ನಾವು ಸರಕಾರವನ್ನು ನಂಬುವುದಿಲ್ಲ, ನಮ್ಮ ಸ್ವಂತ ಮನೆಗಳಿಗೆ ಮರಳಲು ಬಯಸಿದ್ದೇವೆ; ಪರಿಹಾರ ಶಿಬಿರಗಳಲ್ಲಿಯ ಸಂತ್ರಸ್ತ ಮಣಿಪುರಿಗಳು

Update: 2023-08-27 13:35 GMT

ಗುವಾಹಟಿ: ಕಳೆದ ಮೂರು ತಿಂಗಳುಗಳಿಂದಲೂ ಇಕ್ಕಟ್ಟಾದ ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿರುವ,ಅಶಾಂತಿಯಿಂತ ತೊಳಲಾಡುತ್ತಿರುವ ಮಣಿಪುರ ಹಿಂಸಾಚಾರದ ಸಂತ್ರಸ್ತರು ತಾವು ತಮ್ಮ ಮನೆಗಳಿಗೆ ಮರಳಲು ಸಾಧ್ಯವಾಗುವಂತೆ ಬಿಕ್ಕಟ್ಟನ್ನು ಬಗೆಹರಿಸಲು ಸರಕಾರವನ್ನು ಆಗ್ರಹಿಸುತ್ತಿದ್ದಾರೆ.

ಕೆಲವು ಸಂತ್ರಸ್ತರು ಸರಕಾರವು ನೀಡಿರುವ ತಾತ್ಕಾಲಿಕ ವಸತಿಗೃಹಗಳಿಗೆ ಸ್ಥಳಾಂತರಗೊಳ್ಳುವುದನ್ನು ಬಯಸುತ್ತಿಲ್ಲ,ಅಲ್ಲಿಗೆ ಹೋದರೆ ತಾವೆಂದೂ ತಮ್ಮ ಮನೆಗಳಿಗೆ ಮರಳಲು ಸಾಧ್ಯವಾಗುವುದಿಲ್ಲ ಎಂಬ ಕಳವಳವನ್ನು ಅವರು ವ್ಯಕ್ತಪಡಿಸಿದ್ದಾರೆ.

‘ನಮ್ಮ ಮನೆಗಳನ್ನು ಪುನರ್ನಿರ್ಮಿಸುವುದಾಗಿ ರಾಜ್ಯ ಸರಕಾರದ ಭರವಸೆಯಲ್ಲಿ ನಮಗೆ ಎಳ್ಳಷ್ಟೂ ವಿಶ್ವಾಸವಿಲ್ಲ. ಕಳೆದ ಮೂರು ತಿಂಗಳಿಗೂ ಹೆಚ್ಚು ಸಮಯದಿಂದ ನಾವು ಪರಿಹಾರ ಶಿಬಿರಗಳಲ್ಲಿ ವಾಸವಾಗಿದ್ದೇವೆ. ನಾವು ಇನ್ನೂ ಎಷ್ಟು ಸಮಯ ಇಲ್ಲಿರುತ್ತೇವೆ? ನಮಗೆ ನಮ್ಮ ಮನೆ ವಾಪಸ್ ಬೇಕು. ನಮ್ಮ ಜನರನ್ನು ಕೊಲ್ಲಲಾಗಿದೆ, ಈಗ ನಮಗೆ ನ್ಯಾಯದ ಅಗತ್ಯವಿದೆ’ ಎಂದು ಇಂಫಾಲ ಪೂರ್ವ ಜಿಲ್ಲೆಯ ಅಕಮ್ಪಾಟ್ನ ಐಡಿಯಲ್ ಗರ್ಲ್ಸ್ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಪರಿಹಾರ ಶಿಬಿರದಲ್ಲಿ ವಾಸವಾಗಿರುವ ಟೆಂಗ್ನೌಪಾಲ್ ಮತ್ತು ಚುರಾಚಂದ್ರಪುರ ಜಿಲ್ಲೆಗಳ ಕೆಲವು ಸಂತ್ರಸ್ತರು ಅಳಲು ತೋಡಿಕೊಂಡರು.

ಹೆಚ್ಚಿನ ಸಂತ್ರಸ್ತರು ತಮ ಕುಟುಂಬಸಹಿತ ಈ ಶಿಬಿರಗಳಲ್ಲಿ ವಾಸವಾಗಿದ್ದಾರೆ. ದಂಗೆಕೋರರು ಅವರ ಮನೆಗಳನ್ನು ಸುಟ್ಟು ಹಾಕಿದ್ದಾರೆ. ಜೀವವನ್ನುಳಿಸಿಕೊಳ್ಳಲು ಅವರೆಲ್ಲ ಉಟ್ಟ ಬಟ್ಟೆಯಲ್ಲಿ ಮನೆಗಳಿಂದ ಪರಾರಿಯಾಗಿದ್ದರು.

