ದ್ವಿತೀಯ ಟೆಸ್ಟ್ | 301 ರನ್ ಮುನ್ನಡೆಯಲ್ಲಿ ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡ

Update: 2024-10-25 15:59 GMT

PC : PTI 

ಪುಣೆ : ಆತಿಥೇಯ ಭಾರತ ಕ್ರಿಕೆಟ್ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ ಕೇವಲ 156 ರನ್‌ಗೆ ನಿಯಂತ್ರಿಸಿದ ನ್ಯೂಝಿಲ್ಯಾಂಡ್ ತಂಡವು ಒಟ್ಟು 301 ರನ್ ಮುನ್ನಡೆಯೊಂದಿಗೆ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದೆ. ರೋಹಿತ್ ಬಳಗವು ಸ್ವದೇಶದಲ್ಲಿ ಮೊದಲ ಬಾರಿ ಕಿವೀಸ್ ವಿರುದ್ಧ ಟೆಸ್ಟ್ ಸರಣಿ ಸೋಲುವ ಭೀತಿಯಲ್ಲಿದೆ.

ಮೊದಲ ಇನಿಂಗ್ಸ್‌ನಲ್ಲಿ 103 ರನ್ ಮುನ್ನಡೆ ಸಂಪಾದಿಸಿದ ಕಿವೀಸ್ ಪಡೆಯು ಬೌನ್ಸ್ ಹಾಗೂ ತಿರುವು ನೀಡುತ್ತಿರುವ ಪಿಚ್‌ನಲ್ಲಿ 2ನೇ ದಿನದಾಟದಂತ್ಯಕ್ಕೆ ತನ್ನ 2ನೇ ಇನಿಂಗ್ಸ್‌ನಲ್ಲಿ 198 ರನ್ ಗಳಿಸುವಷ್ಟರಲ್ಲಿ ಐದು ವಿಕೆಟ್‌ಗಳನ್ನು ಕಳೆದುಕೊಂಡಿದೆ.

ಮತ್ತೊಂದೆಡೆ ನ್ಯೂಝಿಲ್ಯಾಂಡ್ ತಂಡವು 2ನೇ ಇನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ನಾಯಕ ಟಾಮ್ ಲ್ಯಾಥಮ್ ನಿರ್ಣಾಯಕ 86 ರನ್(133 ಎಸೆತ, 10 ಬೌಂಡರಿ) ಗಳಿಸಿದರು. ಟಾಮ್ ಬ್ಲಂಡೆಲ್ ಔಟಾಗದೆ 30 ರನ್ ಗಳಿಸಿದ್ದು, ಫಿಲಿಪ್ಸ್(7 ರನ್)ಅವರೊಂದಿಗೆ ಕ್ರೀಸ್‌ನಲ್ಲಿದ್ದಾರೆ. ಪಿಚ್ ಮಂದಗತಿಯಲ್ಲಿ ವರ್ತಿಸುತ್ತಿದ್ದರೂ ಸ್ಪಿನ್ನರ್‌ಗಳಿಗೆ ಸಹಕಾರಿಯಾಗುತ್ತಿದೆ.

ವಾಶಿಂಗ್ಟನ್ ಸುಂದರ್ ಮತ್ತೊಮ್ಮೆ ಬೌಲಿಂಗ್‌ನಲ್ಲಿ ಮಿಂಚಿದ್ದು 56 ರನ್‌ಗೆ 4 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಆರ್.ಅಶ್ವಿನ್(1-64) ಒಂದು ವಿಕೆಟ್ ಪಡೆದಿದ್ದಾರೆ.

ನ್ಯೂಝಿಲ್ಯಾಂಡ್ ತಂಡವು ಮೂರನೇ ದಿನದಾಟದಲ್ಲಿ ಸಾಧ್ಯವಾದಷ್ಟು ಮುನ್ನಡೆಯನ್ನು ವಿಸ್ತರಿಸುವ ಗುರಿ ಇಟ್ಟುಕೊಂಡಿದೆ.

