ಕೋಲಾರ ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದಿರುವ 1,333 ಮಕ್ಕಳು ಪತ್ತೆ

Update: 2024-03-02 04:40 GMT

ಸಾಂದರ್ಭಿಕ ಚಿತ್ರ Photo: PTI

ಕೋಲಾರ: ಗರ್ಭಾವಸ್ಥೆಯಲ್ಲಿದ್ದಾಗಿನ ಪೌಷ್ಟಿಕ ಆಹಾರದ ಕೊರತೆ, ಅವಧಿಪೂರ್ವ ಜನನ ಸೇರಿದಂತೆ ವಿವಿಧ ಕಾರಣಗಳಿಂದ ಕೋಲಾರ ಜಿಲ್ಲೆಯಲ್ಲಿ 1,333 ಮಕ್ಕಳು ಅಪೌಷ್ಟಿಕಾಂಶದಿಂದ ಬಳಲುತ್ತಿದ್ದಾರೆ. ಆರು ತಾಲೂಕುಗಳಿಂದ ಸೇರಿ 109 ಮಕ್ಕಳು ತೀವ್ರ ಅಪೌಷ್ಟಿಕಾಂಶ ಹಾಗೂ 1,224 ಮಕ್ಕಳು ಸಾಧಾರಣ ಅಪೌಷ್ಟಿಕಾಂಶಕ್ಕೆ ಒಳಗಾಗಿರುವುದು ಆತಂಕ ಮೂಡಿಸಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಂಕಿ ಅಂಶ ಪ್ರಕಾರ 2023ರ ಡಿಸೆಂಬರ್ ಅಂತ್ಯಕ್ಕೆ ಜಿಲ್ಲೆಯಲ್ಲಿ ಒಟ್ಟು 84,671 ಮಕ್ಕಳನ್ನು ತೂಕ ಮಾಡಲಾಗಿದೆ. ಅವರಲ್ಲಿ ಒಟ್ಟು 1,333 ಮಕ್ಕಳಲ್ಲಿ ಅಪೌಷ್ಟಿಕಾಂಶವಿರುವುದು ಪತ್ತೆಯಾಗಿದೆ. ಒಟ್ಟು ಮಕ್ಕಳ ಪ್ರಮಾಣಕ್ಕೆ ಹೋಲಿಸಿದರೆ ಶೇ 1.57 ಮಕ್ಕಳಲ್ಲಿ ಅಪೌಷ್ಟಿಕಾಂಶವಿದೆ.

ಅಪೌಷ್ಟಿಕತೆ ಹೋಗಲಾಡಿಸಲು ರಾಜ್ಯ ಹಾಗೂ ಕೇಂದ್ರ ಸರಕಾರ ಕೋಟ್ಯಂತರ ರೂ.ಖರ್ಚು ಮಾಡಿ ಹಲವಾರು ಯೋಜನೆ ಜಾರಿ ಮಾಡಿವೆ. ಆದರೆ, ಮಕ್ಕಳ ದೈಹಿಕ ಬೆಳವಣಿಗೆ ಮಾತ್ರ ನಿರೀಕ್ಷಿತ ಮಟ್ಟದ ಸುಧಾರಣೆ ಕಾಣುತ್ತಿಲ್ಲ, ಹೆಚ್ಚುತ್ತಿರುವ ಬಾಲ್ಯ ವಿವಾಹ, ಸಾಮಾಜಿಕ, ಆರ್ಥಿಕ ಕಾರಣಗಳಿಗೆ ಜಿಲ್ಲೆಯಲ್ಲಿ ಅಪೌಷ್ಟಿಕತೆ ಸಮಸ್ಯೆ ಇನ್ನೂ ಮುಂದುವರಿದಿರುವುದು ಸವಾಲಾಗಿ ಪರಿಣಮಿಸಿದೆ.

ಜಿಲ್ಲಾ ಕೇಂದ್ರವಾಗಿರುವ ಕೋಲಾರ ತಾಲೂಕಿನಲ್ಲೇ ಅಪೌಷ್ಟಿಕ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 576 ತೀವ್ರ ಹಾಗೂ ಸಾಧಾರಣ ಅಪೌಷ್ಟಿಕ ಮಕ್ಕಳು ಇರುವುದು ಪತ್ತೆಯಾಗಿದೆ. ಆನಂತರದ ಸ್ಥಾನದಲ್ಲಿ ಶ್ರೀನಿವಾಸಪುರ ತಾಲೂಕು ಇದೆ.

ಇಲಾಖೆ ಸಿಬ್ಬಂದಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಅಪೌಷ್ಟಿಕ ಮಕ್ಕಳ ಮೇಲೆ ನಿಗಾ ಇಟ್ಟಿದ್ದಾರೆ. ಜಿಲ್ಲೆಯಲ್ಲಿ ವಿಶೇಷವಾಗಿ ಪ್ರತಿ ತಾಲೂಕಿಗೆ ಒಬ್ಬರಂತೆ ನೋಡಲ್ ಅಧಿಕಾರಿ ನೇಮಿಸಲಾಗಿದೆ. ಅಂಗನವಾಡಿಯಲ್ಲಿ ಮಕ್ಕಳನ್ನು ತೂಕ ಮಾಡಲಾಗುತ್ತಿದೆ. ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ ಮಾಡುತ್ತಿದ್ದೇವೆ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಾರಾಯಣಸ್ವಾಮಿ ತಿಳಿಸಿದರು.

