ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್ ಅಭಿನವ್-ಗೌತಮಿಗೆ ಚಿನ್ನ

Update: 2023-07-17 18:17 GMT

ಹೊಸದಿಲ್ಲಿ: ಭಾರತದ ಜೋಡಿ ಅಭಿನವ್ ಶಾ ಹಾಗೂ ಗೌತಮಿ ಭಾನೊಟ್ ಕೊರಿಯಾದ ಚಾಂಗ್‌ವಾನ್‌ನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್‌ನ 2ನೇ ದಿನವಾದ ಸೋಮವಾರ 10 ಮೀ. ಏರ್ ರೈಫಲ್ ಮಿಕ್ಸೆಡ್ ಟೀಮ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ಕೌಶಲ್ಯದ ಜೊತೆಗೆ ಸಂಘಟಿತ ಪ್ರದರ್ಶನ ನೀಡಿದ ಭಾರತದ ಜೋಡಿ ರೋಚಕವಾಗಿ ಸಾಗಿದ ಚಿನ್ನದ ಪದಕದ ಸುತ್ತಿನಲ್ಲಿ ಫ್ರಾನ್ಸ್ ಜೋಡಿ ಓಶಿಯನ್ ಮುಲ್ಲರ್ ಹಾಗೂ ರೊಮೈನ್‌ರನ್ನು 17-13 ಅಂತರದಿಂದ ಮಣಿಸಿತು.

ಈ ಗೆಲುವಿನೊಂದಿಗೆ ಭಾರತವು ಸ್ಪರ್ಧಾವಳಿಯಲ್ಲಿ ಮೂರನೇ ಚಿನ್ನದ ಪದಕ ಜಯಿಸಿತು. ಪದಕ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು. ಭಾರತ ಒಂದು ಬೆಳ್ಳಿ ಹಾಗೂ ಎರಡು ಕಂಚಿನ ಪದಕಗಳನ್ನೂ ಕೂಡ ಜಯಿಸಿದೆ. ಭಾರತದಷ್ಟೇ ಚಿನ್ನ ಹಾಗೂ ಕಂಚಿನ ಪದಕಗಳನ್ನು ಜಯಿಸಿರುವ ಚೀನಾ ಹೆಚ್ಚುವರಿ ಬೆಳ್ಳಿ ಗೆಲ್ಲುವ ಮೂಲಕ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಭಾರತವು 10 ಮೀ. ಏರ್ ಪಿಸ್ತೂಲ್ ಮಿಕ್ಸೆಡ್ ಟೀಮ್ ಸ್ಪರ್ಧೆಯಲ್ಲಿ ಕಂಚು ಜಯಿಸಿ ಸೋಮವಾರ 2ನೇ ಪದಕ ಜಯಿಸಿದೆ. ಅಭಿನವ್ ಚೌಧರಿ ಹಾಗೂ ಸೈನ್ಯಂ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಕೊರಿಯಾದ ಕಿಮ್ ಜುರಿ ಹಾಗೂ ಕಿಮ್ ಕಾಂಘುಯುನ್‌ರನ್ನು 17-11 ಅಂತರದಿಂದ ಮಣಿಸಿದರು.

ಅಭಿನವ್ ಹಾಗೂ ಗೌತಮಿ ಅರ್ಹತಾ ಸುತ್ತಿನಲ್ಲಿ 627.4 ಅಂಕ ಗಳಿಸಿ 35 ತಂಡಗಳ ಪೈಕಿ 2ನೇ ಸ್ಥಾನ ಪಡೆದು ಚಿನ್ನದ ಪದಕದ ಸುತ್ತಿಗೆ ಅರ್ಹತೆ ಪಡೆದರು. ಅರ್ಹತಾ ಸುತ್ತಿನಲ್ಲಿ 632.4 ಅಂಕ ಗಳಿಸಿ ಅಗ್ರ ಸ್ಥಾನದೊಂದಿಗೆ ಚಿನ್ನದ ಪದಕ ಸುತ್ತಿಗೇರಿದ್ದ ಒಶಿಯನ್ ಹಾಗೂ ರೋಮೈನ್ ಆರಂಭದಲ್ಲಿ 0-4 ಹಿನ್ನಡೆ ಅನುಭವಿಸಿದ್ದರೂ ಕೊನೆಯಲ್ಲಿ ತೀವ್ರ ಹೋರಾಟ ನೀಡಿದರು. ಅಭಿನವ್ ಹಾಗೂ ಸೈನ್ಯಂ ಅರ್ಹತಾ ಸುತ್ತಿನಲ್ಲಿ 574 ಅಂಕ ಗಳಿಸಿ 4ನೇ ಸ್ಥಾನ ಪಡೆದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News