ಸ್ಪೀಕರ್ ಸ್ಥಾನಕ್ಕೆ ಇಷ್ಟೊಂದು ಬೇಡಿಕೆ ಯಾಕೆ ?

Update: 2024-06-12 11:03 GMT

PC :PTI 

ಹೊಸದಿಲ್ಲಿ: ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರಕಾರ ಮೂರನೇ ಬಾರಿ ರಚನೆಯಾಗುತ್ತಿರುವಾಗ ಅತ್ಯಂತ ಹೆಚ್ಚು ಚರ್ಚೆಯಾಗಿದ್ದು ಸ್ಪೀಕರ್ ಹುದ್ದೆ. ಸರಕಾರ ರಚಿಸಲು ಬೆಂಬಲ ನೀಡಬೇಕಾದರೆ ಟಿಡಿಪಿ ಮತ್ತು ಜೆಡಿಯು ಸ್ಪೀಕರ್ ಹುದ್ದೆಯನ್ನು ನಮಗೆ ಬಿಟ್ಟುಕೊಡಬೇಕೆಂಬ ಬೇಡಿಕೆಯನ್ನು ಇಟ್ಟಿವೆ ಎಂದು ವರದಿಗಳಿದ್ದವು.

ಉಪ ಪ್ರಧಾನಿಯ ಸ್ಥಾನ , ಕ್ಯಾಬಿನೆಟ್ ಸಚಿವ ಸ್ಥಾನ, ಪ್ರಮುಖ ಖಾತೆಗಳು, ರಾಜ್ಯ ಮಂತ್ರಿ ಸ್ಥಾನ - ಇವೆಲ್ಲವನ್ನೂ ಪಕ್ಕಕ್ಕಿಟ್ಟು ಸಾಂವಿಧಾನಿಕ ಹುದ್ದೆಯಾದ ಸ್ಪೀಕರ್ ಸ್ಥಾನ ಕೇಳಲು ಕಾರಣ ಏನು ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಈಗ ರಚನೆಯಾಗಿರುವುದು ಮೈತ್ರಿ ಸರಕಾರ. ಈ ಹಿಂದಿನ ಎರಡೂ ಮೈತ್ರಿ ಸರಕಾರಗಳೇ ಆಗಿದ್ದರೂ ಅವು ಬರೀ ಹೆಸರಿಗೆ ಮಾತ್ರ ಎನ್ ಡಿ ಎ ಮೈತ್ರಿ ಸರಕಾರ. ಆ ಎರಡೂ ಅವಧಿಗಳಲ್ಲಿ ಬಿಜೆಪಿ ಬಳಿಯೇ ಬಹುಮತಕ್ಕಿಂತ ಹೆಚ್ಚೇ ಸ್ಥಾನಗಳಿದ್ದವು. ಹಾಗಾಗಿ ಅಲ್ಲಿ ಮೈತ್ರಿ ಪಕ್ಷಗಳಿಗೆ ಯಾವುದೇ ಪ್ರಾಮುಖ್ಯತೆ ಇರಲಿಲ್ಲ. ಆದರೆ ಈ ಸರಕಾರ ಹಾಗಲ್ಲ. ಇಲ್ಲಿ ಬಿಜೆಪಿ ಬಳಿ ಏಕಾಂಗಿಯಾಗಿ ಬಹುಮತವಿಲ್ಲ. ಹಾಗಾಗಿ ಮೈತ್ರಿ ಪಕ್ಷಗಳು ಪ್ರಮುಖ ಪಾತ್ರ ವಹಿಸಿವೆ.

