ಬಿಜೆಪಿ ಸೇರಲು ರೂ. 5 ಕೋಟಿ ಆಫರ್: ಆಪ್ ಶಾಸಕಿಯ ಆರೋಪ
ಲುಧಿಯಾನ: ಬಿಜೆಪಿ ಸೇರಲು ತನಗೆ ಆ ಪಕ್ಷ ರೂ 5 ಕೋಟಿ ಆಫರ್ ಮಾಡಿದೆ, ಅಷ್ಟೇ ಅಲ್ಲದೆ ಹಿರಿಯ ಪಕ್ಷ ನಾಯಕರೊಂದಿಗೆ ದಿಲ್ಲಿಯಲ್ಲಿ ಸಭೆಗೆ ಏರ್ಪಾಟು ಮಾಡುವುದಾಗಿ ಹಾಗೂ ಲೋಕಸಭಾ ಚುನಾವಣೆ ಸ್ಪರ್ಧಿಸಲು ಟಿಕೆಟ್ ನೀಡುವುದಾಗಿಯೂ ಭರವಸೆ ನೀಡಿ ಬಿಜೆಪಿ ಆಮಿಷವೊಡ್ಡಿದೆ ಎಂದು ಪಂಜಾಬ್‌ನ ದಕ್ಷಿಣ ಲುಧಿಯಾನಾದ ಆಪ್ ಶಾಸಕಿ ರಾಜೀಂದರ್‌ಪಾಲ್ ಕೌರ್ ಛೀಮಾ ಆರೋಪಿಸಿದ್ದಾರೆ. ಆಕೆ ಈ ಕುರಿತು ಪೊಲೀಸ್ ದೂರು ದಾಖಲಿಸಿದ್ದಾರೆ. ಎಫ್‌ಐಆರ್ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
ಬಿಜೆಪಿ ಕೂಡ ಈ ಪ್ರಕರಣ ಕುರಿತಂತೆ ಸಮಗ್ರ ತನಿಖೆಗೆ ಆಗ್ರಹಿಸಿದೆ.
ದೂರುದಾರೆ ಶಾಸಕಿ ಪ್ರಕಾರ ಆಕೆಗೆ ಬಿಜೆಪಿಯ ದಿಲ್ಲಿ ಕಚೇರಿಯಿಂದ ಎಂದು ಹೇಳಿಕೊಂಡು ಸೇವಕ್ ಸಿಂಗ್ ಎಂಬ ಬಿಜೆಪಿ ಕಾರ್ಯಕರ್ತ ಕರೆ ಮಾಡಿ ಆಮಿಷವೊಡ್ಡಿದ್ದ. ತನಗೆ ಬಂದ ಫೋನ್ ಕರೆಗಳ ಕುರಿತು ಆಕೆ ಮಾಹಿತಿ ಕೂಡ ನೀಡಿದ್ದಾರೆ. ಕರೆ ಸ್ವೀಡನ್ ದೇಶದ ಸಂಖ್ಯೆಯಿಂದ ಬಂದಂತಿದೆ ಆದರೆ ಯಾವುದೂ ದೃಢಪಟ್ಟಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಪಂಜಾಬ್ ಬಿಜೆಪಿಯ ಮುಖ್ಯ ವಕ್ತಾರ ಜೈ ಬನ್ಸಾಲ್ ಪ್ರತಿಕ್ರಿಯಿಸಿ ಸೇವಕ್ ಸಿಂಗ್ ಎಂಬ ವ್ಯಕ್ತಿ ನಮ್ಮ ಪಕ್ಷದಲ್ಲಿಲ್ಲ ಎಂದಿದ್ದಾರೆ.