ಭಾರತದಲ್ಲಿ ಶೌಚಾಲಯ ಬಳಕೆ ಕಡಿಮೆಯಾಗುತ್ತಿದೆ ಎಂದು ಹೇಳಿದ್ದ ತನ್ನ ಸಂಶೋಧನಾ ಪ್ರಬಂಧ ಹಿಂದೆಗೆದುಕೊಂಡ ವಿಶ್ವ ಬ್ಯಾಂಕ್

Update: 2023-12-02 13:23 GMT

Photo: Sharada Prasad CS/Flickr, CC BY 2.0

 

ಹೊಸದಿಲ್ಲಿ: ಸ್ವಚ್ಛ ಭಾರತ ಮಿಷನ್-ಗ್ರಾಮೀಣ್‌ನ ಆರಂಭಿಕ ಲಾಭಗಳ ಹೊರತಾಗಿಯೂ 2018ರಿಂದ ಗ್ರಾಮೀಣ ಭಾರತದಲ್ಲಿ ಶೌಚಾಲಯ ಬಳಕೆಯು ಕಡಿಮೆಯಾಗುತ್ತಿರುವ ಅತ್ಯಂತ ಕಳವಳಕಾರಿ ಪ್ರವೃತ್ತಿಯಿದೆ ಎದು ಹೇಳಿದ್ದ ತನ್ನ ಇಲಾಖಾ ಸಂಶೋಧನಾ ಪ್ರಬಂಧವನ್ನು ವಿಶ್ವ ಬ್ಯಾಂಕ್ ಹಿಂದೆಗೆದುಕೊಂಡಿದೆ ಎಂದು The Hindu ವರದಿ ಮಾಡಿದೆ.

ನರೇಂದ್ರ ಮೋದಿ ಸರಕಾರದ ಒತ್ತಡದಿಂದಾಗಿ ಈ ಪ್ರಬಂಧವನ್ನು ಹಿಂದೆಗೆದುಕೊಳ್ಳಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದಲ್ಲದೆ ‘ಆಂತರಿಕ ಪುನರ್‌ಪರಿಶೀಲನೆ’ ಮತ್ತು ‘ತಾಂತ್ರಿಕ ಕಾರ್ಯವಿಧಾನ ಸಮಸ್ಯೆಗಳು ’ಬಾಕಿಯಿರುವ ಇತರ ಎರಡು ಪ್ರಬಂಧಗಳನ್ನೂ ಹಿಂದೆಗೆದುಕೊಳ್ಳಲಾಗಿದೆ. ಇದೇ ವೇಳೆ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಗೊಳ್ಳುವ ಪ್ರಬಂಧಗಳು ಆನ್‌ಲೈನ್‌ನಲ್ಲಿ ಲಭ್ಯವಾಗುವ ಮುನ್ನ ಅಗತ್ಯ ಆಂತರಿಕ ಅನುಮೋದನೆಗಳನ್ನು ಪಡೆದುಕೊಂಡಿರುತ್ತವೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.

ಸೆಪ್ಟಂಬರ್‌ನಲ್ಲಿ ಪ್ರಕಟಗೊಂಡಿದ್ದ ‘ಪ್ರೊಗ್ರೆಸ್ ಆನ್ ಸ್ಯಾನಿಟೇಷನ್ ಇನ್ ರೂರಲ್ ಇಂಡಿಯಾ:ರಿಕಲ್ಸೈನಿಂಗ್ ಡೈವರ್ಸ್ ಎವಿಡೆನ್ಸ್’ ಎಂಬ ವಿವಾದಾತ್ಮಕ ಪ್ರಬಂಧವು ಶೌಚಾಲಯಗಳ ಲಭ್ಯತೆಯನ್ನು ಹೆಚ್ಚಿಸುವಲ್ಲಿ ಅದ್ಭುತ ಪ್ರಗತಿಯ ಹೊರತಾಗಿಯೂ 2018ರಿಂದ ಗ್ರಾಮೀಣ ಭಾರತದಲ್ಲಿ ಶೌಚಾಲಯಗಳ ಬಳಕೆ ಕಡಿಮೆಯಾಗುತ್ತಿದೆ ಎಂದು ಬೆಟ್ಟು ಮಾಡಿತ್ತು. ಪರಿಶಿಷ್ಟ ಜಾತಿ (ಶೇ.20) ಮತ್ತು ಪರಿಶಿಷ್ಟ ಪಂಗಡ (ಶೇ.24) ಸಮುದಾಯಗಳಲ್ಲಿ ಶೌಚಾಲಯಗಳ ಬಳಕೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಅದು ಹೇಳಿತ್ತು.

ಸಂಶೋಧನಾ ಪ್ರಬಂಧದಲ್ಲಿ ಉಲ್ಲೇಖಿಸಲಾಗಿರುವ ಅಂಶಗಳು ಬಯಲು ಶೌಚ ಮತ್ತು ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್‌ನಂತಹ ಪದ್ಧತಿಗಳು ಭಾರತದಲ್ಲಿ ನಿರ್ಮೂಲನಗೊಂಡಿವೆ ಎಂಬ ಸರಕಾರದ ಹೇಳಿಕೆಗಳಿಗೆ ವಿರುದ್ಧವಾಗಿವೆ.

ಮಾಧ್ಯಮ ಸಂಸ್ಥೆಯು ಸಂಪರ್ಕಿಸಿದ್ದ ಸರಕಾರಿ ವಕ್ತಾರರೋರ್ವರು ಈ ವಿಷಯದಲ್ಲಿ ಪ್ರತಿಕ್ರಿಯಿಸಲು ನಿರಾಕರಿಸಿದರು. ಇದು ‘ಸಂಪೂರ್ಣವಾಗಿ ವಿಶ್ವ ಬ್ಯಾಂಕಿನ ಸಮಸ್ಯೆಯಾಗಿದೆ’ ಎಂದು ಅವರು ಬಣ್ಣಿಸಿದರು.

ಸರಕಾರದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಗಳು,ರಾಷ್ಟ್ರೀಯ ಮಾದರಿ ಸಮೀಕ್ಷೆಗಳು,ರಾಷ್ಟ್ರೀಯ ವಾರ್ಷಿಕ ಗ್ರಾಮೀಣ ನೈರ್ಮಲ್ಯ ಸಮೀಕ್ಷೆ (ಎನ್‌ಎಆರ್‌ಎಸ್‌ಎಸ್) ಮತ್ತು ಸ್ವಚ್ಛ ಭಾರತ ಮಿಷನ್-ಗ್ರಾಮೀಣ್‌ನ ಮಾಹಿತಿ ವ್ಯವಸ್ಥೆಯಿಂದ ಶೌಚಾಲಯ ಲಭ್ಯತೆ ಮತ್ತು ಬಳಕೆ ಕುರಿತು ದತ್ತಾಂಶಗಳನ್ನು ವಿಶ್ವ ಬ್ಯಾಂಕ್ ಸಂಶೋಧನೆಯು ಆಧರಿಸಿತ್ತು.

ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವು 2017-18ರಿಂದ 2019-20ರವರೆಗೆ ವಿಶ್ವ ಬ್ಯಾಂಕ್ ಬೆಂಬಲದೊಂದಿಗೆ ಗ್ರಾಮೀಣ ಭಾರತದಾದ್ಯಂತ ನಡೆಸಿದ್ದ ಎನ್‌ಎಆರ್‌ಎಸ್‌ಎಸ್, ಸ್ವಚ್ಛ ಭಾರತ ಮಿಷನ್-ಗ್ರಾಮೀಣ್ ಆರಂಭಗೊಂಡಾಗ ಅದು ಗ್ರಾಮೀಣ ಭಾರತದಲ್ಲಿ ಶೌಚಾಲಯಗಳ ಸಂಖ್ಯೆಯಲ್ಲಿ ಸಾಕಷ್ಟು ಹೆಚ್ಚಳಕ್ಕೆ ಕಾರಣವಾಗಿತ್ತು ಎಂದು ತೋರಿಸಿತ್ತು. ಅದು 2012ರಲ್ಲಿದ್ದ ಶೇ.38ರಿಂದ 2019-20ರಲ್ಲಿ ಶೇ.90ಕ್ಕೆ ಏರಿಕೆಯಾಗಿತ್ತು ಮತ್ತು ಈ ಅವಧಿಯ ಕೊನೆಯ ಎರಡು ವರ್ಷಗಳಲ್ಲಿ ಅತ್ಯಂತ ಕ್ಷಿಪ್ರ ಹೆಚ್ಚಳವನ್ನು ಕಂಡಿತ್ತು.

ರಾಷ್ಟ್ರ ಮಟ್ಟದಲ್ಲಿ 2015-16 ಮತ್ತು 2019-21ರ ನಡುವಿನ ಅವಧಿಯಲ್ಲಿ ಗ್ರಾಮೀಣ ಭಾರತದಲ್ಲಿ ಯಾವುದೇ ಶೌಚಾಲಯದ (ಸುಧಾರಿತ ಅಥವಾ ಸುಧಾರಿತವಲ್ಲದ) ಬಳಕೆಯು ಸರಾಸರಿಯಾಗಿ ಶೇ.46ರಿಂದ ಶೇ.75ಕ್ಕೆ ಏರಿಕೆಯಾಗಿತ್ತು. ನಾವು ಸಮೀಕ್ಷೆಗೊಳಪಡಿಸಿದ್ದ ಎಲ್ಲ ಜನಸಂಖ್ಯೆ ಮತ್ತು ಸಾಮಾಜಿಕ-ಆರ್ಥಿಕ ಉಪಗುಂಪುಗಳಾದ್ಯಂತ,ವಿಶೇಷವಾಗಿ ಬಡ ಮತ್ತು ಸಾಮಾಜಿಕವಾಗಿ ಹಿಂದುಳಿದ ಗುಂಪುಗಳಲ್ಲಿ ಈ ಹೆಚ್ಚಳ ಕಂಡುಬಂದಿತ್ತು ಎಂದು ಈಗ ಹಿಂದೆಗೆದುಕೊಳ್ಳಲಾಗಿರುವ ಸಂಶೋಧನಾ ಪ್ರಬಂಧದಲ್ಲಿ ಹೇಳಲಾಗಿತ್ತು.

ಆದಾಗ್ಯೂ ಹಿನ್ನಡೆಗಳಿದ್ದವು. 2015-16 ಮತ್ತು 2018-19ರ ನಡುವೆ ಯಾವುದೇ ಶೌಚಾಲಯದ ನಿಯಮಿತ ಬಳಕೆಯು ಎಸ್‌ಸಿ (ಶೇ.51) ಮತ್ತು ಎಸ್‌ಟಿ (ಶೇ.58) ಜನರಲ್ಲಿ ಹೆಚ್ಚಾಗಿದ್ದರೂ ( ಸಾಮಾನ್ಯ ವರ್ಗಕ್ಕೆ ಸಮಾನವಾಗಿ) ಅಲ್ಲಿಂದೀಚಿಗೆ ಇದು ಕಡಿಮೆಯಾಗುತ್ತಲೇ ಬಂದಿದೆ ಎಂದು ಪ್ರಬಂಧವು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News