ಜಿಲ್ಲೆಯಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆ ಮತ್ತು ರಕ್ತಹೀನತೆ ಗುರುತಿಸಿ ನಿಯಂತ್ರಿಸಲು ಸಮುದಾಯ ಆರೋಗ್ಯಾಧಿಕಾರಿಗಳು ಪ್ರಯತ್ನ ನಡೆಸಿದ್ದಾರೆ. ವಯಸ್ಸಿಗೆ ತಕ್ಕ ತೂಕ, ಎತ್ತರಕ್ಕೆ ತಕ್ಕ ತೂಕ, ತೋಳಿನ ಸುತ್ತಳತೆ ಮೂಲಕ ಮಕ್ಕಳ ಅಪೌಷ್ಟಿಕತೆಯನ್ನು ಗುರುತಿಸಲಾಗುತ್ತದೆ. ತೀವ್ರ ಅಪೌಷ್ಟಿಕತೆಯಿಂದ 5 ವರ್ಷದೊಳಗಿನ ಮಕ್ಕಳು ಮರಣ ಹೊಂದುವ ಸಾಧ್ಯತೆ ಇರುತ್ತದೆ. ಕೋವಿಡ್ ಬಳಿಕ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ.

ಸರಕಾರ ಈಗ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿನ 1 ರಿಂದ 10ನೇ ತರಗತಿವರೆಗಿನ ಎಲ್ಲ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಟಿಕ ಆಹಾರವಾಗಿ ರಾಗಿ ಮಾಲ್ಟ್ ಹಾಲಿನ ಮಿಶ್ರಣವನ್ನು ವಿತರಿಸುವ ಕಾರ್ಯಕ್ರಮವನ್ನು ರಾಜ್ಯ ಸರಕಾರ ಹಮ್ಮಿಕೊಂಡಿದೆ. ಶಾಲಾ ಮಕ್ಕಳಿಗೆ ಬಿಸಿಯೂಟ, ಕೆನೆಭರಿತ ಹಾಲು, ಮೊಟ್ಟೆ, ಬಾಳೆ ಹಣ್ಣು, ಶೇಂಗಾ, ಚಿಕ್ಕಿ ವಿತರಿಸುತ್ತಿದೆ. ಹಾಗೆಯೇ, ಅಂಗನವಾಡಿ ಮಕ್ಕಳಿಗೂ ಪೌಷ್ಟಿಕ ಆಹಾರ ನೀಡಲಾಗುತ್ತಿದೆ.

ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಪತ್ತೆ ಕಾರ್ಯ ನಿರಂತವಾಗಿ ನಡೆಯುತ್ತಿದೆ. ಅಪೌಷ್ಟಿಕತೆ ಇರುವುದು ಗೊತ್ತಾಗುತ್ತಿದ್ದಂತೆ ಆರೈಕೆ ಮಾಡಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ.

-ನಾರಾಯಣಸ್ವಾಮಿ, ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

5 ಪೌಷ್ಟಿಕ ಪುನಶ್ಚೇತನ ಕೇಂದ್ರ

ಕೋಲಾರ ಜಿಲ್ಲೆಯಲ್ಲಿ ಶ್ರೀನಿವಾಸಪುರ ಹೊರತುಪಡಿಸಿ ಇನ್ನುಳಿದ ತಾಲೂಕುಗಳಲ್ಲಿ ತಲಾ ಒಂದು ಪೌಷ್ಟಿಕ ಪುನಶ್ವೇತನ ಕೇಂದ್ರ (ಎನ್‌ಆರ್‌ಸಿ) ಇವೆ. ಕೋಲಾರದ ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆಯಲ್ಲಿ ಕೇಂದ್ರವಿದ್ದು, ಶ್ರೀನಿವಾಸಪುರ ತಾಲೂಕಿನ ಮಕ್ಕಳನ್ನು ಇಲ್ಲಿ ಆರೈಕೆ ಮಾಡಲಾಗುತ್ತದೆ.

ಅಪೌಷ್ಟಿಕತೆಯಿಂದ ಬಳಲುತ್ತಿರುವ, ಕಡಿಮೆ ತೂಕ ಇರುವ ಮಕ್ಕಳ ಆರೈಕೆಗಾಗಿ ಸ್ಥಾಪಿಸಲಾಗಿದೆ. ಐದು ವರ್ಷದ ಒಳಗಿನ ಮಕ್ಕಳ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಮಕ್ಕಳಲ್ಲಿನ ಅಪೌಷ್ಟಿಕತೆ ಹೋಗಲಾಡಿಸುವ ಉದ್ದೇಶದಿಂದ ಪ್ರತ್ಯೇಕ ಕೇಂದ್ರ ಸ್ಥಾಪಿಸಲಾಗಿದೆ. ೧೪ ದಿನಗಳು ಇಲ್ಲಿಯೇ ಇರಿಸಿಕೊಂಡು ಪಥ್ಯದ ಪ್ರಕಾರ ಆಹಾರ ನೀಡಲಾಗುತ್ತದೆ. ಮಗು ನೋಡಿಕೊಳ್ಳಲು ಜೊತೆಯಲ್ಲಿ ಇರುವ ಒಬ್ಬರಿಗೆ ಆ ದಿನಗಳ ಕೂಲಿಯನ್ನೂ ಕೊಡಲಾಗುತ್ತದೆ. ಕೇಂದ್ರದಿಂದ ಮನೆಗೆ ಹೋದ ನಂತರ ಮಕ್ಕಳಿಗೆ ನೀಡಬೇಕಾದ ಆಹಾರದ ಬಗ್ಗೆ ಪೋಷಕರಿಗೆ ಮಾಹಿತಿ ನೀಡಲಾಗುತ್ತದೆ. ಮಕ್ಕಳ ಮೇಲೆ ನಿಗಾ ಇಡಲಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಸಿ.ವಿ.ನಾಗರಾಜ್. ಕೋಲಾರ

contributor

Similar News