370ನೇ ವಿಧಿ ಕುರಿತು ತೀರ್ಪು: ರಾಜಕಾರಣಿಗಳು ಮತ್ತು ಅರ್ಜಿದಾರರು ಹೇಳಿದ್ದೇನು?

Update: 2023-12-11 16:48 GMT

► ನಿರಾಶೆಯಾಗಿದೆ, ಆದರೆ ಹತಾಶಗೊಂಡಿಲ್ಲ. ಹೋರಾಟ ಮುಂದುವರಿಯಲಿದೆ. ಇಲ್ಲಿಗೆ ತಲುಪಲು ಬಿಜೆಪಿಗೆ ದಶಕಗಳೇ ಬೇಕಾದವು. ನಾವೂ ದೀರ್ಘಾವಧಿಯ ಹೋರಾಟಕ್ಕೆ ಸಿದ್ಧರಾಗಿದ್ದೇವೆ.

ಉಮರ್ ಅಬ್ದುಲ್ಲಾಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ನಾಯಕ

► ಜಮ್ಮು-ಕಾಶ್ಮೀರದ ಜನರು ಭರವಸೆಯನ್ನು ಕಳೆದುಕೊಳ್ಳುವುದಿಲ್ಲ ಅಥವಾ ಹೋರಾಟವನ್ನು ಬಿಟ್ಟುಕೊಡುವುದಿಲ್ಲ. ಗೌರವ ಮತ್ತು ಘನತೆಗಾಗಿ ನಮ್ಮ ಹೋರಾಟ ಮುಂದುವರಿಯುತ್ತದೆ. ಇದು ನಮಗಾಗಿ, ಮಾರ್ಗದ ಅಂತ್ಯವಲ್ಲ.

ಮೆಹಬೂಬ ಮುಫ್ತಿ , ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ಮುಖ್ಯಸ್ಥೆ

► ಕೆಲವು ಯುದ್ಧಗಳನ್ನು ಸೋಲಲೆಂದೇ ಹೋರಾಡಬೇಕಾಗುತ್ತದೆ. ಇತಿಹಾಸವು ಮುಂದಿನ ಪೀಳಿಗೆಯು ತಿಳಿದುಕೊಳ್ಳಲು ಅಹಿತಕರ ಸಂಗತಿಗಳನ್ನು ದಾಖಲಿಸಿಕೊಳ್ಳಲೇಬೇಕು. ಮುಂಬರುವ ವರ್ಷಗಳಲ್ಲಿ ಸಾಂಸ್ಥಿಕ ಕ್ರಮಗಳ ತಪ್ಪು-ಒಪ್ಪುಗಳ ಬಗ್ಗೆ ಚರ್ಚೆ ನಡೆಯಲಿದೆ. ಇತಿಹಾಸವು ಮಾತ್ರ ಐತಿಹಾಸಿಕ ನಿರ್ಧಾರಗಳ ನೈತಿಕ ದಿಕ್ಸೂಚಿಯ ಅಂತಿಮ ತೀರ್ಪುಗಾರ.

ಕಪಿಲ್ ಸಿಬಲ್ , ಹಿರಿಯ ನ್ಯಾಯವಾದಿ ಹಾಗೂ ಪ್ರಮುಖ ಅರ್ಜಿದಾರ

► ಜಮ್ಮು,ಕಾಶ್ಮೀರ ಮತ್ತು ಲಡಾಖ್ ಯಾವಾಗಲೂ ನಮ್ಮ ದೇಶಕ್ಕೆ ಸೇರಿದ್ದು ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಮತ್ತು ಹಾಗೆಯೇ ಮುಂದುವರಿಯಲಿದೆ.

ಅಮಿತ್ ಶಾ , ಕೇಂದ್ರ ಗೃಹಸಚಿವ

► ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಜಮ್ಮು-ಕಾಶ್ಮೀರವನ್ನು ದೇಶದ ಮುಖ್ಯವಾಹಿನಿಯೊಂದಿಗೆ ಸಂಪರ್ಕಿಸುವ ಐತಿಹಾಸಿಕ ಕಾರ್ಯಕ್ಕಾಗಿ ನನ್ನ ರಾಜ್ಯದ 25 ಕೋಟಿ ಜನರ ಪರವಾಗಿ ಹೃದಯಪೂರ್ವಕ ಕೃತಜ್ಞತೆಗಳು.

