ಬಿಜೆಪಿ ಮುಖಂಡನ ಬೆದರಿಕೆಗೆ ಪೊಲೀಸ್ ಅಧಿಕಾರಿ ಪ್ರತಿಕ್ರಿಯಿಸಿದ್ದು ಹೀಗೆ..

Update: 2024-09-17 02:59 GMT

PC: screengrab/X.com

ಸಿಂಗ್ರೋಲಿ (ಮಧ್ಯಪ್ರದೇಶ): ಇತರ ಅಧಿಕಾರಿಗಳ ಸಮ್ಮುಖದಲ್ಲಿ ನಿನ್ನ ಸಮವಸ್ತ್ರ ಕಳಚಿ ಹಾಕುವುದಾಗಿ ಬಿಜೆಪಿ ಮುಖಂಡ ಹಾಕಿದ ಎನ್ನಲಾದ ಬೆದರಿಕೆಗೆ ಪ್ರತಿಭಟನಾರ್ಥವಾಗಿ ಸಹಾಯಕ ಸಬ್ ಇನ್ಸ್ಪೆಕ್ಟರ್ ಒಬ್ಬರು ಸಮವಸ್ತ್ರವನ್ನು ಹರಿದು ಹಾಕಿದ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.

ಕಚೇರಿಯಲ್ಲಿ ಅಳವಡಿಸಿದ್ದ ಸಿಸಿಟಿವಿಯ ಈ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವಿಡಿಯೊ ಏಳು ತಿಂಗಳು ಹಳೆಯದು ಎನ್ನಲಾಗಿದ್ದು, ಘಟನೆ 2024ರ ಫೆಬ್ರುವರಿ 2ರಂದು ಸಿಂಗ್ರೋಲಿ ಜಿಲ್ಲೆಯ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಸಹಾಯಕ ಸಬ್ ಇನ್ಸ್ಪೆಕ್ಟರ್ ವಿನೋದ್ ಮಿಶ್ರಾ ತಮ್ಮ ಸಮವಸ್ತ್ರವನ್ನು ಹಿರಿಯ ಅಧಿಕಾರಿಗಳು ಮತ್ತು ಪಾಲಿಕೆ ಅಧಿಕಾರಿಗಳ ಸಮಕ್ಷಮದಲ್ಲಿ ಕಳಚುತ್ತಿದ್ದಾರೆ. ಕುರ್ಚಿಯಿಂದ ಎದ್ದು ಎಲ್ಲರ ಸಮ್ಮುಖದಲ್ಲೇ ವಸ್ತ್ರ ಕಳಚುತ್ತಾರೆ. ಇತರರು ಸಮಾಧಾನಪಡಿಸುವ ಪ್ರಯತ್ನ ಮಾಡಿದರೂ, ಫಲಪ್ರದವಾಗಲಿಲ್ಲ.

ಕೊತ್ವಾಲಿ ಪ್ರದೇಶದಲ್ಲಿ ಚರಂಡಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿವಾದ ಸೃಷ್ಟಿಯಾಗಿತ್ತು. ಎಎಸ್ಐ ಮಿಶ್ರಾ ಸ್ಥಳೀಯರ ಜತೆ ವಾಗ್ವಾದಕ್ಕೆ ಇಳಿದಿದ್ದರು. ಇದಾದ ಬಳಿಕ ಪಾಲಿಕೆ ಅಧಿಕಾರಿಗಳು ಮತ್ತು ಇತರ ಅಧಿಕಾರಿಗಳು ಆಗಮಿಸಿದ್ದು, ಶಮನಗೊಳಿಸುವ ಪ್ರಯತ್ನ ಮಾಡಿದರು. ಬಿಜೆಪಿ ಪಾಲಿಕೆ ಸದಸ್ಯೆಯ ಪತಿ ಅರ್ಜುನ ಗುಪ್ತಾ ಈ ಸಂದರ್ಭದಲ್ಲಿ ಅಧಿಕಾರಿಯ ಸಮವಸ್ತ್ರ ಕಳಚಿಹಾಕುವುದಾಗಿ ಬೆದರಿಕೆ ಹಾಕಿದ್ದ ಎಂದು ಆಪಾದಿಸಲಾಗಿದೆ.

ಸಮವಸ್ತ್ರ ಕಳಚಿಹಾಕಿದ ಅಧಿಕಾರಿಯ ವಿರುದ್ಧ ಎಸ್ಪಿ ನಿವೇದಿತಾ ಗುಪ್ತಾ ಕ್ರಮ ಕೈಗೊಂಡಿದ್ದರು. ಏಳು ತಿಂಗಳು ಬಳಿಕ ಈ ವಿಡಿಯೊ ವೈರಲ್ ಆಗಿದ್ದು, ಸಿಸಿಟಿವಿ ದೃಶ್ಯಾವಳಿ ಸೋರಿಕೆಯಾದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ವಿರೋಧ ಪಕ್ಷವಾದ ಕಾಂಗ್ರೆಸ್ ಆಡಳಿತ ಪಕ್ಷದ ಬಲಪ್ರದರ್ಶನವನ್ನು ಖಂಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News