ನಾನು ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ತೆಗೆದುಹಾಕಿಲ್ಲ: ಸೌರವ್ ಗಂಗುಲಿ ಪುನರುಚ್ಚಾರ
ಹೊಸದಿಲ್ಲಿ: ನಾನು ವಿರಾಟ್ ಕೊಹ್ಲಿ ಅವರನ್ನು ಟೀಮ್ ಇಂಡಿಯಾದ ನಾಯಕತ್ವದಿಂದ ಕೆಳಗಿಳಿಸಿಲ್ಲ. ನಾನು ಇದನ್ನು ಸಾಕಷ್ಟು ಬಾರಿ ಹೇಳಿದ್ದೇನೆ. ಅವರು ಟಿ-20 ಕ್ರಿಕೆಟ್ ನಾಯಕತ್ವ ವಹಿಸಲು ಆಸಕ್ತಿ ಹೊಂದಿರಲಿಲ್ಲ. ಹೀಗಾಗಿ ಅವರು ಆ ನಿರ್ಧಾರವನ್ನು ತೆಗೆದುಕೊಂಡ ನಂತರ ನಿಮಗೆ ಟಿ-20ಯಲ್ಲಿ ನಾಯಕತ್ವ ವಹಿಸಲು ಆಸಕ್ತಿ ಇಲ್ಲದಿದ್ದರೆ ನೀವು ಸಂಪೂರ್ಣ ವೈಟ್‌ಬಾಲ್ ಕ್ರಿಕೆಟ್‌ನಿಂದ ಹಿಂದೆ ಸರಿಯುವುದು ಉತ್ತಮ ಎಂದು ಸಲಹೆ ನೀಡಿದ್ದೆ ಎಂದು ಮಾಜಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಹೇಳಿದ್ದಾರೆ.
ರಿಯಾಲಿಟಿ ಶೋ ʼದಾದಾಗಿರಿ ಅನ್‌ಲಿಮಿಟೆಡ್ ಸೀಸನ್-10ʼರಲ್ಲಿ ಗಂಗುಲಿ ಈ ವಿಚಾರ ಪುನರುಚ್ಚರಿಸಿದರು.
ರೋಹಿತ್ ಶರ್ಮಾ ಎಲ್ಲ ಮೂರು ಮಾದರಿ ಕ್ರಿಕೆಟ್‌ನ ನಾಯಕತ್ವ ವಹಿಸಿಕೊಳ್ಳಲು ಆಸಕ್ತಿ ತೋರಲಿಲ್ಲ. ಆದರೆ ನಾಯಕತ್ವ ವಹಿಸಿಕೊಳ್ಳುವಂತೆ ಅವರ ಮನವೊಲಿಸಲು ಪ್ರಯತ್ನಿಸಿದ್ದೆ. ಬಹುಶಃ ಅದರಲ್ಲಿ ನನ್ನ ಕೊಡುಗೆ ಸ್ವಲ್ಪ ಇರಬಹುದು. ಭಾರತೀಯ ಕ್ರಿಕೆಟ್‌ನ ಸುಧಾರಣೆಗಾಗಿ ಕೆಲಸ ಮಾಡಲು ನನ್ನನ್ನು ಬಿಸಿಸಿಐ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು ಎಂದು ಗಂಗುಲಿ ಹೇಳಿದರು.
ಭಾರತವು 2021ರ ಟಿ-20 ವಿಶ್ವಕಪ್‌ನಲ್ಲಿ ಕಳಪೆ ಅಭಿಯಾನ ಕೈಗೊಂಡ ನಂತರ ಕೊಹ್ಲಿ ಟಿ-20 ನಾಯಕತ್ವ ತ್ಯಜಿಸಲು ನಿರ್ಧರಿಸಿದ್ದರು. ಆಗ ಕೊಹ್ಲಿ ಹಾಗೂ ಗಂಗುಲಿ ನಡುವೆ ಎಲ್ಲವೂ ಸರಿಯಿಲ್ಲ ಎಂಬ ವಿಚಾರ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಕೊಹ್ಲಿ ಆ ನಂತರ ಏಕದಿನ ಹಾಗೂ ಟೆಸ್ಟ್ ನಾಯಕತ್ವವನ್ನು ತ್ಯಜಿಸಿದ್ದರು.
ಏಕದಿನ ಹಾಗೂ ಟೆಸ್ಟ್ ನಾಯಕತ್ವದಲ್ಲಿ ಮುಂದುವರಿಸಲು ಕೊಹ್ಲಿ ಬಯಸುತ್ತಾರೆ. ಆದರೆ, ಟಿ-20 ನಾಯಕತ್ವವನ್ನು ತ್ಯಜಿಸುವ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಬಿಸಿಸಿಐ ಎಂದಿಗೂ ಕೇಳಲಿಲ್ಲ ಎಂದು ಹೇಳುವ ಮೂಲಕ ಗಂಗುಲಿ ಅಚ್ಚರಿ ಮೂಡಿಸಿದ್ದರು. ಆ ಸಮಯದಲ್ಲಿ ಬಿಸಿಸಿಐ ಅಧ್ಯಕ್ಷರಾಗಿದ್ದ ಗಂಗುಲಿ , ಕೊಹ್ಲಿ ತಂಡದ ನಾಯಕತ್ವದಿಂದ ಕೆಳಗಿಳಿಯಲು ನಾನು ಹೊಣೆಗಾರನಲ್ಲ ಎಂದಿದ್ದರು.