ವನ್ಯ ಜೀವಿಗಳಿಗೆ ಪೂರಕವಾದ 2 ಲಕ್ಷ ಹಣ್ಣಿನ ಗಿಡ ನೆಡುವ ಅಭಿಯಾನ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬವನ್ನು ಕೇಂದ್ರೀಕರಿಸಿಕೊಂಡು ಕಾರ್ಯಾಚರಿಸುತ್ತಿರುವ ‘ಪಶ್ಚಿಮ ಘಟ್ಟಗಳ ವನ್ಯಜೀವಿ ಸಂರಕ್ಷಣಾ ಟ್ರಸ್ಟ್(ರಿ)’ ಈ ವರ್ಷ ವನ್ಯಜೀವಿಗಳಿಗೆ ಪೂರಕವಾದ ಸುಮಾರು ಎರಡು ಲಕ್ಷಕ್ಕೂ ಅಧಿಕ ಹಣ್ಣಿನ ಗಿಡಗಳನ್ನು ನೆಡುವ ಅಭಿಯಾನ ನಡೆಸಲು ಮುಂದಾಗಿದೆ.
ಮಳೆಗಾಲ ಆರಂಭವಾಗುತ್ತಲೇ ಪಶ್ಚಿಮ ಘಟ್ಟ ತಪ್ಪಲು ಪ್ರದೇಶವಲ್ಲದೆ ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು ಜಿಲ್ಲೆಗಳ ಕಾಡು ಮತ್ತು ಕಾಡಂಚಿನಲ್ಲಿ ಹಣ್ಣಿನ ಗಿಡಗಳನ್ನು ನೆಡಲು ಟ್ರಸ್ಟ್ ನಿರ್ಧರಿಸಿದೆ.
‘ಅರಣ್ಯ ಉಳಿಸಿ-ಪರಿಸರ ಬೆಳೆಸಿ’ ಘೋಷಣೆಯಡಿ 2023ರಲ್ಲಿ ಕೇವಲ 11 ಮಂದಿ ಪರಿಸರ ಮತ್ತು ವನ್ಯಜೀವಿ ಪ್ರೇಮಿಗಳಿಂದ ಆರಂಭಗೊಂಡ ಈ ಟ್ರಸ್ಟ್, ಅರಣ್ಯ ಇಲಾಖೆಯ ಸಹಕಾರದಿಂದ ಕಳೆದ ವರ್ಷ ಸಾವಿರಾರು ಹಣ್ಣಿನ ಗಿಡಗಳನ್ನು ನೆಟ್ಟಿತ್ತು. ಈ ಬಾರಿ ಸುಮಾರು 2 ಲಕ್ಷಕ್ಕೂ ಅಧಿಕ ಹಣ್ಣಿನ ಗಿಡಗಳನ್ನು ಅಭಿಯಾನ ಆರಂಭಿಸಲಿದೆ.
ಸಾಮಾನ್ಯವಾಗಿ ಆಹಾರ ಅರಸಿಕೊಂಡು ಬರುವ ವನ್ಯಜೀವಿಗಳು ಕಾಡಂಚಿನಲ್ಲಿರುವ ರೈತರು, ಮಹಿಳೆಯರು, ಮಕ್ಕಳು, ವೃದ್ಧರ ಮೇಲೆ ದಾಳಿ ಮಾಡುತ್ತಿವೆ. ಇದರ ಉಪಟಳ ಜಾಸ್ತಿಯಾದೊಡನೆ ಸಾರ್ವಜನಿಕರು ವನ್ಯಜೀವಿಗಳನ್ನು ಅಕ್ರಮವಾಗಿ ಬೇಟೆಯಾಡುತ್ತಾರೆ. ಇದರಿಂದ ವನ್ಯಜೀವಿಗಳ ಸಂತತಿ ನಾಶವಾಗುವುದುಂಟು. ಮಾನವರು ಮತ್ತು ವನ್ಯಜೀವಿಗಳ ಮಧ್ಯೆ ಸಂಘರ್ಷವಾಗುತ್ತಲೇ ಇರುತ್ತದೆ. ಇದನ್ನು ತಪ್ಪಿಸಲು ಟ್ರಸ್ಟ್ ಹೊಸ ಹೊಸ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಟ್ರಸ್ಟ್‌ನ ಪ್ರಮುಖರು ತಿಳಿಸಿದ್ದಾರೆ.