ನ್ಯೂಝಿಲ್ಯಾಂಡ್ ತಂಡವು ಭಾರತದಲ್ಲಿ ನಡೆದಿರುವ ಟೆಸ್ಟ್ ಪಂದ್ಯದಲ್ಲಿ ತನ್ನ 3ನೇ ಇನಿಂಗ್ಸ್‌ನಲ್ಲಿ ಎರಡನೇ ಬಾರಿ 300ಕ್ಕೂ ರನ್ ಅಧಿಕ ಮುನ್ನಡೆ ಪಡೆದಿದೆ. 2010ರಲ್ಲಿ ಹೈದರಾಬಾದ್‌ನಲ್ಲಿ ಮೊದಲ ಬಾರಿ ಈ ಸಾಧನೆ ಮಾಡಿದೆ.

2012-13ರ ಋತುವಿನಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಸೋತ ನಂತರ ಭಾರತ ತಂಡವು ಸ್ವದೇಶದಲ್ಲಿ ಟೆಸ್ಟ್ ಸರಣಿಯನ್ನು ಸೋತಿಲ್ಲ. ಭಾರತ ತಂಡದ ಸತತ 18 ಸರಣಿ ಗೆಲುವಿನ ಸರಪಳಿ ತುಂಡಾಗುವ ಭೀತಿಯಲ್ಲಿದೆ.

ಭಾರತ ತಂಡವು 2008ರ ಡಿಸೆಂಬರ್‌ನಲ್ಲಿ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ 387 ರನ್ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡಿತ್ತು.

► ಮೊದಲ ಟೆಸ್ಟ್ ಸರಣಿ ಗೆಲುವಿನತ್ತ ಕಿವೀಸ್ ಚಿತ್ತ:

ನ್ಯೂಝಿಲ್ಯಾಂಡ್ ತಂಡವು ಭಾರತದಲ್ಲಿ ಇದೇ ಮೊದಲ ಬಾರಿ ಟೆಸ್ಟ್ ಸರಣಿ ಗೆಲ್ಲುವತ್ತ ಚಿತ್ತಹರಿಸಿದೆ. ಭಾರತವು 12 ವರ್ಷಗಳ ನಂತರ ಮೊದಲ ಬಾರಿ ಸ್ವದೇಶದಲ್ಲಿ ಸೋಲುವ ಭೀತಿಯಲ್ಲಿದೆ.

ಈ ಟೆಸ್ಟ್‌ಗಿಂತ ಮೊದಲು ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಇನಿಂಗ್ಸ್‌ನಲ್ಲಿ 4 ವಿಕೆಟ್ ಪಡೆದಿರಲಿಲ್ಲ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಕೇವಲ ಒಂದು ಬಾರಿ ಐದು ವಿಕೆಟ್ ಪಡೆದಿದ್ದರು. ಇದೀಗ 7 ವಿಕೆಟ್‌ಗಳನ್ನು ಪಡೆದಿರುವ ಸ್ಯಾಂಟ್ನರ್ ಅವರು ಭಾರತವನ್ನು 156 ರನ್‌ಗೆ ಸರ್ವಪತನಗೊಳಿಸಲು ನೆರವಾಗಿದ್ದಾರೆ.

ಟಾಮ್ ಲ್ಯಾಥಮ್ ನೇತೃತ್ವದಲ್ಲಿ ಭಾರತೀಯ ಸ್ಪಿನ್ನರ್‌ಗಳ ವಿರುದ್ದ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿರುವ ಕಿವೀಸ್ ಸದ್ಯ 301 ರನ್ ಮುನ್ನಡೆಯಲ್ಲಿದೆ. ಕೈಯಲ್ಲಿ ಇನ್ನೂ 5 ವಿಕೆಟ್‌ಗಳಿವೆ.

► ಭಾರತ 156 ರನ್‌ಗೆ ಆಲೌಟ್:

ಒಂದು ವಿಕೆಟ್ ನಷ್ಟಕ್ಕೆ 16 ರನ್‌ನಿಂದ ತನ್ನ ಮೊದಲ ಇನಿಂಗ್ಸ್ ಮುಂದುವರಿಸಿದ ಟೀಮ್ ಇಂಡಿಯಾ 45.3 ಓವರ್‌ಗಳಲ್ಲಿ 156 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು.

