ವಿಶ್ವಾದ್ಯಂತ 1.1 ಶತಕೋಟಿ ಜನರು ಕಡುಬಡತನದಲ್ಲಿ ಬದುಕುತ್ತಿದ್ದಾರೆ: ವಿಶ್ವಸಂಸ್ಥೆ ವರದಿ

Update: 2024-10-18 09:00 GMT

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ವಿಶ್ವಾದ್ಯಂತ ಒಂದು ಶತಕೋಟಿಗೂ ಅಧಿಕ ಜನರು ಕಡುಬಡತನದಲ್ಲಿ ಬದುಕುತ್ತಿದ್ದಾರೆ ಮತ್ತು ಪೀಡಿತರಲ್ಲಿ ಅರ್ಧಕ್ಕೂ ಹೆಚ್ಚಿನವರು ಮಕ್ಕಳಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್ಡಿಪಿ) ವರದಿಯು ಗುರುವಾರ ತಿಳಿಸಿದೆ.

ಆಕ್ಸ್ಫರ್ಡ್ ಪಾವರ್ಟಿ ಆ್ಯಂಡ್ ಹ್ಯೂಮನ್ ಡೆವಲಪ್ಮೆಂಟ್ ಇನಿಷಿಯೇಟಿವ್ (ಒಪಿಎಚ್ಐ) ಸಹಯೋಗದೊಂದಿಗೆ ಸಿದ್ಧಪಡಿಸಲಾಗಿರುವ ವರದಿಯು,ಜಗತ್ತು 2023ರಲ್ಲಿ ಹೆಚ್ಚಿನ ಸಂಘರ್ಷಗಳಿಗೆ ಸಾಕ್ಷಿಯಾಗಿರುವದರಿಂದ ಯುದ್ಧನಿರತ ದೇಶಗಳಲ್ಲಿ ಬಡತನ ದರಗಳು ಮೂರು ಪಟ್ಟು ಹೆಚ್ಚಾಗಿವೆ ಎಂದು ಹೇಳಿದೆ.

ಯುಎನ್ಡಿಪಿ ಮತ್ತು ಒಪಿಎಚ್ಐ 2010ರಿಂದ ತಮ್ಮ ಬಹುಆಯಾಮ ಬಡತನ ಸೂಚ್ಯಂಕ(ಎಂಪಿಐ)ವನ್ನು ಪ್ರಕಟಿಸುತ್ತಿದ್ದು,ಇದಕ್ಕಾಗಿ ಅವು ಒಟ್ಟು 6.3 ಶತಕೋಟಿ ಜನಸಂಖ್ಯೆಯನ್ನು ಹೊಂದಿರುವ 112 ದೇಶಗಳಿಂದ ದತ್ತಾಂಶಗಳನ್ನು ಸಂಗ್ರಹಿಸುತ್ತವೆ.

ಸಾಕಷ್ಟು ವಸತಿ,ನೈರ್ಮಲ್ಯ,ವಿದ್ಯುತ್,ಅಡಿಗೆ ಇಂಧನ,ಪೋಷಕಾಂಶ ಮತ್ತು ಶಾಲಾ ಹಾಜರಾತಿಗಳ ಕೊರತೆಯಂತಹ ಸೂಚಕಗಳನ್ನು ವರದಿಯು ಬಳಸುತ್ತದೆ.

2024ರ ಎಂಪಿಐ ಗಂಭೀರ ಚಿತ್ರಣವನ್ನು ತೋರಿಸಿದೆ. 1.1 ಶತಕೋಟಿ ಜನರು ಬಹುಆಯಾಮದ ಬಡತನವನ್ನು ಎದುರಿಸುತ್ತಿದ್ದಾರೆ ಮತ್ತು ಈ ಪೈಕಿ 45.5 ಕೋಟಿ ಜನರು ಸಂಘರ್ಷಗಳ ನೆರಳಿನಲ್ಲಿ ಬದುಕುತ್ತಿದ್ದಾರೆ ಎಂದು ಯುಎನ್ಡಿಪಿಯ ಮುಖ್ಯ ಸಂಖ್ಯಾಶಾಸ್ತ್ರಜ್ಞ ಯಾಂಚುನ್ ಝಾಂಗ್ ಹೇಳಿದರು.

ಸಂಘರ್ಷ ಪೀಡಿತ ದೇಶಗಳಲ್ಲಿಯ ಬಡವರಿಗೆ ಮೂಲಭೂತ ಅಗತ್ಯಗಳನ್ನು ಪಡೆಯುವುದು ಹೆಚ್ಚು ಕಠಿಣ ಮತ್ತು ಹೆಚ್ಚು ಹತಾಶ ಹೋರಾಟವಾಗಿದೆ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಝಾಂಗ್ ತಿಳಿಸಿದರು.

