1995ರಿಂದ 2021ರವರೆಗೆ ದೇಶದಲ್ಲಿ 2 ಲಕ್ಷ ವಿದ್ಯಾರ್ಥಿಗಳ ಆತ್ಮಹತ್ಯೆ!

Update: 2024-01-24 05:41 GMT

ಪ್ರಪಂಚದಲ್ಲೇ ಅತೀ ಹೆಚ್ಚು ವಿದ್ಯಾರ್ಥಿಗಳ ಸಂಖ್ಯೆಯನ್ನು ಹೊಂದಿರುವ ದೇಶ ಭಾರತವಾಗಿದೆ. ಒಟ್ಟು ಭಾರತದಲ್ಲಿ ಪ್ರತಿವರ್ಷ 31.5 ಕೋಟಿಯಷ್ಟು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ಉನ್ನತ ಶಿಕ್ಷಣ ಅಖಿಲ ಭಾರತ ಸಮೀಕ್ಷೆಯ (AISHE) 2020-21 ರ ಅಂಕಿ ಅಂಶಗಳ ಪ್ರಕಾರ, ಒಟ್ಟು ವಿದ್ಯಾರ್ಥಿಗಳಲ್ಲಿ ಶೇ.79.06ರಷ್ಟು ಪದವಿಪೂರ್ವ ಹಂತದ ಕೋರ್ಸ್‌ಗಳಿಗೆ ಮತ್ತು ಶೇ.11.5ರಷ್ಟು ವಿದ್ಯಾರ್ಥಿಗಳು ಸ್ನಾತಕೋತ್ತರ ಮಟ್ಟದ ಕೋರ್ಸ್‌ಗಳಿಗೆ ದಾಖಲಾಗಿದ್ದಾರೆ.

ಪದವಿ ಪೂರ್ವ ಮಟ್ಟದಲ್ಲಿ ವಿದ್ಯಾರ್ಥಿಗಳ ದಾಖಲಾತಿಯು ಕಲಾ ವಿಭಾಗದಲ್ಲಿ (ಶೇ.33.5), ವಿಜ್ಞಾನ (ಶೇ.15.5), ವಾಣಿಜ್ಯ (ಶೇ.13.9) ಮತ್ತು ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗ (ಶೇ. 11.9)ದಲ್ಲಿ ದಾಖಲಾಗಿದ್ದಾರೆ. ಸ್ನಾತಕೋತ್ತರ ಹಂತಗಳಲ್ಲಿ ಗರಿಷ್ಠ ವಿದ್ಯಾರ್ಥಿಗಳು ಸಮಾಜ ವಿಜ್ಞಾನಕ್ಕೆ (ಶೇ.20.56) ನಂತರ ವಿಜ್ಞಾನ ವಿಭಾಗಕ್ಕೆ (ಶೇ.14.83) ದಾಖಲಾಗಿದ್ದಾರೆ.

ಉನ್ನತ ಶಿಕ್ಷಣದಲ್ಲಿನ ದಾಖಲಾತಿಯೂ 4.14 ಕೋಟಿಗೆ ಏರಿ ಮೊದಲ ಬಾರಿಗೆ 4 ಕೋಟಿ ಗಡಿ ದಾಟಿದೆ. 2019-20ರಿಂದ ಶೇ.7.5 ಮತ್ತು 2014-15ರಿಂದ ಶೇ.21ರಷ್ಟು ಹೆಚ್ಚಳವಾಗಿದೆ. ಮಹಿಳಾ ದಾಖಲಾತಿ 2019-20ರಿಂದ 13ಲಕ್ಷ ಹೆಚ್ಚಳ. ಎಸ್‌ಸಿ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಶೇ.28 ಮತ್ತು ಮಹಿಳಾ ಎಸ್‌ಟಿ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಶೇ.38 ರಷ್ಟು ಹೆಚ್ಚಳವಾಗಿದೆ. 2014-15ಕ್ಕೆ ಹೋಲಿಸಿದರೆ 2020-21ರಲ್ಲಿ ಎಸ್‌ಟಿ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಶೇ.47 ಮತ್ತು ಶೇ.63.4 ಮಹಿಳಾ ಎಸ್‌ಟಿ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಗಣನೀಯ ಏರಿಕೆಯಾಗಿದೆ. 2014-15ರಿಂದ ಒಬಿಸಿ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಶೇ.32 ಮತ್ತು ಮಹಿಳಾ ಒಬಿಸಿ ವಿದ್ಯಾರ್ಥಿಗಳಲ್ಲಿ ಶೇ.39 ಗಮನಾರ್ಹ ಹೆಚ್ಚಳವಾಗಿದೆ. ಇದು ಭಾರತದಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿ ಅಂಕಿಅಂಶಗಳ ಬದಲಾವಣೆ ಮತ್ತು ಅಭಿವೃದ್ಧಿಯನ್ನು ತೋರಿಸುತ್ತದೆ.

