ಪಶ್ಚಿಮ ಬಂಗಾಳ | ಮಹಿಳೆಯೊಬ್ಬರನ್ನು ಬೀದಿಯಲ್ಲೇ ಥಳಿಸಿದ ದುಷ್ಕರ್ಮಿಗಳು
ಹೊಸ ದಿಲ್ಲಿ: ಇಬ್ಬರು ದುಷ್ಕರ್ಮಿಗಳು ಬೀದಿಯಲ್ಲೇ ಓರ್ವ ಪುರುಷ ಹಾಗೂ ಓರ್ವ ಮಹಿಳೆಯನ್ನು ಥಳಿಸುತ್ತಿರುವ ವಿಡಿಯೊ ವೈರಲ್ ಆಗಿದ್ದು, ಈ ಘಟನೆಗಾಗಿ ವಿರೋಧ ಪಕ್ಷಗಳು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ಮುಗಿ ಬಿದ್ದಿವೆ.
ಈ ವಿಡಿಯೊ ದಿನಾಜ್‌ಪುರ್ ಜಿಲ್ಲೆಯ ಚೋಪ್ರಾದಲ್ಲಿ ನಡೆದಿರುವ ಘಟನೆ ಎಂದು ವಿರೋಧ ಪಕ್ಷಗಳಾದ ಸಿಪಿಎಂ ಹಾಗೂ ಬಿಜೆಪಿ ಆರೋಪಿಸಿವೆ. ಈ ಘಟನೆಯು ವಾರಾಂತ್ಯದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಈ ವೈರಲ್ ವಿಡಿಯೊದಲ್ಲಿ ಓರ್ವ ಪುರುಷ, ಓರ್ವ ಮಹಿಳೆಯನ್ನು ಕೋಲಿನಿಂದ ಪದೇ ಪದೇ ಬಾರಿಸುತ್ತಿದ್ದು, ಈ ಘಟನೆಯನ್ನು ಸಣ್ಣ ಗುಂಪೊಂದು ಮೂಕ ಪ್ರೇಕ್ಷಕನಂತೆ ನೋಡುತ್ತಾ ನಿಂತಿರುವುದು ಸೆರೆಯಾಗಿದೆ. ಮಹಿಳೆಯು ನೋವಿನಿಂದ ಚೀರಿಕೊಳ್ಳುತ್ತಿದ್ದರೂ, ಆಕೆಯನ್ನು ಥಳಿಸುವುದನ್ನು ಮುಂದುವರಿಸಿದ್ದಾನೆ. ನಂತರ ಮತ್ತೊಬ್ಬ ಪುರುಷನೆಡೆಗೆ ತಿರುಗಿ ಆತನನ್ನೂ ಥಳಿಸಲು ಪ್ರಾರಂಭಿಸಿದ್ದಾನೆ. ಸುತ್ತ ನೆರೆದಿದ್ದ ಗುಂಪಿನಲ್ಲಿದ್ದ ಬಹುತೇಕರು ಆ ಹಲ್ಲೆಯನ್ನು ನಿಲ್ಲಿಸಲು ಯತ್ನಿಸುವ ಬದಲು ಹಲ್ಲೆಕೋರನಿಗೇ ಸಹಾಯ ಮಾಡುತ್ತಿರುವುದು ಆ ವಿಡಿಯೊದಲ್ಲಿ ಕಂಡು ಬಂದಿದೆ. ಒಂದು ಹಂತದಲ್ಲಿ ಹಲ್ಲೆಕೋರನು ಆ ಮಹಿಳೆಯ ಕೂದಲು ಹಿಡಿದುಕೊಂಡು, ಆಕೆಗೆ ಒದೆಯುತ್ತಿರುವುದೂ ಆ ವಿಡಿಯೊದಲ್ಲಿ ಸೆರೆಯಾಗಿದೆ.