55ನೇ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವ

‘ಐಎಫ್‌ಎಫ್‌ಐ-2024’ ಭಾರತೀಯ ಚಿತ್ರರಂಗದ ಪರಿವರ್ತನಾತ್ಮಕ ಕ್ಷಣವನ್ನು ಅನುಭವಕ್ಕೆ ತರುತ್ತದೆ. ಇದು ಭಾರತೀಯ ಚಲನಚಿತ್ರ ನಿರ್ಮಾಪಕರನ್ನು ವಿಶ್ವ ವೇದಿಕೆಗೆ ತಲುಪಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಕಲೆಯಲ್ಲಿ ಜಾಗತಿಕ ನಾಯಕನಾಗಬೇಕೆಂಬ ಭಾರತದ ಆಕಾಂಕ್ಷೆಗಳಿಗೆ ಅನುಗುಣವಾಗಿ ಉದಯೋನ್ಮುಖ ಪ್ರತಿಭೆಗಳು, ಜಾಗತಿಕ ಸಹಯೋಗ ಮತ್ತು ಸಾಂಸ್ಕೃತಿಕ ವಿನಿಮಯಕ್ಕೆ ಈ ಉತ್ಸವವು ಒತ್ತು ನೀಡುತ್ತದೆ. ಉದ್ಯಮ ಉಪಕ್ರಮಗಳು, ಹೊಸ ಪ್ರತಿಭೆಗಳನ್ನು ಗುರುತಿಸುವುದು ಮತ್ತು ಸಿನಿಮೀಯ ಪರಂಪರೆಯ ಆಚರಣೆಯು ‘ಐಎಫ್‌ಎಫ್‌ಐ’ನ ವಿಶಿಷ್ಟ ಸಂಯೋಜನೆಯಾಗಿದ್ದು, ಭಾರತೀಯ ಸಿನೆಮಾದ ಬೆಳವಣಿಗೆಯಲ್ಲಿ ಮತ್ತು ಜಾಗತಿಕ ವೇದಿಕೆಯಲ್ಲಿ ಪ್ರಮುಖ ಪಾತ್ರ ವಹಿಸಲು ಅನುವು ಮಾಡಿಕೊಡುತ್ತದೆ.

Update: 2024-11-15 06:32 GMT

55ನೇ ‘ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವ’ (ಐಎಫ್‌ಎಫ್‌ಐ) 2024ರ ನವೆಂಬರ್ 20ರಿಂದ 28ರವರೆಗೆ ನಡೆಯಲಿದ್ದು, ಗೋವಾದ ಸುಂದರ ಕರಾವಳಿಗೆ ಸಿನಿಮೀಯ ಆಚರಣೆಯ ಹೊಸ ಅಲೆಯನ್ನು ತರಲು ಸಜ್ಜಾಗಿದೆ. ಈ ವರ್ಷದ ಉತ್ಸವವು ಕೇವಲ ಚಲನಚಿತ್ರ ಪ್ರದರ್ಶನಕ್ಕಿಂತ ಮೀರಿದ ಭರವಸೆ ಒಳಗೊಂಡಿದೆ. ಇದು ಜಾಗತಿಕ ಸಂಸ್ಕೃತಿಗಳ ಸಂಯೋಜನೆ, ಉದಯೋನ್ಮುಖ ಧ್ವನಿಗಳಿಗೆ ವೇದಿಕೆ ಮತ್ತು ಭಾರತದ ಸಿನಿಮೀಯ ಪರಂಪರೆಗೆ ಆಳವಾದ ಗೌರವಕ್ಕೆ ಸಾಕ್ಷಿಯಾಗಲಿದೆ. ‘ಐಎಫ್‌ಎಫ್‌ಐ-2024’ ತನ್ನದೇ ಆದ ವಿಕಾಸದಲ್ಲಿ ಒಂದು ದಿಟ್ಟ ಹೆಜ್ಜೆಯಾಗಿದೆ. ಅಷ್ಟೇ ಅಲ್ಲದೆ, ಜಾಗತಿಕ ವೇದಿಕೆಯಲ್ಲಿ ಭಾರತದ ರೋಮಾಂಚಕ ಸಂಸ್ಕೃತಿ ಮತ್ತು ಸಿನೆಮಾ ಕಲೆ ಎರಡನ್ನೂ ಆಚರಿಸುವ ವಿಶಿಷ್ಟ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವವೂ ಹೌದು.

