ಸಿರಿಯಾ ನಿರಾಶ್ರಿತರ ಪರಿಹಾರ ನಿಧಿಗೆ ಆರ್ಥಿಕ ಕೊರತೆ: ವಿಶ್ವಸಂಸ್ಥೆ

Update: 2023-07-23 17:57 GMT

ಜಿನೆವಾ: ಕುಗ್ಗುತ್ತಿರುವ ಬಜೆಟ್ ಅನುದಾನಕ್ಕೆ ಸಮರ್ಪಕ ಆರ್ಥಿಕ ಬಲವನ್ನು ಸೇರಿಸದಿದ್ದರೆ ಜೋರ್ಡನ್‍ನಲ್ಲಿ ಸಿರಿಯ ನಿರಾಶ್ರಿತರ ಪರಿಹಾರ ಕಾರ್ಯಾಚರಣೆಗೆ ಗಂಭೀರ ಪರಿಣಾಮ ಬೀರಲಿದೆ ಎಂದು ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆ ಹೈಕಮಿಷನರ್(ಯುಎನ್‍ಎಚ್‍ಸಿಆರ್) ಪ್ರತಿನಿಧಿ ಎಚ್ಚರಿಸಿದ್ದಾರೆ.

ಜೋರ್ಡಾನ್‍ನಲ್ಲಿನ ನಿರಾಶ್ರಿತರ ಶಿಬಿರಗಳಲ್ಲಿ ಆರೋಗ್ಯ ಸೇವೆಗಳು ಮತ್ತು ಆಹಾರ ನೆರವನ್ನು ಕಡಿತಗೊಳಿಸುವ ಯೋಜನೆಯನ್ನು ಇತರ ಕೆಲವು ಸಂಘಟನೆಗಳು ಘೋಷಿಸಿದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ತುರ್ತು ನೆರವಿಗಾಗಿ ಮನವಿ ಮಾಡಿದೆ. 2023ರಲ್ಲಿ ಜೋರ್ಡಾನ್‍ನಲ್ಲಿನ ಸಿರಿಯ ನಿರಾಶ್ರಿತರ ನೆರವಿಗೆ 390.11 ದಶಲಕ್ಷ ಡಾಲರ್ ನೆರವಿನ ಅಗತ್ಯವಿದ್ದು ಇದರಲ್ಲಿ ಕೇವಲ 32%ದಷ್ಟು ಅಂದರೆ 125.7 ದಶಲಕ್ಷ ಡಾಲರ್ ನೆರವು ಮಾತ್ರ ಸಂಗ್ರಹವಾಗಿದೆ ಎಂದು ಜೋರ್ಡಾನ್ ಸರಕಾರಿ ಸ್ವಾಮ್ಯದ ಅಲ್-ಮಾಮ್ಲಕಾಹ್ ಟಿವಿ ವಾಹಿನಿ ವರದಿ ಮಾಡಿದೆ. 68% ದಷ್ಟು ಅನುದಾನ ಕೊರತೆಯಾಗಿರುವುದು ಮಾನವೀಯ ಬಿಕ್ಕಟ್ಟು ಮತ್ತು ನಿರಾಶ್ರಿತರು ಮತ್ತು ಆತಿಥೇಯ ಸಮುದಾಯಗಳಿಗೆ ಗಂಭೀರ ಪರಿಣಾಮಗಳಿಗೆ ಕಾರಣವಾಗಲಿದೆ ಮತ್ತು ಕಳೆದೊಂದು ದಶಕದಲ್ಲಿ ಮಾಡಿದ ಮಹಾನ್ ಸಾಧನೆಗಳನ್ನು ದುರ್ಬಲಗೊಳಿಸುತ್ತದೆ ಎಂದು ಜೋರ್ಡಾನ್‍ಗೆ ಯುಎನ್‍ಎಚ್‍ಸಿಆರ್ ಪ್ರತಿನಿಧಿ ಡೊಮಿನಿಕ್ ಬಾರ್ಷ್ ಎಚ್ಚರಿಸಿದ್ದಾರೆ.

ನಿರಾಶ್ರಿತರು ಮತ್ತು ಆತಿಥೇಯ ಸಮುದಾಯಗಳಿಗೆ ಗಂಭೀರ ಪರಿಣಾಮಗಳೊಂದಿಗೆ ಪರಿಸ್ಥಿತಿಯು ಮಾನವೀಯ ಬಿಕ್ಕಟ್ಟಿಗೆ ಮರಳುವ ಸನ್ನಿಹಿತ ಅಪಾಯವಿದೆ. ನಿರಾಶ್ರಿತರನ್ನು ಆರೋಗ್ಯರಕ್ಷಣೆ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ಸೇರಿಸುವ ಜೋರ್ಡಾನ್‍ನ ಸಾಮಥ್ರ್ಯವನ್ನು ಇದು ಕ್ಷೀಣಿಸಬಹುದು. ಕಳೆದ ಹಲವಾರು ವರ್ಷಗಳ ನಿರಂತರ ಬೆಂಬಲವು ಸಿರಿಯಾ ನಿರಾಶ್ರಿತರಿಗೆ ಕಾರ್ಮಿಕ ಮಾರುಕಟ್ಟೆ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದೆ. ಆದರೆ ಈ ಪರಿಸ್ಥಿತಿ ಮಾನವೀಯ ಬಿಕ್ಕಟ್ಟಿಗೆ ಬದಲಾಗುವ ಅಪಾಯವಿದೆ ಎಂದ ಅವರು ಕಳೆದ ಕೆಲ ವರ್ಷಗಳಿಂದ ವಲಸಿಗರಿಗೆ ಜೋರ್ಡಾನ್ ನೀಡುತ್ತಿರುವ ನೆರವು ಶ್ಲಾಘನೀಯವಾಗಿದೆ ಎಂದರು. 2021ರಲ್ಲಿ 62,000 ಸಿರಿಯನ್ನರಿಗೆ ಜೋರ್ಡಾನ್ ಸರಕಾರ ವರ್ಕ್ ಪರ್ಮಿಟ್(ಕೆಲಸದ ಪರವಾನಿಗೆ) ಒದಗಿಸಿದೆ. ತಮ್ಮ ದೇಶದಿಂದ ಪಲಾಯನ ಮಾಡುವ ಅನಿವಾರ್ಯತೆಗೆ ಸಿಲುಕಿದ ಸಿರಿಯನ್ನರಿಗೆ ಶಿಕ್ಷಣದ ಅವಕಾಶ ಮತ್ತು ಕಾನೂನು ಬದ್ಧ ಉದ್ಯೋಗ ದೊರಕಿಸಿಕೊಡಲು ಅವಕಾಶ ನೀಡುವ ಜೋರ್ಡನ್ ಒಪ್ಪಂದದ ಅಡಿಯಲ್ಲಿ ಅಂತರಾಷ್ಟ್ರೀಯ ಸಮುದಾಯವು ಜೋರ್ಡನ್‍ಗೆ ಆರ್ಥಿಕ ನೆರವು ಒದಗಿಸುವ ಜತೆಗೆ ಹಾಗೂ ಆ ದೇಶದೊಂದಿಗೆ ಹೆಚ್ಚಿನ ವ್ಯಾಪಾರ ವಹಿವಾಟು ನಡೆಸುತ್ತಿವೆ.

