ಕೊಡಗು ಜಿಲ್ಲೆಯಲ್ಲಿ170 ನಕಲಿ ಕಾರ್ಮಿಕ ಕಾರ್ಡ್ ಪತ್ತೆ

Update: 2024-02-23 10:24 GMT

ಮಡಿಕೇರಿ, ಫೆ.22: ರಾಜ್ಯದಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ 53 ಲಕ್ಷ ಕಾರ್ಮಿಕ ಕಾರ್ಡ್‌ಗಳನ್ನು ವಿತರಿಸಿದ್ದು, ಕೊಡಗು ಜಿಲ್ಲೆಯಲ್ಲಿ ಇದುವರೆಗೆ 170 ನಕಲಿ ಕಾರ್ಮಿಕ ಕಾರ್ಡ್‌ಗಳನ್ನು ಇಲಾಖೆ ಪತ್ತೆ ಹಚ್ಚಿದೆ ಎಂದು ತಿಳಿದುಬಂದಿದೆ.

11 ಸಾವಿರಕ್ಕೂ ಅಧಿಕ ಕಾರ್ಮಿಕ ಕಾರ್ಡ್ ಇರುವ ಕೊಡಗಿನಲ್ಲಿ ಕೇವಲ 170 ಬೋಗಸ್ ಕಾರ್ಡ್ ಮಾತ್ರ ಪತ್ತೆಯಾಗಿದ್ದು,ಇನ್ನೂ ಹಲವರು ನಕಲಿ ಕಾರ್ಮಿಕ ಕಾರ್ಡ್ ಪಡೆದುಕೊಂಡಿದ್ದಾರೆ ಎಂಬ ಅನುಮಾನವನ್ನು ಕಾರ್ಮಿಕ ಸಂಘಟನೆಗಳು ವ್ಯಕ್ತಪಡಿಸಿವೆ.

ಇದೀಗ ರಾಜ್ಯದಲ್ಲಿ ನಕಲಿ ಕಾರ್ಮಿಕ ಕಾರ್ಡ್ ಪತ್ತೆ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು, ಕೊಡಗು ಜಿಲ್ಲೆಯಲ್ಲಿ ಇನ್ನಷ್ಟು ಬೋಗಸ್ ಕಾರ್ಮಿಕ ಕಾರ್ಡ್ ಪತ್ತೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ರಾಜ್ಯದಲ್ಲಿ ಇದುವರೆಗೆ ಇತರ ಜಿಲ್ಲೆಗಳಲ್ಲಿ ಪತ್ತೆಯಾಗಿರುವ ನಕಲಿ ಕಾರ್ಮಿಕ ಕಾರ್ಡ್‌ಗೆ ಹೋಲಿಸಿದರೆ,ಕೊಡಗು ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತೀ ಕಡಿಮೆ ಬೋಗಸ್ ಕಾರ್ಮಿಕ ಕಾರ್ಡ್ ಪತ್ತೆಯಾಗಿವೆ.

ಚಾಲ್ತಿಯಲ್ಲಿರದ 3,457 ಕಾರ್ಮಿಕ ಕಾರ್ಡ್!

ಕೊಡಗು ಜಿಲ್ಲೆಯಲ್ಲಿ ಇದುವರೆಗೆ 11,969 ಕಾರ್ಮಿಕ ಕಾರ್ಡ್ ನೋಂದಣಿಯಾಗಿವೆ.ಆದರೆ ಅದರಲ್ಲಿ ಕೇವಲ 8,512 ಕಾರ್ಡ್ ಮಾತ್ರ ಚಾಲ್ತಿಯಲ್ಲಿವೆ.ಉಳಿದ 3,457 ಕಾರ್ಮಿಕ ಕಾರ್ಡ್ ಚಾಲ್ತಿಯಲ್ಲಿಲ್ಲ. ಕಾರ್ಮಿಕ ಇಲಾಖೆ ಈ ಹಿಂದೆ ಮೂರು ವರ್ಷಕ್ಕೊಮ್ಮೆ ಕಾರ್ಮಿಕ ಕಾರ್ಡ್ ಗಳನ್ನು ನವೀಕರಿಸಲು ಅವಕಾಶ ನೀಡಲಾಗುತ್ತಿತ್ತು. ಆದರೆ ಇದೀಗ ಪ್ರತೀ ವರ್ಷ ಕಾರ್ಮಿಕ ಕಾರ್ಡ್ ನವೀಕರಣಗೊಳಿಸಬೇಕಾಗಿರುವುದರಿಂದ ನಕಲಿ ದಾಖಲೆ ಸೃಷ್ಟಿಸಿ ನಕಲಿ ಕಾರ್ಡ್ ಪಡೆದುಕೊಂಡವರು ಸಿಕ್ಕಿ ಬೀಳುತ್ತಿದ್ದಾರೆ.