ಈ ವರ್ಷ ಆಸ್ಟ್ರೇಲಿಯವನ್ನು ‘ಐಎಫ್‌ಎಫ್‌ಐ’ ತನ್ನ ಗಮನ ಕೇಂದ್ರೀಕರಿಸುವ ದೇಶ (ಕಂಟ್ರಿ ಆಫ್ ಫೋಕಸ್) ಎಂದು ಗುರುತಿಸಲಿದ್ದು, ಆ ಮೂಲಕ ಸಂಸ್ಕೃತಿಗಳನ್ನು ಬೆಸೆಯುವ ಮತ್ತು ಅಂತರ್‌ರಾಷ್ಟ್ರೀಯ ತಿಳುವಳಿಕೆಯನ್ನು ಬೆಳೆಸುವ ಉತ್ಸವದ ಬದ್ಧತೆಯನ್ನು ಒತ್ತಿಹೇಳುತ್ತದೆ. ಈ ವಿಭಾಗವು ಆಸ್ಟ್ರೇಲಿಯದ ಸಿನೆಮಾದ ಹೃದಯ ಭಾಗಕ್ಕೆ ಪ್ರವೇಶಿಸಲು ಭಾರತೀಯ ಪ್ರೇಕ್ಷಕರಿಗೆ ಅನುವು ಮಾಡಿಕೊಡುತ್ತದೆ. ಗಂಭೀರ ನಾಟಕಗಳಿಂದ ಹಿಡಿದು ಸಾಹಸಮಯ ಹಾಸ್ಯಗಳು ಮತ್ತು ಪ್ರತಿಫಲನಾತ್ಮಕ ಸಾಕ್ಷ್ಯಚಿತ್ರಗಳವರೆಗಿನ ಚಲನಚಿತ್ರಗಳ ಉತ್ಕೃಷ್ಟ ಆಯ್ಕೆಯನ್ನು ಅನ್ವೇಷಿಸುತ್ತದೆ. ಈ ಕೇಂದ್ರೀಕೃತ ದೃಷ್ಟಿಕೋನದ ಮೂಲಕ, ಪ್ರೇಕ್ಷಕರು ಆಸ್ಟ್ರೇಲಿಯದ ವಿಶಿಷ್ಟ ಮತ್ತು ವಿಕಸನಗೊಳ್ಳುತ್ತಿರುವ ಸಿನಿಮೀಯ ಭಾಷೆಯನ್ನು ಅನುಭವಿಸಬಹುದು. ಆ ಮೂಲಕ ಈ ಚಲನಚಿತ್ರೋತ್ಸವವು ಪರಸ್ಪರ ಅಂತರ್-ಸಂಸ್ಕೃತಿ ಮನ್ನಣೆ ಮತ್ತು ಸಂವಾದಕ್ಕೆ ಪ್ರಬಲ ವೇದಿಕೆ ಒದಗಿಸುತ್ತದೆ. ಹಾಗೆ ಮಾಡುವ ಮೂಲಕ, ‘ಐಎಫ್‌ಎಫ್‌ಐ-2024’ ತನ್ನ ವ್ಯಾಪ್ತಿಯಲ್ಲಿ ಸಾಂಪ್ರದಾಯಿಕ ಚಲನಚಿತ್ರ ಪ್ರದರ್ಶನದ ಗಡಿಗಳನ್ನು ಮೀರಿ ವಿಸ್ತರಿಸುತ್ತದೆ. ಈ ಚಿತ್ರೋತ್ಸವವನ್ನು ವಿಶ್ವದ ಕಥೆಗಳು, ಜನರು ಮತ್ತು ಸಂಸ್ಕೃತಿಗಳ ನಡುವಿನ ಸೇತುವೆಯಾಗಿ ಇರಿಸುತ್ತದೆ.

