ಯೆಮನ್ ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದ ಕೇರಳದ ನರ್ಸ್ ನಿಮಿಷಾ ಪ್ರಿಯಾಗೆ ಸಹಾಯ ಮಾಡಲು ಮುಂದಾದ ಇರಾನ್
ಟೆಹ್ರಾನ್ : ಯೆಮನ್ ನಲ್ಲಿ ಭಾರತೀಯ ಪ್ರಜೆ ನಿಮಿಷಾ ಪ್ರಿಯಾ ಅವರಿಗೆ ಮರಣದಂಡನೆ ವಿಧಿಸಿರುವ ಕುರಿತು ಯೆಮನ್ ಸರ್ಕಾರದೊಂದಿಗೆ ಮಾತುಕತೆ ನಡೆಸುವುದಾಗಿ ಇರಾನ್ ಹೇಳಿದ್ದು, ಮಾನವೀಯತೆಯ ಆಧಾರದ ಮೇಲೆ ನಿಮಿಷಾ ಪ್ರಿಯಾಗೆ ಸಹಾಯ ಮಾಡುವುದಾಗಿ ಇರಾನ್ ತಿಳಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ India Today ವರದಿ ಮಾಡಿದೆ.
ಯೆಮನ್ ಪ್ರಜೆ ತಲಾಲ್ ಅಬ್ದೋ ಮಹದಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಯೆಮನ್ ನಲ್ಲಿ ಕೇರಳದ ನರ್ಸ್ ನಿಮಿಷಾ ಪ್ರಿಯಾಗೆ ಮರಣದಂಡನೆ ವಿಧಿಸಲಾಗಿದೆ. ಡಿಸೆಂಬರ್ 30ರಂದು ಯೆಮನ್ ಅಧ್ಯಕ್ಷ ರಶಾದ್ ಅಲ್-ಅಲಿಮಿ 2017ರಿಂದ ಜೈಲಿನಲ್ಲಿರುವ ನಿಮಿಷಾ ಪ್ರಿಯಾಗೆ ಮರಣದಂಡನೆ ಶಿಕ್ಷೆಯನ್ನು ಅನುಮೋದಿಸಿದ್ದಾರೆ.
ಸನಾದಲ್ಲಿನ ವಿಚಾರಣಾ ನ್ಯಾಯಾಲಯವು 2020ರಲ್ಲಿ ನಿಮಿಷಾ ಪ್ರಿಯಾಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. 2023ರಲ್ಲಿ ಯೆಮನ್ ಸುಪ್ರೀಂ ಕೋರ್ಟ್ ಈ ತೀರ್ಪುನ್ನು ಎತ್ತಿಹಿಡಿದಿತ್ತು. ತಲಾಲ್ ಅಬ್ದೋ ಮಹದಿಯ ಕುಟುಂಬ ನಿಮಿಷಾ ಪ್ರಿಯಾ ಅವರಿಗೆ ಕ್ಷಮೆ ನೀಡದಿದ್ದರೆ ಆಕೆಗೆ ಒಂದು ತಿಂಗಳೊಳಗೆ ಮರಣದಂಡನೆ ಶಿಕ್ಷೆಯಾಗಲಿದೆ ಎನ್ನಲಾಗಿದೆ.
ನಿಮಿಷಾ ಪ್ರಿಯಾಗೆ ಯೆಮೆನ್ ನಲ್ಲಿ ಶಿಕ್ಷೆ ವಿಧಿಸುವ ಬಗ್ಗೆ ನಮಗೆ ತಿಳಿದಿದೆ. ನಿಮಿಷಾ ಪ್ರಿಯಾ ಅವರ ಕುಟುಂಬವು ಸಂಬಂಧಿತ ನೆರವಿನ ನಿರೀಕ್ಷೆಯಲ್ಲಿದೆ. ಈ ವಿಷಯದಲ್ಲಿ ಸರ್ಕಾರವು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ನಿಮಿಷಾ ಪ್ರಿಯಾ ಅವರ ತಾಯಿ ಪ್ರೇಮಾ ಕುಮಾರಿ 2024ರ ಏಪ್ರಿಲ್ ನಲ್ಲಿ ಯೆಮೆನ್ ಗೆ ಹೋಗಿದ್ದರು ಮತ್ತು 11 ವರ್ಷಗಳ ನಂತರ ಮೊದಲ ಬಾರಿಗೆ ತಮ್ಮ ಮಗಳನ್ನು ಜೈಲಿನಲ್ಲಿ ಭೇಟಿಯಾಗಿದ್ದರು. ಅಂದಿನಿಂದ, ಅವರು ತನ್ನ ಮಗಳ ಬಿಡುಗಡೆಗೆ ಗಲ್ಫ್ ರಾಷ್ಟ್ರದಲ್ಲಿ ಪ್ರಯತ್ನಿಸುತ್ತಿದ್ದಾರೆ.
ನಿಮಿಷಾ ಪ್ರಿಯಾ ಅವರಿಗೆ ಮರಣದಂಡನೆ ವಿಧಿಸಿರುವ ಕುರಿತು ಇರಾನ್ ನ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, ಮಾನವೀಯತೆಯ ಆಧಾರದ ಮೇಲೆ, ನಾವು ಸಾಧ್ಯವಿರುವ ಎಲ್ಲವನ್ನೂ ಮಾಡಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.