ಅಸ್ಸಾಂ ಚರಿತ್ರೆಯಲ್ಲಿ ಉಲ್ಫಾ ಶಾಂತಿ ಒಪ್ಪಂದವೇಕೆ ಪ್ರಮುಖ ಕ್ಷಣ?

Update: 2023-12-29 16:50 GMT

Photo: twitter.com/CMOfficeAssam

ಗುವಾಹಟಿ: ಈಶಾನ್ಯ ಭಾರತದಲ್ಲಿನ ದಶಕಗಳಷ್ಟು ಹಳೆಯ ಸಮಸ್ಯೆಯಾದ ಬಂಡುಕೋರತನವನ್ನು ಕೊನೆಯಾಗಿಸಲು ಕೇಂದ್ರ ಸರ್ಕಾರವಿಂದು (ಡಿಸೆಂಬರ್ 29, 2023) ಮಾತುಕತೆಯ ಪರವಾಗಿರುವ ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸ್ಸಾಂ ಬಣದೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಉಪಸ್ಥಿತರಿದ್ದು, ಈ ಚಾರಿತ್ರಿಕ ಕ್ಷಣದಲ್ಲಿ ಜೊತೆಯಾಗುತ್ತಿರುವ ಸರ್ಕಾರದ ಪ್ರಾಮುಖ್ಯತೆ ಹಾಗೂ ಒತ್ತಡವನ್ನು ಒತ್ತಿ ಹೇಳುತ್ತಿದೆ.

ಈ ಶಾಂತಿ ಒಪ್ಪಂದದಲ್ಲಿ ಮಾತುಕತೆಯ ಪರವಾಗಿರುವ ಬಣದ ನಾಯಕರಾದ ಅನೂಪ್ ಚೆತಿಯ ಹಾಗೂ ಅರವಿಂದ ರಾಜ್ ಖೋವಾ ಪಾಲ್ಗೊಂಡರೆ, ಮಾತುಕತೆಯನ್ನು ವಿರೋಧಿಸುತ್ತಿರುವ ಉಲ್ಫಾ (ಸ್ವತಂತ್ರ) ಬಣವು ಈ ಶಾಂತಿ ಒಪ್ಪಂದದಿಂದ ದೂರ ಉಳಿದಿದೆ.

ದಶಕಗಳ ಕಾಲದ ಸಶಸ್ತ್ರ ಬಂಡುಕೋರತನ

ಅಸ್ಸಾಂನ ಸಾರ್ವಭೌಮತೆಯನ್ನು ಮರು ಸ್ಥಾಪನೆಗೊಳಿಸುವ ಗುರಿಯೊಂದಿಗೆ ಎಪ್ರಿಲ್ 7, 1979ರಂದು ಉಲ್ಫಾ ಸ್ಥಾಪನೆಯಾಗಿತ್ತು. ತನ್ನ ನಾಲ್ಕು ದಶಕಗಳ ಅಸ್ತಿತ್ವದಲ್ಲಿ ನಡೆದಿರುವ ಹಲವಾರು ದಾಳಿಗೆ ಈ ಗುಂಪು ಜವಾಬ್ದಾರಿಯಾಗಿತ್ತು.

ಈ ಬಂಡುಕೋರ ಗುಂಪು ಇದೀಗ ಬಾಂಗ್ಲಾದೇಶ, ಭೂತಾನ್ ಹಾಗೂ ಮ್ಯಾನ್ಮಾರ್ ಗಳಲ್ಲಿ ನೆಲೆ ಹೊಂದಿದೆ. ಈ ಗುಂಪಿನ ಕೆಲವರು ಚೀನಾ ಹಾಗೂ ಪಾಕಿಸ್ತಾನದಲ್ಲೂ ತರಬೇತಿ ಪಡೆದಿದ್ದಾರೆ. ಈಶಾನ್ಯ ರಾಜ್ಯಗಳ ಎಲ್ಲ ಬಂಡುಕೋರ ಗುಂಪುಗಳ ಪೈಕಿ ಉಲ್ಫಾ ಭಾರಿ ಅಮಾನುಷ ಸಂಘಟನೆ ಎಂದು ವ್ಯಾಪಕವಾಗಿ ಪರಿಗಣಿಸಲಾಗಿದ್ದು, ಒಂದು ಹಂತದಲ್ಲಿ, ಆಗ್ನೇಯ ಏಷ್ಯಾದಲ್ಲಿ ಎಲ್‍ಟಿಟಿಇ ಹೊರತುಪಡಿಸಿದರೆ, ಉಲ್ಫಾ ಗುಂಪನ್ನೇ ಪ್ರಬಲ ಬಂಡುಕೋರ ಗುಂಪೆಂದು ಪರಿಗಣಿಸಲಾಗಿತ್ತು.