ಯೋಗಿ ಆದಿತ್ಯನಾಥ , ಉತ್ತರ ಪ್ರದೇಶದ ಮುಖ್ಯಮಂತ್ರಿ

► ನಿರಾಶೆಯಾಗಿದೆ. 2019ರಲ್ಲಿ ಭಾರತದ ಮುಖ್ಯ ನ್ಯಾಯಾಧೀಶರು ವಿಚಾರ ಸಂಕಿರಣವೊಂದರಲ್ಲಿ, ಸಾರ್ವಜನಿಕ ಚರ್ಚೆಯು ಅಧಿಕಾರದ ಅನುಪಸ್ಥಿತಿಯಲ್ಲಿ ಅದನ್ನು ಪಡೆದುಕೊಂಡವರಿಗೆ ಯಾವಾಗಲೂ ಅಪಾಯವಾಗಿದೆ ಎಂದು ಹೇಳಿದ್ದರು. ರಾಜ್ಯವು 356ನೇ ವಿಧಿಗೆ ಒಳಪಟ್ಟಿರುವಾಗ ಮತ್ತು ಚುನಾಯಿತ ಶಾಸಕಾಂಗ ಸಭೆಯು ಅಸ್ತಿತ್ವದಲ್ಲಿ ಇಲ್ಲದಿದ್ದಾಗ ಇಡೀ ರಾಜ್ಯವನ್ನು ಕರ್ಫ್ಯೂನಲ್ಲಿ ಇರಿಸುವ ಮೂಲಕ ಅದರ ವಿಶೇಷ ಸ್ಥಾನಮಾನವನ್ನು ನೀವು ರದ್ದುಗೊಳಿಸಬಹುದೇ ಎನ್ನುವುದು ಪ್ರಶ್ನೆಯಾಗಿದೆ. 2019, ಅ.5ರಂದು ಚರ್ಚಿಸಲು ಕಾಶ್ಮೀರದಲ್ಲಿ ಯಾರಿಗೆ ಹಕ್ಕು ಇತ್ತು? ನನ್ನ ಪಾಲಿಗೆ 370ನೇ ವಿಧಿಯನ್ನು ರದ್ದುಗೊಳಿಸಿದ ರೀತಿಯು ಸಾಂವಿಧಾನಿಕ ನೈತಿಕತೆಯ ಉಲ್ಲಂಘನೆಯಾಗಿದೆ.

ಅಸದುದ್ದೀನ್ ಉವೈಸಿ , ಎಐಎಂಐಎಂ ಅಧ್ಯಕ್ಷ

► ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಏನೇ ನಡೆದಿದ್ದರೂ ಅದು ಸಾಂವಿಧಾನಿಕವಾಗಿ ಮಾನ್ಯವಾಗಿದೆ ಎನ್ನುವುದು ಈಗ ಸ್ಪಷ್ಟವಾಗಿದೆ. ಶೀಘ್ರವೇ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸುವಂತೆ ನಾನು ಪ್ರಧಾನಿ ನರೇಂದ್ರ ಮೋದಿಯವರನ್ನು ಕೋರುತ್ತೇನೆ. ಈ ತೀರ್ಪಿನಿಂದ ಸಂತೋಷಗೊಳ್ಳದ ಜಮ್ಮು-ಕಾಶ್ಮೀರದ ಒಂದು ವರ್ಗದ ಜನರಿಗೆ ನನ್ನ ಪ್ರಾಮಾಣಿಕ ಸಲಹೆ: ಅನಿವಾರ್ಯವನ್ನು ಅವರು ಒಪ್ಪಿಕೊಳ್ಳಬೇಕು. ಸರ್ವೋಚ್ಚ ನ್ಯಾಯಾಲಯವು ಕೇಂದ್ರದ ಕ್ರಮವನ್ನು ಎತ್ತಿಹಿಡಿದಿರುವುದನ್ನು ಅವರು ಸ್ವೀಕರಿಸಬೇಕು. ಅವರು ಈಗ ತಮ್ಮ ತಲೆಯನ್ನು ಅನಗತ್ಯವಾಗಿ ಗೋಡೆಗೆ ಚಚ್ಚಿಕೊಂಡರೆ ಯಾವುದೇ ಲಾಭವಿಲ್ಲ. ಮುಂದಿನ ಚುನಾವಣೆಯಲ್ಲಿ ಹೋರಾಡಲು ಅವರು ತಮ್ಮ ಶಕ್ತಿಯನ್ನು ಸಜ್ಜುಗೊಳಿಸಬೇಕು. ಚುನಾವಣೆಯಲ್ಲಿ ಜನರು ನಕಾರಾತ್ಮಕತೆಯನ್ನು ಬೆಳಸಿಕೊಳ್ಳುವ ಬದಲು ಅವರನ್ನು ಪ್ರೇರೇಪಿಸಬೇಕು.

ಕರಣ ಸಿಂಗ್ ,  ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಹಾರಾಜ ಹರಿಸಿಂಗ್ ಅವರ ಪುತ್ರ

► ಸರ್ವೋಚ್ಚ ನ್ಯಾಯಾಲಯದ ತೀರ್ಪಿನಿಂದ ನಮಗೆ ನಿರಾಶೆಯಾಗಿದೆ.

ಗುಲಾಂ ನಬಿ ಆಝಾದ್ , ಡಿಪಿಎಪಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮಾಜಿ ನಾಯಕ

► ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಬಿಜೆಪಿ ಸ್ವಾಗತಿಸುತ್ತದೆ. ಜಮ್ಮು-ಕಾಶ್ಮೀರವನ್ನು ದೇಶದ ಮುಖ್ಯ ಸಿದ್ಧಾಂತದಲ್ಲಿ ಸೇರಿಸುವ ಮೂಲಕ ಐತಿಹಾಸಿಕ ಕಾರ್ಯವನ್ನು ಮಾಡಿರುವ ಪ್ರಧಾನಿ ಮೋದಿಯವರಿಗೆ ನನ್ನ ಮತ್ತು ನಮ್ಮ ಕೋಟ್ಯಂತರ ಕಾರ್ಯಕರ್ತರ ಹೃದಯಪೂರ್ವಕ ಧನ್ಯವಾದಗಳು.

ಜೆ.ಪಿ.ನಡ್ಡಾ , ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News