ಈಶಾನ್ಯ ರಾಜ್ಯಗಳ ವಿಶೇಷ ಸ್ಥಾನಮಾನ ಮುಟ್ಟುವ ಯೋಜನೆ ಇಲ್ಲ: ಸುಪ್ರೀಂಕೋರ್ಟ್ ಗೆ ಕೇಂದ್ರ ಸರಕಾರ

Update: 2023-08-23 16:21 GMT


ಹೊಸದಿಲ್ಲಿ: ದೇಶದ ಈಶಾನ್ಯ ರಾಜ್ಯಗಳಿಗೆ ಅನ್ವಯವಾಗುವ ಸಂವಿಧಾನದಲ್ಲಿಯ ವಿಶೇಷ ನಿಯಮಾವಳಿಯನ್ನು ಬದಲಿಸುವ ಯಾವುದೇ ಉದ್ದೇಶವನ್ನು ತಾನು ಹೊಂದಿಲ್ಲ ಎಂದು ಕೇಂದ್ರವು ಬುಧವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿತು.

ಹಿಂದಿನ ಜಮ್ಮು-ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ಒದಗಿಸಿದ್ದ ಸಂವಿಧಾನದ ವಿಧಿ 370 ರದ್ದತಿಯನ್ನು ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ನೇತೃತ್ವದ ಐವರು ನ್ಯಾಯಾಧೀಶರ ಪೀಠಕ್ಕೆ ಈ ಹೇಳಿಕೆಯನ್ನು ಸಲ್ಲಿಸಿದರು.

ವಿಧಿ 370 ತಾತ್ಕಾಲಿಕ ನಿಬಂಧನೆಯಾಗಿತ್ತು ಮತ್ತು ಈಶಾನ್ಯ ರಾಜ್ಯಗಳಿಗೆ ಅನ್ವಯವಾಗುವ ವಿಶೇಷ ನಿಯಮಾವಳಿಗಳನ್ನು ಸರಕಾರವು ಬದಲಿಸಬಹುದು ಎಂಬ ಆತಂಕ ಬೇಡ ಎಂದು ಹೇಳಿದ ಮೆಹ್ತಾ, ವಿಶೇಷ ನಿಬಂಧನೆಗಳನ್ನು ಮುಟ್ಟುವ ಉದ್ದೇಶ ಕೇಂದ್ರ ಸರಕಾರಕ್ಕಿಲ್ಲ, ಅದು ಗಂಭೀರ ಪರಿಣಾಮಗಳನ್ನು ಬೀರುತ್ತದೆ. ಯಾವುದೇ ಆತಂಕವಿಲ್ಲ ಮತ್ತು ಆತಂಕವನ್ನು ಸೃಷ್ಟಿಸುವ ಅಗತ್ಯವೂ ಇಲ್ಲ ಎಂದರು.

ಸಂವಿಧಾನದ 371ನೇ ವಿಧಿಯಡಿ ನಿಬಂಧನೆಗಳು ಈಶಾನ್ಯ ರಾಜ್ಯಗಳಲ್ಲಿಯ, ಪ್ರಮುಖವಾಗಿ ಮಿಜೋರಾಂ ಮತ್ತು ನಾಗಾಲ್ಯಾಂಡ್ ಹಾಗೂ ಭಾಗಶಃ ಅಸ್ಸಾಂ, ಮಣಿಪುರ ಮತ್ತು ಮೇಘಾಲಯಗಳಲ್ಲಿಯ ಬುಡಕಟ್ಟು ಸಮುದಾಯಗಳು ಮತ್ತು ಸಂಸ್ಕೃತಿಗಳಿಗೆ ರಕ್ಷಣೆಯನ್ನು ನೀಡುತ್ತವೆ. ಈ ನಿಬಂಧನೆಗಳು ನಿರ್ದಿಷ್ಟ ಮಟ್ಟದ ಆಡಳಿತಾತ್ಮಕ ಸ್ವಾಯತ್ತತೆಯೊಂದಿಗೆ ವಿಕೇಂದ್ರೀಕೃತ ಆಡಳಿತಕ್ಕೆ ಅವಕಾಶ ನೀಡುತ್ತವೆ ಎಂದು ಮೆಹ್ತಾ ವಿವರಿಸಿದರು.

ಕೇಂದ್ರವು ತನ್ನ ನಿಲುವನ್ನು ಸ್ಪಷ್ಟಪಡಿಸಿರುವಾಗ ಆತಂಕವನ್ನು ಪರಿಹರಿಸುವ ಗೋಜಿಗೆ ತಾನು ಹೋಗುವುದಿಲ್ಲ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯವು,ಈ ಕಳವಳಗಳನ್ನೆತ್ತಿದ್ದ ಮಧ್ಯಂತರ ಅರ್ಜಿಯನ್ನು ವಿಲೇವಾರಿ ಮಾಡಿತು.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News