‘ಐಎಫ್‌ಎಫ್‌ಐ-2024’ನ ಹೊಸ ಸೇರ್ಪಡೆಯೆಂದರೆ, ಭಾರತೀಯ ಚಲನಚಿತ್ರದ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿ. ಇದು ಮುಂದಿನ ಪೀಳಿಗೆಯ ಭಾರತೀಯ ಚಲನಚಿತ್ರ ನಿರ್ಮಾಪಕರ ಮೇಲೆ ಬೆಳಕು ಚೆಲ್ಲುತ್ತದೆ. ಈ ಪ್ರಶಸ್ತಿ ಕೇವಲ ಮನ್ನಣೆಯಲ್ಲ; ಇದು ಯುವ ನಿರ್ದೇಶಕರ ವೃತ್ತಿಜೀವನದಲ್ಲಿ ಒಂದು ಪ್ರಮುಖ ಕ್ಷಣವಾಗಿದ್ದು, ಭಾರತೀಯ ಚಿತ್ರರಂಗದಲ್ಲಿ ಹೊಸ ದೃಷ್ಟಿಕೋನಗಳಿಗೆ ಹಾದಿ ಮಾಡಿಕೊಡುತ್ತದೆ. ಚೊಚ್ಚಲ ನಿರ್ದೇಶಕರಿಗೆ ಈ ವರ್ಗವನ್ನು ಅರ್ಪಿಸುವ ಮೂಲಕ, ನವೀನ ಧ್ವನಿಗಳನ್ನು ಪೋಷಿಸುವ ಮತ್ತು ಹೆಚ್ಚುತ್ತಿರುವ ಸ್ಪರ್ಧಾತ್ಮಕ ಉದ್ಯಮದಲ್ಲಿ ಅವರಿಗೆ ಮನ್ನಣೆ ಪಡೆಯಲು ನೆರವಾಗುವ ಬದ್ಧತೆಯನ್ನು ‘ಐಎಫ್‌ಎಫ್‌ಐ’ ಸಂಕೇತಿಸುತ್ತದೆ. ಅನೇಕ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವಗಳು ಸ್ಥಾಪಿತ ಪ್ರತಿಭೆಗಳ ಮೇಲೆ ಗಮನ ಕೇಂದ್ರೀಕರಿಸುತ್ತವೆ. ಆದರೆ, ‘ಐಎಫ್‌ಎಫ್‌ಐ’ ಚೊಚ್ಚಲ ಚಲನಚಿತ್ರ ನಿರ್ದೇಶಕರನ್ನು ಗುರುತಿಸುವುದು, ಅವರ ಬೆಳವಣಿಗೆಯನ್ನು ಉತ್ತೇಜಿಸುವುದು ಮತ್ತು ಭಾರತೀಯ ಸಿನೆಮಾದ ಭವಿಷ್ಯವನ್ನು ರೂಪಿಸಲು ಪ್ರಯತ್ನಿಸುತ್ತದೆ. ಇದು ಈ ನಿಟ್ಟಿನಲ್ಲಿ ‘ಐಐಎಫ್‌ಐ’ನ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ.

ಈ ವರ್ಷದ ಚಿತ್ರೋತ್ಸವದಲ್ಲಿ ಭಾರತೀಯ ಚಿತ್ರರಂಗದ ನಾಲ್ಕು ಅಪ್ರತಿಮ ರತ್ನಗಳಾದ -ರಾಜ್ ಕಪೂರ್, ತಪನ್ ಸಿನ್ಹಾ, ಅಕ್ಕಿನೇನಿ ನಾಗೇಶ್ವರ ರಾವ್ (ಎಎನ್‌ಆರ್) ಮತ್ತು ಮುಹಮ್ಮದ್ ರಫಿ ಅವರಿಗೆ ಗೌರವ ಸಲ್ಲಿಸಲಾಗುವುದು. ಚಿತ್ರೋದ್ಯಮದ ಈ ದಂತಕಥೆಗಳು ಭಾರತದ ಸಿನಿಮೀಯ ಪರಂಪರೆಯನ್ನು ರೂಪಿಸಿದ್ದಾರೆ ಮತ್ತು ತಲೆಮಾರುಗಳಾದ್ಯಂತ ಪ್ರೇಕ್ಷಕರ ಹೃದಯವನ್ನು ಗೆದ್ದಿದ್ದಾರೆ. ಮರುಸಂಸ್ಕರಿತ ಕ್ಲಾಸಿಕ್ ಚಿತ್ರಗಳು ಮತ್ತು ವಿಶೇಷವಾಗಿ ಆಯ್ದ ಶ್ರೇಷ್ಠ ಪ್ರಸ್ತುತಿಗಳ ಮೂಲಕ, ‘ಐಎಫ್‌ಎಫ್‌ಐ’ ಈ ದಂತಕತೆಗಳ ಕಲಾತ್ಮಕತೆಗೆ ಜೀವ ತುಂಬಿ ಹೊಸ ಪೀಳಿಗೆಯ ಮುಂದಿರಿಸುತ್ತದೆ. ಜೊತೆಗೆ, ಜಾಗತಿಕ ವೀಕ್ಷಕರಿಗೆ ಭಾರತದ ಶ್ರೀಮಂತ ಸಿನಿಮೀಯ ಇತಿಹಾಸದ ಅರ್ಥಪೂರ್ಣ ನೋಟವನ್ನು ಒದಗಿಸುತ್ತದೆ. ಈ ಗೌರವವು ಭಾರತೀಯ ಸಿನೆಮಾದ ಆಳ, ಸಂಸ್ಕೃತಿಯ ಮೇಲೆ ಅದರ ಪರಿವರ್ತನಾತ್ಮಕ ಪ್ರಭಾವ ಮತ್ತು ಈ ರೂವಾರಿಗಳ ಶಾಶ್ವತ ಪ್ರಸ್ತುತತೆಯನ್ನು ನೆನಪಿಸುತ್ತದೆ.

