ಸರಕಾರದಿಂದ ಯಾವುದೇ ನೋಟಿಸು ಸ್ವೀಕರಿಸಿಲ್ಲ : ವಿಕಿಮೀಡಿಯಾ
Update: 2024-11-07 17:59 GMT
ಹೊಸದಿಲ್ಲಿ : ವಿಕಿಪೀಡಿಯಾದಲ್ಲಿ ಪ್ರಕಟವಾದ ವಿಷಯಕ್ಕೆ ಸಂಬಂಧಿಸಿ ಭಾರತ ಸರಕಾರದಿಂದ ಯಾವುದೇ ನೋಟಿಸು ಸ್ವೀಕರಿಸಿಲ್ಲ ಎಂದು ಅಮೆರಿಕ ಮೂಲದ ಲಾಭರಹಿತ ಸಂಸ್ಥೆ ‘ದಿ ವಿಕಿಮೀಡಿಯಾ ಫೌಂಡೇಶನ್’ ಗುರುವಾರ ಹೇಳಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ವಿಕಿಪೀಡಿಯಾವನ್ನು ಪ್ರಕಾಶಕರ ಬದಲು ಮಧ್ಯವರ್ತಿ ಎಂದು ಯಾಕೆ ಪರಿಗಣಿಸಬಾರದು ಎಂಬ ಬಗ್ಗೆ ವಿವರಿಸುವಂತೆ ಕೋರಿ ಕೇಂದ್ರ ಸರಕಾರ ಆಲ್ಲೈನ್ ಎನ್ಸೈಕ್ಲೋಪೀಡಿಯಕ್ಕೆ ನೋಟಿಸು ಜಾರಿ ಮಾಡಿದೆ ಎಂದು ಪ್ರತಿಪಾದಿಸುವ ವರದಿ ಮಾದ್ಯಮಗಳಲ್ಲಿ ಪ್ರಕಟವಾದ ದಿನಗಳ ಬಳಿಕ ‘ದಿ ವಿಕಿಮೀಡಿಯಾ ಫೌಂಡೇಶನ್’ ಈ ಪ್ರತಿಕ್ರಿಯೆ ನೀಡಿದೆ.
ಕೇಂದ್ರ ಸರಕಾರದ್ದು ಎಂದು ಹೇಳಲಾದ ನೋಟಿಸಿನಲ್ಲಿ ವಿಕಿಪೀಡಿಯಾದ ವಿರುದ್ಧ ಪಕ್ಷಪಾತ ಹಾಗೂ ಅಸಮರ್ಪಕತೆ ಕುರಿತ ಹಲವು ದೂರುಗಳನ್ನು ಉಲ್ಲೇಖಿಸಲಾಗಿತ್ತು. ವಿಕಿಪೀಡಿಯಾದ ಸಂಪಾದಕೀಯ ವಿಭಾಗದ ಮೇಲೆ ಸಣ್ಣ ಗುಂಪೊಂದು ನಿಯಂತ್ರಣ ಹೊಂದಿರುವಂತೆ ಕಾಣುತ್ತದೆ ಎಂದು ಅದರಲ್ಲಿ ಹೇಳಲಾಗಿತ್ತು.