ತನ್ನ ಕೋಚಿಂಗ್ ಸೆಂಟರ್‌ನಲ್ಲಿ ನಮಾಝ್ ಮಾಡಿದ್ದಕ್ಕೆ ವ್ಯಕ್ತಿಯನ್ನು ಬಂಧಿಸಿದ ಉತ್ತರಪ್ರದೇಶ ಪೊಲೀಸ್
ತನ್ನ ಕೋಚಿಂಗ್ ಸೆಂಟರ್ ಅನ್ನು ಪ್ರಾರ್ಥನೆ (ನಮಾಝ್) ಮಾಡಲು ಬಳಸಿದ್ದಕ್ಕಾಗಿ ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ 42 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಮಕ್ತೂಬ್ ಮೀಡಿಯಾ ವರದಿ ಮಾಡಿದೆ
ಘಾಜಿಯಾಬಾದ್: ತನ್ನ ಕೋಚಿಂಗ್ ಸೆಂಟರ್ ಅನ್ನು ಪ್ರಾರ್ಥನೆ (ನಮಾಝ್) ಮಾಡಲು ಬಳಸಿದ್ದಕ್ಕಾಗಿ ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ 42 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಮಕ್ತೂಬ್ ಮೀಡಿಯಾ ವರದಿ ಮಾಡಿದೆ. ಖೋಡಾದ ದೀಪಕ್ ವಿಹಾರ್ ಪ್ರದೇಶದ ಕೋಚಿಂಗ್ ಸೆಂಟರ್‌ನಲ್ಲಿ ಶೌಕತ್ ಅಲಿ "ಮದರಸಾ" ನಡೆಸುತ್ತಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.
ಕೋಚಿಂಗ್ ಸೆಂಟರಿನಲ್ಲಿ ಕಳೆದ ಹಲವಾರು ವಾರಗಳಿಂದ ಸಾಮೂಹಿಕ ಪ್ರಾರ್ಥನೆ ನಡೆಸುತ್ತಿದ್ದರು ಎಂಬ ಆರೋಪ ಶೌಕತ್ ಅಲಿ ವಿರುದ್ಧ ಕೇಳಿ ಬಂದಿದೆ. ಸ್ಥಳೀಯ ಹಿಂದೂ ನಿವಾಸಿಗಳು ಪ್ರಾರ್ಥನೆಗೆ ವಿರೋಧ ವ್ಯಕ್ತಪಡಿಸಿದ ನಂತರ, ಶೌಕತ್ ಅಲಿ ವಿರುದ್ಧ ಎಪ್‌ಐಆರ್ ದಾಖಲಿಸಲಾಗಿದೆ.
ವಿವಿಧ ಸಮುದಾಯಗಳ ವಿದ್ಯಾರ್ಥಿಗಳು ಕೋಚಿಂಗ್ ಸೆಂಟರ್‌ನಲ್ಲಿ ಕಲಿಯುತ್ತಿದ್ದು, ಇದನ್ನು ಧಾರ್ಮಿಕ ಚಟುವಟಿಕೆಗಳಿಗೆ ಬಳಸುವಂತಿಲ್ಲ ಎಂದು ಉಪ ಪೊಲೀಸ್ ಆಯುಕ್ತ ವಿವೇಕ್ ಚಂದ್ರ ಯಾದವ್ ಹೇಳಿದ್ದಾರೆ.
ಅಲಿ ವಿರುದ್ಧ ಸೆಕ್ಷನ್ 153A (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು ಭಾರತೀಯ ದಂಡನೆಯ 505 (ಸಾರ್ವಜನಿಕ ಕಿಡಿಗೇಡಿತನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
“ಅಲಿ ಅವರು ಈ ಪ್ರದೇಶದಲ್ಲಿ ಮಸೀದಿಯ ಇಮಾಮ್ ಆಗಿದ್ದು, ಸಮಾಜದಲ್ಲಿ ಅವರಿಗೆ ಅವರದ್ದೇ ಆದ ಗೌರವವಿದೆ, ಸಾಮೂಹಿಕ ಪ್ರಾರ್ಥನೆ ಮಾಡಿರುವುದು ಬಂಧನಕ್ಕೆ ಆಧಾರವಾಗಬಾರದು" ಎಂದು ಸ್ಥಳೀಯ ವ್ಯಕ್ತಿಯೊಬ್ಬರು ಹೇಳಿದ್ದಾರೆ.