ಅಗ್ರ ಸರದಿಯ ಬ್ಯಾಟರ್‌ಗಳು ಮತ್ತೊಮ್ಮೆ ಕೈಕೊಟ್ಟಿದ್ದು, ಅರ್ಧಶತಕ ಗಳಿಸುವಲ್ಲಿ ವಿಫಲರಾದರು. ಆಲ್‌ರೌಂಡರ್ ರವೀಂದ್ರ ಜಡೇಜ(38 ರನ್, 46 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ಇಬ್ಬರು ಅಪಾಯಕಾರಿ ಎಡಗೈ ಬ್ಯಾಟರ್‌ಗಳಾದ ಯಶಸ್ವಿ ಜೈಸ್ವಾಲ್(30 ರನ್) ಹಾಗೂ ರಿಷಭ್ ಪಂತ್(18 ರನ್) ವಿಕೆಟ್‌ಗಳನ್ನು ಪಡೆದ ಫಿಲಿಪ್ಸ್ (2-26) ಸಹ ಸ್ಪಿನ್ನರ್ ಸ್ಯಾಂಟ್ನರ್‌ಗೆ(7-53)ಸಾಥ್ ನೀಡಿದರು.

ಈ ತನಕ 29 ಟೆಸ್ಟ್ ಪಂದ್ಯವನ್ನಾಡಿರುವ ಸ್ಯಾಂಟ್ನರ್ ಇದೇ ಮೊದಲ ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ. ದಿನದ 11ನೇ ಓವರ್‌ನಲ್ಲಿ ಗಿಲ್ ವಿಕೆಟ್ ಪಡೆದ ಸ್ಯಾಂಟ್ನರ್ ತನ್ನ ವಿಕೆಟ್ ಬೇಟೆ ಆರಂಭಿಸಿದರು.

ಲೋ ಫುಲ್‌ಟಾಸ್ ಮೂಲಕ ಕೊಹ್ಲಿ ಅವರನ್ನು ಕ್ಲೀನ್‌ಬೌಲ್ಡ್ ಮಾಡಿದ ಸ್ಯಾಂಟ್ನರ್ ನೆರೆದಿದ್ದ ಪ್ರೇಕ್ಷಕರನ್ನು ಮೂಕವಿಸ್ಮಿತಗೊಳಿಸಿದರು. ಸರ್ಫರಾಝ್ ಖಾನ್, ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜಗೆ ಪೆವಿಲಿಯನ್ ಹಾದಿ ತೋರಿಸಿದರು. ಇನ್ನೂ ಎರಡು ವಿಕೆಟ್‌ಗಳನ್ನು ಪಡೆದ ಸ್ಯಾಂಟ್ನರ್ ನ್ಯೂಝಿಲ್ಯಾಂಡ್ ತಂಡ ಭಾರತದ ನೆಲದಲ್ಲಿ ಮೊತ್ತ ಮೊದಲ ಬಾರಿ ಟೆಸ್ಟ್ ಸರಣಿ ಗೆಲ್ಲುವ ವಿಶ್ವಾಸ ಮೂಡಿಸಿದ್ದಾರೆ.

ಭಾರತದ ಅಗ್ರ ಸರದಿಯ ಬ್ಯಾಟರ್‌ಗಳಾದ ಶುಭಮನ್ ಗಿಲ್(30 ರನ್)ಹಾಗೂ ಯಶಸ್ವಿ ಜೈಸ್ವಾಲ್(30 ರನ್)ತಂಡದ ಮೊತ್ತವನ್ನು 1 ವಿಕೆಟ್ ನಷ್ಟಕ್ಕೆ 50 ರನ್‌ಗೆ ತಲುಪಿಸಿದ್ದರು. ಆದರೆ ಗಿಲ್ ಅವರು ಮಿಚೆಲ್ ಸ್ಯಾಂಟ್ನರ್ ಬೌಲಿಂಗ್‌ಗೆ ವಿಕೆಟ್ ಒಪ್ಪಿಸಿದ ನಂತರ ಭಾರತ ತಂಡವು ಕುಸಿಯಲಾರಂಭಿಸಿತು. ಭಾರತವು ಕೇವಲ 24 ಓವರ್‌ಗಳಲ್ಲಿ 106 ರನ್ ಗಳಿಸುವಷ್ಟರಲ್ಲಿ 9 ವಿಕೆಟ್‌ಗಳನ್ನು ಕಳೆದುಕೊಂಡಿತು.

