‘‘ದುಬಾರಿ ಮತ್ತು ಅನಗತ್ಯ’’ ಔಷಧಿಗಳನ್ನು ಕೊಡುತ್ತಿರುವ ವೈದ್ಯರ ಬಗ್ಗೆ ಮೌನವೇಕೆ?” : ಭಾರತೀಯ ವೈದ್ಯಕೀಯ ಅಸೋಸಿಯೇಶನ್‌ಗೆ ಸುಪ್ರೀಂ ಕೋರ್ಟ್ ಪ್ರಶ್ನೆ
ಹೊಸದಿಲ್ಲಿ : ಪತಂಜಲಿ ಆಯುರ್ವೇದ, ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲ¬ಕೃಷ್ಣ ವಿರುದ್ಧದ ದಾರಿತಪ್ಪಿಸುವ ಜಾಹೀರಾತುಗಳಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಮಂಗಳವಾರ, ದೂರುದಾರ ಸಂಸ್ಥೆಯಾಗಿರುವ ಭಾರತೀಯ ವೈದ್ಯಕೀಯ ಅಸೋಸಿಯೇಶನ್ (ಐಎಮ್‌ಎ) ವಿರುದ್ಧವೂ ಕಿಡಿಗಾರಿದೆ. ಅಲೋಪತಿ ವೈದ್ಯಪದ್ಧತಿಯನ್ನು ಅನುಸರಿಸುತ್ತಿರುವ ವೈದ್ಯರು ‘‘ದುಬಾರಿ ಮತ್ತು ಅನಗತ್ಯ’’ ಔಷಧಿಗಳನ್ನು ಕೊಡುತ್ತಿರುವ ದೂರುಗಳ ಬಗ್ಗೆ ಯಾಕೆ ಮೌನವಾಗಿದ್ದೀರಿ ಎಂದು ನ್ಯಾಯಾಲಯ ಪ್ರಶ್ನಿಸಿದೆ.
‘‘ನಾಲ್ಕು ಬೆರಳುಗಳು ನಿಮ್ಮತ್ತವೇ ಬೆಟ್ಟು ಮಾಡುತ್ತಿವೆ’’ ಎನ್ನುವುದನ್ನು ನೀವು ಮರೆಯಬಾರದು ಎಂದು ಪ್ರಮುಖ ವೈದ್ಯರ ಸಂಘಟನೆಗೆ ನ್ಯಾಯಾಲಯ ಹೇಳಿದೆ.
‘‘ ಅಲೋಪತಿ ವೈದ್ಯ ಪದ್ಧತಿ ಅನುಸರಿಸುತ್ತಿರುವ ನಿಮ್ಮ (ಐಎಮ್‌ಎ) ವೈದ್ಯರು ದುಬಾರಿ ಔಷಧಿಗಳಿಗೆ ಅನುಮೋದನೆ ನೀಡುತ್ತಿದ್ದಾರೆ. ಹೀಗಿರುವಾಗ, ನಾವು ನಿಮ್ಮನ್ನೂ ಯಾಕೆ ಪರಿಶೀಲನೆಗೆ ಒಳಪಡಿಸಬಾರದು?’’ ಎಂದು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಎ. ಅಮಾನುಲ್ಲಾ ಅವರನ್ನೊಳಗೊಂಡ ನ್ಯಾಯಪೀಠ ಪ್ರಶ್ನಿಸಿತು.
ವೈದ್ಯರು ರೋಗಿಗಳಿಗೆ ‘‘ದುಬಾರಿ ಮತ್ತು ಅನಗತ್ಯ’’ ಔಷಧಿಗಳನ್ನು ಬರೆದುಕೊಡುತ್ತಿದ್ದಾರೆ ಎನ್ನಲಾದ ‘‘ಅನೈತಿಕ ಕೃತ್ಯ’’ಗಳ ವಿಷಯದಲ್ಲಿ ನೀವು ಕೂಡ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ನಿಮ್ಮ ಮನೆಯನ್ನು ನೀವು ಮೊದಲು ಸರಿಯಾಗಿ ಇಟ್ಟುಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿತು.
ಖಾದ್ಯ ಉತ್ಪನ್ನಗಳ ಜಾಹೀರಾತು ನೀಡುವ ಕಂಪೆನಿಗಳಿಗೂ ಚಾಟಿ
ಶಿಶುಗಳು, ಶಾಲೆಗೆ ಹೋಗುವ ಮಕ್ಕಳು ಮತ್ತು ಹಿರಿಯ ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಖಾದ್ಯ ಉತ್ಪನ್ನಗಳ ಜಾಹೀರಾತುಗಳನ್ನು ನೀಡುವ ಮೂಲಕ ಕೆಲವು ಕಂಪೆನಿಗಳು ಸಾರ್ವಜನಿಕರ ಮೇಲೆ ಸವಾರಿ ಮಾಡುತ್ತಿವೆ ಎಂಬುದಾಗಿಯೂ ಸುಪ್ರೀಂ ಕೋರ್ಟ್ ಹೇಳಿತು.
ತಪ್ಪು ದಾರಿಗೆಳೆಯುವ ಜಾಹೀರಾತುಗಳ ವಿಷಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಅಫಿದಾವಿತ್ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರೀಯ ಸಚಿವಾಲಯಗಳಿಗೆ ನಿರ್ದೇಶನ ನೀಡಿತು.
‘‘ಈಗ ನಾವು ಎಲ್ಲವನ್ನೂ ಗಮನಿಸುತ್ತಿದ್ದೇವೆ. ನಾವು ಮಕ್ಕಳು, ಶಿಶುಗಳು, ಮಹಿಳೆಯರು ಎಲ್ಲರ ಬಗ್ಗೆಯೂ ಗಮನ ಹರಿಸಿದ್ದೇವೆ. ಯಾರ ಮೇಲೆಯೂ ಸವಾರಿ ಮಾಡಬಾರದು’’ ಎಂದು ಅದು ಹೇಳಿತು.
‘‘ಕೇಂದ್ರ ಸರಕಾರವು ಎಚ್ಚೆತ್ತುಕೊಳ್ಳಬೇಕು’’ ಎಂದಿತು.