ಜೋರ್ಡನ್ ಮಾಡಿರುವ ಮಹತ್‍ಸಾಧನೆಯನ್ನು ಅಂತರಾಷ್ಟ್ರೀಯ ದೇಣಿಗೆದಾರರು ಗುರುತಿಸಬೇಕಾಗಿದೆ ಮತ್ತು ಸಂಘಟಿತ ಕ್ರಮದ ಮೂಲಕ ಜೋರ್ಡನ್‍ನ ಯಶಸ್ವಿ ಯೋಜನೆ ಮುಂದುವರಿಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಬಾಷ್ ಹೇಳಿದ್ದಾರೆ.

ನೆರವಿನ ಕೊರತೆಯು ನಿರಾಶ್ರಿತರ ಅಸಹಾಯಕತೆಯನ್ನು ಮತ್ತಷ್ಟು ಹೆಚ್ಚಿಸಲಿದೆ. ಮನೆ ಬಾಡಿಗೆ ಪಾವತಿಸದ ಕಾರಣ ಮನೆಯಿಂದ ಹೊರಹಾಕಲ್ಪಡುವ ಸ್ಥಿತಿಯಲ್ಲಿರುವ ನಿರಾಶ್ರಿತರ ಕುಟುಂಬದ ಪ್ರಮಾಣ 2022ರ ಡಿಸೆಂಬರ್‍ನಿಂದ 2023ರ ಫೆಬ್ರವರಿಯವರೆಗಿನ ಅವಧಿಯಲ್ಲಿ 66%ದಷ್ಟು ಹೆಚ್ಚಿದೆ. ಜೋರ್ಡನ್‍ನಲ್ಲಿರುವ ನಿರಾಶ್ರಿತರ ಆರ್ಥಿಕ ಪರಿಸ್ಥಿತಿ ಸುಧಾರಿಸದಿದ್ದರೆ ಯುರೋಪ್‍ನತ್ತ ನಿರಾಶ್ರಿತರ ವಲಸೆಯ ಮತ್ತೊಂದು ಅಲೆ ಆರಂಭವಾಗಬಹುದು. ಯುರೋಪ್‍ನತ್ತ ಅಕ್ರಮ ಮಾರ್ಗದ ಮೂಲಕ ಅವರು ಪ್ರಯಾಣಿಸುವ ಅಪಾಯವಿದೆ. ಇದು ನಿರಾಶ್ರಿತರ ಮೇಲಿನ ದೌರ್ಜನ್ಯ ಹಾಗೂ ಪ್ರಾಣಹಾನಿಗೆ ಕಾರಣವಾಗಬಹುದು. ಭವಿಷ್ಯದ ಬಗ್ಗೆ ಅಪನಂಬಿಕೆ ಇದ್ದರೆ ಜನತೆ ಹತಾಶ ಆಯ್ಕೆಗೆ ಮುಂದಾಗುತ್ತಾರೆ ಎಂಬುದಕ್ಕೆ ಇತ್ತೀಚೆಗೆ ಗ್ರೀಸ್ ಕಡಲತೀರದಲ್ಲಿ ನಡೆದ ನಿರಾಶ್ರಿತರ ಹಡಗು ದುರಂತ ಉತ್ತಮ ಉದಾಹರಣೆಯಾಗಿದೆ ಎಂದು ಯುಎನ್‍ಎಚ್‍ಸಿಆರ್ ಹೇಳಿದೆ.

ಜೋರ್ಡಾನ್‍ನಲ್ಲಿರುವ ನಿರಾಶ್ರಿತರ ಶಿಬಿರದಲ್ಲಿರುವ ನಿರಾಶ್ರಿತರಿಗೆ ಒದಗಿಸುವ ತಲಾ ಮಾಸಿಕ ಆಹಾರ ನೆರವಿನ ಪ್ರಮಾಣವನ್ನು 32 ಡಾಲರ್‍ನಿಂದ 21 ಡಾಲರ್‍ಗೆ ಕಡಿಮೆಗೊಳಿಸಲಾಗುವುದು ಎಂದು ವಿಶ್ವ ಆಹಾರ ಯೋಜನೆ ಇತ್ತೀಚೆಗೆ ಘೋಷಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News