ಅಮೆರಿಕ ಕಾಂಗ್ರೆಸ್ ಉದ್ದೇಶಿಸಿ ಮೋದಿ ಮಾಡಲಿರುವ ಭಾಷಣವನ್ನು ಬಹಿಷ್ಕರಿಸಿದ ಇಬ್ಬರು ಅಮೆರಿಕ ಸಂಸದರು

Update: 2023-06-22 13:43 GMT

(Photo- PTI)

ವಾಷಿಂಗ್ಟನ್: ಅಲ್ಪಸಂಖ್ಯಾತ ಸಮುದಾಯಗಳನ್ನು ನರೇಂದ್ರ ಮೋದಿ (Prime Minister (PM) Narendra Modi) ನೇತೃತ್ವದ ಸರ್ಕಾರ ಹತ್ತಿಕ್ಕಿದೆ ಎಂದು ಆರೋಪಿಸಿ ಗುರುವಾರ ಅಮೆರಿಕಾ ಜಂಟಿ ಕಾಂಗ್ರೆಸ್ ಅಧಿವೇಶನವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾಡಲಿರುವ ಭಾಷಣವನ್ನು ಬಹಿಷ್ಕರಿಸುತ್ತಿರುವುದಾಗಿ ಅಮೆರಿಕಾ ಡೆಮಾಕ್ರಟಿಕ್ ಪಕ್ಷದ ಇಬ್ಬರು ಮುಸ್ಲಿಂ ಮಹಿಳಾ ಕಾಂಗ್ರೆಸ್ ಸದಸ್ಯರಾದ ಇಲ್ಹಾನ್ ಉಮರ್ ಹಾಗೂ ರಶೀದಾ ತ್ಲೈಬ್ (Ilhan Omar and Rashida Tlaib) ಪ್ರಕಟಿಸಿದ್ದಾರೆ ಎಂದು livemint.com ವರದಿ ಮಾಡಿದೆ.

"ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳನ್ನು ಹತ್ತಿಕ್ಕಿದೆ. ಉಗ್ರವಾದಿ ಹಿಂದೂ ರಾಷ್ಟ್ರೀಯತಾವಾದಿ ಗುಂಪುಗಳಿಗೆ ಕುಮ್ಮಕ್ಕು ನೀಡಿದೆ ಹಾಗೂ ಪತ್ರಕರ್ತರು, ಮಾನವ ಹಕ್ಕು ಕಾರ್ಯಕರ್ತರನ್ನು ನಿರಂಕುಶವಾಗಿ ಗುರಿಯಾಗಿಸಿಕೊಂಡಿದೆ. ಹೀಗಾಗಿ ನಾನು ಮೋದಿ ಭಾಷಣ ಕಾರ್ಯಕ್ರಮಕ್ಕೆ ಹಾಜರಾಗುತ್ತಿಲ್ಲ" ಎಂದು ಮೋದಿ ಭಾಷಣ ಕಾರ್ಯಕ್ರಮಕ್ಕೂ ಮುನ್ನ ಇಲ್ಹಾನ್ ಉಮರ್ ತಿಳಿಸಿದ್ದಾರೆ.

ರಶೀದಾ ತ್ಲೈಬ್ ಕೂಡಾ, "ರಾಷ್ಟ್ರ ರಾಜಧಾನಿಯಲ್ಲಿ ಮೋದಿಗೆ ವೇದಿಕೆ ಕಲ್ಪಿಸಿರುವುದು ಅಪಮಾನಕಾರಿಯಾಗಿದೆ. ಮಾನವ ಹಕ್ಕು ಕಾರ್ಯಕರ್ತರ ಮೇಲಿನ ದಬ್ಬಾಳಿಕೆ, ಪ್ರಜಾತಂತ್ರ ವಿರೋಧಿ ಕ್ರಮಗಳು, ಮುಸ್ಲಿಮರು ಹಾಗೂ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡಿರುವುದು ಹಾಗೂ ಪತ್ರಕರ್ತರಿಗೆ ಸೆನ್ಸಾರ್ ಹೇರಿರುವ ಅವರ ಇತಿಹಾಸ ಅಸ್ವೀಕಾರಾರ್ಹವಾಗಿದೆ. ನಾನು ಮೋದಿಯವರ ಜಂಟಿ ಕಾಂಗ್ರೆಸ್ ಅಧಿವೇಶನ ಭಾಷಣವನ್ನು ಬಹಿಷ್ಕರಿಸುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

Hindustan Times ಪತ್ರಿಕೆಯಲ್ಲಿ ಪ್ರಕಟವಾಗಿರುವ ಸುದ್ದಿಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾನವ ಹಕ್ಕು ವಿಷಯಗಳನ್ನು ಪ್ರಸ್ತಾಪಿಸುವಂತೆ ಸುಮಾರು 75 ಮಂದಿ ಡೆಮಾಕ್ರಟಿಕ್ ಸೆನೆಟರ್‌ಗಳು ಹಾಗೂ ಜನಪ್ರತಿನಿಧಿಗಳ ಸಭೆಯ ಸದಸ್ಯರು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರಿಗೆ ಪತ್ರ ಬರೆದಿದ್ದಾರೆ ಎಂದು ಹೇಳಲಾಗಿದೆ.

ಈ ಪತ್ರದಲ್ಲಿ, "ಭಾರತದ ಪ್ರಜೆಗಳ ಆಯ್ಕೆಯಾದ ಯಾವುದೇ ನಿರ್ದಿಷ್ಟ ನಾಯಕ ಅಥವಾ ರಾಜಕೀಯ ಪಕ್ಷವನ್ನು ನಾವು ಅನುಮೋದಿಸುವುದಿಲ್ಲ. ಆದರೆ, ಅಮೆರಿಕಾ ವಿದೇಶಾಂಗ ನೀತಿಯ ಮುಖ್ಯ ಭಾಗವಾಗಿರಬೇಕಾದ ಪ್ರಮುಖ ತತ್ವಗಳಿಗೆ ಬೆಂಬಲವಾಗಿ ನಿಲ್ಲುತ್ತೇವೆ" ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News