ಪಕ್ಷದಲ್ಲಿನ್ನೂ ದ್ರೋಹಿಗಳಿದ್ದಾರೆ : ಅಶೋಕ್ ಗೆಹ್ಲೋಟ್
ಜೈಪುರ: ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ತೊರೆದವರು ಅವಕಾಶವಾದಿಗಳು, ಪಕ್ಷಕ್ಕೆ ಭಾರವಾಗಿದ್ದವರು ಹಾಗೂ ದ್ರೋಹಿಗಳು ಎಂದು ಟೀಕಿಸಿರುವ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಈಗಲೂ ಪಕ್ಷದೊಳಗೆ ದ್ರೋಹಿಗಳಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಇದರ ಬೆನ್ನಿಗೇ, ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ನಡುವಿನ ಮುನಿಸು ಮುನ್ನೆಲೆಗೆ ಬಂದಿದೆ.
ಅಶೋಕ್ ಗೆಹ್ಲೋಟ್ ರಾಜಸ್ಥಾನದ ಮುಖ್ಯಮಂತ್ರಿಯಾಗಿದ್ದಾಗ, ತಮ್ಮ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಸಚಿನ್ ಪೈಲಟ್, ಅವರ ವಿರುದ್ಧ ನಿರಂತರವಾಗಿ ಬಂಡಾಯದ ಬಾವುಟ ಹಾರಿಸಿದ್ದರು. ಇದರಿಂದ ತೀವ್ರ ಮುಜುಗರಕ್ಕೊಳಗಾಗಿದ್ದ ಅಶೋಕ್ ಗೆಹ್ಲೋಟ್, ಪಕ್ಷದೊಳಗೆ ಕೊರೊನಾ ವೈರಸ್‌ಗಳಿವೆ ಎಂದು ಅಧಿಕಾರಿಗಳ ಸಭೆಯೊಂದರಲ್ಲಿ ವ್ಯಕ್ತಪಡಿಸಿದ್ದ ಅಸಹನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ಈ ಹೇಳಿಕೆ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್‌ರನ್ನೇ ಕುರಿತಾಗಿದೆ ಎಂಬ ಮಾತುಗಳು ಆಗ ರಾಜಕೀಯ ವಲಯದಲ್ಲಿ ಕೇಳಿ ಬಂದಿತ್ತು. ಇದೀಗ ಪಕ್ಷದೊಳಗೆ ದ್ರೋಹಿಗಳಿದ್ದಾರೆ ಎಂಬ ಅಶೋಕ್ ಗೆಹ್ಲೋಟ್‌ರ ಹೇಳಿಕೆ ಕೂಡಾ ಸಚಿನ್ ಪೈಲಟ್‌ರನ್ನೇ ಕುರಿತಾದದ್ದು ಎಂಬ ಊಹಾಪೋಹಗಳಿಂದ, ಗೆಹ್ಲೋಟ್ ಅವರ ಈ ಹೇಳಿಕೆಯು ವಿವಾದದ ಸ್ವರೂಪ ಪಡೆದುಕೊಂಡಿದೆ.
ಇಷ್ಟಕ್ಕೆ ನಿಲ್ಲದ ಅಶೋಕ್ ಗೆಹ್ಲೋಟ್, ಯುವಕರು ಪಕ್ಷಕ್ಕೆ ಆಸ್ತಿಯಾಗಬೇಕೇ ಹೊರತು ಹೊರೆ ಆಗಕೂಡದು ಎಂದು ಕಿವಿಮಾತು ಹೇಳುವ ಮೂಲಕ, ಸಚಿನ್ ಪೈಲಟ್‌ರನ್ನು ಹೊರೆ ಎಂದು ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ ಎಂಬ ವ್ಯಾಖ್ಯಾನಗಳೂ ಕೇಳಿ ಬರುತ್ತಿವೆ.