‘ಐಎಫ್‌ಎಫ್‌ಐ’ನ ‘ಫಿಲ್ಮ್ ಬಜಾರ್’ ಈಗ ತನ್ನ 18ನೇ ವರ್ಷಕ್ಕೆ ಕಾಲಿಟ್ಟಿದೆ. ಇದು ಚಲನಚಿತ್ರ ನಿರ್ಮಾಪಕರು, ಹಣಕಾಸು ಒದಗಿಸುವವರು, ವಿತರಕರು ಮತ್ತು ಅಂತರ್‌ರಾಷ್ಟ್ರೀಯ ಉದ್ಯಮದ ನಾಯಕರನ್ನು ಒಟ್ಟುಗೂಡಿಸುವ ಕ್ರಿಯಾತ್ಮಕ ಮಾರುಕಟ್ಟೆಯಾಗಿದೆ. ‘ಫಿಲ್ಮ್ ಬಜಾರ್’ನ ‘ವೀಕ್ಷಣಾ ಕೊಠಡಿ’ಯಲ್ಲಿ 200ಕ್ಕೂ ಹೆಚ್ಚು ಚಲನಚಿತ್ರಗಳು ಪ್ರದರ್ಶನಗೊಂಡಿದ್ದು, ಹೊಸ ಕಥೆಗಳು, ಹೂಡಿಕೆದಾರರನ್ನು ಹುಡುಕುವ, ಚಲನಚಿತ್ರಗಳು ವಿತರಕರೊಂದಿಗೆ ಸಂಪರ್ಕ ಸಾಧಿಸುವ ಮತ್ತು ಸಹಯೋಗಗಳಿಗೆ ಇದು ವೇದಿಕೆಯಾಗಿದೆ. ಈ ವಿಶೇಷ ವೇದಿಕೆಯು ‘ಐಎಫ್‌ಎಫ್‌ಐ’ ಅನ್ನು ಇತರ ಚಲನ ಚಿತ್ರೋತ್ಸವಗಳಿಗಿಂತ ವಿಶೇಷವಾಗಿಸುತ್ತದೆ. ಚಿತ್ರೋತ್ಸವದ ವ್ಯಾಪ್ತಿಯನ್ನು ಮೀರಿ ಸಿನೆಮಾದ ಯೋಜನೆಗಳು ಬೆಳೆಯಲು ಮತ್ತು ಪ್ರವರ್ಧಮಾನಕ್ಕೆ ಬರಲು ಅವಕಾಶಗಳನ್ನು ಸೃಷ್ಟಿಸುತ್ತದೆ. ಭಾರತೀಯ ಮತ್ತು ಅಂತರ್‌ರಾಷ್ಟ್ರೀಯ ಚಲನಚಿತ್ರ ನಿರ್ಮಾಪಕರಿಗೆ, ಜಾಗತಿಕ ಪ್ರೇಕ್ಷಕರಿಗೆ ಪ್ರವೇಶದ್ವಾರವನ್ನು ‘ಫಿಲ್ಮ್ ಬಜಾರ್’ ಒದಗಿಸುತ್ತದೆ. ಜೊತೆಗೆ, ಭವಿಷ್ಯದ ಯೋಜನೆಗಳಿಗೆ ಸಂಪರ್ಕಜಾಲ ಮತ್ತು ಬೆಂಬಲವನ್ನು ಪಡೆಯಲು ಅಪರೂಪದ ಅವಕಾಶವನ್ನು ಕಲ್ಪಿಸುತ್ತದೆ.