ಪ್ರತೀ ದಿನ ಕೇವಲ ಒಂದು ಆನೆಗೆ ಸುಮಾರು 200ರಿಂದ 250 ಕೆಜಿ ಆಹಾರ ಬೇಕಾಗುತ್ತದೆ, 200ರಿಂದ 250 ಲೀಟರ್ ನೀರು ಬೇಕಾಗುತ್ತದೆ. ಇದು ಆನೆಯ ಆಹಾರವಾದರೆ ಇನ್ನುಳಿದ ವನ್ಯಜೀವಿಗಳಿಗೆ ಸಾಕಷ್ಟು ಆಹಾರ ಬೇಕಾಗುತ್ತದೆ. ಹಾಗಾಗಿ ಅವುಗಳಿಗೆ ಬೇಕಾದ ಹಣ್ಣಿನ ಗಿಡಗಳನ್ನು ನೆಡುವುದು, ಕಾಡು ಅಥವಾ ತಪ್ಪಲು ಪ್ರದೇಶದಲ್ಲಿ ನಿಷ್ಕ್ರಿಯಗೊಂಡ ಬೋರ್‌ವೆಲ್‌ಗಳನ್ನು ಮರುಬಳಕೆ ಮಾಡಿ ವನ್ಯಜೀವಿಗಳಿಗೆ ನೀರುಣಿಸಲು ವ್ಯವಸ್ಥೆ ಕಲ್ಪಿಸುವುದು, ಅರಣ್ಯ ಇಲಾಖೆಯಲ್ಲದೆ ದಾನಿಗಳ ನೆರವು ಪಡೆದು ವನ್ಯಜೀವಿಗಳ ಸಂರಕ್ಷಣೆಗೆ ಮುಂದಾಗುವುದು ಟ್ರಸ್ಟ್‌ನ ಮುಖ್ಯ ಉದ್ದೇಶವಾಗಿದೆ.
2010ರಿಂದ 2023ರವರೆಗೆ ರಾಜ್ಯದಲ್ಲಿ ಆನೆ ಸಹಿತ ಕಾಡುಪ್ರಾಣಿಗಳಿಗೆ ಸುಮಾರು 700ಕ್ಕೂ ಅಧಿಕ ಮಂದಿ ಪ್ರಾಣ ಕಳಕೊಂಡಿದ್ದಾರೆ. ಇದರಲ್ಲಿ ಹೆಚ್ಚಿನವರು ಕೃಷಿಕರು, ಕಾಫಿ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ಅಧಿಕ ಸಂಖ್ಯೆಯಲ್ಲಿದ್ದಾರೆ. ವನ್ಯಜೀವಿಗಳು ಮಾನವರ ಮೇಲೆ ದಾಳಿ ಮಾಡಲು ಪರಿಸರ ನಾಶವೇ ಕಾರಣವಾಗಿದೆ. ಅದರ ಜೊತೆಗೆ ಅಂತರ್ಜಲ ಮಟ್ಟ ಕುಸಿತ, ಜಾಗತಿಕ ತಾಪಮಾನದಲ್ಲಿ ಏರಿಕೆಯೂ ಜನರ ಮೇಲೆ ಪರಿಣಾಮ ಬೀರಲಿದೆ. ಈ ಎಲ್ಲಾ ಕಾರಣಕ್ಕಾಗಿ ಪರಿಸರದೊಂದಿಗೆ ವನ್ಯಜೀವಿಗಳ ಸಂರಕ್ಷಣೆಗೂ ಟ್ರಸ್ಟ್ ಆದ್ಯತೆ ನೀಡಿ ಕಾರ್ಯಾಚರಿಸಲು ನಿರ್ಧರಿಸಿದೆ.
ಮಾನವರು ಮತ್ತು ವನ್ಯಜೀವಿಗಳು ನಿಕಟವಾಗಿರುವ ಪ್ರದೇಶಗಳನ್ನು ಗುರುತಿಸಿ ಅದರ ಅಂತರವನ್ನು ಹೆಚ್ಚಿಸುವುದು ಮತ್ತು ಸಂಘರ್ಷವನ್ನು ಕಡಿಮೆ ಮಾಡುವುದು ಟ್ರಸ್ಟ್‌ನ ಉದ್ದೇಶವಾಗಿದೆ. ಪರಿಸರ ಉಳಿಸಿದರೆ ಸಾಲದು. ಅದರೊಳಗಿನ ವನ್ಯಜೀವಿಗಳನ್ನೂ ಉಳಿಸಬೇಕಿದೆ. ಸುಮಾರು 30 ವರ್ಷಗಳ ಗುರಿಯನ್ನಿಟ್ಟುಕೊಂಡು ಈ ಅಭಿಯಾನ ನಡೆಸಲಿದ್ದೇವೆ. ಕಾಡು ಬರಿದಾಗುತ್ತಿದೆ. ವನ್ಯಜೀವಿಗಳು ನಾಡಿಗೆ ಬರುತ್ತಿವೆ. ಅದನ್ನು ತಪ್ಪಿಸ ಬೇಕಿದ್ದರೆ ವನ್ಯಜೀವಿಗಳಿಗೆ ಕಾಡಿನಲ್ಲೇ ಆಹಾರ ಸಿಗಬೇಕಿದೆ. ಅದಕ್ಕಾಗಿ ಕಾಡು ಮತ್ತು ಕಾಡಂಚಿನ ಪ್ರದೇಶಗಳಲ್ಲಿ ವನ್ಯಜೀವಿಗಳಿಗೆ ಪೂರಕವಾದ ಹಣ್ಣಿನ ಗಿಡಗಳನ್ನು ನೆಡಲಿದ್ದೇವೆ.
-ದೀಪಕ್ ಉಪ್ಪಿನಂಗಡಿ, ನಿರ್ದೇಶಕರು, ಪಶ್ಚಿಮ ಘಟ್ಟಗಳ ವನ್ಯಜೀವಿ ಸಂರಕ್ಷಣಾ ಟ್ರಸ್ಟ್