು ‘‘ಹಿಂಸಾತ್ಮಕ ಭಯೋತ್ಪಾದನೆ ಚಟುವಟಿಕೆಗಳನ್ನು’’ ನಡೆಸಿದೆ ಎಂದು ಕೇಂದ್ರ ಸರಕಾರವು ಆರೋಪಿಸಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಅನುಷ್ಠಾನ ನಿರ್ದೇಶನಾಲಯವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ ಮೇಲೆ ದೇಶವ್ಯಾಪಿ ದಾಳಿ ನಡೆಸಿದ ಬಳಿಕ, ಅದರ ಮೇಲೆ ನಿಷೇಧ ಹೇರಲಾಗಿತ್ತು.
ಈ ವರ್ಷದ ಮಾರ್ಚ್‌ನಲ್ಲಿ, ದಿಲ್ಲಿ ಹೈಕೋರ್ಟ್ ನ್ಯಾಯಾಧೀಶ ದಿನೇಶ್ ಕುಮಾರ್ ಶರ್ಮ ನೇತೃತ್ವದ ಯುಎಪಿಎ ನ್ಯಾಯಮಂಡಳಿಯು ಕೇಂದ್ರ ಸರಕಾರದ ನಿರ್ಧಾರವನ್ನು ಎತ್ತಿಹಿಡಿದಿತ್ತು.