ಉಲ್ಫಾ ಸಂಘಟನೆ ಅಸ್ತಿತ್ವಕ್ಕೆ ಬಂದ ನಂತರ ಅಸ್ಸಾಂ ಚಳವಳಿಯು ತೀವ್ರ ಸ್ವರೂಪ ಪಡೆದಿತ್ತು. ಅದರ ಅಸ್ತಿತ್ವದುದ್ದಕ್ಕೂ ಸಂಘಟನೆಯ ಉನ್ನತ ನಾಯಕರ ನಡುವೆ ಭಿನ್ನಾಭಿಪ್ರಾಯವಿದ್ದದ್ದು ಜಗಜ್ಜಾಹೀರಾಗಿತ್ತು.

ರಾಜ್ ಖೋವಾ ನೇತೃತ್ವದ ಉಲ್ಫಾ ಸಂಘಟನೆಯು 2011ರಲ್ಲಿ ಸರ್ಕಾರದೊಂದಿಗೆ ರಾಜಿ ಸಂಧಾನ ಪ್ರಾರಂಭಿಸಿತ್ತು. ಆದರೆ, ಈ ಸಂಧಾನಕ್ಕೆ ಪರೇಶ್ ಬರುವಾ ನೇತೃತ್ವದ ಸಂಘಟನೆಯು ತೀವ್ರ ವಿರೋಧ ವ್ಯಕ್ತಪಡಿಸಿತ್ತು. ನಂತರ ರಚನೆಯಾಗಿರುವ ಉಲ್ಫಾ (ಸ್ವತಂತ್ರ) ಸಂಘಟನೆಯ ಶಾಂತಿ ಒಪ್ಪಂದದಿಂದ ದೂರ ಉಳಿದಿದ್ದಾರೆ.

ಪ್ರಮುಖ ವಿಷಯಗಳನ್ನು ಪರಿಗಣಿಸಿದ ಸರ್ಕಾರ

ಅಸ್ಸಾಂ ಸಮಸ್ಯೆಯ ಕುರಿತ ಸರ್ಕಾರದ ದೃಷ್ಟಿಕೋನದಲ್ಲಿ ಬದಲಾವಣೆಯಾಗಿರುವುದಕ್ಕೆ ಈ ಶಾಂತಿ ಒಪ್ಪಂದವು ನಿದರ್ಶನವಾಗಿದೆ. 2005ರಲ್ಲಿ ಸಾರ್ವಭೌಮತೆ ಸೇರಿದಂತೆ ಉಲ್ಫಾ ಪ್ರಸ್ತಾಪಿಸಿದ್ದ ಹಲವಾರು ಪ್ರಮುಖ ವಿಷಯಗಳ ಕುರಿತು ಚರ್ಚಿಸಲು ಸರ್ಕಾರ ಮೊದಲ ಬಾರಿಗೆ ಒಪ್ಪಿಗೆ ಸೂಚಿಸಿತ್ತು. ಈ ಮುಂದಡಿಯು ಕೇವಲ ಬಂಡುಕೋರತನಕ್ಕೆ ಪರಿಹಾರ ಒದಗಿಸುವುದು ಮಾತ್ರವಾಗಿರಲಿಲ್ಲ. ಬದಲಿಗೆ, ಅಸ್ಸಾಂ ಅನ್ನು ಬಾಧಿಸುತ್ತಿರುವ ದೀರ್ಘಕಾಲದಿಂದ ಪರಿಹಾರ ಕಾಣದ ವಿಷಯಗಳ ಪರಿಹಾರಕ್ಕಾಗಿ ಇಡಲಾಗಿದ್ದ ಪ್ರಮುಖ ಹೆಜ್ಜೆಯೂ ಆಗಿತ್ತು.