ಇದೀಗ ಸೂಕ್ಷ್ಮವಾಗಿ ಗಮನಿಸಬೇಕಾದ ಬಹುಮುಖ್ಯ ವಿಚಾರವೇನೆಂದರೆ, ವರ್ಷದಿಂದ ವರ್ಷಕ್ಕೆ ಆತ್ಮಹತ್ಯೆಯಿಂದ ಜೀವ ಕಳೆದುಕೊಳ್ಳುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯು ಹೆಚ್ಚಾಗುತ್ತಲೇ ಹೋಗುತ್ತಿದೆ. ಇದಕ್ಕೆ ಹಲವಾರು ಕಾರಣಗಳಿರಬಹುದು ಅದರಲ್ಲಿ ಗಮನಿಸಬೇಕಾದ ಮತ್ತು ಅರ್ಥ ಮಾಡಿಕೊಳ್ಳಬೇಕಾದ ಮುಖ್ಯ ಎರಡು ಕಾರಣಗಳನ್ನು ನೋಡುವುದಾದರೆ,

1. ಶೈಕ್ಷಣಿಕ ಒತ್ತಡ: ಪಾಲಕರು, ಶಿಕ್ಷಕರು ಮತ್ತು ಸಮಾಜ ವಿದ್ಯಾರ್ಥಿಗಳ ಮೇಲೆ ಹೇರುವ ಅತಿಯಾದ ನಿರೀಕ್ಷೆಗಳು. ಸಮಾಜದಲ್ಲಿ ಯಶಸ್ಸು ಮತ್ತು ಜ್ಞಾನಕ್ಕೆ ಶೈಕ್ಷಣಿಕ ಅಂಕಗಳಿಕೆಯೇ ಮಾನದಂಡವಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಪರೀಕ್ಷೆಯ ವೈಫಲ್ಯ ಹತಾಶೆಯ ಭಾವನೆಗಳಿಗೆ ಕಾರಣವಾಗಿ ಆತ್ಮಹತ್ಯೆಗಳು ಘಟಿಸುತ್ತದೆ.

2. ಮಾನಸಿಕ ಆರೋಗ್ಯ ಸಮಸ್ಯೆಗಳು: ಖಿನ್ನತೆ, ಆತಂಕ ಮತ್ತು ಬೈಪೋಲಾರ್ ಡಿಸಾರ್ಡರ್‌ನಂತಹ ಮಾನಸಿಕ ಆರೋಗ್ಯ ಸಮಸ್ಯೆಗಳು ಕೂಡಾ ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಾರಣವಾಗುತ್ತವೆ. ವಿದ್ಯಾರ್ಥಿಗಳಿಗೆ ಒತ್ತಡ, ಒಂಟಿತನ ಮತ್ತು ಬೆಂಬಲದ ಕೊರತೆಯಿಂದಾಗಿ ಈ ಪರಿಸ್ಥಿತಿಗಳು ಉಲ್ಬಣಗೊಳ್ಳುವ ಸಾಧ್ಯತೆಯಿರುತ್ತದೆ.

ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವವರ ಸಂಖ್ಯೆಯು, ಎನ್‌ಸಿಆರ್‌ಬಿ ಅಂಕಿಅಂಶಗಳ ಪ್ರಕಾರ 2017ರಲ್ಲಿ 9,905 ವಿದ್ಯಾರ್ಥಿಗಳು ಮೃತಪಟ್ಟಿದ್ದರೆ, 2020ರಲ್ಲಿ 12,526 ವಿದ್ಯಾರ್ಥಿಗಳು ಮತ್ತು 2021ರಲ್ಲಿ 13,089 ವಿದ್ಯಾರ್ಥಿಗಳು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ. 2017ರ ಆತ್ಮಹತ್ಯೆ ಸಂಖ್ಯೆಗಳಿಗೆ ಹೋಲಿಸಿದರೆ ಶೇ. 32.5ರಷ್ಟು ಜಿಗಿತವಾಗಿದೆ. 2021ರ ಆತ್ಮಹತ್ಯೆ ಸಂಖ್ಯೆಗಳ ಪ್ರಕಾರ ಪ್ರತಿದಿನ 36 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 10,732 ಆತ್ಮಹತ್ಯೆಗಳ ಪೈಕಿ 864 ಆತ್ಮಹತ್ಯೆಗಳು ಪರೀಕ್ಷೆಯ ವೈಫಲ್ಯದ ಕಾರಣದಿಂದ ಸಂಭವಿಸಿವೆ.