ಕಾರ್ಮಿಕ ಕಾರ್ಡ್ ನವೀಕರಿಸಲು ಕಟ್ಟುನಿಟ್ಟಾದ ನಿಯಮಗಳನ್ನು ಇತ್ತೀಚಿಗೆ ಕಾರ್ಮಿಕ ಇಲಾಖೆ ಅಳವಡಿಸಿರುವುದರಿಂದ ನಕಲಿ ಕಾರ್ಮಿಕ ಕಾರ್ಡ್ ಮಾಡಿಕೊಂಡವರು ಹಾಗೂ ಕಟ್ಟಡ ಮತ್ತು ಇತರ ನಿರ್ಮಾಣ ಕೆಲಸದಲ್ಲಿ ತೊಡಗಿಕೊಂಡಿರದವರು ಕಾರ್ಮಿಕ ಕಾರ್ಡ್ ನವೀಕರಿಸಿಲ್ಲ. ನವೀಕರಿಸದ ಕಾರ್ಡ್ ಗಳಲ್ಲಿ ಬಹುತೇಕ ಕಾರ್ಡ್‌ಗಳು ಬೋಗಸ್ ಎಂದು ಹೇಳಲಾಗುತ್ತಿವೆ.

ಮರಳು, ಸಿಮೆಂಟ್ ಮುಟ್ಟದವರ

ಬಳಿಯೂ ಕಾರ್ಮಿಕ ಕಾರ್ಡ್!

ಇದುವರೆಗೆ ಮರಳು,ಕಲ್ಲು, ಸಿಮೆಂಟ್ ಮುಟ್ಟದವರ ಬಳಿಯೂ ಕಾರ್ಮಿಕರ ಕಾರ್ಡ್ ಕಂಡು ಬಂದಿವೆ. ಅದರಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಇದ್ದಾರೆ ಎನ್ನಲಾಗಿದೆ. ಅಸಂಘಟಿತರಾಗಿರುವ ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿಕೊಂಡಿರುವ ಕಾರ್ಮಿಕರಿಗೆ ಅನುಕೂಲವಾಗಲಿ ಎಂದು, ಸರಕಾರ ಕಾರ್ಮಿಕರಿಗೆ ಕಾರ್ಡ್ ವಿತರಣೆ ಮಾಡುತ್ತಿದೆ.

ಒಂದೇ ಮನೆಯಲ್ಲಿ ಒಂದಿಬ್ಬರು ಕಟ್ಟಡ ಕಾರ್ಮಿಕರು ಇರುವುದು ಸಹಜ. ಆದರೆ ಗಂಡ ಗಾರೆ ಕೆಲಸದಲ್ಲಿ ತೊಡಗಿಕೊಂಡಿದ್ದರೆ,ಆತನ ಹೆಂಡತಿ ಹಾಗೂ 18 ವರ್ಷ ತುಂಬಿದ ಮಕ್ಕಳಿಗೂ ಕಾರ್ಮಿಕ ಕಾರ್ಡ್ ಮಾಡಿಸಿಕೊಂಡು ಕಾರ್ಮಿಕ ಇಲಾಖೆಯ ಯೋಜನೆಗಳನ್ನು ಪಡೆದುಕೊಂಡಿರುವ ಘಟನೆಗಳು ಜಿಲ್ಲೆಯಲ್ಲಿ ನಡೆದಿವೆ ಎಂದು ವರದಿಯಾಗಿದೆ.

