‘ನವಜಾತ ಶಿಶುಗಳ ಶಿರಚ್ಛೇದ ಮಾಡಿದ ಹಮಾಸ್’ ಎಂಬ ಸುಳ್ಳು ಸುದ್ದಿ ಹರಡಿದ ಪಾಶ್ಚಿಮಾತ್ಯ ಮಾಧ್ಯಮಗಳು

Update: 2023-10-11 16:50 GMT

Photo: PTI 

ಹೊಸದಿಲ್ಲಿ: ಹಲವಾರು ಮಾಧ್ಯಮ ಸಂಸ್ಥೆಗಳು ಹಮಾಸ್ ದಾಳಿಯ ನಂತರದ ಪರಿಸ್ಥಿತಿಯನ್ನು ವರದಿ ಮಾಡಿದ್ದು, ಈ ನಡುವೆ ‘The Kibbutz of Kfar Aza’ ಸುದ್ದಿ ಸಂಸ್ಥೆ ಸುದ್ದಿಯಲ್ಲಿದೆ. ಇಸ್ರೇಲ್ ಮೀಸಲು ಪಡೆ ಯೋಧರು ಹೇಗೆ ಈ ದುರ್ಘಟನೆಯಲ್ಲಿ ನಾಗರಿಕರ ಮೃತದೇಹಗಳನ್ನು ವಶಪಡಿಸಿಕೊಳ್ಳಲು ಇಡೀ ದಿನ ಕಳೆದರು ಎಂಬ ಕುರಿತು BBC ಸುದ್ದಿ ಸಂಸ್ಥೆ ವರದಿ ಮಾಡಿದೆ. “ದಾಳಿಕೋರರು ಅಲೆಯ ಮಾದರಿಯಲ್ಲಿ ಕಲಶ್ನಿಕೋವ್ ರೈಫಲ್ಸ್, ರಾಕೆಟ್ ಮೂಲಕ ಉಡಾಯಿಸುವ ಗ್ರೆನೇಡ್ ಗಳು ಹಾಗೂ ಕೈಬಾಂಬುಗಳನ್ನು ಹಿಡಿದು ಗ್ರಾಮದ ಮೇಲೆ ದಾಳಿ ಮಾಡಿದ್ದಾರೆ..” ಎಂದು ಇಸ್ರೇಲಿ ಮೀಸಲು ಪಡೆ ಯೋಧರೊಬ್ಬರನ್ನು ಉಲ್ಲೇಖಿಸಿ Reuters ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಹತ್ಯಾಕಾಂಡದ ದಾರುಣ ದೃಶ್ಯಾವಳಿಗಳನ್ನು ಜನರೆದುರು ತರುವಾಗ ಸುದ್ದಿ ಸಂಸ್ಥೆಗಳು ಮೈಮರೆತಿದ್ದು, ಈಗಾಗಲೇ ಉದ್ವಿಗ್ನಗೊಂಡಿರುವ ಸ್ಥಿತಿಗೆ ನಕಲಿ ಸುದ್ದಿಗಳ ಮೂಲಕ ತುಪ್ಪ ಸುರಿದಿವೆ.

ಇಸ್ರೇಲ್ ಹಾಗೂ ಫೆಲೆಸ್ತೀನ್ ನಡುವಿನ ಹಿಂಸಾಚಾರದಲ್ಲಿ 40 ನವಜಾತ ಶಿಶುಗಳ ಶಿರಚ್ಛೇದ ಮಾಡಲಾಗಿದೆ ಎಂಬ ಭಯಾನಕ ಶೀರ್ಷಿಕೆಯ ಸುದ್ದಿಯನ್ನು ಕಳೆದ ಮಧ್ಯರಾತ್ರಿ ಪಾಶ‍್ಚಿಮಾತ್ಯ ಸುದ್ದಿ ಸಂಸ್ಥೆಗಳು ಜನರ ನಡುವೆ ಹರಿಬಿಟ್ಟಿವೆ.

ಈ ಸುದ್ದಿಯನ್ನು ಇಸ್ರೇಲಿ ಸುದ್ದಿ ಸಂಸ್ಥೆ i24 News ಬಿತ್ತನೆ ಮಾಡಿದ್ದರೂ, ತಕ್ಷಣವೇ ಇತರ ಸುದ್ದಿ ಸಂಸ್ಥೆಗಳೂ ಈ ಸುದ್ದಿಯನ್ನು ವರದಿ ಮಾಡಿವೆ. ಇಸ್ರೇಲ್ ಯೋಧರು ತಾವು ನೋಡಿದ ಹೃದಯ ಕಲಕುವ ದೃಶ್ಯಗಳಿಂದ ವಿಚಲಿತರಾಗಿದ್ದು, ಪರಸ್ಪರ ಸಂತೈಸಿಕೊಳ್ಳುತ್ತಿದ್ದಾರೆ ಎಂದು ಇಸ್ರೇಲ್ ಯೋಧರನ್ನು ಉಲ್ಲೇಖಿಸಿ ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ.

