FACT CHECK | ಮನಮೋಹನ್ ಸಿಂಗ್ಅವರ ಅಂತ್ಯಸಂಸ್ಕಾರದಲ್ಲಿ ರಾಹುಲ್ ಗಾಂಧಿ ಪಾಲ್ಗೊಂಡಿರಲಿಲ್ಲ ಎಂಬ ಅಪ್ಪಟ ಸುಳ್ಳು ಹರಡುತ್ತಿರುವ ವೈರಲ್ ಪೋಸ್ಟ್‌ಗಳು
ಹೊಸದಿಲ್ಲಿ : ಕಾಂಗ್ರೆಸ್ ಪಕ್ಷ ಅಥವಾ ಗಾಂಧಿ ಕುಟುಂಬದ ಸದಸ್ಯರು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿರಲಿಲ್ಲ ಎಂಬ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಆದರೆ ಇದು ಅಪ್ಪಟ ಸುಳ್ಳು.
ರಾಹುಲ್ ಗಾಂಧಿ ಮತ್ತು ಇತರ ಹಿರಿಯ ಕಾಂಗ್ರೆಸ್ ನಾಯಕರು ದಿಲ್ಲಿಯಲ್ಲಿ ಮಾಜಿ ಪ್ರಧಾನಿಗೆ ಅಂತಿಮ ನಮನಗಳನ್ನು ಸಲ್ಲಿಸಿದ್ದನ್ನು ನೇರ ದೃಶ್ಯಾವಳಿಗಳು ತೋರಿಸಿವೆ.
ರಾಹುಲ್,ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಸಿಂಗ್ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿರಲಿಲ್ಲ ಎಂಬ ಅಪ್ಪಟ ಸುಳ್ಳನ್ನು ವೈರಲ್ ಪೋಸ್ಟ್‌ಗಳು ಪ್ರತಿಪಾದಿಸಿವೆ.
ಬೂಮ್ ಫ್ಯಾಕ್ಟ್ ಚೆಕ್ ಸಿಂಗ್ ಅಂತ್ಯಸಂಸ್ಕಾರದ ಹಲವಾರು ನೇರ ದೃಶ್ಯಾವಳಿಗಳನ್ನು ಕಂಡುಕೊಂಡಿದೆ. ರಾಹುಲ್ ಸೇರಿದಂತೆ ಹಲವಾರು ಹಿರಿಯ ಕಾಂಗ್ರೆಸ್ ನಾಯಕರು ಸಿಂಗ್ ಅವರಿಗೆ ಅಂತಿಮ ಗೌರವಗಳನ್ನು ಸಲ್ಲಿಸುತ್ತಿರುವುದನ್ನು ಈ ದೃಶ್ಯಾವಳಿಗಳು ಸ್ಪಷ್ಟವಾಗಿ ತೋರಿಸಿವೆ.
‘ಸೋನಿಯಾರನ್ನು ಬಿಡಿ, ರಾಹುಲ್ ಮತ್ತು ಪ್ರಿಯಾಂಕಾ ಕೂಡ ಮನಮೋಹನ ಸಿಂಗ್ ಅವರ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಕಂಡು ಬಂದಿರಲಿಲ್ಲ. ಇದು ಅವರು ತಮ್ಮ ಕುಟುಂಬಕ್ಕೆ ಸೇರಿರದ ಕಾಂಗ್ರೆಸ್ ಸದಸ್ಯರನ್ನು ನಡೆಸಿಕೊಳ್ಳುವ ರೀತಿ. ಅದು ಸಿಖ್ ಮನಮೋಹನ ಸಿಂಗ್, ಬಂಗಾಳಿ ಬ್ರಾಹ್ಮಣ ಪ್ರಣವ್ ದಾ, ಒಬಿಸಿ ಸೀತಾರಾಮ ಕೇಸರಿ ಅಥವಾ ತೆಲುಗು ಪಿವಿಎನ್‌ಆರ್ ಆಗಿರಲಿ, ಎಲ್ಲರನ್ನೂ ಗಾಂಧಿ ಕುಟುಂಬವು ತನ್ನ ನೌಕರರೆಂದೇ ನೋಡಿದೆ ’ ಎಂದು ಎಕ್ಸ್‌ನಲ್ಲಿಯ ಪೋಸ್ಟ್‌ವೊಂದು ಹೇಳಿಕೊಂಡಿದೆ.
ರಾಹುಲ್ ಮತ್ತು ಇತರ ಹಿರಿಯ ಕಾಂಗ್ರೆಸ್ ನಾಯಕರು ಮಾಜಿ ಪ್ರಧಾನಿ ಸಿಂಗ್ ಅವರಿಗೆ ಅಂತಿಮ ನಮನಗಳನ್ನು ಸಲ್ಲಿಸುತ್ತಿರುವುದನ್ನು ತೋರಿಸುವ ಹಲವಾರು ಸಾಕ್ಷ್ಯಾಧಾರಗಳನ್ನು ಬೂಮ್ ಖಚಿತಪಡಿಸಿಕೊಂಡಿದೆ. ಹಲವಾರು ಸುದ್ದಿವಾಹಿನಿಗಳು ರಾಹುಲ್, ಸೋನಿಯಾ, ಪ್ರಿಯಾಂಕಾ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರು ಸಿಂಗ್ ಅವರಿಗೆ ಅಂತಿಮ ನಮನಗಳನ್ನು ಸಲ್ಲಿಸುತ್ತಿರುವ ದೃಶ್ಯಗಳನ್ನು ತಮ್ಮ ನೇರ ಪ್ರಸಾರದಲ್ಲಿ ತೋರಿಸಿದ್ದವು.
ಸಿಂಗ್ ಅವರ ಅಂತಿಮ ಯಾತ್ರೆಯಲ್ಲಿ ರಾಹುಲ್ ಅವರು ಮಾಜಿ ಪ್ರಧಾನಿಯ ಕುಟುಂಬ ಸದಸ್ಯರೊಂದಿಗೆ ಮಿಲಿಟರಿ ಟ್ರಕ್‌ನಲ್ಲಿ ಸಾಗುತ್ತಿದ್ದ ಚಿತ್ರಗಳನ್ನು ಕಾಂಗ್ರೆಸ್ ಎಕ್ಸ್‌ನಲ್ಲಿ ಹಂಚಿಕೊಂಡಿದೆ.
ರಾಹುಲ್ ಕೂಡ ಸ್ವತಃ ಈ ಚಿತ್ರಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದು,‘ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್‌ಜಿ ಅವರಿಗೆ ಕಾಂಗ್ರೆಸ್ ಕೇಂದ್ರಕಚೇರಿಯಲ್ಲಿ ಅಂತಿಮ ವಿದಾಯವನ್ನು ಕೋರಲಾಯಿತು. ಡಾ.ಸಿಂಗ್ ಅವರ ನಮ್ರತೆ, ಮಾರ್ಗದರ್ಶನ ಮತ್ತು ದೇಶಕ್ಕೆ ಅವರ ಕೊಡುಗೆ ಯಾವಾಗಲೂ ಇತಿಹಾಸದ ಪುಟಗಳಲ್ಲಿರಲಿವೆ’ ಎಂದು ಬರೆದಿದ್ದಾರೆ.
ಈ ಲೇಖನವನ್ನು ಮೊದಲು boomlive.in ಪ್ರಕಟಿಸಿದೆ. ʼಶಕ್ತಿ ಕಲೆಕ್ಟಿವ್ʼನ ಭಾಗವಾಗಿ ವಾರ್ತಾ ಭಾರತಿ ಅನುವಾದಿಸಿದೆ.