2007ರಲ್ಲಿ ಕಾರ್ಮಿಕ ಕಾರ್ಡ್ ಸೇವೆ ಆರಂಭಗೊಂಡಾಗ ನೋಂದಣಿ ಮತ್ತು ನವೀಕರಣ ಶುಲ್ಕವನ್ನು ನಿಗದಿಪಡಿಸಲಾಗಿತ್ತು. ಕೋವಿಡ್ ಬಳಿಕ ಸರಕಾರ ನೋಂದಣಿ ಮತ್ತು ನವೀಕರಣ ಶುಲ್ಕವನ್ನು ರದ್ದು ಮಾಡಿತ್ತು. ಮಧ್ಯವರ್ತಿಗಳು ಕಟ್ಟಡ ಕಾರ್ಮಿಕರೇ ಅಲ್ಲದವರಿಂದ ಹಣ ಪಡೆದು,ಕಾರ್ಮಿಕರ ಕಾರ್ಡ್ ಮಾಡಿಕೊಟ್ಟಿದ್ದಾರೆ.

ಕಳೆದ ವರ್ಷ 2023 ಫೆಬ್ರವರಿ ತಿಂಗಳಲ್ಲಿ ನಕಲಿ ಕಾರ್ಮಿಕರ ಪತ್ತೆ ಅಭಿಯಾನದಲ್ಲಿ 101 ಬೋಗಸ್ ಕಾರ್ಡ್ ಪತ್ತೆಯಾಗಿತ್ತು.

ಕಟ್ಟಡ ಮತ್ತು ಇತರ ಕಾರ್ಮಿಕರಲ್ಲದ 3,500ಕ್ಕೂ ಹೆಚ್ಚು ಜನರು ಕಾರ್ಮಿಕರ ಕಾರ್ಡ್ ಪಡೆದುಕೊಂಡು ಇಲಾಖೆಯಿಂದ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಹಿರಿಯ ಕಾರ್ಮಿಕ ನಿರೀಕ್ಷಕರು ವೀರಾಜಪೇಟೆ ವೃತ್ತದಲ್ಲಿ ಇದುವರೆಗೆ 5,145 ಕಾರ್ಮಿಕ ಕಾರ್ಡ್ ನೋಂದಣಿಯಾಗಿದೆ.ಆದರೆ ಅದರಲ್ಲಿ 2,278 ಕಾರ್ಮಿಕ ಕಾರ್ಡ್ ಚಾಲ್ತಿಯಲ್ಲಿ ಇಲ್ಲ. ಕೇವಲ 2,867 ಕಾರ್ಡ್ ಮಾತ್ರ ಚಾಲ್ತಿಯಲ್ಲಿವೆ ಎಂದು ತಿಳಿದುಬಂದಿದೆ.

ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಾರ್ಮಿಕ ಕಾರ್ಡ್ ಪಡೆದಿರುವವರಲ್ಲಿ ಶೇ. 50ಕ್ಕೂ ಹೆಚ್ಚು ಮಂದಿ ಅನರ್ಹರಿರುವ ಅನುಮಾನವಿದ್ದು, ಅಂತಹ ಕಾರ್ಡ್ ಗಳನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ‘ಮಂಡಳಿಯಿಂದ ರಾಜ್ಯದಲ್ಲಿ 53 ಲಕ್ಷ ಕಾರ್ಮಿಕ ಕಾರ್ಡ್ ಗಳನ್ನು ವಿತರಿಸಲಾಗಿತ್ತು. ಮೊದಲ ಹಂತದ ಪರಿಶೀಲನೆ ವೇಳೆ ಏಳು ಲಕ್ಷ ಅನರ್ಹ ಕಾರ್ಡ್‌ಗಳನ್ನು ಪತ್ತೆಹಚ್ಚಲಾ ಗಿದೆ. ಅನರ್ಹ ಫಲಾನುಭವಿಗಳ ಪತ್ತೆಗೆ ಇನ್ನಷ್ಟು ಪರಿಶೀಲನೆ ಅಗತ್ಯವಿದೆ. ಕೆಲವು ತಿಂಗಳೊಳಗೆ ಮತ್ತೊಮ್ಮೆ ಪರಿಶೀಲನೆ ನಡೆಸಿ, ಅನರ್ಹರಿಗೆ ನೀಡಿರುವ ಕಾರ್ಡ್ ಗಳ ರದ್ಧತಿಗೆ ಕ್ರಮ ಕೈಗೊಳ್ಳಲಾಗುವುದು.

