3ನೇ ಟೆಸ್ಟ್ | ಶಕೀಲ್ ಶತಕ, ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಹಿಡಿತ
ರಾವಲ್ಪಿಂಡಿ : ಸೌದ್ ಶಕೀಲ್ ಹೋರಾಟಕಾರಿ ಶತಕ (134 ರನ್, 223 ಎಸೆತ) ಗಳಿಸಿದ ನಂತರ ಸ್ಪಿನ್ನರ್‌ಗಳಾದ ಸಾಜಿದ್ ಖಾನ್(1-14) ಹಾಗೂ ನುಮಾನ್ ಅಲಿ(2-9) ಇಂಗ್ಲೆಂಡ್ ತಂಡದ ಮೂರು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಪಾಕಿಸ್ತಾನ ಕ್ರಿಕೆಟ್ ತಂಡ ಸರಣಿ ನಿರ್ಣಾಯಕ ಮೂರನೇ ಟೆಸ್ಟ್ ಪಂದ್ಯದಲ್ಲಿ ಹಿಡಿತ ಸಾಧಿಸಿದೆ.
77 ರನ್ ಹಿನ್ನಡೆಯೊಂದಿಗೆ ತನ್ನ 2ನೇ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ಟರ್ನಿಂಗ್ ಪಿಚ್‌ನಲ್ಲಿ ಪಾಕಿಸ್ತಾನದ ಸ್ಪಿನ್ನರ್‌ಗಳ ಎದುರು ನಿರುತ್ತರವಾಗಿದೆ.
ಸಾಜಿದ್ ಅವರು ಬೆನ್ ಡಕೆಟ್(12 ರನ್)ವಿಕೆಟನ್ನು ಕಬಳಿಸಿದರೆ, ನುಮಾನ್ ಅಲಿ ಅವರು ಐದು ರನ್ ಅಂತರದಲ್ಲಿ ಝಾಕ್ ಕ್ರಾಲಿ(2 ರನ್)ಹಾಗೂ ಒಲಿ ಪೋಪ್(1ರನ್)ವಿಕೆಟ್‌ಗಳನ್ನು ಉರುಳಿಸಿದ್ದಾರೆ.
ಇನ್ನೂ ಐದು ಓವರ್ ಆಟ ಬಾಕಿ ಇರುವಾಗಲೇ ಮಂದಬೆಳಕಿನಿಂದಾಗಿ 2ನೇ ದಿನದಾಟವು ಬೇಗನೆ ಕೊನೆಗೊಂಡಿದೆ. ಜೋ ರೂಟ್(5 ರನ್)ಹಾಗೂ ಹ್ಯಾರಿ ಬ್ರೂಕ್(3 ರನ್)ಕ್ರೀಸ್ ಕಾಯ್ದುಕೊಂಡಿದ್ದಾರೆ.
ಇಂಗ್ಲೆಂಡ್‌ಗೆ ಇನಿಂಗ್ಸ್ ಸೋಲಿನಿಂದ ಪಾರಾಗಲು ಇನ್ನೂ 53 ರನ್ ಗಳಿಸುವ ಅಗತ್ಯವಿದೆ. ಇನ್ನೂ 7 ವಿಕೆಟ್‌ಗಳು ಕೈಯ್ಯಲ್ಲಿವೆ. ಮೂರು ದಿನದ ಆಟ ಬಾಕಿ ಇದೆ.
ಇಂಗ್ಲೆಂಡ್ ತಂಡ ಮೊದಲ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಅಂತರದಿಂದ ಗೆದ್ದ ನಂತರ ಪಾಕಿಸ್ತಾನ ತಂಡವು 152 ರನ್‌ನಿಂದ 2ನೇ ಪಂದ್ಯವನ್ನು ಜಯಿಸಿತ್ತು. ಹೀಗಾಗಿ ಸರಣಿಯು 1-1ರಿಂದ ಸಮಬಲದಲ್ಲಿದೆ.
