ವಯನಾಡ್ ಭೂಕುಸಿತ ಪೀಡಿತ ಗ್ರಾಮಗಳಲ್ಲಿ ಕಳ್ಳರ ಕಾಟ | ಸಂತ್ರಸ್ತರು ತೊರೆದ ಮನೆಗಳನ್ನು ದೋಚುತ್ತಿರುವ ದುಷ್ಕರ್ಮಿಗಳು
ವಯನಾಡ್ : ಭೀಕರ ಭೂಕುಸಿತಕ್ಕೆ ತುತ್ತಾಗಿರುವ ವಯನಾಡಿನ ಗ್ರಾಮಗಳಲ್ಲಿ ತಾವು ತೊರೆದುಹೋಗಿರುವ ಮನೆಗಳಲ್ಲಿ ಕಳ್ಳತನ ನಡೆಯುತ್ತಿರುವ ಬಗ್ಗೆ ಸಂತ್ರಸ್ತ ಗ್ರಾಮಸ್ಥರು ತಿಳಿಸಿರುವ ಹಿನ್ನೆಲೆಯಲ್ಲಿ, ಜಿಲ್ಲಾಡಳಿತವು ಆ ಪ್ರದೇಶಗಳಲ್ಲಿ ರಾತ್ರಿಯಲ್ಲಿ ಗಸ್ತು ನಡೆಸಲು ಪೊಲೀಸರನ್ನು ನಿಯೋಜಿಸಿದೆ.
ಈ ಭೀಕರ ಮಾನವೀಯ ಬಿಕ್ಕಟ್ಟಿನ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಕಳ್ಳರು ಅಮೂಲ್ಯ ವಸ್ತುಗಳನ್ನು ಕಳವುಗೈಯುತ್ತಿದ್ದಾರೆಂದು ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರು ಶಂಕಕಿಸಿದ್ದಾರೆ.
ಕಳ್ಳತನದ ಉದ್ದೇಶದೊಂದಿಗೆ ರಾತ್ರಿ ವೇಳೆ ದುರಂತಕ್ಕೀಡಾದ ಪ್ರದೇಶವನ್ನು ಪ್ರವೇಶಿಸುವವರನ್ನು ಗುರುತಿಸಿ, ಶಿಕ್ಷಿಸಬೇಕೆಂದು ಸಂತ್ರಸ್ತರು ಆಗ್ರಹಿಸಿದ್ದಾರೆ.
ಭೂಕುಸಿತದ ದುರಂತದ ಸಂದರ್ಭ ಪ್ರಾಣವುಳಿಸಿಕೊಳ್ಳಲು ನಾವು ನಮ್ಮ ಮನೆಗಳನ್ನು ತೊರೆದುಬಂದೆವು. ಆ ಬಳಿಕ ನಮ್ಮ ಮನೆಯ ಪರಿಸ್ಥಿತಿಯನ್ನು ನೋಡಲು ಹಿಂತಿರುಗಿದಾಗ, ಮನೆಯ ಬಾಗಿಲುಗಳು ಮುರಿದಿರುವುದು ಕಂಡುಬಂದಿದೆಯೆಂದು ಸಂತ್ರಸ್ತರು ಹೇಳುತ್ತಾರೆ.
ರಿಸಾರ್ಟ್‌ಗಳಲ್ಲಿ ತಾವು ಉಳಿದುಕೊಂಡಿದ್ದ ಕೊಠಡಿಗಳನ್ನು ಕೂಡಾ ಕಳ್ಳರು ಗುರಿಯಿಸಿದ್ದು, ತಮ್ಮ ಉಡುಪುಗನ್ನು ದೋಚಿದ್ದಾರೆಂದು ಹಲವಾರು ಮಂದಿ ದೂರಿದ್ದಾರೆ.
ಈ ಮಧ್ಯೆ ಜಿಲ್ಲಾಡಳಿತವು ಆಗಸ್ಟ್ 4ರಂದು ಹೇಳಿಕೆಯೊಂದನ್ನು ನೀಡಿ, ಚೂರಲ್‌ಮಲ ಹಾಗೂ ಮುಂಡಕ್ಕೈ ಸೇರಿದಂತೆ ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ಪೊಲೀಸ್ ಗಸ್ತನ್ನು ಆರಂಭಿಸಲಾಗಿದೆಯೆಂದು ಹೇಳಿಕೆ ತಿಳಿಸಿದೆ.
ರಾತ್ರಿ ವೇಳೆ ಅ ಅನುಮತಿಯಿಲ್ಲದೆ ಬಾಧಿತ ಪ್ರದೇಶಗಳು ಅಥವಾ ಸಂತ್ರಸ್ತರ ಮನೆಗಳನ್ನು ಪ್ರವೇಶಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿಕೆ ತಿಳಿಸಿದೆ.