ಸಂಸತ್‍ನಲ್ಲಿ ಪ್ರಧಾನಿ ಮೋದಿಯ ಭಾಷಣವನ್ನು ಬಹಿಷ್ಕರಿಸಿದ್ದಕ್ಕೆ ಹೆಮ್ಮೆಯಿದೆ: ಅಮೆರಿಕ ಸಂಸದೆ ರಷೀದಾ ತ್ಲಯಿಬ್
ವಾಷಿಂಗ್ಟನ್: ಭಾರತದಲ್ಲಿ ಅಲ್ಪಸಂಖ್ಯಾತರ ಮೇಕೆ ಹೆಚ್ಚುತ್ತಿರುವ ದಾಳಿಗಳನ್ನು ಖಂಡಿಸಿರುವ ಅಮೆರಿಕದ ಸಂಸತ್ ಸದಸ್ಯೆ ರಷೀದಾ ತ್ಲಯಿಬ್, ಅಮೆರಿಕ ಸಂಸತ್‍ನ ಜಂಟಿ ಅಧಿವೇಶವನ್ನುದ್ದೇಶಿಸಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದ ಭಾಷಣವನ್ನು ಬಹಿಷ್ಕರಿಸಿದ್ದಕ್ಕೆ ತನಗೆ ಹೆಮ್ಮೆಯಿದೆ ಎಂದಿದ್ದಾರೆ.
ಜುಲೈ 19ರಂದು 18 ನಾಗರಿಕ ಸಮಾಜ ಸಂಸ್ಥೆಗಳು ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು ` ಅಮೆರಿಕದ ಭೇಟಿಯ ಸಂದರ್ಭ ಪ್ರಧಾನಿ ಮೋದಿಯ ಭಾಷಣವನ್ನು ಬಹಿಷ್ಕರಿಸುವಲ್ಲಿ ನನ್ನ ಸಹೋದ್ಯೋಗಿಗಳೊಂದಿಗೆ ನಿಂತಿದ್ದಕ್ಕೆ ನನಗೆ ಹೆಮ್ಮೆಯಿದೆ. ಈ ಸದನವನ್ನು ಮತಾಂಧತೆ ಮತ್ತು ದ್ವೇಷ ಹರಡುವ ವೇದಿಕೆಯಾಗಿ ಬಳಸಬಾರದು' ಎಂದು ಹೇಳಿದರು.
ಅಲ್ಪಸಂಖ್ಯಾತರ ಮಾನವ ಹಕ್ಕುಗಳ ವಿಷಯಕ್ಕೆ ಸಂಬಂಧಿಸಿ ಮೋದಿ ಸರಕಾರದ ವಿರುದ್ಧ ದಾಖಲಾಗಿರುವ ವರದಿಗಳ ಹಿನ್ನೆಲೆಯಲ್ಲಿ ಕಳೆದ ತಿಂಗಳು ಸಂಸತ್‍ನಲ್ಲಿ ಮೋದಿ ಮಾಡಿದ್ದ ಭಾಷಣವನ್ನು ಅರ್ಧ ಡಜನ್‍ಗೂ ಹೆಚ್ಚು ಸಂಸದರು ಬಹಿಷ್ಕರಿಸಿದ್ದರು. `ಕಳೆದ ನಾಲ್ಕು ವರ್ಷಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಭಾರತೀಯ ಜನತಾ ಪಕ್ಷದ ಅಡಿಯಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ತೀವ್ರವಾದ ದಾಳಿಗಳನ್ನು ನಾವು ನೋಡಿದ್ದೇವೆ. ಆದರೆ ಇನ್ನೂ ನಮ್ಮ ದೇಶವು ಭಾರತವನ್ನು ಅಮೆರಿಕದ ಕಾನೂನಿನಡಿ `ನಿರ್ಧಿಷ್ಟ ಕಾಳಜಿಯ ದೇಶ' ಎಂದು ಹೆಸರಿಸದಿರುವುದನ್ನೂ ನಾವು ಗಮನಿಸಿದ್ದೇವೆ' ಎಂದು ರಷೀದಾ ಹೇಳಿದ್ದಾರೆ.