ವರದಿಯು 110 ದೇಶಗಳಲ್ಲಿಯ 6.1 ಶತಕೋಟಿ ಜನರ ಪೈಕಿ 1.1 ಶತಕೋಟಿ ಜನರು ತೀವ್ರ ಬಹುಆಯಾಮ ಬಡತನವನ್ನು ಎದುರಿಸುತ್ತಿದ್ದಾರೆ ಎಂಬ ಕಳೆದ ವರ್ಷದ ವರದಿಯಲ್ಲಿನ ಅಭಿಪ್ರಾಯವನ್ನು ಪ್ರತಿಧ್ವನಿಸಿದೆ.

18 ವರ್ಷಕ್ಕಿಂತ ಕಡಿಮೆ ವಯೋಮಾನದ 58.4 ಕೋಟಿ ಜನರು ಕಡುಬಡತನದಲ್ಲಿ ಬದುಕುತ್ತಿದ್ದಾರೆ ಎಂದು ಗುರುವಾರದ ವರದಿಯು ತೋರಿಸಿದೆ. ಶೇ.13.5ರಷ್ಟು ವಯಸ್ಕರಿಗೆ ಹೋಲಿಸಿದರೆ ಇದು ವಿಶ್ವಾದ್ಯಂತ ಇಂತಹ ಮಕ್ಕಳ ಶೇ.27.9ರಷ್ಟಿದೆ. ವಿಶ್ವದಲ್ಲಿಯ ಶೇ.83.2ರಷ್ಟು ಕಡುಬಡವರು ಸಬ್-ಸಹಾರನ್ ಆಫ್ರಿಕಾ ಮತ್ತು ದಕ್ಷಿಣ ಏಶ್ಯಾದಲ್ಲಿ ವಾಸಿಸುತ್ತಿದ್ದಾರೆ ಎಂದು ಅದು ಹೇಳಿದೆ.

ಸಂಘರ್ಷಗಳು ಬಡತನವನ್ನು ಕಡಿಮೆ ಮಾಡುವ ಪ್ರಯತ್ನಗಳಿಗೆ ಅಡ್ಡಿಯಾಗುತ್ತಿವೆ ಎಂದು ಹೇಳಿದ ಒಪಿಎಚ್ಐ ನಿರ್ದೇಶಕಿ ಸಬಿನಾ ಅಲ್ಕೈರ್,‘ಕೆಲ ಮಟ್ಟದಲ್ಲಿ ವರದಿಯಲ್ಲಿನ ಅಂಶಗಳು ಎದ್ದು ಕಾಣುವಂತಿವೆ. ಒಳ್ಳೆಯ ಜೀವನವನ್ನು ನಡೆಸಲು ಹೆಣಗಾಡುತ್ತಿರುವ ಮತ್ತು ಇದೇ ಸಮಯದಲ್ಲಿ ತಮ್ಮ ಸುರಕ್ಷತೆಯ ಬಗ್ಗೆ ಭಯಪಡುತ್ತಿರುವ ಜನರ ಸಂಖ್ಯೆ45.5 ಕೋಟಿ ಆಗಿರುವುದು ನಮಗೆ ಆಘಾತವನ್ನುಂಟು ಮಾಡಿದೆ’ಎಂದರು.

ಇದು ಬಡತನವನ್ನು ತಗ್ಗಿಸುವಲ್ಲಿ ಮತ್ತು ಶಾಂತಿಯನ್ನು ಕಾಯ್ದುಕೊಳ್ಳುವಲ್ಲಿ ಅಂತರಾಷ್ಟ್ರೀಯ ಸಮುದಾಯಕ್ಕೆ ಕಟುವಾದ, ಆದರೆ ಅನಿವಾರ್ಯ ಸವಾಲು ಆಗಿದೆ ಎಂದರು.

ಭಾರತವು ಅತ್ಯಂತ ಹೆಚ್ಚಿನ ಕಡುಬಡವರನ್ನು ಹೊಂದಿರುವ ದೇಶವಾಗಿದೆ. ಅದರ 140 ಕೋಟಿ ಜನಸಂಖ್ಯೆಯಲ್ಲಿ 23.4 ಕೋಟಿ ಜನರು ಕಡುಬಡನದಲ್ಲಿ ವಾಸಿಸುತ್ತಿದ್ದಾರೆ. ಪಾಕಿಸ್ತಾನ, ಇಥಿಯೋಪಿಯಾ,ನೈಜೀರಿಯಾ ಮತ್ತು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ನಂತರದ ಸ್ಥಾನಗಳಲ್ಲಿವೆ. 1.1 ಶತಕೋಟಿ ಬಡವರಲ್ಲಿ ಅರ್ಧದಷ್ಟು ಜನರು ಈ ಐದು ದೇಶಗಳಲ್ಲಿದ್ದಾರೆ ಎಂದು ವರದಿಯು ಬೆಟ್ಟು ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News