‘ಐಎಫ್‌ಎಫ್‌ಐ’ನ ‘ಇಂಡಿಯನ್ ಪನೋರಮಾ’ ವಿಭಾಗವು ಉತ್ಸವದ ಹೆಗ್ಗುರುತಾಗಿದ್ದು, ಪ್ರೇಕ್ಷಕರಿಗೆ ಸಮಕಾಲೀನ ಭಾರತೀಯ ಸಿನೆಮಾದ ವೈವಿಧ್ಯಮಯ ಆಯ್ಕೆಯನ್ನು ಮುಂದಿಡುತ್ತದೆ. 25 ಚಲನಚಿತ್ರಗಳು ಮತ್ತು 20 ನಾನ್-ಫೀಚರ್ ಚಲನಚಿತ್ರಗಳನ್ನು ಅವುಗಳ ಸಿನಿಮೀಯ ಉತ್ಕೃಷ್ಟತೆ, ವಿಷಯಾಧಾರಿತ ಅನುರಣನ ಮತ್ತು ಸೌಂದರ್ಯದ ಸೃಜನಶೀಲತೆಗಾಗಿ ಆಯ್ಕೆ ಮಾಡಲಾಗಿದ್ದು, ‘ಇಂಡಿಯನ್ ಪನೋರಮಾ’ ಭಾರತೀಯ ಕಥೆ ಹೇಳುವ ಉತ್ಸಾಹ ಮತ್ತು ವೈವಿಧ್ಯವನ್ನು ಪ್ರದರ್ಶಿಸುತ್ತದೆ. ಅಂತರ್‌ರಾಷ್ಟ್ರೀಯ ಭಾಗಿದಾರರಿಗೆ, ಇದು ಭಾರತದ ಸಾಮಾಜಿಕ-ಸಾಂಸ್ಕೃತಿಕ ಭೂದೃಶ್ಯದ ಬಗ್ಗೆ ಅಧಿಕೃತ ಒಳನೋಟವನ್ನು ಒದಗಿಸುತ್ತದೆ. ಪ್ರಾದೇಶಿಕ ನಿರೂಪಣೆಗಳಿಂದ ಹಿಡಿದು ಹೊಸ ಚೊಚ್ಚಲ ಪ್ರಯೋಗಗಳವರೆಗೆ ಎಲ್ಲವನ್ನೂ ಬೆಳಕಿಗೆ ತರುತ್ತದೆ. ಈ ವಿಭಾಗವು ಭಾರತೀಯ ಸಿನೆಮಾವನ್ನು ಅದರ ಎಲ್ಲಾ ಆಳ ಮತ್ತು ವೈವಿಧ್ಯತೆಯಲ್ಲಿ ಪ್ರಸ್ತುತಪಡಿಸುವ ‘ಐಎಫ್‌ಎಫ್‌ಐ’ನ ಧ್ಯೇಯವನ್ನು ಬಲಪಡಿಸುತ್ತದೆ, ಇದು ಜಾಗತಿಕ ಚಲನಚಿತ್ರ ಸಂವಾದದ ಅಮೂಲ್ಯ ಭಾಗವಾಗಿದೆ.

ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ‘ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ’ವು(ಎನ್‌ಎಫ್‌ಡಿಸಿ) ಯುವ ಚಲನಚಿತ್ರ ನಿರ್ಮಾಪಕರನ್ನು ಪೋಷಿಸಲು ರೂಪಿಸಿರುವ ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ(ಸಿಎಂಒಟಿ) ಕಾರ್ಯಕ್ರಮವು ‘ಐಎಫ್‌ಎಫ್‌ಐ-2024’ರ ಅತ್ಯುತ್ತಮ ಉಪಕ್ರಮಗಳಲ್ಲಿ ಒಂದಾಗಿದೆ. ಕಿರುಚಿತ್ರಗಳು, ಸಾಕ್ಷ್ಯಚಿತ್ರಗಳು ಮತ್ತು ಅನಿಮೇಷನ್‌ಗಳನ್ನು ಪ್ರದರ್ಶಿಸಲು ಉದಯೋನ್ಮುಖ ಧ್ವನಿಗಳಿಗೆ ‘ಸಿಎಂಒಟಿ’ ಒಂದು ವೇದಿಕೆಯನ್ನು ಒದಗಿಸುತ್ತದೆ, ಜೊತೆಗೆ ಅನುಭವಿ ಉದ್ಯಮ ವೃತ್ತಿಪರರೊಂದಿಗೆ ಸಂಪರ್ಕವನ್ನು ಸುಗಮಗೊಳಿಸುತ್ತದೆ. ‘ಸಿಎಂಒಟಿ’ ಮೂಲಕ, ಯುವ ಪ್ರತಿಭೆಗಳನ್ನು ‘ಐಎಫ್‌ಎಫ್‌ಐ’ ಅನಾವರಣಗೊಳಿಸುವುದಲ್ಲದೆ, ಮುಂದಿನ ಪೀಳಿಗೆಯ ಭಾರತೀಯ ಚಲನಚಿತ್ರ ನಿರ್ಮಾಪಕರಿಗೆ ಹೊಸ ಸಂಪನ್ಮೂಲಗಳು ಹಾಗೂ ಸಂಪರ್ಕಗಳನ್ನು ಒದಗಿಸುತ್ತದೆ. ಈ ಉಪಕ್ರಮವು ಕೇವಲ ಆಚರಣೆಗೆ ಸೀಮಿತವಾಗದೆ, ಸೃಜನಶೀಲತೆ ಮತ್ತು ಬೆಳವಣಿಗೆಯನ್ನು ಪೋಷಿಸುವ ‘ಐಎಫ್‌ಎಫ್‌ಐ’ನ ಪಾತ್ರವನ್ನು ಗಟ್ಟಿಗೊಳಿಸುತ್ತದೆ.

‘ಕೇನ್ಸ್-2024’ ಚಲನಚಿತ್ರೋತ್ಸವದಲ್ಲಿ ವಿಶ್ವದ ಗಮನವನ್ನು ಸೆಳೆದ ‘ಭಾರತ್ ಪರ್ವ್’ನ ಅಂಶಕ್ಕೆ ಅನುಗುಣವಾಗಿ, ‘ಐಎಫ್‌ಎಫ್‌ಐ’ ಭಾರತದ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯ ಆಚರಣೆಯನ್ನು ಮುಂದೆ ತರಲಿದೆ. ಭಾರತದ ಶ್ರೀಮಂತ ಸಂಪ್ರದಾಯಗಳು ಮತ್ತು ವಿವಿಧತೆಯಲ್ಲಿ ಏಕತೆಯನ್ನು ಎತ್ತಿ ತೋರುವ ‘ಭಾರತ್ ಪರ್ವ್’, ‘ಐಎಫ್‌ಎಫ್‌ಐ’ನಲ್ಲಿ ತನ್ನ ಸಿನಿಮೀಯ ಅಭಿವ್ಯಕ್ತಿಯನ್ನು ಕಂಡುಕೊಳ್ಳಲಿದೆ. ಚಲನಚಿತ್ರಗಳು, ಕಾರ್ಯಕ್ರಮಗಳು ಭಾರತದ ಬಹುಮುಖಿ ಗುರುತನ್ನು ಪ್ರತಿಬಿಂಬಿಸುತ್ತವೆ. ಭಾರತೀಯ ಸಂಸ್ಕೃತಿಯ ಈ ಆಚರಣೆಯು ಅಂತರ್‌ರಾಷ್ಟ್ರೀಯ ಸಂದರ್ಶಕರಿಗೆ ಭಾರತದ ಕಥೆಯ ಆಳವಾದ ಅನುಭವ ಮತ್ತು ಆಳವಾದ ತಿಳುವಳಿಕೆಯನ್ನು ಒದಗಿಸುತ್ತದೆ. ಸಿನೆಮಾದ ಶಕ್ತಿಯುತ ಮಸೂರದ ಮೂಲಕ ಭಾರತದ ಪರಂಪರೆ ವೀಕ್ಷಣೆಗೆ ಬಾಗಿಲು ತೆರೆಯುತ್ತದೆ.