ಅಂತಹ ಪರಿಸ್ಥಿತಿಯಲ್ಲಿ ಸ್ಪೀಕರ್ ಹುದ್ದೆ ಬಹಳ ಮುಖ್ಯವಾಗುತ್ತದೆ. ಬಿಜೆಪಿ ತನ್ನದೇ ಬಲದಲ್ಲಿ 272ರ ಮ್ಯಾಜಿಕ್ ನಂಬರ್ ದಾಟಬೇಕಿದ್ದರೆ ಅದು ತನ್ನ ಮಿತ್ರ ಪಕ್ಷಗಳನ್ನು ಒಡೆದು ಹಾಕಿ ಅಲ್ಲಿಂದ ಸಂಸದರನ್ನು ಸೆಳೆಯಬೇಕು. ಕಳೆದೊಂದು ದಶಕದ ಮೋದಿ ಶಾ ನೇತೃತ್ವದ ಬಿಜೆಪಿಯಲ್ಲಿ ಇದರ ಉದಾಹರಣೆಗಳಿವೆ. ಈ ಬಾರಿ ಬಿಜೆಪಿ ಹೀಗೆ ಮಾಡದಂತೆ ತಡೆಯಬೇಕಿದ್ದರೆ ಸ್ಪೀಕರ್ ಹುದ್ದೆ ಅತ್ಯಗತ್ಯ.

ಸಂಸದರಿಂದ ರಾಜೀನಾಮೆ ಕೊಡಿಸಿದರೆ ಆಗ ಸ್ಪೀಕರ್ ತೆಗೆದುಕೊಳ್ಳುವ ನಿರ್ಧಾರ ಅತ್ಯಂತ ನಿರ್ಣಾಯಕವಾಗಿರುತ್ತದೆ. ಒಬ್ಬ ಲೋಕಸಭಾ ಸದಸ್ಯ ಪಕ್ಷಾಂತರ ಮಾಡಿದರೆ ಆ ಸದಸ್ಯನನ್ನು ಅನರ್ಹಗೊಳಿಸಬೇಕೆ ಬೇಡವೇ ಎಂಬ ನಿರ್ಧಾರ ಸ್ಪೀಕರ್ ಅವರದ್ದು. ಇದೇ ಈಗ ಮೈತ್ರಿ ಸರಕಾರದಲ್ಲಿ ಅತಿ ಮುಖ್ಯ ಅಧಿಕಾರ. ಹೀಗಿರುವಾಗ ಟಿ ಡಿ ಪಿ ಮತ್ತು ಜೆಡಿಯುವಿನಂತಹ ಪಕ್ಷಗಳು ತಮ್ಮ ಸಂಸದರು ಪಕ್ಷಾಂತರ ಗೊಳ್ಳುವುದರಿಂದ ತಡೆಯಲು ಸ್ಪೀಕರ್ ಹುದ್ದೆಯನ್ನು ತಮ್ಮ ಬಳಿ ಇಟ್ಟುಕೊಳ್ಳಲು ಬಯಸಿರಬಹುದು.

ಇನ್ನು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಪೀಕರ್ ಹುದ್ದೆಗೆ ಬಹಳ ಗೌರವವಿದೆ ಮತ್ತು ಕೆಲವು ಬಹುಮುಖ್ಯ ಅಧಿಕಾರಗಳಿವೆ. ಭಾರತದ ಸಂವಿಧಾನದ ಪ್ರಕಾರ ಲೋಕಸಭೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿವೆ. ಸಾರ್ವತ್ರಿಕ ಚುನಾವಣೆಯ ನಂತರ ಚುನಾಯಿತರಾದ ಎಲ್ಲಾ ಸಂಸದರು ಒಟ್ಟು ಸೇರಿ ಸ್ಪೀಕರನ್ನು ಚುನಾಯಿಸಬೇಕಾಗಿದೆ. ಸ್ಪೀಕರ್ ಹುದ್ದೆಯ ಚುನಾವಣೆಯು ಬಹಳ ಸರಳ ರೀತಿಯಲ್ಲಿ ಆಗುತ್ತೆ. ಎಲ್ಲ ಸಂಸದರು ತಮ್ಮ ಮತವನ್ನು ಚಲಾಯಿಸುತ್ತಾರೆ ಮತ್ತು ಸರಳ ಬಹುಮತದಿಂದ ಸ್ಪೀಕರನ್ನು ಚುನಾಯಿಸುತ್ತಾರೆ.

