2018ರ ಬಳಿಕ ಕನಿಷ್ಠ ಮಟ್ಟ ತಲುಪಿದ ಗೋಧಿ ದಾಸ್ತಾನು

Update: 2024-03-13 02:23 GMT

ಹೊಸದಿಲ್ಲಿ: ಭಾರತದ ಆಹಾರ ನಿಗಮದಲ್ಲಿ ಗೋಧಿ ದಾಸ್ತಾನು 2018ರ ಬಳಿಕ ಇದೇ ಮೊದಲ ಬಾರಿಗೆ 100 ಲಕ್ಷ ಟನ್ ಗಿಂತ ಕಡಿಮೆಯಾಗಿದ್ದು, ಈ ತಿಂಗಳು ಗೋಧಿ ದಾಸ್ತಾನು ಪ್ರಮಾಣ 97 ಲಕ್ಷ ಟನ್ ಗೆ ಇಳಿದಿದೆ. ಕಳೆದ ಎರಡು ವರ್ಷಗಳಲ್ಲಿ ಕಡಿಮೆ ಖರೀದಿ ಹಾಗೂ ಬೆಲೆ ಏರಿಕೆ ತಡೆಯುವ ನಿಟ್ಟಿನಲ್ಲಿ ದಾಖಲೆ ಪ್ರಮಾಣದಲ್ಲಿ ಮುಕ್ತ ಮಾರುಕಟ್ಟೆಗೆ ಆಹಾರಧಾನ್ಯ ಬಿಡುಗಡೆ ಮಾಡಿರುವುದು ಇದಕ್ಕೆ ಕಾರಣ. ಆದರೆ ಅಕ್ಕಿ ದಾಸ್ತಾನಿನಲ್ಲಿ ಬಫರ್ ನಿಯಮಕ್ಕಿಂತ ನಾಲ್ಕು ಪಟ್ಟು ಅಧಿಕ ದಾಸ್ತಾನು ಹೊಂದಿದೆ.

ಗೋಧಿ ದಾಸ್ತಾನು ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದಿದ್ದರೂ, ಇದು ಶಾಸನಾತ್ಮಕವಾಗಿ ಇರಬೇಕಾದ ಕನಿಷ್ಠ ದಾಸ್ತಾನು ಪ್ರಮಾಣಕ್ಕಿಂತ ಅಧಿಕ. ಶಾಸನಾತ್ಮಕವಾಗಿ ಏಪ್ರಿಲ್ ವೇಳೆಗೆ ಆಹಾರ ನಿಗಮ 74.6 ಲಕ್ಷ ಟನ್ ಆಹಾರ ಧಾನ್ಯದ ದಾಸ್ತಾನು ಹೊಂದಿರಬೇಕು.

"ನಾವು ಹೊಂದಿರುವ ದಾಸ್ತಾನು ರಾಷ್ಟ್ರೀಯ ಆಹಾರ ಭದ್ರತೆ ಅಗತ್ಯತೆಗಳನ್ನು ಈಡೇರಿಸಲು ಸಾಕು ಹಾಗೂ ಇದು ಕನಿಷ್ಠ ದಾಸ್ತಾನು ನಿಯಮಕ್ಕಿಂತ ಅಧಿಕವಾಗಿದೆ. ಮಾರ್ಚ್ 1ರಿಂದ ಖರೀದಿ ಸೀಸನ್ ಕೂಡಾ ಆರಂಭಾಗಿದ್ದು, ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ಖರೀದಿಯಾಗಲಿದೆ" ಎಂದು ನಿಗಮದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಸಕ್ತ ಹಂಗಾಮಿನಲ್ಲಿ 320 ಲಕ್ಷ ಟನ್ ಗೋಧಿ ಖರೀದಿಸುವ ಅಂದಾಜು ಇದ್ದು, ಇದು ಸರ್ಕಾರವನ್ನು ಆರಾಮದಾಯಕ ಸ್ಥಿತಿಗೆ ಒಯ್ಯಲಿದೆ ಎಂದು ಮೂಲಗಳು ಹೇಳಿವೆ.

ಕಳೆದ ಜೂನ್ ತಿಂಗಳಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಗೋಧಿ ಬೆಲೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಸರ್ಕಾರ ಮುಕ್ತ ಮಾರುಕಟ್ಟೆಗೆ ಗೋಧಿ ಮಾರಾಟ ಆರಂಭಿಸಿತ್ತು. ಫೆಬ್ರವರಿ ಕೊನೆಯ ವೇಳೆಗೆ ಭಾರತೀಯ ಆಹಾರ ನಿಗಮ ಮಾರುಕಟ್ಟೆ ಹಸ್ತಕ್ಷೇಪದ ಕ್ರಮವಾಗಿ 90 ಲಕ್ಷ ಟನ್ ಗೋಧಿಯನ್ನು ಬಿಡುಗಡೆ ಮಾಡಿತ್ತು. ಸಾರ್ವಜನಿಕ ಖರೀದಿ ಆರಂಭವಾಗಿರುವ ಹಿನ್ನೆಲೆಯಲ್ಲಿ ಇದೀಗ ಮುಕ್ತ ಮಾರುಕಟ್ಟೆ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ.

ಅಕ್ಕಿ ಮಿಲ್ ಗಳಿಂದ ಬರಬೇಕಾದ 30 ಲಕ್ಷ ಟನ್ ಹೊರತುಪಡಿಸಿ ಆಹಾರ ನಿಗಮದ ಬಳಿ ಸದ್ಯಕ್ಕೆ 270 ಲಕ್ಷ ಟನ್ ಅಕ್ಕಿ ದಾಸ್ತಾನು ಇದೆ. ಬಫರ್ ಸ್ಟಾಕ್ ನಿಯಮಾವಳಿ ಅನ್ವಯ ಏಪ್ರಿಲ್ 1ರ ವೇಳೆಗೆ 136 ಲಕ್ಷ ಟನ್ ಅಕ್ಕಿ ದಾಸ್ತಾನು ಇರಬೇಕು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News