ತೆಲುಗಿನ ಹಿರಿಯ ನಟ ಚಂದ್ರಮೋಹನ್ ನಿಧನ

Update: 2023-11-11 06:59 GMT

Photo Credit - twitter.com

ಹೈದರಾಬಾದ್: ದಕ್ಷಿಣ ಭಾರತದ ಖ್ಯಾತ ನಟ ಚಂದ್ರಮೋಹನ್ ಶನಿವಾರ ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. 

ತೆಲುಗು ಚಿತ್ರರಂಗದ ಈ ತಾರಾ ನಟ ಹೃದಯ ಸ್ತಂಭನಕ್ಕೀಡಾಗಿ, ಬೆಳಗ್ಗೆ 9.45ರ ವೇಳೆಗೆ ಕೊನೆಯುಸಿರೆಳೆದರು ಎಂದು ವರದಿಯಾಗಿದೆ ಎಂದು timesnownews.com ವರದಿ ಮಾಡಿದೆ.

ವರದಿಗಳ ಪ್ರಕಾರ, ಹೈದರಾಬಾದ್ ನ ಅಪೊಲೊ ಆಸ್ಪತ್ರೆಯಲ್ಲಿ ಅವರು ಹೃದಯ ಸ್ತಂಭನಕ್ಕೀಡಾಗಿ ಮೃತಪಟ್ಟಿದ್ದಾರೆ. ಅವರು ತಮ್ಮ ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಚಂದ್ರ ಮೋಹನ್ ಅವರ ಅಂತ್ಯಕ್ರಿಯೆಯು ನವೆಂಬರ್ 13ರಂದು ಹೈದರಾಬಾದ್ ನಲ್ಲಿ ನಡೆಯಲಿದೆ.

ಚಂದ್ರ ಮೋಹನ್ ಅವರ ನಿಧನಕ್ಕೆ ತೆಲುಗು ಚಿತ್ರರಂಗದ ಅನೇಕ ಗಣ್ಯರು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಸಾಮಾಜಿಕ ಮಾಧ್ಯಮದ X ನಲ್ಲಿ ಪೋಸ್ಟ್ ಮಾಡಿರುವ ನಟ ಜೂನಿಯರ್ ಎನ್ಟಿಆರ್, “ಹಲವಾರು ದಶಕಗಳ ಕಾಲ ತಮ್ಮ ವಿಭಿನ್ನ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ತಮಗೊಂದು ವಿಶೇಷ ಸ್ಥಾನಮಾನವನ್ನು ಗಳಿಸಿದ್ದ ಚಂದ್ರಮೋಹನ್ ಅವರು ನಿಧನರಾಗಿರುವ ಸುದ್ದಿ ತಿಳಿದು ದುಃಖವಾಗಿದೆ. ಅವರ ಕುಟುಂಬದ ಸದಸ್ಯರಿಗೆ ನನ್ನ ತೀವ್ರ ಸಂತಾಪಗಳು. ಅವರು ಆತ್ಮಕ್ಕೆ ಶಾಂತಿ ದೊರೆಯಲಿ” ಎಂದು ಸಂತಾಪ ಸೂಚಿಸಿದ್ದಾರೆ.

“ಅವರ ಮುಖವು ನಮ್ಮನ್ನು ನೆನಪಿನಾಳಕ್ಕೆ ಸೆಳೆದುಕೊಂಡು ಹೋಗಿ, ಅವರ ಸ್ಮರಣೀಯ ನಟನೆ ಹಾಗೂ ಪಾತ್ರಗಳು ನಮ್ಮ ಮೊಗದಲ್ಲಿ ನಗು ಮೂಡಿಸುತ್ತಿದ್ದವು. ನಿಮ್ಮ ಆತ್ಮಕ್ಕೆ ಶಾಂತಿ ದೊರೆಯಲಿ ಚಂದ್ರ ಮೋಹನ್ ಸರ್. ಓಂ ಶಾಂತಿ” ಎಂದು ಸಾಯಿ ತೇಜ ಧರಂ ಪೋಸ್ಟ್ ಮಾಡಿದ್ದಾರೆ.

ಸವ್ಯಸಾಚಿ ನಟರಾಗಿದ್ದ ಚಂದ್ರ ಮೋಹನ್, ಹಲವಾರು ಸೂಪರ್ ಹಿಟ್ ತೆಲುಗು ಚಿತ್ರಗಳಲ್ಲಿ ನಟಿಸಿದ್ದರು. ‘ಪದಹಾರೇಳ್ಳು ವಯಸು’, ಚಂದಮಾಮ ರಾವೆ’, ‘ಆತನೊಕ್ಕಡೆ’, ‘7ಜಿ ಬೃಂದಾವನ್ ಕಾಲನಿ’ ಹಾಗೂ ‘ಮಿಸ್ಟರ್’ ಸೇರಿದಂತೆ ಸುಮಾರು 1,000 ಚಿತ್ರಗಳಲ್ಲಿ ನಟಿಸಿದ್ದ ಅವರು, ತಮ್ಮ ವಿಶಿಷ್ಟ ಅಭಿನಯದಿಂದ ಜನಪ್ರಿಯರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News