1995ರಿಂದ 2021ರವರೆಗೆ ದೇಶದಲ್ಲಿ 2 ಲಕ್ಷ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. (ಹೆಚ್ಚು ಮಾಹಿತಿಗಾಗಿ https://www.drishtiias.com/daily-updates/daily-news-analysis/increasing-cases-of-suicides-in-educational-hubs) 2021ರಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳ ಪೈಕಿ, ಮೊದಲ ಸ್ಥಾನದಲ್ಲಿರುವುದು ಮಹಾರಾಷ್ಟ (1,834) ಆನಂತರದ ಸ್ಥಾನದಲ್ಲಿ ಮಧ್ಯಪ್ರದೇಶ (1,308), ತಮಿಳುನಾಡು (1,246), ಕರ್ನಾಟಕ (855) ಮತ್ತು ಒಡಿಶಾ(834)ಗಳಿವೆ.

ದೇಶದಲ್ಲಿ ಕಳೆದ 5 ವರ್ಷಗಳಲ್ಲಿ ಮಹಿಳೆಯರ ಆತ್ಮಹತ್ಯೆಯು ಶೇಕಡಾವಾರು 43.49ರಷ್ಟಿದ್ದರೆ, ಪುರುಷರ ಸಂಖ್ಯೆಯುಶೇ. 56.51ರಷ್ಟಿದೆ.

ಇಂಜಿನಿಯರಿಂಗ್ (ಜೆಇಇ) ಮತ್ತು ವೈದ್ಯಕೀಯ(ನೀಟ್) ಪ್ರವೇಶ ಪರೀಕ್ಷೆಗಳ ತಯಾರಿ ಕೇಂದ್ರವಾಗಿರುವ ರಾಜಸ್ಥಾನದ ಕೋಟಾದಲ್ಲಿ ಆತ್ಮಹತ್ಯೆಯ ಸಂಖ್ಯೆಯು ಏರುತ್ತಲೇ ಇದೆ.

ಜನವರಿ 2023ರ ಹೊತ್ತಿಗೆ, 2011ರಿಂದ ಸುಮಾರು 121 ಮಂದಿ ಕೋಟಾ ಪರೀಕ್ಷಾ ತಯಾರಿ ಕೇಂದ್ರಗಳಲ್ಲಿ ಸಾವನ್ನಪ್ಪಿದ್ದಾರೆ. 2015ರಲ್ಲಿ 18, 2016ರಲ್ಲಿ 17, 2018ರಲ್ಲಿ 20, 2019ರಲ್ಲಿ 18, 2022ರಲ್ಲಿ 15, 2023ರಲ್ಲಿ 26 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ.

ಭಾರತದಲ್ಲಿ ಒಟ್ಟು 23 ಐಐಟಿಗಳು, 20 ಐಐಎಂಗಳು ಮತ್ತು 31 ಎನ್‌ಐಟಿಗಳನ್ನು ಹೊಂದಿದ್ದು, ಈ ಶಿಕ್ಷಣ ಸಂಸ್ಥೆಗಳಲ್ಲಿ ಸುಮಾರು 62,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.

ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಕೂಡ ಪ್ರತೀ ವರ್ಷವೂ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆಯು ಹೆಚ್ಚಾಗುತ್ತಲೇ ಇದೆ. ಈ ಸಂಸ್ಥೆಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳು ಕಲಿಕೆಯಲ್ಲಿ ಪ್ರತಿಭಾವಂತರಾಗಿದ್ದರೂ ಜಾತಿ ಕಿರುಕುಳ, ಪ್ರಾಧ್ಯಾಪಕರ ಕಿರುಕುಳ ಮತ್ತು ಕ್ಯಾಂಪಸ್‌ಗಳಲ್ಲಿ ನಡೆಯುತ್ತಿರುವ ರ್ಯಾಗಿಂಗ್ ಇತ್ಯಾದಿ ಕಾರಣಗಳಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಒಟ್ಟಾರೆ ಸಾಂಸ್ಥಿಕ ಕಿರುಕುಳ ಮತ್ತು ಜಾತಿ ದೌರ್ಜನ್ಯಗಳಿಂದ ಆತ್ಮಹತ್ಯೆಯ ಪ್ರಕರಣಗಳು ಹೆಚ್ಚಾಗುತ್ತಿದೆ.

