ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ, ಪ್ರವಾಹ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ತಡೆ
ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಮಂಡಿ- ಕುಲು ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತಡೆ ಉಂಟಾಗಿದೆ ಎಂದು ಮಂಡಿ ಜಿಲ್ಲಾ ಪೊಲೀಸರು ಪ್ರಕಟಿಸಿದ್ದಾರೆ.
"ತೀವ್ರ ಹವಾಮಾನ ಪರಿಸ್ಥಿತಿ ಮತ್ತು ನಿರಂತರ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉದ್ಭವಿಸಿದ್ದು, ಮಂಡಿ- ಕುಲು ರಾಷ್ಟ್ರೀಯ ಹೆದ್ದಾರಿಯ ಅಟು ಎಂಬಲ್ಲಿ ಖೊತಿ ನಾಲಾ ಪ್ರವಾಹದಿಂದಾಗಿ ಸಂಚಾರಕ್ಕೆ ತಡೆ ಉಂಟಾಗಿದೆ" ಎಂದು ಅಧಿಕೃತ ಪ್ರಕಟಣೆ ಹೇಳಿದೆ.
ಹೆದ್ದಾರಿಗೆ ಇರುವ ಪರ್ಯಾಯ ಮಾರ್ಗಗಳು ಕೂಡಾ ಪ್ರವಾಹದಿಂದಾಗಿ ಮುಚ್ಚಿವೆ ಎಂದು ತಿಳಿಸಿದೆ.
"ಮಂಡಿ- ಜೋಗಿಂದರ್ನಗರ ಹೆದ್ದಾರಿ ಕೂಡಾ ಮುಚ್ಚಿದೆ. ರಾಜ್ಯದಲ್ಲಿ ಭೂಕುಸಿತ ಮತ್ತು ಬಂಡೆಗಳು ಉರುಳುವ ಅಪಾಯ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರು/ ಪ್ರವಾಸಿಗರು ಪರ್ವತಗಳ ಬದಿಯ ರಸ್ತೆಗಳಲ್ಲಿ ಸಂಚರಿಸಬಾರದು" ಎಂದು ಎಚ್ಚರಿಕೆ ನೀಡಲಾಗಿದೆ.
ಪ್ರವಾಹ ನೀರಿನಿಂದ ಮುಚ್ಚಿರುವ ರಸ್ತೆ ನಾಳೆಯ ವೇಳೆಗೆ ತೆರೆಯುವ ನಿರೀಕ್ಷೆ ಇದೆ. ಎರಡೂ ಬದಿಗಳಲ್ಲಿ ಸಿಕ್ಕಿ ಹಾಕಿಕೊಂಡಿರುವ ಜನತೆ ವಾಪಾಸು ತೆರಳುವಂತೆ ಹಾಗೂ ಅಕ್ಕಪಕ್ಕದ ಪಟ್ಟಣಗಳಲ್ಲಿ ರಾತ್ರಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಳ್ಳುವಂತೆ ಸಲಹೆ ಮಾಡಲಾಗಿದೆ.