ಲೋಕಸಭೆಯ ಅಧ್ಯಕ್ಷರಾಗಲು ಯಾವುದೇ ವಿಶೇಷ ಅರ್ಹತೆಯ ಅಗತ್ಯವಿಲ್ಲ. ಲೋಕಸಭೆಯ ಚುನಾಯಿತ ಸಂಸದರಾಗಿದ್ದರೆ ಸಾಕು. ಆದರೆ ಅಧ್ಯಕ್ಷರು ಅಥವಾ ಸ್ಪೀಕರ್ ಬೇರೆ ಸದಸ್ಯರ ಹಾಗೆ ಅಲ್ಲ, ಅವರಿಗೆ ಕೆಲವು ವಿಶೇಷ ಅಧಿಕಾರಗಳಿವೆ.

ಸ್ಪೀಕರ್ ಹುದ್ದೆಗೆ ಆಯ್ಕೆಯಾದ ಕೂಡಲೇ ಆ ಸಂಸದ ತಮ್ಮ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಕೊಡ್ತಾರೆ. ಏಕೆಂದರೆ ಸ್ಪೀಕರ್ ಹುದ್ದೆಯಲ್ಲಿರುವವರು ಪಕ್ಷದ ಸದಸ್ಯನ ಹಾಗೆ ವರ್ತಿಸುವಂತಿಲ್ಲ. ಸ್ಪೀಕರ್ ಅಂದರೆ ಸಂಸತ್ತಿನ ಎಲ್ಲ ಸದಸ್ಯರ ಯಜಮಾನರಿದ್ದಂತೆ. ಪ್ರತಿಯೊಬ್ಬ ಸದಸ್ಯನನ್ನೂ ಸಮಾನವಾಗಿ ಕಾಣುವುದು ಸ್ಪೀಕರ್ ಹೊಣೆಗಾರಿಕೆ. ಅವರು ಪಕ್ಷದ ಮೇರೆಯನ್ನು ಮೀರಿದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವವರು. ಶಿಷ್ಟಾಚಾರದ ಪ್ರಕಾರ ರಾಷ್ಟ್ರಪತಿ ಬಳಿಕ ಬರುವವರು ಸ್ಪೀಕರ್, ನಂತರ ಪ್ರಧಾನಿ. ಅಷ್ಟು ಮಹತ್ವ ಇದೆ ಸ್ಪೀಕರ್ ಸ್ಥಾನಕ್ಕೆ.

ಸ್ಪೀಕರ್ ಸಂಸತ್ತಿನ ಮುಖ್ಯಸ್ಥರು. ಸಂಸತ್ತಿನ ನಿಯಮಗಳ ಮತ್ತು ಕಾರ್ಯವಿಧಾನಗಳ ಪಾಲನೆಯಾಗುತ್ತಿದೆ ಎಂಬುದನ್ನು ಖಚಿತಪಡಿಸುವುದು ಸ್ಪೀಕರ್ ಜವಾಬ್ದಾರಿಯಾಗಿದೆ. ಸಂಸತ್ತಿನಲ್ಲಿ ಯಾವ ವಿಷಯ ಚರ್ಚೆಯಾಗಬೇಕು ಯಾವ ಪ್ರಶ್ನೆಗಳನ್ನು ಎತ್ತಬೇಕು ಎಂಬುದನ್ನು ಸ್ಪೀಕರ್ ನಿರ್ಧರಿಸುತ್ತಾರೆ. ಈ ಕಾರಣದಿಂದಲೇ ವಿರೋಧ ಪಕ್ಷಕ್ಕೆ ತಮ್ಮ ಪ್ರಶ್ನೆಗಳನ್ನು ಎತ್ತಲು ಅವಕಾಶ ಸಿಗಬೇಕಿದ್ದರೆ ಸ್ಪೀಕರ್ ನಿಷ್ಪಕ್ಷವಾಗಿರಬೇಕು. ಯಾವುದೇ ಸದಸ್ಯರು ಮಾತನಾಡುವಾಗ ಲೋಕಸಭೆಗೆ ಉಚಿತವಲ್ಲದಂತಹ ಭಾಷೆಯನ್ನು ಉಪಯೋಗಿಸಿದರೆ ಆ ಭಾಷಣವನ್ನು ಲೋಕಸಭೆಯ ದಾಖಲೆಗಳಿಂದ ತೆಗೆದುಹಾಕುವ ಅಥವಾ ಹೊರಗಿಡುವ ಅಧಿಕಾರ ಸ್ಪೀಕರ್ ಗೆ ಇದೆ.