ಜುಲೈ 10,2023 ರಂದು ನಡೆದ ಆಯುಶ್ ಆಷ್ನಾ ಘಟನೆ, ಸೆಪ್ಟಂಬರ್ 01,2023ರಂದು ನಡೆದ ಅನಿಲ್ ಕುಮಾರ್ ಘಟನೆ, ಫ್ರೆಬ್ರವರಿ 12, 2023ರ ಸೋಲಂಕಿ... ಪ್ರಕರಣಗಳನ್ನು ನೋಡಿದರೆ ತಿಳಿಯುತ್ತದೆ.

(ಹೆಚ್ಚಿನ ಮಾಹಿತಿಗಾಗಿ https://thewire.in/caste/two-dalit-students-suicides -in-two-months-highlight- institutionalised-discrimination-at-iits)

2021ರಲ್ಲಿ ಶಿಕ್ಷಣ ಸಚಿವಾಲಯವು ಸಂಸತ್ತಿನಲ್ಲಿ 2014-21ರ ನಡುವೆ ಐಐಟಿ, ಎನ್‌ಐಟಿ ಮತ್ತು ಕೇಂದ್ರೀಯ ವಿಶ್ವವಿದ್ಯಾನಿಲಯಗಳ ಪೈಕಿ 122 ವಿದ್ಯಾರ್ಥಿಗಳು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿತ್ತು. ಅವರಲ್ಲಿ ಶೇ. 58ರಷ್ಟು ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದವರಾಗಿದ್ದಾರೆ.

ಹೆಚ್ಚಿನ ಆತ್ಮಹತ್ಯೆಗಳು ಹಿಂದುಳಿದ ಜಾತಿಗಳಿಂದ (ಒಬಿಸಿ) ವಿಶೇಷವಾಗಿ ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ವರದಿಯಾಗಿವೆ ಎಂದು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಪ್ರಸ್ತುತಪಡಿಸಿದ ಅಂಕಿಅಂಶಗಳು ತೋರಿಸಿವೆ. 2014 ಮತ್ತು 2021ರ ನಡುವೆ ಒಬಿಸಿ ಸಮುದಾಯದ ಒಟ್ಟು 41 ವಿದ್ಯಾರ್ಥಿಗಳು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ. ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ಒಟ್ಟು 14 ಇಂತಹ ಪ್ರಕರಣಗಳು ವರದಿಯಾಗಿವೆ. ಐಐಟಿಗಳು ಮತ್ತು ಎನ್‌ಐಟಿಗಳು ಕ್ರಮವಾಗಿ 14 ಮತ್ತು 11 ಪ್ರಕರಣಗಳೊಂದಿಗೆ ನಂತರದಲ್ಲಿವೆ. ಎನ್‌ಐಟಿಗಳು ಒಂದೇ ಅವಧಿಯಲ್ಲಿ ಒಟ್ಟು 30 ವಿದ್ಯಾರ್ಥಿಗಳ ಆತ್ಮಹತ್ಯೆಯನ್ನು ವರದಿ ಮಾಡಿದೆ.

ಭಾರತದಾದ್ಯಂತ ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ 37 ವಿದ್ಯಾರ್ಥಿಗಳು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ. ಅವರಲ್ಲಿ 24 ವಿದ್ಯಾರ್ಥಿಗಳು ಪರಿಶಿಷ್ಟಜಾತಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. IISc ಬೆಂಗಳೂರು ಮತ್ತು IISERನಂತಹ ಇತರ ಪ್ರಮುಖ ಸಂಸ್ಥೆಗಳು ಒಟ್ಟು ಒಂಭತ್ತು ಆತ್ಮಹತ್ಯೆ ಸಾವುಗಳಿಗೆ ಸಾಕ್ಷಿಯಾಗಿದೆ. ಅದರಲ್ಲಿ ನಾಲ್ವರು ಮೀಸಲಾತಿ ವರ್ಗದ ವಿದ್ಯಾರ್ಥಿಗಳಾಗಿದ್ದಾರೆ.