‘ನಾವು ನಮ್ಮ ಸ್ವಂತ ಮನೆಗಳಿಗೆ ಮರಳಲು ಬಯಸಿದ್ದೇವೆ. ಸರಕಾರದ ಭರವಸೆಗಳಿಂದ ನಾವು ಬೇಸತ್ತು ಹೋಗಿದ್ದೇವೆ, ಅದು ನಮಗೆ ನೆರವಾಗುತ್ತದೆ ಎನ್ನುವ ನಿರೀಕ್ಷೆಯಿಲ್ಲ’ ಎಂದು ಚುರಾಚಂದ್ರಪುರದ ಸಂತ್ರಸ್ತೆ ನಗಂಥೋಬಿ ಹೇಳಿದರು.

‘ನಾವು ಮೊರೆಹ್ನಲ್ಲಿಯ ನಮ್ಮ ಮನೆಗಳಿಗೆ ಮರಳಲು ಬಯಸಿದ್ದೇವೆ. ಮೊರೆಹ್ ಪಟ್ಟಣವು ಆದಾಯದಲ್ಲಿ ರಾಜ್ಯದಲ್ಲಿ ಇಂಫಾಲದ ನಂತರದ ಸ್ಥಾನದಲ್ಲಿತ್ತು. ಈ ಹಿಂಸಾಚಾರವು ಮುಂದುವರಿದರೆ ಭಾರತವು ಅದಕ್ಕಾಗಿ ಭಾರೀ ಬೆಲೆಯನ್ನು ತೆರಬೇಕಾಗುತ್ತದೆ. ಮಣಿಪುರದಲ್ಲಿಯ ಇಂದಿನ ಸ್ಥಿತಿಗೆ ಬಿಜೆಪಿ ಜವಾಬ್ದಾರನಾಗಿದೆ. ಮೋರೆಹ್ನಲ್ಲಿ ಕಳೆದ 10 ವರ್ಷಗಳಿಂದ ಪಟ್ಟಣ ಸಮಿತಿಯ ಚುನಾವಣೆ ನಡೆದಿಲ್ಲ. ಎಲ್ಲ ಮಾರವಾಡಿಗಳು ಮತ್ತು ಪಂಜಾಬಿಗಳು ಪಟ್ಟಣದಿಂದ ಪರಾರಿಯಾಗಿದ್ದಾರೆ. ಈ ಹಿಂಸಾಚಾರ ಆರಂಭವಾದ ಬಳಿಕ ತಮಿಳು ಜನರೂ ಊರನ್ನು ತೊರೆದಿದ್ದಾರೆ ’ ಎಂದು ಮೋರೆಹ್ ನಿವಾಸಿ ಇಂಗೋಬಿ ಸಿಂಗ್ (75) ಹೇಳಿದರು.

ಮಣಿಪುರದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಟ್ಟಣಗಳಲ್ಲೊಂದಾಗಿರುವ ಟೆಂಗ್ನೌಪಾಲ್ ಜಿಲ್ಲೆಯ ಮೋರೆಹ್ ಕುಕಿಗಳ ಪ್ರಾಬಲ್ಯ ಹೊಂದಿದ್ದು, ತಮಿಳರು ಮತ್ತು ಪಂಜಾಬಿಗಳಂತಹ ಇತರ ಸಮುದಾಯದವರೂ ಗಣನೀಯ ಸಂಖ್ಯೆಯಲ್ಲಿದ್ದಾರೆ.

ಬಹುಧರ್ಮೀಯ ಪಟ್ಟಣವಾಗಿರುವ ಮೋರೆಹ್ನಲ್ಲಿ ಕ್ರೈಸ್ತರು ಬಹುಸಂಖ್ಯಾತರಾಗಿದ್ದು, ನಂತರದ ಸ್ಥಾನಗಳಲ್ಲಿ ಹಿಂದುಗಳು, ಮುಸ್ಲಿಮರು, ಬೌದ್ಧರು, ಸಿಕ್ಖರು ಮತ್ತು ಜೈನರು ಇದ್ದಾರೆ.

ರಾಜ್ಯದಲ್ಲಿ ಮೇ 3ರಿಂದ ಆರಂಭಗೊಂಡ ಜನಾಂಗೀಯ ಹಿಂಸಾಚಾರದಲ್ಲಿ 160ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News