ವಯನಾಡ್ ಭೂ ಕುಸಿತ: ಮುಂಡಕ್ಕೈಯಲ್ಲಿ ಕೊಚ್ಚಿ ಹೋದ ಒಂದೇ ಕುಟುಂಬದ 16 ಮಂದಿ

Update: 2024-08-05 06:25 GMT

ಭೂಕುಸಿತದಲ್ಲಿ ನಾಪತ್ತೆಯಾಗಿರುವ ನೌಶೀಬಾ ಅವರ ಕುಟುಂಬದ 16 ಸದಸ್ಯರ ಪೈಕಿ 11 ಮಂದಿ Photo: TOI

ಮೇಪ್ಪಾಡಿ (ವಯನಾಡ್): ವಿಧಿ ಇದಕ್ಕಿಂತ ಕ್ರೂರವಾಗಲು ಸಾಧ್ಯವಿಲ್ಲ. ಕಳತ್ತಿಂಗಲ್ ನೌಶೀಬಾ ಅವರ ಕುಟುಂಬದ ಹನ್ನೊಂದು ಮಂದಿ ಮುಂಡಕ್ಕೈ ಭೂಕುಸಿತದ ವೇಳೆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಆ ದುರಂತಮಯ ರಾತ್ರಿ ಮುಂಡಕ್ಕೈಯಲ್ಲಿರುವ ತನ್ನ ಪೂರ್ವಜರ ಮನೆಯಲ್ಲಿ ವಾಸಿಸುತ್ತಿದ್ದ ಆಕೆಯ ತಂದೆ, ತಾಯಿ, ಅಣ್ಣ, ಇಬ್ಬರು ಅತ್ತಿಗೆಯಂದಿರು ಮತ್ತು ಆರು ಮಂದಿ ಅಳಿಯ-ಸೊಸೆಯಂದಿರು ನೀರುಪಾಲಾಗಿದ್ದಾರೆ. ಇದು ಸಾಲದು ಎಂಬಂತೆ ನೌಶೀಬಾ ತನ್ನ ಗಂಡನ ಕುಟುಂಬದ ಐದು ಮಂದಿಯನ್ನು ಅಂದರೆ ಅತ್ತೆ, ಇಬ್ಬರು ಅತ್ತಿಗೆಯಂದಿರು ಹಾಗೂ ಇಬ್ಬರು ಮಕ್ಕಳನ್ನು ಕಳೆದುಕೊಂಡಿದ್ದಾರೆ!

ಶೋಕತಪ್ತರಾದ ನೌಶೀಬಾ (40) ಕಳೆದ ಮೂರು ದಿನಗಳಿಂದ ಮೇಪ್ಪಾಡಿ ಕುಟುಂಬ ಆರೋಗ್ಯ ಕೇಂದ್ರದ ಮುಂದೆ ರೋಧಿಸುತ್ತಾ ನಿಂತಿದ್ದಾರೆ. ಭೂ ಕುಸಿತದಿಂದ ಜರ್ಜರಿತವಾಗಿರುವ ಚೂರಲ್ಮಲ ಮತ್ತು ಮೇಪ್ಪಾಡಿ ಗ್ರಾಮದ ಅವಶೇಷಗಳ ಅಡಿಯಿಂದ ಪ್ರತಿಯೊಂದು ಮೃತದೇಹವನ್ನು ಹೊರತೆಗೆದಾಗಲೂ ತನ್ನವರನ್ನು ಗುರುತಿಸುವ ಸಲುವಾಗಿ ತಾತ್ಕಾಲಿಕ ಪೆಂಡಾಲ್ ಗೆ ಅಲೆದಾಡುತ್ತಿದ್ದಾರೆ.

ಶನಿವಾರ ಬಿಳಿ ಬಟ್ಟೆಯಲ್ಲಿ ಸುತ್ತಿದ್ದ ಮತ್ತೊಂದು ಮೃತದೇಹ ಪತ್ತೆಯಾಗಿದೆ. ಇದರಲ್ಲಿ "ನಂಬರ್ 168- ಹೆಣ್ಣುಮಗು" ಎಂದು ನೀಲಿಶಾಯಿಯಲ್ಲಿ ಬರೆದಿತ್ತು. ಈ ದೇಹವನ್ನು ಗುರುತಿಸಲು ಯಾರಾದರೂ ಇದ್ದೀರಾ ಎಂದು ಸ್ವಯಂ ಸೇವಕರೊಬ್ಬರು ಗಟ್ಟಿಯಾಗಿ ಕೂಗಿದರು. ಇದು ತನ್ನ ಸೊಸೆ ಇರಬಹುದು ಎಂಬ ಭಾವನೆಯಿಂದ ನೌಶೀಬಾ ಪರಿಶೀಲಿಸಲು ಓಡೋಡಿ ಬಂದರು. ಆದರೆ ಅದು ಆಕೆಯದ್ದಾಗಿರಲಿಲ್ಲ. ಕಳೆದ ಮೂರು ದಿನಗಳಿಂದಲೂ ನೌಶೀಬಾಳ ದಿನಚರಿ ಇದೇ ಆಗಿದೆ.

