ಒಪ್ಪಿಗೆಯ ವಯಸ್ಸು ಮತ್ತು ಮದುವೆಯ ವಯಸ್ಸಿನ ನಡುವೆ ವ್ಯತ್ಯಾಸಕ್ಕೆ ಬಾಂಬೆ ಹೈಕೋರ್ಟ್ ಒತ್ತು
ಮುಂಬೈ: ಮಹತ್ವದ ತೀರ್ಪೊಂದರಲ್ಲಿ ಮದುವೆಯ ಚೌಕಟ್ಟಿನ ಹೊರಗೆ ಲೈಂಗಿಕ ಕ್ರಿಯೆಗಳು ನಡೆಯಬಹುದು ಎನ್ನುವುದನ್ನು ಎತ್ತಿ ತೋರಿಸಿರುವ ಬಾಂಬೆ ಉಚ್ಚ ನ್ಯಾಯಾಲಯವು,ಲೈಂಗಿಕ ಕ್ರಿಯೆಗೆ ಒಪ್ಪಿಗೆಯ ವಯಸ್ಸು ಮತ್ತು ಮದುವೆಯ ವಯಸ್ಸಿನ ನಡುವೆ ವ್ಯತ್ಯಾಸವನ್ನು ಗುರುತಿಸುವ ಅಗತ್ಯಕ್ಕೆ ಒತ್ತು ನೀಡಿದೆ. ಮಾಧ್ಯಮ ವರದಿಗಳಂತೆ,ಅಪ್ರಾಪ್ತ ವಯಸ್ಕರ ನಡುವಿನ ಪ್ರಣಯ ಸಂಬಂಧಗಳಿಗೆ ಸಂಬಂಧಿಸಿದಂತೆ ದಂಡನಾತ್ಮಕ ನಿಲುವಿನ ಬಗ್ಗೆ ಕಳವಳ ವ್ಯಕ್ತಪಡಿಸಿರುವ ನ್ಯಾಯಾಲಯವು,ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಸೇವೆಗಳಿಗೆ ಆದ್ಯತೆ ನೀಡುವ ಪ್ರಗತಿಪರ ನಿಲುವಿಗೆ ಕರೆ ನೀಡಿದೆ.
ನ್ಯಾ.ಭಾರತಿ ಡಾಂಗ್ರೆ ಅವರು ನೀಡಿರುವ ತೀರ್ಪು ಲೈಂಗಿಕ ಹಿಂಸೆಯಿಂದ ಮಕ್ಕಳ ರಕ್ಷಣೆ ಹಾಗೂ ತಿಳುವಳಿಕೆಯುಳ್ಳ ಆಯ್ಕೆಗಳನ್ನು ಮಾಡಲು ಮತ್ತು ಅನುಚಿತ ಹಾನಿಯಾಗದಂತೆ ತಮ್ಮ ಮಿತಿಗಳನ್ನು ಅನ್ವೇಷಿಸಲು ಅವರಿಗೆ ಸಾಧ್ಯವಾಗಿಸುವ ನಡುವೆ ಸಮತೋಲನವನ್ನು ಸಾಧಿಸಲು ಬಯಸಿದೆ. ಲೈಂಗಿಕ ಕ್ರಿಯೆಗಳು ವೈವಾಹಿಕ ಸಂಬಂಧಗಳಿಗೆ ಸೀಮಿತವಾಗಿಲ್ಲ ಎನ್ನುವುದನ್ನು ಒಪ್ಪಿಕೊಂಡಿರುವ ನ್ಯಾಯಾಲಯವು,ಸಮಾಜ ಮತ್ತು ನ್ಯಾಯಾಂಗ ವ್ಯವಸ್ಥೆ ಈ ನಿರ್ಣಾಯಕ ಅಂಶವನ್ನು ಗುರುತಿಸುವ ಅಗತ್ಯವನ್ನು ಒತ್ತಿ ಹೇಳಿದೆ.
ಹದಿಹರೆಯದವರ ಲೈಂಗಿಕತೆಗೆ ದಂಡನಾತ್ಮಕ ನಿಲುವು ಅವರು ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳಲು ಅಡ್ಡಿಯನ್ನುಂಟು ಮಾಡಿದೆ ಮತ್ತು ತನ್ಮೂಲಕ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವರ ಸಾಮರ್ಥ್ಯವನ್ನು ಕುಂದಿಸಿದೆ ಎಂದು ನ್ಯಾ.ಡಾಂಗ್ರೆ ಒತ್ತಿ ಹೇಳಿದ್ದಾರೆ. 2016ರಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯೊಂದಿಗೆ ಸಹಮತದ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಪೊಕ್ಸೊ ಕಾಯ್ದೆಯಡಿ ದೋಷನಿರ್ಣಯಕ್ಕೊಳಗಾಗಿದ್ದ ವ್ಯಕ್ತಿಯನ್ನು ಖುಲಾಸೆಗೊಳಿಸಿದ ಸಂದರ್ಭ ನ್ಯಾಯಾಲಯವು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.
ಪುರಾವೆಗಳು ಸಹಮತದ ಲೈಂಗಿಕ ಕ್ರಿಯೆಯನ್ನು ಸಾಬೀತುಗೊಳಿಸಿವೆ,ಹೀಗಾಗಿ ಹಿಂದಿನ ದೋಷನಿರ್ಣಯವು ತಪ್ಪಿನಿಂದ ಕೂಡಿತ್ತು ಎಂದು ನ್ಯಾಯಾಲಯವು ಹೇಳಿದೆ.
ಇತರ ದೇಶಗಳಲ್ಲಿಯ ಒಪ್ಪಿಗೆ ಕಾನೂನುಗಳ ವಯಸ್ಸಿನೊಂದಿಗೆ ಹೋಲಿಸಿದರೆ ಭಾರತದಲ್ಲಿ ಲೈಂಗಿಕ ಕ್ರಿಯೆಗೆ ಒಪ್ಪಿಗೆಯ ವಯಸ್ಸು ಹೆಚ್ಚಿದೆ ಎಂದು ನ್ಯಾಯಾಲಯವು ಹೇಳಿದೆ. ಅಪ್ರಾಪ್ತ ವಯಸ್ಕರೊಂದಿಗೆ ಯಾವುದೇ ಲೈಂಗಿಕ ತೊಡಗುವಿಕೆಯು ಅತ್ಯಾಚಾರವಾಗುತ್ತದೆ ಎಂದು ಭಾವಿಸಿರುವ ಪ್ರಸ್ತುತ ನಿಬಂಧನೆಗಳು ಸಾಮಾಜಿಕ ವಾಸ್ತವಿಕತೆಗಳನ್ನು ಗಣನೆಗೆ ತೆಗೆದುಕೊಳ್ಳುವಲ್ಲಿ ವಿಫಲಗೊಂಡಿವೆ ಎಂದು ಹೇಳಿರುವ ಉಚ್ಚ ನ್ಯಾಯಾಲಯವು,ಪೊಕ್ಸೊ ಕಾಯ್ದೆಯ ಉದ್ದೇಶವು ಅಪ್ರಾಪ್ತ ವಯಸ್ಕರ ನಡುವಿನ ಸಹಮತದ ಸಂಬಂಧಗಳನ್ನು ಅಪರಾಧೀಕರಿಸುವ ಬದಲು ಲೈಂಗಿಕ ದೌರ್ಜನ್ಯವನ್ನು ಪರಿಹರಿಸುವುದಾಗಿದೆ ಎಂದು ಸ್ಪಷ್ಟಪಡಿಸಿದೆ.