ಅಸ್ಸಾಂನಲ್ಲಿರುವ ಆರು ಪ್ರಮುಖ ಸಮುದಾಯಗಳಾದ ಮೊರಾನ್, ಮುಟೋಕ್, ತಾಯಿ-ಅಹೋಮ್, ಕೋಚ್-ರಾಜ್ ಬೊಂಬ್ಶಿ, ಸೂಟೀ ಹಾಗೂ ಟೀ ಬುಡಕಟ್ಟುಗಳನ್ನು ಪರಿಶಿಷ್ಟ ಬುಡಕಟ್ಟು ಎಂದು ಪರಿಗಣಿಸಬೇಕು ಎಂಬುದು ಉಲ್ಫಾದ ಪ್ರಮುಖ ಆಗ್ರಹವಾಗಿತ್ತು. ಒಂದು ವೇಳೆ ಈ ಸಮುದಾಯಗಳಿಗೆ ಪರಿಶಿಷ್ಟ ಬುಡಕಟ್ಟು ಸ್ಥಾನಮಾನವನ್ನು ಘೋಷಿಸಿದರೆ, ಅಸ್ಸಾಂನ ಜನಸಂಖ್ಯೆಯಲ್ಲಿ ಶೇ. 50ರಷ್ಟು ಜನಸಂಖ್ಯೆಯನ್ನು ಹೊಂದಿರುವ ಈ ಸಮುದಾಯಗಳು ಅಸ್ಸಾಂ ರಾಜ್ಯವನ್ನು ಬುಡಕಟ್ಟು ಪ್ರಾಬಲ್ಯದ ಪ್ರಾಂತ್ಯವನ್ನಾಗಿಸಲಿವೆ.

ಶಾಂತಿ ಒಪ್ಪಂದದಲ್ಲಿ ಏನಿದೆ?

ಮೂಲಗಳ ಪ್ರಕಾರ, ಶಾಂತಿ ಒಪ್ಪಂದವು ಆರ್ಥಿಕ ನೆರವನ್ನು ಒಳಗೊಂಡಿರಲಿದ್ದು, ಅಸ್ಸಾಂನ ಮೂಲ ನಿವಾಸಿ ಸಮುದಾಯಗಳಿಗೆ ನೂತನ ಭೂ ಮೀಸಲು ಕ್ರಮಗಳು, ಹಕ್ಕುಗಳು ಹಾಗೂ ಪೌರತ್ವ ಪಟ್ಟಿಯ ಪರಿಷ್ಕರಣೆಯು ಸೇರಿರಲಿವೆ.

ಈ ಆರ್ಥಿಕ ಪರಿಹಾರದಿಂದ ಅಸ್ಸಾಂ ಪ್ರಾಂತ್ಯದ ಆರ್ಥಿಕ ಕಳವಳಗಳು ಮಾತ್ರ ಬಗೆಹರಿಯದೆ, ಮಾಜಿ ಉಲ್ಫಾ ಸದಸ್ಯರ ಪುನರ್ವಸತಿಗೆ ನೆರವನ್ನೂ ಒದಗಿಸಲಿದೆ.

ಅಕ್ರಮ ವಲಸಿಗರ ವಿಷಯವನ್ನು ಎದುರಿಸಲು ಪೌರತ್ವ ಪಟ್ಟಿಯನ್ನು ಪರಿಷ್ಕರಿಸಬೇಕು ಎಂಬುದು ಉಲ್ಫಾದ ಪ್ರಮುಖ ಆಗ್ರಹಗಳ ಪಟ್ಟಿಯಲ್ಲಿರುವ ಮತ್ತೊಂದು ಗಮನಾರ್ಹ ವಿಷಯವಾಗಿದೆ.

ಈ ಶಾಂತಿ ಒಪ್ಪಂದದಿಂದಾಗಿ, ಅಸ್ಸಾಂನಲ್ಲಿರುವ ಮೂಲನಿವಾಸಿಗಳಿಗೆ ರಾಜಕೀಯ, ಆರ್ಥಿಕ ಹಾಗೂ ಸಾಂಸ್ಕೃತಿಕ ರಕ್ಷಣೆಯೂ ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ.

ಸೌಜನ್ಯ: ndtv.com

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News