ಇದೇ ಸಭೆಯಲ್ಲಿ ಮಾತನಾಡಿದ ಯುಎಸ್‍ಸಿಐಆರ್‍ಎಫ್(ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿನ ಅಮೆರಿಕದ ಆಯೋಗ) ಕಮಿಷನರ್ ಡೇವಿಡ್ ಕರ್ರಿ `ಭಾರತದ ಪ್ರಧಾನಿಯ ಅಮೆರಿಕದ ಭೇಟಿ ಸಂದರ್ಭ ಧಾರ್ಮಿಕ ಸ್ವಾತಂತ್ರ್ಯದ ಕುರಿತ ಆತಂಕವನ್ನು ಪ್ರಸ್ತಾವಿಸುವಂತೆ ಆಯೋಗವು ಅಧ್ಯಕ್ಷ ಬೈಡನ್‍ರನ್ನು ಒತ್ತಾಯಿಸಿತ್ತು. ಆದರೆ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಸಂಕ್ಷಿಪ್ತವಾಗಿ ಉಲ್ಲೇಖಿಸಲಾಗಿದೆ ಆದರೆ ಅದು ಖಂಡಿತವಾಗಿಯೂ ಕೇಂದ್ರ ಬಿಂದುವಾಗಿರಲಿಲ್ಲ. ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ತಾರತಮ್ಯ ಅಸ್ತಿತ್ವದಲ್ಲಿದೆ ಎಂಬುದನ್ನು ಮೋದಿ ನಿರಾಕರಿಸಿದರು. ಇದನ್ನು ನಾವು ಒಪ್ಪುವುದಿಲ್ಲ' ಎಂದು ಹೇಳಿರುವುದಾಗಿ ವರದಿಯಾಗಿದೆ.
ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಧಾರ್ಮಿಕ ಹಕ್ಕುಗಳಿಗಾಗಿನ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಫೆರ್ನಾಂಡ್ ಡಿವೆರೆನೆಸ್ ` ಭಾರತದಲ್ಲಿ ಅಲ್ಪಸಂಖ್ಯಾತರ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಕೆಲವು ಆರೋಪಗಳಲ್ಲಿ ನೇರವಾಗಿ ಪರಿಣಾಮ ಬೀರುವ ಲಕ್ಷಾಂತರ ಅಲ್ಪಸಂಖ್ಯಾತರ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ಭಾರತದಲ್ಲಿ ವರದಿಯಾಗಿರುವ ಬೃಹತ್ ಕಿರುಕುಳವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯೊಂದಿಗೆ ಗುರುತಿಸುವುದಕ್ಕೆ ಕಷ್ಟವಾಗುತ್ತದೆ. ಈಗ ನಾವು ನೋಡುತ್ತಿರುವುದು ಭಾರತ ಏನಾಗಿರಬಹುದು ಎಂಬ ವಿಕೃತಿಯನ್ನು' ಎಂದು ಹೇಳಿರುವುದಾಗಿ ವರದಿಯಾಗಿದೆ.
ಭಾರತವನ್ನು `ನಿರ್ಧಿಷ್ಟ ಕಾಳಜಿಯ ದೇಶ' ಎಂದು ಹೆಸರಿಸುವಂತೆ ನಿರಂತರ 4 ವರ್ಷಗಳಿಂದ ಯುಎಸ್‍ಸಿಐಆರ್‍ಎಫ್ ಅಮೆರಿಕದ ವಿದೇಶಾಂಗ ಇಲಾಖೆಗೆ ಶಿಫಾರಸು ಮಾಡಿದೆ. ಆದರೆ ಇಂತಹ ಯಾವುದೇ ಕ್ರಮ ಕೈಗೊಳ್ಳಲು ಇದುವರೆಗೆ ಅಮೆರಿಕದ ವಿದೇಶಾಂಗ ಇಲಾಖೆ ನಿರಾಕರಿಸಿದೆ.