3 ತಿಂಗಳ ಪೊಲೀಸ್ ಕಸ್ಟಡಿ ಬದಲು 7 ದಿನಗಳ ಡಿಜಿಟಲ್ ಕಸ್ಟಡಿ ಆಯ್ಕೆ ಮಾಡಿಕೊಂಡಿದ್ದ ಮಹಿಳೆಗೆ 34 ಲಕ್ಷ ವಂಚನೆ!

ಮುಂಬೈ: ನಕಲಿ ಪೊಲೀಸರು ಮತ್ತು ಸಿಬಿಐ ಅಧಿಕಾರಿಗಳಿಂದ ವಂಚನೆಗೆ ಒಳಗಾದ 49 ವರ್ಷದ ಅಂಧೇರಿ ಮೂಲದ ಮಹಿಳೆಯೊಬ್ಬರು 33.5 ಲಕ್ಷ ರೂಪಾಯಿ ಕಳೆದುಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಹಣದ ಅವ್ಯವಹಾರದಲ್ಲಿ ಷಾಮೀಲಾದ ಆರೋಪ ಎದುರಿಸುತ್ತಿದ್ದ ಮಹಿಳೆಗೆ ನಕಲಿ ಅಧಿಕಾರಿಗಳು, ತನಿಖೆ ಪೂರ್ಣಗೊಳ್ಳುವವರೆಗೆ ಮೂರು ತಿಂಗಳ ಪೊಲೀಸ್ ಕಸ್ಟಡಿ ಅಥವಾ ಒಂದು ವಾರದ ಡಿಜಿಟಲ್ ಕಸ್ಟಡಿಯ ಶಿಕ್ಷೆ ವಿಧಿಸಿದ್ದರು. ಡಿಜಿಟಲ್ ಕಸ್ಟಡಿ ಆಯ್ದುಕೊಂಡ ಮಹಿಳೆ ಸೈಬರ್ ಅಪರಾಧದಲ್ಲಿ ತಮ್ಮ ಎಲ್ಲ ಉಳಿತಾಯವನ್ನು ಕಳೆದುಕೊಂಡರು ಎಂದು ಪೊಲೀಸರು ಹೇಳಿದ್ದಾರೆ.
ವ್ಯಕ್ತಿಯೊಬ್ಬರಿಗೆ ಡಿಜಿಟಲ್ ಬಂಧನದ ಆಯ್ಕೆ ನೀಡಿ ವಂಚಿಸಿರುವ ಮುಂಬೈನ ಮೊದಲ ಪ್ರಕರಣ ಇದಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ. ಈ ವಂಚನೆ ಡಿಸೆಂಬರ್ 2ರಿಂದ 31ರ ನಡುವೆ ಸಂಭವಿಸಿದೆ. ಫೆಬ್ರುವರಿ 25ರಂದು ಅಪರಾಧ ಪ್ರಕರಣ ದಾಖಲಿಸಲಾಗಿದೆ.
ಟ್ರಾಯ್ ಅಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ತಮಗೆ ಕರೆ ಮಾಡಿದ್ದು, ಬೆದರಿಕೆ ಮತ್ತು ವಂಚನೆ ಸಂದೇಶಗಳನ್ನು ಕಳುಹಿಸಿದ ಕಾರಣಕ್ಕೆ 2 ಗಂಟೆಯ ಒಳಗಾಗಿ ನಿಮ್ಮ ಮೊಬೈಲ್ ನಂಬರ್ ನ ಸಂಪರ್ಕ ಕಡಿತಗೊಳಿಸಲಾಗುತ್ತದೆ ಎಂಬ ಬೆದರಿಕೆ ಹಾಕಿದ್ದಾಗಿ ಮಹಿಳೆ ವಿವರಿಸಿದ್ದಾರೆ. ಈ ಆರೋಪವನ್ನು ಮಹಿಳೆ ಅಲ್ಲಗಳೆದಿದ್ದರು.
ದೆಹಲಿಯಲ್ಲಿ ಆಕೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾಗಿ ಮತ್ತೊಬ್ಬ ವ್ಯಕ್ತಿ ಹೇಳಿದ್ದ. ಮಹಿಳೆ ಆಧಾರ್ ಬಳಸಿಕೊಂಡು ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದು, ಹಣ ದುರ್ಬಳಕೆಗಾಗಿ ಹಲವು ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ ಎಂದು ಆಪಾದಿಸಿದ್ದ.
ರಾಜೇಶ್ವರ್ ಪ್ರಧಾನ್ ಎಂಬ ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡ ಮತ್ತೊಬ್ಬ ವ್ಯಕ್ತಿ ವಿಡಿಯೊ ಕರೆ ಮಾಡಿದ್ದ. ಆತ ಪೊಲೀಸ್ ಸಮವಸ್ತ್ರದಲ್ಲಿದ್ದ ಕಾರಣ ಆತ ಪೊಲೀಸ್ ಇರಬೇಕು ಎಂದು ಮಹಿಳೆ ನಂಬಿದ್ದರು. ಡಿಜಿಟಲ್ ಕಸ್ಟಡಿಗೆ ಮಹಿಳೆ ಅರ್ಜಿ ಸಲ್ಲಿಸಿದ್ದು, ಪ್ರಧಾನ್ ಇದನ್ನು ಅನುಮೋದಿಸಿದ್ದ. ಪ್ರತಿ ಗಂಟೆಗೊಮ್ಮೆ ವಾಟ್ಸಪ್ ಕರೆ ಮಾಡುವಂತೆ ಸೂಚಿಸಲಾಗಿತ್ತು. ರಹಸ್ಯ ಮೇಲ್ವಿಚಾರಣಾ ಖಾತೆಗೆ ಎಲ್ಲ ಹಣ ವರ್ಗಾಯಿಸುವಂತೆ ಆದೇಶಿಸಿದ್ದು, ಆಕೆಗೆ ಕ್ಲಿಯರೆನ್ಸ್ ಸರ್ಟಿಫಿಕೆಟ್ ನೀಡಿದ ಬಳಿಕ ಹಣ ಮರಳಲಿದೆ ಎಂದು ನಂಬಿಸಲಾಗಿತ್ತು.