ಹೀಗಿರುವಾಗ ವಿರೋಧ ಪಕ್ಷ ಸರಕಾರದ ವಿರುದ್ಧ ಎತ್ತುವಂತಹ ವಿಷಯಗಳು ಲೋಕಸಭೆಯ ದಾಖಲೆಗಳಲ್ಲಿ ಇರಬೇಕಾದರೆ ಸ್ಪೀಕರ್ ನಿಷ್ಪಕ್ಷವಾಗಿರಬೇಕು. ಕಳೆದ ಲೋಕಸಭೆಯಲ್ಲಿ ಕೆಲವು ನಾಯಕರ ಮಾತುಗಳನ್ನು ಲೋಕಸಭಾ ದಾಖಲೆಗಳಿಂದ ತೆಗೆದುಹಾಕಲಾಗಿತ್ತು. ಮಣಿಪುರದ ಕುರಿತಾಗಿ ರಾಹುಲ್ ಗಾಂಧಿಯ ಭಾಷಣದ ಹಲವಷ್ಟು ಭಾಗಗಳನ್ನು ತೆಗೆದು ಹಾಕಲಾಗಿತ್ತು.

ಇನ್ನು ಲೋಕಸಭೆಯಲ್ಲಿ ಪಾಸಾಗಬೇಕಿರುವ ಎಲ್ಲಾ ಮಸೂದೆಗಳನ್ನು ಮತಕ್ಕೆ ಇಡುವಂತಹ ಜವಾಬ್ದಾರಿ ಸ್ಪೀಕರ್ ರದ್ದು. ಯಾವ ಮಸೂದೆಯ ಮೇಲೆ ಎಷ್ಟು ಚರ್ಚೆ ಆಗಬೇಕು ಮತ್ತು ಯಾವ ಮಸೂದೆಯನ್ನು ಧ್ವನಿ ಮತದಿಂದ ಪಾಸು ಮಾಡಿದರೆ ಸಾಕು ಎಂಬ ನಿರ್ಧಾರ ಸ್ಪೀಕರ್ ನದ್ದು. ಕಳೆದ ಲೋಕಸಭೆಯಲ್ಲಿ ಸ್ಪೀಕರ್ ಸಂಪೂರ್ಣವಾಗಿ ಮೋದಿ ಸರಕಾರದ ಅಣತಿಯಂತೆಯೇ ಕೆಲಸ ಮಾಡಿದರು ಎಂಬ ವ್ಯಾಪಕ ಆರೋಪ ಕೇಳಿ ಬಂತು.

ಮಸೂದೆಗಳನ್ನು ಪಾಸ್ ಮಾಡುವಾಗ, ಚರ್ಚೆಗೆ ಅವಕಾಶ ಕೊಡುವಾಗ, ಸದಸ್ಯರು ಸದನದ ಘನತೆಗೆ ಕುಂದುಂಟು ಮಾಡುವ ವರ್ತನೆ ತೋರಿಸಿದಾಗ ಅಥವಾ ಅಂತಹ ಮಾತಾಡಿದಾಗ, ವಿಪಕ್ಷ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳುವಾಗ, ಪ್ರಕರಣಗಳ ತನಿಖೆ ಮಾಡುವಾಗ ಕಳೆದ ಲೋಕಸಭೆಯ ಸ್ಪೀಕರ್ ಸಂಪೂರ್ಣವಾಗಿ ಸರಕಾರದ ಪ್ರತಿನಿಧಿಯ ಹಾಗೆ ಕೆಲಸ ಮಾಡಿದರು ಎಂಬ ಆರೋಪ ಹಲವಾರು ಬಾರಿ ವ್ಯಕ್ತವಾಗಿತ್ತು.