-ಸಂತೋಷ್ ಲಾಡ್, ಕಾರ್ಮಿಕ ಸಚಿವ ಕರ್ನಾಟಕ ಸರಕಾರ

ಕಾರ್ಮಿಕ ಕಾರ್ಡ್ ಹೊಂದಿರುವವರಿಗೆ ಸೌಲಭ್ಯಗಳು

►  5 ಲಕ್ಷ ರೂ ವರೆಗೆ ಅಪಘಾತ ಪರಿಹಾರ.

► ಸಾಮಗ್ರಿ ಕಿಟ್,ಮಕ್ಕಳ ಮದುವೆಗೆ ಸಹಾಯ.

► ವಸತಿ ನಿರ್ಮಾಣಕ್ಕೆ,ಎರಡು ಲಕ್ಷ ಮುಂಗಡ ಹಣ.

► ಮೂರು ವರ್ಷ ಸದಸ್ಯರಾಗಿದ್ದವರು,60 ವರ್ಷ ಪೂರೈಸಿದ್ದಲ್ಲಿ ಮಾಸಿಕ 2,000 ರೂ. ಪಿಂಚಣಿ.

► ಕಾರ್ಮಿಕ ಮೃತನಾದರೆ,ಅವರ ನಾಮಿನಿಗೆ ಪಿಂಚಣಿ ಸೌಲಭ್ಯ.

► ತಾಯಿ ಲಕ್ಷ್ಮಿ ಬಾಂಡ್,ಅಂತ್ಯಕ್ರಿಯೆಗೆ ನೆರವು.

► ಕಾರ್ಮಿಕ ಮಕ್ಕಳಿಗೆ ಎಲ್‌ಕೆಜಿ ಯಿಂದ,ಉನ್ನತ ವ್ಯಾಸಂಗದವರೆಗೆ ಸಹಾಯ.

► ಐಐಟಿ, ಐಐಎಂ ಮುಂತಾದ ಶಿಕ್ಷಣ ಪಡೆಯುವವರಿಗೆ ಪೂರ್ಣ ಬೋಧನ ಶುಲ್ಕ.

ನೋಂದಣಿ ಸುಲಭ

ಸರಕಾರ ಕಟ್ಟಡ ಮತ್ತು ಇತರ ಕಾರ್ಮಿಕರ ಕಾರ್ಡ್ ಪಡೆಯಲು ಸಡಿಲ ನಿಯಮಗಳನ್ನು ರೂಪಿಸಿಕೊಂಡಿದ್ದೇ ಬೋಗಸ್ ಕಾರ್ಡ್ ಹೆಚ್ಚಲು ಕಾರಣ. ಒಂದು ವರ್ಷದಲ್ಲಿ ಕನಿಷ್ಠ 90 ದಿನ ಯಾವುದಾದರೂ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಕೊಂಡಿದ್ದರೆ,ಅಂಥವರು ಕಾರ್ಮಿಕ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು. 18 ರಿಂದ 60 ವರ್ಷದವರು ಕಾರ್ಮಿಕ ಕಾರ್ಡ್ ಪಡೆಯಲು ಅರ್ಹರು. ಆದರೆ ಕೊಡಗು ಜಿಲ್ಲೆಯಲ್ಲಿ ಕೆಲ ಮನೆಗಳಲ್ಲಿ ಮಾತ್ರ ಒಂದಿಬ್ಬರು ಕಟ್ಟಡ ಕಾರ್ಮಿಕರು ಇದ್ದಾರೆ. ಆದರೆ ಇಡೀ ಮನೆಯ ಎಲ್ಲರೂ ಕಾರ್ಮಿಕ ಕಾರ್ಡ್ ಪಡೆದುಕೊಂಡು ಸರಕಾರದ ಸವಲತ್ತುಗಳನ್ನು ಪಡೆದುಕೊಂಡವರಿದ್ದಾರೆ ಎಂಬ ಆರೋಪವಿದೆ.

