ನಿಜ್ಜರ್ ಹತ್ಯೆ: ಭಾರತ ವಿರುದ್ಧದ ಆರೋಪಕ್ಕೆ ಪುರಾವೆ ನೀಡಿ; ಕೆನಡಾಗೆ ಭಾರತ ಆಗ್ರಹ
ಹೊಸದಿಲ್ಲಿ: ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಭಾರತ ತಳ್ಳಿಹಾಕುವುದಿಲ್ಲ. ಆದರೆ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರು ಷಾಮೀಲಾಗಿದ್ದಾರೆ ಎಂಬ ಆರೋಪಕ್ಕೆ ಪೂರಕವಾದ ಪುರಾವೆಯನ್ನು ಕೆನಡಾ ಒದಗಿಸಬೇಕು ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಶಂಕರ್ ಆಗ್ರಹಿಸಿದ್ದಾರೆ.
ಖಲಿಸ್ತಾನಿ ಪ್ರತ್ಯೇಕತಾವಾದಿ ಹಾಗೂ ಟೈಗರ್ ಫೋರ್ಸ್ ಮುಖ್ಯಸ್ಥ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತ ಸರ್ಕಾರ ಷಾಮೀಲಾಗಿದೆ ಎಂದು ಆಪಾದಿಸಿ, ಕೆನಡಾದಲ್ಲಿರುವ ಭಾರತದ ರಾಜತಾಂತ್ರಿಕ ಸಿಬ್ಬಂದಿಯನ್ನು ಟ್ರೂಡೊ ಸರ್ಕಾರ ಉಚ್ಚಾಟಿಸಿ ಎರಡು ತಿಂಗಳ ಬಳಿಕ ಜೈಶಂಕರ್ ಈ ಹೇಳಿಕೆ ನೀಡಿದ್ದಾರೆ.
"ನೀವು ಈ ಗಂಭೀರ ಆರೋಪ ಮಾಡಲು ಸಕಾರಣಗಳು ಇದ್ದಲ್ಲಿ ಪುರಾವೆಯನ್ನು ದಯವಿಟ್ಟು ನಮ್ಮೊಂದಿಗೆ ಹಮಚಿಕೊಳ್ಳಿ. ಏಕೆಂದರೆ ನಾವು ತನಿಖೆಯನ್ನು ತಳ್ಳಿಹಾಕಿಲ್ಲ" ಎಂದು ಜೈಶಂಕರ್ ಬ್ರಿಟನ್ ನಲ್ಲಿ ಸ್ಪಷ್ಟಪಡಿಸಿದರು. ಭಾರತದ ವಿರುದ್ಧದ ಅರೋಪಕ್ಕೆ ಪೂರಕವಾದ ಯಾವುದೇ ಪುರಾವೆಯನ್ನು ಕೆನಡಾ ಇದುವರೆಗೂ ಭಾರತಕ್ಕೆ ಸಲ್ಲಿಸಿಲ್ಲ ಎಂದು ಅವರು ದೃಢಪಡಿಸಿದರು.
ಕೆನಡಾದಲ್ಲಿ ಖಲಿಸ್ತಾನಿ ಪರ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಉಲ್ಲೇಖಿಸಿದ ಅವರು, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಜತೆಗೆ ಕೆಲ ನಿರ್ದಿಷ್ಟ ಹೊಣೆಗಾರಿಕೆಗಳೂ ಇರುತ್ತವೆ. ಈ ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡುವುದು ಮತ್ತು ಆ ದುರ್ಬಳಕೆಯನ್ನು ರಾಜಕೀಯ ಉದ್ದೇಶಗಳಿಗಾಗಿ ಸಹಿಸುವುದು ಕೆಟ್ಟದು" ಎಂದು ಅಭಿಪ್ರಾಯಪಟ್ಟರು.