ಜಪಾನ್ ಜನಸಂಖ್ಯೆಯಲ್ಲಿ ದಾಖಲೆ ಕುಸಿತ

Update: 2023-07-26 15:58 GMT

Photo: NDTV

ಟೋಕಿಯೊ: ಜಪಾನ್ನ ಜನಸಂಖ್ಯೆಯು 2022ರಲ್ಲಿ ದಾಖಲೆ ಕುಸಿತ ಕಂಡಿರುವುದಾಗಿ ಸರಕಾರದ ಅಂಕಿಅಂಶಗಳು ಮಾಹಿತಿ ನೀಡಿದ್ದು ದೀರ್ಘಕಾಲಿಕ ಕಡಿಮೆ ಜನನ ಪ್ರಮಾಣವನ್ನು ಹಿಮ್ಮೆಟ್ಟಿಸುವಲ್ಲಿ ಸರಕಾರದ ಯೋಜನೆಗಳು ನಿರೀಕ್ಷಿತ ಫಲಿತಾಂಶ ನೀಡಿಲ್ಲ ಎಂದು ವರದಿಯಾಗಿದೆ.

ಹಲವು ಅಭಿವೃದ್ಧಿಶೀಲ ದೇಶಗಳು ಕಡಿಮೆ ಜನನ ಪ್ರಮಾಣವನ್ನು ದಾಖಲಿಸುತ್ತಿದ್ದರೂ ಜಪಾನ್ನಲ್ಲಿ ಈ ಸಮಸ್ಯೆ ತೀವ್ರವಾಗಿದೆ, ಯಾಕೆಂದರೆ ಇಲ್ಲಿ ಸತತ 14ನೇ ವರ್ಷ ಜನಸಂಖ್ಯೆಯ ಪ್ರಮಾಣ ಕುಸಿತವಾಗಿದೆ.

ಅತ್ಯಧಿಕ ಹಿರಿಯ ನಾಗರಿಕರನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಜಪಾನ್(ಮೊನಾಕೊ ದೇಶ ಅಗ್ರಸ್ಥಾನದಲ್ಲಿದೆ)ನ ಜನಸಂಖ್ಯೆ 2022ರಲ್ಲಿ 0.65%ದಷ್ಟು ಕುಸಿತ ದಾಖಲಿಸಿದೆ. `ಜಪಾನ್ ನಾವು ಸಮಾಜವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಬಹುದೇ ಎಂಬ ಪ್ರಶ್ನಾರ್ಥಕ ಪರಿಸ್ಥಿತಿಯ ಅಂಚಿನಲ್ಲಿದೆ' ಎಂದು ಜಪಾನ್ ಪ್ರಧಾನಿ ಫುಮಿಯೊ ಕಿಷಿಡಾ ಎಚ್ಚರಿಸಿದ್ದಾರೆ.

ಇದೇ ಮೊದಲ ಬಾರಿಗೆ ಎಲ್ಲಾ ಪ್ರಾಂತಗಳಲ್ಲೂ ಜನಸಂಖ್ಯೆ ಕುಸಿದಿದೆ. 1968ರಲ್ಲಿ ಜಪಾನ್ ಸರಕಾರವು ಜನಸಂಖ್ಯೆಯ ಸಮೀಕ್ಷೆ ನಡೆಸುವುದನ್ನು ಆರಂಭಿಸಿದಂದಿನಿಂದ ಇದು ಅತ್ಯಂತ ತೀವ್ರ ಕುಸಿತವಾಗಿದೆ. ಇದಕ್ಕೆ ವಿರುದ್ಧವಾಗಿ, ಜಪಾನ್ನ ವಿದೇಶಿ ಜನಸಂಖ್ಯೆಯು ದಾಖಲೆಯ 10.7%ದಷ್ಟು ಹೆಚ್ಚಿದೆ.

125 ದಶಲಕ್ಷ ಜನಸಂಖ್ಯೆಯಿರುವ ಜಪಾನ್ ತುಲನಾತ್ಮಕವಾಗಿ ಕಟ್ಟುನಿಟ್ಟಿನ ವಲಸೆ ನಿಯಮಗಳನ್ನು ಹೊಂದಿದೆ. ಆದರೆ ಕಾರ್ಮಿಕರ ಕೊರತೆಯ ಸಮಸ್ಯೆಗಳನ್ನು ಪರಿಹರಿಸಲು ಸರಕಾರವು ಕಾನೂನನ್ನು ಕ್ರಮೇಣ ಸಡಿಲಗೊಳಿಸುತ್ತಿದೆ.

`ಮಕ್ಕಳು ಮತ್ತು ಜನಸಂಖ್ಯೆಯ ಪ್ರಮಾಣದಲ್ಲಿನ ಕುಸಿತವು ಜಪಾನ್ನ ಸಾಮಾಜಿಕ, ಆರ್ಥಿಕ ಮತ್ತು ಸಾಮಾಜಿಕ ಕಲ್ಯಾಣ ಸಮಸ್ಯೆಗಳನ್ನು ಒಳಗೊಂಡಿರುವ ಒಂದು ಪ್ರಮುಖ ವಿಷಯವಾಗಿದೆ. ಕೆಲಸದ ಶೈಲಿ ಮತ್ತು ಕಾರ್ಮಿಕ ಮಾರುಕಟ್ಟೆಯ ಸುಧಾರಣೆ ಮೂಲಕ ಮಹಿಳೆಯರು ಮತ್ತು ವಯಸ್ಸಾದವರನ್ನು ಕೆಲಸಕ್ಕೆ ಪ್ರವೇಶಿಸಲು ಪ್ರೋತ್ಸಾಹಿಸುವ ಕ್ರಮಗಳನ್ನು ಸರಕಾರ ಕೈಗೊಳ್ಳಲಿದೆ' ಎಂದು ಸರಕಾರದ ವಕ್ತಾರ ಹಿರೊಕಝು ಮಟ್ಸುನೊ ಬುಧವಾರ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News