ಆದರೆ, ಕೆಲ ಗಂಟೆಗಳಲ್ಲಿ, ಹಮಾಸ್ ನವಜಾತ ಶಿಶುಗಳ ಶಿರಚ್ಛೇದ ಮಾಡಿದೆ ಎಂಬ ಆರೋಪದ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಇಸ್ರೇಲ್ ಸೇನೆಯೇ ದೃಢಪಡಿಸಿದೆ.

ಈ ನಡುವೆ, ಭಾರತೀಯ ಮಾಧ್ಯಮಗಳು ಈ ಸುದ್ದಿಯನ್ನು ಎಷ್ಟು ನ್ಯಾಯುತವಾಗಿ ವರದಿ ಮಾಡಿದವು ಎಂಬ ಪ್ರಶ್ನೆಯೂ ಎದ್ದಿದೆ.

ಇಸ್ರೇಲ್ ನೆಲದಿಂದಲೇ ತನ್ನ ವರದಿಗಾರನನ್ನು ಹೊಂದಿರುವ Republic ಸುದ್ದಿ ಸಂಸ್ಥೆಯು, “ವಿಚಲಿತಗೊಳಿಸುವ ಸುದ್ದಿಯು ಬೆಳಕಿಗೆ ಬಂದಿದ್ದು, ಹಮಾಸ್ ನವಜಾತ ಶಿಶುಗಳ ಶಿರಚ್ಛೇದ ಮಾಡಿದೆ ಎಂದು ಹೇಳುತ್ತಿದೆ” ಎಂದು ವರದಿ ಮಾಡಿತ್ತು. ಶಿರಚ್ಛೇದಗೊಂಡಿರುವ ನವಜಾತ ಶಿಶುಗಳ ಮೃತದೇಹಗಳನ್ನು ಇಸ್ರೇಲ್ ಯೋಧರು ಹಾಗೂ ಮಾಧ್ಯಮಗಳು ಪತ್ತೆ ಹಚ್ಚಿವೆ ಎಂದು ಅದು ಹೇಳಿತ್ತು.

i24 News ಅನ್ನು ಆಧರಿಸಿ ವರದಿ ಮಾಡಿರುವ ಬಲಪಂಥೀಯ ಅಂತರ್ಜಾಲ ಪುಟ OpInida ಕೂಡಾ, “ಹಮಾಸ್ ಉಗ್ರರು ನಿರ್ದಯವಾಗಿ ನವಜಾತ ಶಿಶುಗಳ ಶಿರಚ್ಛೇದ ಮಾಡಿದ್ದಾರೆ” ಎಂದು ಪ್ರಕಟಿಸಿತ್ತು.

ವರದಿಯೊಂದನ್ನು ಉಲ್ಲೇಖಿಸಿದ್ದ ಬಲಪಂಥೀಯ ಅಂತರ್ಜಾಲ ತಾಣ Swarajya, “ತಲೆ ಕತ್ತರಿಸಿದ ಸ್ಥಿತಿಯಲ್ಲಿ ನವಜಾತ ಶಿಶುಗಳ ಪತ್ತೆ, ಹಾಸಿಗೆಯಲ್ಲೇ ಇಡೀ ಕುಟುಂಬದ ಹತ್ಯೆ’ ಎಂಬ ಮುಖಪುಟ ಶೀರ್ಷಿಕೆ ನೀಡಿತ್ತು.

ANI ಸುದ್ದಿ ಸಂಸ್ಥೆಯ ವರದಿಯನ್ನು ಮರು ಪ್ರಕಟಣೆ ಮಾಡಿರುವ NDTV ಸುದ್ದಿ ಸಂಸ್ಥೆಯು, “ಇಸ್ರೇಲ್ ಮೇಲೆ ಹಮಾಸ್ ನಡೆಸಿರುವ ದಾಳಿಯ ರಕ್ತ ಹೆಪ್ಪುಗಟ್ಟಿಸುವ ವಿವರಗಳಲ್ಲಿ ಉಗ್ರರ ಗುಂಪಿನಿಂದ ಕನಿಷ್ಠ 40 ನವಜಾತ ಶಿಶುಗಳ ಹತ್ಯೆಯಾಗಿರುವುದೂ ಸೇರಿದೆ. ಸ್ಥಳಕ್ಕೆ ಈಗಾಗಲೇ ಯೋಧರು ಧಾವಿಸಿದ್ದು, ಪರಿಸ್ಥಿತಿ ಇದಕ್ಕಿಂತ ಕೆಟ್ಟದಾಗಿರಬಹುದು ಎಂದು ನಿರೀಕ್ಷಿಸುತ್ತಿದ್ದಾರೆ. ಆದರೆ, ಘಟನೆಯ ದೃಶ್ಯಾವಳಿಗಳು ಊಹಿಸಲೂ ಅಸಾಧ್ಯವಾಗಿವೆ” ಎಂದು ಇಸ್ರೇಲ್ ನ i24 News ಸುದ್ದಿ ಸಂಸ್ಥೆಯನ್ನು ಉಲ್ಲೇಖಿಸಿ ವರದಿ ಮಾಡಿತ್ತು.