‘ಐಎಫ್‌ಎಫ್‌ಐ-2024’ ಭಾರತೀಯ ಚಿತ್ರರಂಗದ ಪರಿವರ್ತನಾತ್ಮಕ ಕ್ಷಣವನ್ನು ಅನುಭವಕ್ಕೆ ತರುತ್ತದೆ. ಇದು ಭಾರತೀಯ ಚಲನಚಿತ್ರ ನಿರ್ಮಾಪಕರನ್ನು ವಿಶ್ವ ವೇದಿಕೆಗೆ ತಲುಪಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಕಲೆಯಲ್ಲಿ ಜಾಗತಿಕ ನಾಯಕನಾಗಬೇಕೆಂಬ ಭಾರತದ ಆಕಾಂಕ್ಷೆಗಳಿಗೆ ಅನುಗುಣವಾಗಿ ಉದಯೋನ್ಮುಖ ಪ್ರತಿಭೆಗಳು, ಜಾಗತಿಕ ಸಹಯೋಗ ಮತ್ತು ಸಾಂಸ್ಕೃತಿಕ ವಿನಿಮಯಕ್ಕೆ ಈ ಉತ್ಸವವು ಒತ್ತು ನೀಡುತ್ತದೆ. ಉದ್ಯಮ ಉಪಕ್ರಮಗಳು, ಹೊಸ ಪ್ರತಿಭೆಗಳನ್ನು ಗುರುತಿಸುವುದು ಮತ್ತು ಸಿನಿಮೀಯ ಪರಂಪರೆಯ ಆಚರಣೆಯು ‘ಐಎಫ್‌ಎಫ್‌ಐ’ನ ವಿಶಿಷ್ಟ ಸಂಯೋಜನೆಯಾಗಿದ್ದು, ಭಾರತೀಯ ಸಿನೆಮಾದ ಬೆಳವಣಿಗೆಯಲ್ಲಿ ಮತ್ತು ಜಾಗತಿಕ ವೇದಿಕೆಯಲ್ಲಿ ಪ್ರಮುಖ ಪಾತ್ರ ವಹಿಸಲು ಅನುವು ಮಾಡಿಕೊಡುತ್ತದೆ.

ಈ ವರ್ಷದ ಆವೃತ್ತಿಯು ಉದ್ಯಮದ ಮೇಲೆ ಅಳಿಸಲಾಗದ ಪ್ರಭಾವವನ್ನು ಬೀರುವ ಭರವಸೆ ನೀಡಲಿದೆ. ‘ಐಎಫ್‌ಎಫ್‌ಐ’ ಅನ್ನು ಭಾರತದ ಸಿನಿಮೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹಾಗೂ ಸಿನೆಮಾದ ಭವಿಷ್ಯವನ್ನು ಸಕ್ರಿಯವಾಗಿ ರೂಪಿಸುವ ಉತ್ಸವವೆಂದು ಮರು ವ್ಯಾಖ್ಯಾನಿಸಲಿದೆ.

ಅಂತರ್‌ರಾಷ್ಟ್ರೀಯ ಚಲನಚಿತ್ರ ನಿರ್ಮಾಪಕರಿಗೆ, ‘ಐಎಫ್‌ಎಫ್‌ಐ-2024’ ಭಾರತದ ರೋಮಾಂಚಕ ಸಿನಿಮೀಯ ಭೂದೃಶ್ಯದೊಂದಿಗೆ ಸಂಪರ್ಕ ಸಾಧಿಸಲು ಸಾಟಿಯಿಲ್ಲದ ಅವಕಾಶವನ್ನು ನೀಡುತ್ತದೆ. ವೈವಿಧ್ಯಮಯ ಭಾರತೀಯ ಪ್ರೇಕ್ಷಕರಿಗೆ ಮಾನ್ಯತೆ, ‘ಫಿಲ್ಮ್ ಬಜಾರ್’ನ ಸಂಪನ್ಮೂಲಗಳಿಗೆ ಪ್ರವೇಶ ಹಾಗೂ ಆಸ್ಟ್ರೇಲಿಯದ ಅನಾವರಣದಂತಹ ವಿಭಾಗಗಳ ಮೂಲಕ ಅಂತರ್‌ರಾಷ್ಟ್ರೀಯ ಚಲನಚಿತ್ರ ನಿರ್ಮಾಪಕರಿಗೆ ಭಾರತದ ಅಭಿರುಚಿ, ಪ್ರವೃತ್ತಿಗಳು ಮತ್ತು ಅವಕಾಶಗಳ ಬಗ್ಗೆ ಒಳನೋಟಗಳನ್ನು ‘ಐಎಫ್‌ಎಫ್‌ಐ’ ಒದಗಿಸಲಿದೆ. ಅಪ್ರತಿಮ ಭಾರತೀಯ ಕಲಾವಿದರಿಗೆ ‘ಐಎಫ್‌ಎಫ್‌ಐ’ ಸಲ್ಲಿಸುವ ಗೌರವವು ಶ್ರೀಮಂತ ಸಾಂಸ್ಕೃತಿಕ ಸಂದರ್ಭಕ್ಕೆ ವೇದಿಕೆ ಒದಗಿಸುತ್ತದೆ. ಇದು ಅಂತರ್‌ರಾಷ್ಟ್ರೀಯ ಅತಿಥಿಗಳಿಗೆ ಭಾರತೀಯ ಸಿನೆಮಾದ ಪರಂಪರೆ ಮತ್ತು ಕೊಡುಗೆಗಳನ್ನು ಪ್ರಶಂಸಿಸಲು ಅನುವು ಮಾಡಿಕೊಡುತ್ತದೆ. ಈ ಸಂವಾದಗಳ ಮೂಲಕ, ಭಾರತೀಯ ಮತ್ತು ಜಾಗತಿಕ ಸಿನೆಮಾ ಎರಡನ್ನೂ ಶ್ರೀಮಂತಗೊಳಿಸುವ ವಿಶಿಷ್ಟ, ಸಹಯೋಗದ ವಾತಾವರಣವನ್ನು ‘ಐಎಫ್‌ಎಫ್‌ಐ’ ಸೃಷ್ಟಿಸುತ್ತದೆ.