ಸ್ಯಾಂಟ್ನರ್ ಎಲ್ಬಿಡಬ್ಲ್ಯು ಹಾಗೂ ಕ್ಲೀನ್‌ಬೌಲ್ಡ್ ಮೂಲಕ 53 ರನ್ ನೀಡಿ 7 ವಿಕೆಟ್‌ಗಳನ್ನು ಪಡೆದರು. ಒಂದಷ್ಟು ಪ್ರತಿರೋಧ ಒಡ್ಡಿದ ರವೀಂದ್ರ ಜಡೇಜ ಹಾಗೂ ಸುಂದರ್(ಔಟಾಗದೆ 18) ಭಾರತದ ಸ್ಕೋರನ್ನು 150ರ ಗಡಿ ದಾಟಿಸಿದರು.

ಜೈಸ್ವಾಲ್(30 ರನ್), ಶುಭಮನ್ ಗಿಲ್(30 ರನ್), ಜಡೇಜ(38 ರನ್)ಎರಡಂಕೆಯ ಸ್ಕೋರ್ ಗಳಿಸಿದರು. ಮಾಜಿ ನಾಯಕ ವಿರಾಟ್ ಕೊಹ್ಲಿ (1ರನ್), ಕಳೆದ ಪಂದ್ಯದಲ್ಲಿ ಶತಕ ಗಳಿಸಿದ್ದ ಸರ್ಫರಾಝ್ ಖಾನ್(11ರನ್), ಆರ್.ಅಶ್ವಿನ್(4 ರನ್)ಬೇಗನೆ ವಿಕೆಟ್ ಒಪ್ಪಿಸಿದರು.

ವಿರಾಟ್ ಕೊಹ್ಲಿ 2021ರ ನಂತರ ಏಶ್ಯದಲ್ಲಿ 21 ಬಾರಿ ಸ್ಪಿನ್ನರ್‌ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 9,000ಕ್ಕೂ ಅಧಿಕ ರನ್ ಗಳಿಸಿರುವ ಕೊಹ್ಲಿ ಎಡಗೈ ಸ್ಪಿನ್ನರ್ ಸ್ಯಾಂಟ್ನರ್ ಎದುರು ಪರದಾಟ ನಡೆಸಿದರು.

ನ್ಯೂಝಿಲ್ಯಾಂಡ್ ಮೊದಲ ಇನಿಂಗ್ಸ್‌ನಲ್ಲಿ ಗಮನಾರ್ಹ ಮುನ್ನಡೆ ಪಡೆದಿರುವ ಹಿನ್ನೆಲೆಯಲ್ಲಿ ಭಾರತವು ಪಂದ್ಯ ಹಾಗೂ ಸರಣಿಯಲ್ಲಿ ಸ್ಪರ್ಧೆಯಲ್ಲಿರಲು ಕಠಿಣ ಸವಾಲು ಎದುರಿಸುತ್ತಿದೆ.

► ಭಾರತ ಪಂದ್ಯವನ್ನು ಕೈಚೆಲ್ಲಿತೇ?

ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ನಾಯಕ ಟಾಮ್ ಲ್ಯಾಥಮ್ ನಿರ್ಣಾಯಕ ಅರ್ಧಶತಕದ ಬಲದಿಂದ ನ್ಯೂಝಿಲ್ಯಾಂಡ್ ತಂಡವು ಭಾರತ ವಿರುದ್ಧ ಮುನ್ನಡೆಯನ್ನು ವೃದ್ದಿಸಿಕೊಂಡಿದೆ.