ಪುತ್ರಿಯರಾದ ನಹ್ಲಾ ಮತ್ತು ತಫ್ಸೀನಾ ಜತೆ ನೌಶೀಬಾ ತೆರಳಿದಾಗ ಸ್ವಯಂಸೇವಕರು ಒಂದು ದೇಹದ ಕಾಲಿನ ಭಾಗವನ್ನು ತೋರಿಸಿದರು. ಮುಖದ ಭಾಗ ಜರ್ಜರಿತವಾಗಿರುವುದರಿಂದ ತೋರಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಬೆರಳಲ್ಲಿದ್ದ ಮೆಹಂದಿಯೊಂದೇ ಗುರುತಿಸಲು ಆಧಾರವಾಗಿತ್ತು. ಇದು ತನ್ನ ಸೊಸೆ ಶಹ್ಲಾ ದೇಹ ಇರಬೇಕು ಎಂದು ನೌಶೀಬಾ ಅಂದಾಜಿಸಿದರು. ಆದರೆ ಕಾಲಿನಲ್ಲಿ ಕಡಗ ಕಂಡುಬಂದಿದ್ದು, ಆಕೆ ಅದನ್ನು ಧರಿಸುತ್ತಿಲ್ಲ ಎಂಬ ಕಾರಣದಿಂದ ಅದು ಅಲ್ಲ ಎಂಬ ನಿರ್ಧಾರಕ್ಕೆ ಬಂದು ಮತ್ತೆ ವಾಪಸ್ಸಾದರು.

"ನಾನು ಇಡೀ ಕುಟುಂಬ ಕಳೆದುಕೊಂಡಿದ್ದೇನೆ. ಅವರ ಮೃತದೇಹ ತರುತ್ತಾರೆಯೇ ಎಂದು ಕಾಯುತ್ತಾ ನಿಂತಿದ್ದೇನೆ. ಮುಂಡಕ್ಕೈ ಮಸೀದಿಯ ಎದುರಿನ ನಮ್ಮ ತಂದೆಯ ಮನೆಯಲ್ಲಿ ಎಲ್ಲರೂ ವಾಸವಿದ್ದರು. ಎಸ್ಟೇಟ್ ಕ್ವಾರ್ಟ್ರಸ್ ನಲ್ಲಿ ವಾಸವಿದ್ದ ಅಣ್ಣನ ಕುಟುಂಬದ ಐದು ಮಂದಿ ತಂದೆಯನ್ನು ನೋಡಲು ಬಂದಿದ್ದರು. ಮನೆಯಲ್ಲಿ ಒಟ್ಟು 11 ಮಂದಿ ಇದ್ದರು. ಮನೆಯ ಕುರುಹೂ ಇಲ್ಲದಂತೆ ಮನೆ ನಿರ್ನಾಮವಾಗಿದ್ದು, ಯಾರೂ ಪತ್ತೆಯಾಗಿಲ್ಲ" ಎಂದು ವಿವರಿಸಿದರು.

ನನ್ನ ಪತಿ ಒಂದು ತಿಂಗಳ ಹಿಂದೆ ರಜೆಯ ಮೇಲೆ ಬಂದಿದ್ದರಿಂದ ನಾನು ಹತ್ತಿರದ ನನ್ನ ಮನೆಯಲ್ಲಿ ವಾಸಿಸುತ್ತಿದ್ದೆ. ಇಲ್ಲದಿದ್ದರೆ ನಾನು ಕೂಡ ಅವರೆಲ್ಲರೊಂದಿಗೆ ಕೊಚ್ಚಿಹೋಗುತ್ತಿದ್ದೆ. ದೊಡ್ಡ ಗುಡುಗಿನ ಶಬ್ದ ಕೇಳಿದಾಗ ನಾವು ಮೇಲಿದ್ದ ಕಾಡಿನತ್ತ ಓಡಿ ಇಡೀ ರಾತ್ರಿ ಅಲ್ಲಿಯೇ ಇದ್ದೆವು. ಬೆಳಗಾದಾಗ ನನ್ನ ಪೂರ್ವಜರ ಮನೆ ಮತ್ತು ಅಲ್ಲಿಯೇ ಉಳಿದುಕೊಂಡಿದ್ದ ನನ್ನ ಪ್ರೀತಿಪಾತ್ರರೆಲ್ಲರೂ ಕೊಚ್ಚಿ ಹೋಗಿದ್ದರು" ಎಂದು ನೌಶೀಬಾ ಹೇಳಿದರು.

"ನಮ್ಮ ಮನೆ ಇದ್ದ ಸ್ಥಳದಲ್ಲಿ ಈಗ ಬೃಹತ್ ಬಂಡೆ ಇದೆ. ನನ್ನ ಸಹೋದರನ ಮಗಳು ಶಹಲಾಳ ಮದುವೆಯೂ ಸೆಪ್ಟೆಂಬರ್ 22 ರಂದು ನಿಗದಿಯಾಗಿತ್ತು” ಎಂದರು.

ನೌಶೀಬಾ ಅವರು ಅತ್ತೆ ಪಾತುಮ್ಮಾ, ಅತ್ತಿಗೆಯಂದಿರಾದ ಸುಮಯ್ಯ ಮತ್ತು ನಜೀರಾ, ಹಾಗೂ ನಜೀರಾ ಅವರ ಮಕ್ಕಳಾದ ಮುನವ್ವಿರ್ ಮತ್ತು ರಿನ್ಶಾ ಫಾತಿಮಾ ಅವರನ್ನು ಕಳೆದುಕೊಂಡಿದ್ದಾರೆ. ಸುಮಯ್ಯ, ನಜೀರಾ ಮತ್ತು ಮುನವ್ವಿರ್ ಅವರ ಮೃತದೇಹಗಳು ಸಿಕ್ಕಿವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News