ಆಗಸ್ಟ್‌ನಲ್ಲಿ ಉಸ್ತುವಾರಿ ಸರಕಾರಕ್ಕೆ ಅಧಿಕಾರ ಹಸ್ತಾಂತರ: ಪಾಕ್ ಪ್ರಧಾನಿ ಶರೀಫ್
ಇಸ್ಲಮಾಬಾದ್: ಮುಂದಿನ ತಿಂಗಳು ಉಸ್ತುವಾರಿ ಸರಕಾರಕ್ಕೆ ಅಧಿಕಾರ ಹಸ್ತಾಂತರಿಸಲಾಗುವುದು ಎಂದು ಪಾಕಿಸ್ತಾನದ ಪ್ರಧಾನಿ ಶಹಬಾರ್ ಶರೀಫ್ ಹೇಳಿದ್ದಾರೆ.
ಟಿವಿ ವಾಹಿನಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪಾಕ್ ಪ್ರಧಾನಿ ‘ ಭಿಕ್ಷಾಪಾತ್ರೆ ತ್ಯಜಿಸಿ ನಮ್ಮ ಕಾಲಿನ ಮೇಲೆ ನಿಲ್ಲುವುದೊಂದೇ ನಮಗಿರುವ ಏಕೈಕ ಮಾರ್ಗವಾಗಿದೆ’ ಎಂದು ಹೇಳಿದರು. ಇದರೊಂದಿಗೆ ಪಾಕಿಸ್ತಾನದಲ್ಲಿ ಈ ವರ್ಷಾಂತ್ಯದೊಳಗೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಇಮ್ರಾನ್‌ಖಾನ್ ಸರಕಾರ ವಿಶ್ವಾಸಮತ ಗೆಲ್ಲಲು ವಿಫಲವಾಗಿ ಪದಚ್ಯುತಗೊಂಡ ಬಳಿಕ 2022ರ ಎಪ್ರಿಲ್‌ನಲ್ಲಿ ಶರೀಫ್ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಿತ್ತು. ಆಗಸ್ಟ್‌ನಲ್ಲಿ ಸರಕಾರದ ಅವಧಿ ಮುಗಿಯಲಿದೆ. ಪಾಕಿಸ್ತಾನದ ಚುನಾವಣಾ ಆಯೋಗ ಚುನಾವಣೆಯ ದಿನಾಂಕ ನಿಗದಿಗೊಳಿಸಲಿದ್ದು ಉಸ್ತುವಾರಿ ಸರಕಾರದ ಮೇಲ್ವಿಚಾರಣೆಯಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ರಾಷ್ಟ್ರೀಯ ಸಂಸತ್ತನ್ನು ವಿಸರ್ಜಿಸಿದ 60 ದಿನದೊಳಗೆ ಸಾರ್ವತ್ರಿಕ ಚುನಾವಣೆ ನಡೆಯಬೇಕಿದೆ.
ಪಾಕಿಸ್ತಾನದ 76 ವರ್ಷಗಳ ಇತಿಹಾಸದಲ್ಲಿ ಮೂರನೇ ಬಾರಿಗೆ ರಾಷ್ಟ್ರೀಯ ಸಂಸತ್ ತನ್ನ ನಿಗದಿತ 5 ವರ್ಷ ಪೂರೈಸಿದೆ. ಆದರೆ ಇದುವರೆಗೆ ಯಾವುದೇ ಒಂದೇ ಪಕ್ಷದ ಸರಕಾರ ಪಾಕಿಸ್ತಾನದಲ್ಲಿ 5 ವರ್ಷದ ಅಧಿಕಾರ ಪೂರ್ಣಗೊಳಿಸಿಲ್ಲ. ಅಧಿಕ ಹಣದುಬ್ಬರ, ವಿದೇಶಿ ಸಾಲದ ಹೊರೆ ಮತ್ತು ಬರಿದಾಗುತ್ತಿರುವ ವಿದೇಶಿ ವಿನಿಮಯ ಸಂಗ್ರಹ ಮುಂತಾದ ಗಮನಾರ್ಹ ಆರ್ಥಿಕ ಸವಾಲುಗಳನ್ನು ನಿಭಾಯಿಸಲು ಪಾಕಿಸ್ತಾನಕ್ಕೆ ಸ್ಥಿರ ಸರಕಾರದ ಅಗತ್ಯವಿದೆ.