ಐಐಟಿ, ಎನ್‌ಐಟಿ, ಐಐಎಮ್ ಶಿಕ್ಷಣ ಸಂಸ್ಥೆಗಳಲ್ಲಿ ಕಳೆದ ಐದು ವರ್ಷಗಳಲ್ಲಿ 61 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೊ ವರದಿ ಮಾಡಿದೆ. ಐಐಟಿ, ಎನ್‌ಐಟಿ, ಐಐಎಮ್ ಶಿಕ್ಷಣ ಸಂಸ್ಥೆಗಳಲ್ಲಿ 2018ರಲ್ಲಿ 11, 2019ರಲ್ಲಿ 16, 2020ರಲ್ಲಿ 5, 2022ರಲ್ಲಿ 16, 2023ರಲ್ಲಿ 6 ಆತ್ಮಹತ್ಯಾ ಪ್ರಕರಣಗಳು ದಾಖಲಾಗಿದೆ.

ಭಾರತದ ಶಿಕ್ಷಣ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಈ ಶಿಕ್ಷಣ ಸಂಸ್ಥೆಗಳಲ್ಲಿ ಆತ್ಮಹತ್ಯೆಯಿಂದ ಸಾವನ್ನಪ್ಪಿದ ಅರ್ಧದಷ್ಟು ವಿದ್ಯಾರ್ಥಿಗಳು ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ), ಆರ್ಥಿಕವಾಗಿ ದುರ್ಬಲ ವರ್ಗ (ಇಡಬ್ಲ್ಯುಎಸ್) ಮತ್ತು ಇತರ ಹಿಂದುಳಿದ ಸಮುದಾಯಗಳಿಗೆ (ಒಬಿಸಿ) ಸೇರಿದವರಾಗಿದ್ದಾರೆ ಎಂದು ಹೇಳಿದೆ.

2014-2021 ರಲ್ಲಿ 122 ಸಾವುಗಳಲ್ಲಿ 68 ರವರೆಗೆ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಾಗಿದ್ದಾರೆ.

ಎಲ್ಲಿಯವರೆಗೆ ಸಮಾಜದಲ್ಲಿ ಹಾಗೂ ಮುಂದುವರಿದ ಜಾತಿಗಳ ವಿದ್ಯಾರ್ಥಿಗಳಲ್ಲಿ ಮೀಸಲಾತಿಯ ಅರಿವು ಬೆಳೆಯುವುದಿಲ್ಲವೋ ಅಲ್ಲಿಯವರೆಗೂ ಕಾಲೇಜು ಕ್ಯಾಂಪಸ್‌ಗಳಲ್ಲಿ ಮೀಸಲಾತಿಯ ಕಾರಣಕ್ಕೆ ದಲಿತರ ಮೇಲೆ ಜಾತಿ ದೌರ್ಜನ್ಯಗಳು ನಡೆಯುತ್ತಲೇ ಇರುತ್ತದೆ. ಎಲ್ಲಿಯವರೆಗೂ ಉಚಿತ, ಗುಣಮಟ್ಟ ಶಿಕ್ಷಣವನ್ನು ಸರಕಾರಗಳು ನೀಡುವುದಿಲ್ಲವೋ ಅಲ್ಲಿಯವರೆಗೂ ಕುಟುಂಬದ ಹಣಕಾಸಿನ ಒತ್ತಡಗಳಿಂದ ವಿದ್ಯಾರ್ಥಿಗಳು ಹೊರಗೆ ಬರುವುದಕ್ಕೆ ಸಾಧ್ಯವಾಗುವುದಿಲ್ಲ. ಎಲ್ಲಿಯವರೆಗೂ ಪೋಷಕರು, ಶಿಕ್ಷಕರು ವಿದ್ಯಾರ್ಥಿಗಳ ಕೌಶಲ ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹ ನೀಡುವುದಿಲ್ಲವೋ ಅಲ್ಲಿಯವರೆಗೂ ವಿದ್ಯಾರ್ಥಿಗಳು ಮಾನಸಿಕ ಖಿನ್ನತೆಯಿಂದ ಹೊರಗೆ ಬರುವುದಕ್ಕೆ ಸಾಧ್ಯವಿಲ್ಲ. ಆತ್ಮಹತ್ಯೆಗಳೂ ನಿಲ್ಲುವುದಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಮನೋಜ್ ಆಝಾದ್

contributor

Similar News