55ನೇ ಅಂತರ್‌ರಾಷ್ಟ್ರೀಯ ಚಲನ ಚಿತ್ರೋತ್ಸವವು, ಸಂಪ್ರದಾಯವನ್ನು ಮುಂದಾಲೋಚನೆಯ ನಾವೀನ್ಯತೆಯೊಂದಿಗೆ ಸಂಯೋಜಿಸುವ ಉತ್ಸವವಾಗಿದೆ. ಇದು ನಾಳೆಯ ಧ್ವನಿಗಳಿಗೆ ಕಿವಿಯಾಗುವ ಜೊತೆಗೆ ಭಾರತೀಯ ಚಿತ್ರರಂಗದ ಅಪ್ರತಿಮ ತಾರೆಗಳಿಗೆ ಗೌರವ ಸಲ್ಲಿಸುತ್ತದೆ. ‘ಭಾರತ್ ಪರ್ವ್’ನ ಆಶಯದಿಂದ ಹಿಡಿದು, ಮೊದಲ ಬಾರಿ ನಿರ್ದೇಶನ ಮಾಡುವ ಉದಯೋನ್ಮುಖ ಪ್ರತಿಭೆಗಳಿಗೆ ಹೊಸ ಪ್ರಶಸ್ತಿಯವರೆಗೆ ಚಿತ್ರರಂಗದ ವಿಕಸನದ ಸ್ವರೂಪವನ್ನು ‘ಐಎಫ್‌ಎಫ್‌ಐ-2024’ ಸಾಕಾರಗೊಳಿಸುತ್ತದೆ. ಸಂಪರ್ಕದ ಸಾಧನವಾಗಿ ಕಥೆ ಹೇಳುವ ಶಕ್ತಿಯನ್ನು ಆಚರಿಸುತ್ತದೆ. ಈ ಉತ್ಸವವು ಅಂತರ್‌ರಾಷ್ಟ್ರೀಯ ಚಲನಚಿತ್ರ ನಿರ್ಮಾಪಕರು, ಉದ್ಯಮದ ನಾಯಕರು ಮತ್ತು ಪ್ರೇಕ್ಷಕರನ್ನು ಒಟ್ಟಿಗೆ ಸೆಳೆಯುವುದರಿಂದ, ಇದು ಭಾರತಕ್ಕೆ ಜಾಗತಿಕ ಸಿನೆಮಾ ಕ್ಷೇತ್ರದಲ್ಲಿ ಪ್ರಮುಖ ಸ್ಥಾನ ಕಲ್ಪಿಸುತ್ತದೆ. ‘ಐಎಫ್‌ಎಫ್‌ಐ’ ಅನ್ನು ಶಾಶ್ವತ ಪರಿಣಾಮ ಮತ್ತು ದೂರದೃಷ್ಟಿಯ ಉತ್ಸವವೆಂದು ಪುನರುಚ್ಚರಿಸುತ್ತದೆ.

(ಲೇಖಕರು ‘ಐಎಫ್‌ಎಫ್‌ಐ’ನ ಮಾಜಿ ಹೆಚ್ಚುವರಿ ಡಿಜಿ ಮತ್ತು ಚಿತ್ರೋತ್ಸವದ ನಿರ್ದೇಶಕರು)

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ಜಾರ್ಜ್ ಮ್ಯಾಥ್ಯು

contributor

Similar News