“ಹಮಾಸ್ ಉಗ್ರರು 40 ನವಜಾತ ಶಿಶುಗಳನ್ನು ಬರ್ಬರವಾಗಿ ಹತ್ಯೆಗೈದಿರುವುದರಿಂದ ಇಸ್ರೇಲ್ ಅಧಿಕಾರಿಗಳು ಹಾಗೂ ವರದಿಗಾರರು ಆಘಾತಗೊಂಡಿದ್ದಾರೆ” ಎಂದು ವರದಿ ಮಾಡಿದ್ದ The Times of India, ಘಟನಾ ದೃಶ್ಯವನ್ನು ವಿವರಿಸಿರುವ ಇಸ್ರೇಲ್ ಸೇನೆಯ ಕಮಾಂಡರ್ ಒಬ್ಬರನ್ನು ಉಲ್ಲೇಖಿಸಿ, “ಇದು ಯುದ್ಧವಲ್ಲ; ಬದಲಿಗೆ ಹತ್ಯಾಕಾಂಡ ಎಂದು ಬಣ್ಣಿಸಿದ್ದಾರೆ” ಎಂದು ವರದಿ ಮಾಡಿತ್ತು.

ನಂತರ ಈ ಸುದ್ದಿ ಸಂಸ್ಥೆಯು ತನ್ನ ಮೂಲ ಸುದ್ದಿ ಶೀರ್ಷಿಕೆಗೆ ಉದ್ಧರಣವನ್ನು ಸೇರಿಸಿತ್ತು.

Times Now ಸುದ್ದಿ ಸಂಸ್ಥೆಯು ತನ್ನ ಅಂತರ್ಜಾಲ ತಾಣದಲ್ಲಿ “ಇಸ್ರೇಲ್-ಹಮಾಸ್ ಯುದ್ಧ ಭೀಕರತೆ: ಉಗ್ರರಿಂದ 40 ನವಜಾತ ಶಿಶುಗಳ ಹತ್ಯೆ; ಕೆಲವರ ಶಿರಚ್ಛೇದ” ಎಂಬ ಸುದ್ದಿ ಶೀರ್ಷಿಕೆ ನೀಡಿತ್ತು. i24 News ಸುದ್ದಿ ಸಂಸ್ಥೆಯನ್ನು ಉಲ್ಲೇಖಿಸಿ, ಘಟನಾ ದೃಶ್ಯವನ್ನು ನೋಡಿ ಇಸ್ರೇಲ್ ಅಧಿಕಾರಿಗಳು ಹಾಗೂ ವರದಿಗಾರರು ನಡುಗಿ ಹೋಗಿದ್ದಾರೆ ಎಂದೂ ಹೇಳಿತ್ತು.

ಹೀಗಾಗಿ, ಇಸ್ರೇಲ್ ಹಾಗೂ ಫೆಲೆಸ್ತೀನ್ ನಡುವೆ ನಡೆಯುತ್ತಿರುವ ಯುದ್ಧದ ಕುರಿತು ಹರಡುತ್ತಿರುವ ಸುದ್ದಿಗಳನ್ನು ಪರಿಶೀಲಿಸಲಿರುವ ಸತ್ಯಶೋಧಕರಿಗೆ ಇನ್ನು ಕೆಲವು ದಿನಗಳ ಕಾಲ ಬಿಡುವಿಲ್ಲದ ಕೆಲಸವಿರಲಿದೆ. ಈ ಪ್ರಕರಣದಲ್ಲಿ ಯಾವುದೇ ಪೂರಕ ವರದಿಗಾರಿಕೆ ಅಥವಾ ಮಾಹಿತಿ ಇಲ್ಲದೆ ಬಹುತೇಕ ಮಾಧ್ಯಮ ಸಂಸ್ಥೆಗಳು i24 News ಸುದ್ದಿ ಸಂಸ‍್ಥೆಯ ವರದಿಯನ್ನು ಬಳಸಿಕೊಂಡಿವೆ.

ಇದು ಒಳ್ಳೆಯ ದಿನಗಳಲ್ಲೂ ಅಪಾಯಕಾರಿ ಮನೋಭಾವದ್ದಾಗಿದ್ದು, ಯುದ್ಧ ಕಾಲದಲ್ಲಂತೂ ತೀರಾ ಅಪಾಯಕಾರಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News