ಜಾತ್ಯತೀತತೆಯ ಸೋಗಿನಲ್ಲಿ ವಿಪಕ್ಷಗಳು ಹಿಂದು-ಮುಸ್ಲಿಮರು ಕಚ್ಚಾಡುವಂತೆ ಮಾಡಿದವು : ಪ್ರಧಾನಿ ಮೋದಿ
ಲಕ್ನೋ: ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಕುರಿತು ವಿಪಕ್ಷಗಳು ಸುಳ್ಳುಗಳನ್ನು ಹರಡಿವೆ ಹಾಗೂ ಮತ ಬ್ಯಾಂಕ್ ರಾಜಕಾರಣ ಮಾಡಿ ಹಿಂದುಗಳು ಮತ್ತು ಮುಸ್ಲಿಮರು ಬಡಿದಾಡಿಕೊಳ್ಳುವಂತೆ ಮಾಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಉತ್ತರ ಪ್ರದೇಶದ ಲಾಲ್‌ಗಂಜ್‌ನಲ್ಲಿ ಸಾರ್ವಜನಿಕ ಸಭೆಯೊಂದನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ “ಮತ ಬ್ಯಾಂಕ್ ರಾಜಕಾರಣ ಮಾಡಿ, ಹಿಂದುಗಳು ಮತ್ತು ಮುಸ್ಲಿಮರು ಬಡಿದಾಡಿಕೊಳ್ಳುವಂತೆ ಮಾಡಿ ನೀವು ದೇಶವು 60 ವರ್ಷಗಳಿಗೂ ಹೆಚ್ಚು ಕಾಲ ಕೋಮುವಾದದ ಅಗ್ನಿಯಲ್ಲಿ ಉರಿಯುವಂತೆ ಮಾಡಿದ್ದೀರಿ ಎಂದು ದೇಶದ ಜನರು ಅರಿತಿದ್ದಾರೆ. ನೀವು ಜಾತ್ಯತೀತೆಯ ಸೋಗು ಧರಿಸಿದ್ದರೆ ಮೋದಿ ನಿಮ್ಮ ಸತ್ಯವನ್ನು ಬಯಲಗೊಳಿಸಿದ್ದಾನೆ,” ಎಂದು ಪ್ರಧಾನಿ ಹೇಳಿದರು.
ಇಂಡಿಯಾ ಮೈತ್ರಿಕೂಟವು ಓಲೈಕೆಯಲ್ಲಿ ಮುಳುಗಿ ಹೋಗಿದೆ. ಸಮಾಜವಾದಿ ಪಕ್ಷದ ಪ್ರಮುಖ ನಾಯಕರು ಪ್ರತಿ ದಿನ ರಾಮ ಮಂದಿರದ ಬಗ್ಗೆ ಅಗ್ಗದ ಮಾತುಗಳನ್ನಾಡುತ್ತಾರೆ ಎಂದು ಅವರು ಆರೋಪಿಸಿದರು.
ಸಿಎಎ ಶ್ಲಾಘಿಸಿ ಮಾತನಾಡಿದ ಅವರು “ನಮ್ಮ ದೇಶದಲ್ಲಿ ಬಹಳ ಸಮಯದಿಂದ ನಿರಾಶ್ರಿತರಾಗಿ ವಾಸಿಸಿರುವ ಈ ಜನರು ಧರ್ಮದ ಆಧಾರದಲ್ಲಿ ನಡೆದ ವಿಭಜನೆಯ ಬಲಿಪಶುಗಳು,” ಎಂದು ಈ ಕಾಯಿದೆಯಡಿ ಪೌರತ್ವಕ್ಕೆ ಅರ್ಹರಾಗುವ ಜನರ ಬಗ್ಗೆ ಹೇಳಿದರು.