2012ರ ನಂತರ ಸ್ವದೇಶ ಇಲ್ಲವೇ ವಿದೇಶದಲ್ಲಿ ಕೇವಲ ಒಂದು ಬಾರಿ 200ಕ್ಕೂ ಅಧಿಕ ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿರುವ ಭಾರತ ತಂಡ ಈಗ ಸವಾಲಿನ ಪರಿಸ್ಥಿತಿ ಎದುರಿಸುತ್ತಿದೆ. ಕೊನೆಯ ಬಾರಿ ನ್ಯೂಝಿಲ್ಯಾಂಡ್ ವಿರುದ್ಧವೇ 200ಕ್ಕೂ ಅಧಿಕ ರನ್ ಅನ್ನು ಭಾರತವು ಯಶಸ್ವಿಯಾಗಿ ಚೇಸ್ ಮಾಡಿತ್ತು.

2012ರಲ್ಲಿ ಬೆಂಗಳೂರು ಟೆಸ್ಟ್‌ನಲ್ಲಿ ಭಾರತ ತಂಡವು 261 ರನ್ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾಗಿತ್ತು. ಆ ನಂತರ 2021ರಲ್ಲಿ ಗಾಬಾದಲ್ಲಿ ಆಸ್ಟ್ರೇಲಿಯ ತಂಡದ ವಿರುದ್ಧ 261 ರನ್ ಗುರಿಯನ್ನು ಬೆನ್ನಟ್ಟಿತ್ತು.

ಇಂದು ಮೊದಲ ಇನಿಂಗ್ಸ್‌ನಲ್ಲಿ ಭಾರತದ ಬ್ಯಾಟಿಂಗ್ ಪ್ರದರ್ಶನವು ತೀವ್ರ ಕಳವಳಕ್ಕೆ ಕಾರಣವಾಗಿದೆ.

ವಾಶಿಂಗ್ಟನ್ ಸುಂದರ್(7-59)ನೇತೃತ್ವದ ಶ್ರೇಷ್ಠ ಬೌಲಿಂಗ್ ಸಹಾಯದಿಂದ ನ್ಯೂಝಿಲ್ಯಾಂಡ್ ತಂಡವನ್ನು 259 ರನ್‌ಗೆ ನಿಯಂತ್ರಿಸಿದ್ದ ಭಾರತ ತಂಡದ ಪರ ಬ್ಯಾಟರ್‌ಗಳು ಮತ್ತೊಮ್ಮೆ ವಿಫಲರಾದರು. ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶಿಸಿದ ಮಿಚೆಲ್ ಸ್ಯಾಂಟ್ನರ್(7-53)ಭಾರತದ ಬಲಿಷ್ಠ ಬ್ಯಾಟಿಂಗ್ ಸರದಿಗೆ ಸವಾಲಾದರು. ಭಾರತವು ಕೇವಲ 156 ರನ್‌ಗೆ ಗಂಟುಮೂಟೆ ಕಟ್ಟಿ 103 ರನ್ ಮೊದಲ ಇನಿಂಗ್ಸ್ ಮುನ್ನಡೆ ಬಿಟ್ಟುಕೊಟ್ಟಿದೆ.

ಭಾರತ ತಂಡವು ಸ್ವದೇಶದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಸತತ ಎರಡನೇ ಬಾರಿ ಎದುರಾಳಿ ತಂಡಕ್ಕೆ 100ಕ್ಕೂ ಅಧಿಕ ರನ್ ಮುನ್ನಡೆ ಬಿಟ್ಟುಕೊಟ್ಟಿದೆ.

ನ್ಯೂಝಿಲ್ಯಾಂಡ್ ತಂಡವು ಸದ್ಯ ಉತ್ತಮ ಮುನ್ನಡೆಯಲ್ಲಿದ್ದು, ಸ್ಪಿನ್ನರ್‌ಗಳ ಎದುರು ಪರದಾಡುತ್ತಿರುವ ಭಾರತದ ಬ್ಯಾಟರ್‌ಗಳಿಗೆ ಕಠಿಣ ಸವಾಲು ಎದುರಾಗಿದೆ.

2ನೇ ಟೆಸ್ಟ್ ಪಂದ್ಯವನ್ನು ಜಯಿಸಿ, ಸರಣಿ ಸಮಬಲಗೊಳಿಸಲು ಭಾರತವು 4ನೇ ಇನಿಂಗ್ಸ್‌ನಲ್ಲಿ ಅಮೋಘ ಪ್ರದರ್ಶನ ನೀಡುವ ಅಗತ್ಯವಿದೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News