ಕೊಡಗಿನಲ್ಲಿ ಚಾಲ್ತಿಯಲ್ಲಿಲ್ಲದ ಕಾರ್ಮಿಕ ಕಾರ್ಡ್

► ಮಡಿಕೇರಿ ವೃತ್ತ: 638

► ಸೋಮವಾರಪೇಟೆ ವೃತ್ತ: 541

► ವೀರಾಜಪೇಟೆ ವೃತ್ತ: 2,248

► ಒಟ್ಟು: 3,457

ಕೊಡಗು ಜಿಲ್ಲೆಯಲ್ಲಿ ಕಾರ್ಮಿಕ ಕಾರ್ಡ್ ವಿತರಿಸುವಾಗ ಕಟ್ಟುನಿಟ್ಟಾಗಿ ಪರಿಶೀಲನೆ ಮಾಡಿದ ನಂತರ ಕಾರ್ಮಿಕ ಕಾರ್ಡ್ ವಿತರಿಸುತ್ತಿದ್ದೇವೆ.ಇದುವರೆಗೆ ಜಿಲ್ಲೆಯಲ್ಲಿ 170 ಬೋಗಸ್ ಕಾರ್ಡ್ ಮಾತ್ರ ಪತ್ತೆಯಾಗಿವೆ. ಜಿಲ್ಲೆಯಲ್ಲಿ ಕಾರ್ಮಿಕ ಅಧಿಕಾರಿಗಳು ಪರಿಶೀಲನೆ ನಡೆಸಿದ ನಂತರವೇ ಕಾರ್ಮಿಕ ಕಾರ್ಡ್ ನೀಡಲು ಕ್ರಮಕೈಗೊಳ್ಳುತ್ತಿದ್ದೇವೆ. ಜಿಲ್ಲೆಯಲ್ಲಿ 3,457 ಚಾಲ್ತಿಯಲ್ಲಿಲ್ಲದ ಕಾರ್ಮಿಕ ಕಾರ್ಡ್‌ಗಳು ಇವೆ.

-ಎಸ್.ಎಲ್ ಹರ್ಷವರ್ಧನ್,

ಕಾರ್ಮಿಕ ಅಧಿಕಾರಿ ಮಡಿಕೇರಿ ವಿಭಾಗ

ಕಾರ್ಮಿಕ ಅಧಿಕಾರಿಗಳೇ ಸಹಿ ಹಾಕಿ ಕಾರ್ಮಿಕ ಕಾರ್ಡ್ ನೀಡಿದ್ದಾರೆ. ಇದೀಗ ಅಧಿಕಾರಿಗಳು ಸಹಿ ಹಾಕಿರುವ ಕಾರ್ಡ್ ಗಳು ಬೋಗಸ್ ಅಂತ ಹೇಳುವುದು ಎಷ್ಟು ಸರಿ! ನಕಲಿ ಕಾರ್ಮಿಕ ಕಾರ್ಡ್ ಗಳು ಹೆಚ್ಚಾಗಲು ತಾಲೂಕು ಮಟ್ಟದ ಹಿರಿಯ ಕಾರ್ಮಿಕ ನಿರೀಕ್ಷಕರೇ ಹೊಣೆ. ನೋಂದಾಯಿತ ಕಟ್ಟಡ ಕಾರ್ಮಿಕರು ತಮ್ಮ ನವೀಕರಣವನ್ನು ಪ್ರತಿವರ್ಷ ಮಾಡುವುದು ಕಡ್ಡಾಯ ಪಡಿಸಿದೆ. ಕಾರ್ಮಿಕ ಇಲಾಖೆಯಿಂದಲೇ,ಕೆಲಸದ ಸ್ಥಳಗಳಿಗೆ ಭೇಟಿ ನೀಡಿ ಅಥವಾ ಗ್ರಾಮ ಪಂಚಾಯತ್‌ಗಳಲ್ಲಿ ಕಾರ್ಮಿಕ ಕಾರ್ಡ್ ನೋಂದಾಯಿಸಿಕೊಳ್ಳಬೇಕು.

-ಎಸ್.ಎಂ. ಕೃಷ್ಣ ಕರಡಿಗೋಡು,

ಪ್ರಧಾನ ಕಾರ್ಯದರ್ಶಿ ಕಾಫಿನಾಡು ಕಟ್ಟಡ ಕಾರ್ಮಿಕ ಸಂಘ ಕೊಡಗು

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಕೆ.ಎಂ. ಇಸ್ಮಾಯಿಲ್ ಕಂಡಕರೆ

contributor

Similar News