ಕೇರಳ, ತಮಿಳುನಾಡು ಬಿಜೆಪಿ ಮುಖಂಡರ ರಾಜ್ಯಸಭಾ ಪ್ರವೇಶಕ್ಕೆ ಈ ರಾಜ್ಯ ಸುರಕ್ಷಿತ ಮಾರ್ಗ
ಭೋಪಾಲ್: ಮೊದಲ ಬಾರಿಗೆ ಕೇಂದ್ರ ಸಂಪುಟದಲ್ಲಿ ರಾಜ್ಯ ಸಚಿವರಾಗಿ ನಿಯುಕ್ತರಾಗಿರುವ ಜಾರ್ಜ್ ಕುರಿಯನ್ ಅವರನ್ನು ಮಧ್ಯಪ್ರದೇಶದಿಂದ ರಾಜ್ಯ ಸಭೆಗೆ ನಡೆಯುವ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಂಗಳವಾರ ಘೋಷಿಸಲಾಗಿದೆ. ಇದರೊಂದಿಗೆ ಕೇಸರಿ ಪಕ್ಷ ಆಳ್ವಿಕೆಯ ಈ ಮಧ್ಯ ಭಾರತದ ರಾಜ್ಯವು, ಕೇರಳ ಹಾಗೂ ತಮಿಳುನಾಡಿನ ರಾಜಕೀಯ ಮುಖಂಡರಿಗೆ ಸಂಸತ್ತಿನ ಮೇಲ್ಮನೆ ಪ್ರವೇಶಿಸಲು ಪರಿಪೂರ್ಣ ಹಾಗೂ ಸುರಕ್ಷಿತ ಮಾರ್ಗವಾಗಿ ರೂಪುಗೊಂಡಿದೆ.
64 ವರ್ಷ ವಯಸ್ಸಿನ ಕುರಿಯನ್ 1980ರಲ್ಲಿ ಪಕ್ಷ ಆರಂಭವಾದಾಗಿನಿಂದಲೂ ಕೇರಳದಲ್ಲಿ ಪಕ್ಷದ ಮುಖಂಡರಾಗಿ ಇದ್ದವರು. 230 ಸದಸ್ಯಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ ಭರ್ಜರಿ ಬಹುಮತ ಹೊಂದಿರುವ ಹಿನ್ನೆಲೆಯಲ್ಲಿ ಕುರಿಯನ್ ಆಯ್ಕೆ ಖಚಿತವಾಗಿದೆ.
ಈ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದಲ್ಲಿ ಅವರು ಕಳೆದ 32 ವರ್ಷಗಳ ಅವಧಿಯಲ್ಲಿ ಮಧ್ಯಪ್ರದೇಶದಿಂದ ಆಯ್ಕೆಯಾಗುತ್ತಿರುವ ಕೇರಳ ಅಥವಾ ತಮಿಳುನಾಡಿಗೆ ಸೇರಿದ ಐದನೇ ರಾಜಕಾರಣಿ ಎನಿಸಲಿದ್ದಾರೆ. ಈ ಎರಡು ದಕ್ಷಿಣ ರಾಜ್ಯಗಳಲ್ಲಿ ತನ್ನ ನೆಲೆಯನ್ನು ಕಂಡುಕೊಳ್ಳಲು ಬಿಜೆಪಿ ಶತಾಯ ಗತಾಯ ಪ್ರಯತ್ನಿಸುತ್ತಿದೆ.
ಅಲ್ಪಸಂಖ್ಯಾತ ವ್ಯವಹಾರ, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಖಾತೆ ರಾಜ್ಯ ಸಚಿವರಾಗಿರುವ ಕುರಿಯನ್, ಸುಪ್ರೀಂಕೋರ್ಟ್ ವಕೀಲರೂ ಹೌದು. ಇದಕ್ಕೂ ಮುನ್ನ ಅವರು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷರಾಗಿ, ಅಂದಿನ ರೈಲ್ವೆ ಖಾತೆ ರಾಜ್ಯ ಸಚಿವ ಓ.ರಾಜಗೋಪಾಲ್ ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದವರು.
ಇದಕ್ಕೂ ಮುನ್ನ 1992ರಲ್ಲಿ ಓ.ರಾಜಗೋಪಾಲ್ ಅವರು ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಬಳಿಕ 1998ರಲ್ಲಿ ದ್ವಿತೀಯ ಬಾರಿಗೆ ಅದೇ ರಾಜ್ಯದಿಂದ ಮೇಲ್ಮನೆಗೆ ಆಯ್ಕೆಯಾದರು. ತಮಿಳುನಾಡಿನ ಎಸ್.ತಿರುವನಕ್ಕೂರರಸರ್ 2005ರಲ್ಲಿ ರಾಜ್ಯದಿಂದ ರಾಜ್ಯಸಭೆ ಪ್ರವೇಶಿಸಿದ್ದರು. ಮಾಜಿ ಕೇಂದ್ರ ಸಚಿವರೂ ಆದ ಅವರು ಸಂಸದ ಹುದ್ದೆ ತ್ಯಜಿಸಿ ನಾಲ್ಕು ವರ್ಷ ಬಳಿಕ ಬಿಜೆಪಿಗೂ ರಾಜೀನಾಮೆ ನೀಡಿದರು.
ಏಳು ವರ್ಷ ಬಳಿಕ ತಮಿಳುನಾಡು ಬಿಜೆಪಿ ಮುಖ್ಯಸ್ಥ ಲಾ ಗಣೇಶನ್ ಅಯ್ಯರ್ 2016-18ರ ಅವಧಿಗೆ ರಾಜ್ಯಸಭಾ ಉಪಚುನಾವಣೆಯಲ್ಲಿ ಇಲ್ಲಿಂದ ಗೆದ್ದಿದ್ದರು. ಮತ್ತೊಬ್ಬ ತಮಿಳುನಾಡು ಮುಖಂಡ ಎಲ್.ಮುರುಗನ್ 2021ರಲ್ಲಿ ಉಪಚುನಾವಣೆ ಮೂಲಕ ಮಧ್ಯಪ್ರದೇಶದಿಂದ ಗೆಲುವು ಸಾಧಿಸಿದರು. ಅವರು ಮೋದಿ 2.0 ಮತ್ತು ಮೋದಿ 3.0 ಸಂಪುಟದಲ್ಲೂ ರಾಜ್ಯಸಚಿವರಾಗಿದ್ದಾರೆ.