ಈಗ ಬಿಜೆಪಿಗೆ ಬಹುಮತವಿಲ್ಲ. ಹಾಗಾಗಿ ಪಕ್ಷದ ಸಂಸದರು ತಮ್ಮ ಅಂಕೆಯಲ್ಲಿರಬೇಕು ಎಂಬ ದೃಷ್ಟಿಯಲ್ಲಿ ಟಿಡಿಪಿ ಹಾಗು ಜೆಡಿಯು ಸ್ಪೀಕರ್ ಸ್ಥಾನ ಕೇಳಿರಬಹುದು ಎನ್ನಲಾಗಿದೆ.

ಸ್ಪೀಕರ್ ನಿಷ್ಪಕ್ಷತೆ ಅತಿ ಹೆಚ್ಚು ಚರ್ಚೆಗೆ ಬರುವುದು ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯದ ಸಮಯದಲ್ಲಿ. ಅವಿಶ್ವಾಸ ನಿರ್ಣಯದ ಸಮಯದಲ್ಲಿ ಸ್ಪೀಕರ್ ನಿಷ್ಪಕ್ಷವಾಗಿರುವುದು ಬಹು ಮುಖ್ಯ. ಮೈತ್ರಿ ಸರಕಾರಗಳಿರುವಾಗ ಅವಿಶ್ವಾಸ ನಿರ್ಣಯದ ಸಂದರ್ಭ ಬರುವ ಸಾಧ್ಯತೆ ಹೆಚ್ಚು ಇರುತ್ತದೆ. ಆಗ ಸ್ಪೀಕರ್ ಪಾತ್ರ ಬಹಳ ಮುಖ್ಯವಾಗುತ್ತದೆ.

1999ರಲ್ಲಿ ವಾಜಪೇಯಿ ಸರ್ಕಾರ ಒಂದು ಮತದಿಂದ ಬಿದ್ದು ಹೋಗಿತ್ತು. ಆ ಸಮಯದಲ್ಲಿ ವಾಜಪೇಯಿ ಸರಕಾರ ಬಿದ್ದು ಹೋಗುವುದರ ಹಿಂದೆ ಒಡಿಶಾದ ಸಿಎಂ ಗಿರಿಧರ್ ಗಮಾಂಗ್ ಅವರ ಮತ ಬಹು ಮುಖ್ಯ ಪಾತ್ರ ವಹಿಸಿತ್ತು.

ಗಿರಿಧರ್ ಗಮಾಂಗ್ ಅವರು ಆ ಸಮಯದಲ್ಲಿ ಒಡಿಶಾದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಅವರು ಸಂಸದ ಸ್ಥಾನಕ್ಕೆ ಇನ್ನೂ ರಾಜೀನಾಮೆ ನೀಡಿರಲಿಲ್ಲ. ಗಿರಿಧರ್ ಗಮಾಂಗ್ ಗೆ ಸ್ಪೀಕರ್ ಮತ ಚಲಾಯಿಸಲು ಅಧಿಕಾರ ನೀಡಿದ್ದರಿಂದಾಗಿ ಅವರು ಮತ ಚಲಾಯಿಸಿದರು. ಆ ಒಂದು ಮತದ ಕಾರಣದಿಂದಾಗಿ ಸರಕಾರ ಬಿದ್ದು ಹೋಗಿತ್ತು.

ಈ ಎಲ್ಲ ಕಾರಣಗಳಿಂದ ಸ್ಪೀಕರ್ ಹುದ್ದೆ ಬಹು ಮುಖ್ಯವಾಗುತ್ತದೆ. ಆದರೆ ಬಿಜೆಪಿ ಸ್ಪೀಕರ್ ಹುದ್ದೆಯನ್ನು ಮೈತ್ರಿ ಪಕ್ಷಗಳಿಗೆ ಬಿಟ್ಟು ಕೊಡೋದು ಕಷ್ಟ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News