ಮಹಿಳಾ ಮೀಸಲಾತಿ ಮಸೂದೆ; ಒಬಿಸಿ, ಎಸ್ಸಿ ಮತ್ತು ಎಸ್ಟಿ ಮಹಿಳೆಯರಿಗೆ ಕೋಟಾ ಖಚಿತಪಡಿಸಿ: ಮಾಯಾವತಿ
ಲಕ್ನೋ: ಬಹುನಿರೀಕ್ಷಿತ ಮಹಿಳಾ ಮೀಸಲಾತಿ ಮಸೂದೆಯು ಮಂಗಳವಾರ ಸಂಸತ್ತಿನಲ್ಲಿ ಮಂಡನೆಯಾಗಿರುವ ನಡುವೆಯೇ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿಯವರು,ಮೀಸಲಾತಿಯಲ್ಲಿ ಒಬಿಸಿ,ಎಸ್ಸಿ ಮತ್ತು ಎಸ್ಟಿ ಮಹಿಳೆಯರಿಗೆ ಪ್ರತ್ಯೇಕ ಕೋಟಾಗಳನ್ನು ಖಚಿತಪಡಿಸಬೇಕು ಎಂದು ಹೇಳಿದ್ದಾರೆ.
‘ಬಿಎಸ್ಪಿಯ ಜೊತೆಗೆ ಹೆಚ್ಚಿನ ಪ್ರತಿಪಕ್ಷಗಳು ಮಹಿಳಾ ಮೀಸಲಾತಿ ಮಸೂದೆಯ ಪರವಾಗಿ ತಮ್ಮ ಮತಗಳನ್ನು ಚಲಾಯಿಸಲಿವೆ. ಸುದೀರ್ಘ ಸಮಯದಿಂದ ಬಾಕಿಯುಳಿದಿರುವ ಮಸೂದೆಯು ಚರ್ಚೆಯ ಬಳಿಕ ಅಂಗೀಕಾರಗೊಳ್ಳುತ್ತದೆ ಎಂದು ನಾವು ನಿರೀಕ್ಷಿಸಿದ್ದೇವೆ.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರ ಬದಲು ಶೇ.50ರಷ್ಟು ಮೀಸಲಾತಿ ದೊರೆಯಬೇಕು ಎಂದು ಹಿಂದೆ ನಾನು ನನ್ನ ಪಕ್ಷದ ಪರವಾಗಿ ಸಂಸತ್ತಿನಲ್ಲಿ ಹೇಳಿದ್ದೆ. ಆ ಬಗ್ಗೆ ಸರಕಾರವು ಚಿಂತನೆ ನಡೆಸುತ್ತದೆ ಎಂದು ನಾನು ಆಶಿಸಿದ್ದೇನೆ,ಅಲ್ಲದೆ ಒಬಿಸಿ,ಎಸ್ಸಿ ಮತ್ತು ಎಸ್ಟಿ ಮಹಿಳೆಯರಿಗೆ ಪ್ರತ್ಯೇಕ ಕೋಟಾವನ್ನೂ ಖಚಿತಪಡಿಸಬೇಕು,ಇಲ್ಲದಿದ್ದರೆ ಅದು ಅವರಿಗೆ ನ್ಯಾಯವನ್ನು ನೀಡುವುದಿಲ್ಲ ’ ಎಂದು ಮಾಯಾವತಿ ಹೇಳಿದರು.