2ನೇ ದಿನದಾಟದಲ್ಲೂ ಸ್ಪಿನ್ನರ್‌ಗಳು ಮೇಲುಗೈ ಸಾಧಿಸಿದ್ದರೂ, 134 ರನ್ ಗಳಿಸಿದ ಶಕೀಲ್ ದಿನದ ಹೀರೋವಾಗಿ ಹೊರಹೊಮ್ಮಿದರು. 2021ರ ನಂತರ ಪಾಕಿಸ್ತಾನ ತಂಡ ಸ್ವದೇಶದಲ್ಲಿ ಮೊದಲ ಸರಣಿ ಗೆಲ್ಲುವ ವಿಶ್ವಾಸ ಮೂಡಿಸಿದರು.
ಪಾಕಿಸ್ತಾನ ತಂಡವು 2ನೇ ದಿನದಾಟವಾದ ಶುಕ್ರವಾರ 3 ವಿಕೆಟ್‌ಗಳ ನಷ್ಟಕ್ಕೆ 73 ರನ್‌ನಿಂದ ತನ್ನ ಮೊದಲ ಇನಿಂಗ್ಸ್ ಮುಂದುವರಿಸಿತು.
ಪಾಕಿಸ್ತಾನ ತಂಡವು 177 ರನ್‌ಗೆ 7 ವಿಕೆಟ್‌ಗಳನ್ನು ಕಳೆದುಕೊಂಡಾಗ ಕ್ರೀಸ್‌ಗೆ ಇಳಿದ ಶಕೀಲ್ ತಂಡದ ಮೊತ್ತವನ್ನು 344 ರನ್‌ಗೆ ತಲುಪಿಸಿದರು. 223 ಎಸೆತಗಳನ್ನು ಎದುರಿಸಿದ್ದ ಶಕೀಲ್ ಕೇವಲ 5 ಬೌಂಡರಿಗಳ ಸಹಿತ 134 ರನ್ ಗಳಿಸಿದರು. 4ನೇ ಟೆಸ್ಟ್ ಶತಕ ಗಳಿಸಿದ 29ರ ಹರೆಯದ ಶಕೀಲ್ ಸ್ಪಿನ್ನರ್ ನುಮಾನ್ ಅಲಿ(45 ರನ್) ಜೊತೆ 8ನೇ ವಿಕೆಟ್‌ಗೆ 88 ರನ್ ಜೊತೆಯಾಟ ನಡೆಸಿದರು.
ಅಲಿ ಔಟಾದ ನಂತರ ಸಾಜಿದ್ ಖಾನ್(ಔಟಾಗದೆ 48 ರನ್)ಜೊತೆಗೆ 9ನೇ ವಿಕೆಟ್‌ಗೆ ಇನ್ನೂ 72 ರನ್ ಗಳಿಸಿ ತಂಡದ ಮೊತ್ತ ಹಿಗ್ಗಿಸಿದರು. ವೇಗದ ಬೌಲರ್ ಅಟ್ಕಿನ್ಸನ್ ಅವರು ಶಕೀಲ್ ಇನಿಂಗ್ಸ್‌ಗೆ ಕೊನೆಗೂ ತೆರೆ ಎಳೆದರು.
ಇಂಗ್ಲೆಂಡ್ ತಂಡದ ಪರ ಸ್ಪಿನ್ನರ್‌ಗಳಾದ ರೆಹಾನ್ ಅಹ್ಮದ್(4-66)ಹಾಗೂ ಶುಐಬ್ ಬಶೀರ್(3-129)ಏಳು ವಿಕೆಟ್‌ಗಳನ್ನು ಹಂಚಿಕೊಂಡಿದ್ದಾರೆ. ಅಟ್ಕಿನ್ಸನ್(2-22)ಹಾಗೂ ಜಾಕ್ ಲೀಚ್(1-105)ಉಳಿದ 3 ವಿಕೆಟ್‌ಗಳನ್ನು ಪಡೆದರು.