ದಲಿತರಿಗೆ ಸ್ವಾಭಿಮಾನ ತಂದುಕೊಟ್ಟ ನಾಯಕ: ವಿ. ಶ್ರೀನಿವಾಸ ಪ್ರಸಾದ್

ಕವಿ ಸಿದ್ದಲಿಂಗಯ್ಯ ಅವರ ಬಾಬಾ ಸಾಹೇಬರ ಕುರಿತಾದ ‘‘ನಾಡ ನಡುವಿನಿಂದ ಸಿಡಿದ ನೋವಿನ ಕೂಗೇ ಆಕಾಶದ ಅಗಲಕ್ಕೂ ನಿಂತ ಆಲವೇ’’ ಹಾಡು ವಿ.ಶ್ರೀನಿವಾಸ ಪ್ರಸಾದ್ ಅವರಿಗೆ ಬಹಳ ಇಷ್ಟವಾದದ್ದು. ಸಾರ್ವಜನಿಕ ವೇದಿಕೆಯಲ್ಲಿ ಆ ಹಾಡನ್ನು ಕೇಳುವಾಗ ಅವರಿಗೆ ಅರಿವಿಲ್ಲದಂತೆ ಕಣ್ಣೀರು ಬರುತ್ತಿತ್ತು. ಸಾಹಿತಿ ದೇವನೂರ ಮಹಾದೇವ, ಸಿದ್ದಲಿಂಗಯ್ಯ ಸೇರಿ ದಲಿತ ಸಾಹಿತಿ, ಚಿಂತಕರ ಒಡನಾಡಿಯಾಗಿದ್ದರು ಶ್ರೀನಿವಾಸ ಪ್ರಸಾದ್.

Update: 2024-05-01 08:31 GMT

ಚಾಮರಾಜನಗರ ಲೋಕಸಭಾ ಕ್ಷೇತ್ರದ ಹಾಲಿ ಸಂಸದರೂ ಆದ ಕೇಂದ್ರದ ಮಾಜಿ ಸಚಿವ ವಿ. ಶ್ರೀನಿವಾಸ ಪ್ರಸಾದ್ ಅವರ ಐದು ದಶಕಗಳ ಸುದೀರ್ಘ ರಾಜಕೀಯ ಮತ್ತು ಸಾಮಾಜಿಕ ಬದುಕು ಮೈಸೂರು ಪ್ರಾಂತದ ದಲಿತ ಸಮುದಾಯಕ್ಕೆ ಸ್ವಾಭಿಮಾನ ತಂದುಕೊಟ್ಟಿದೆ.

ಶತಮಾನಗಳಿಂದ ಶೋಷಣೆಯ ಕೂಪದಲ್ಲಿ ಸಿಲುಕಿದ್ದ ತನ್ನ ಸಮುದಾಯದ ಜನರನ್ನು ರಾಜಕೀಯವಾಗಿ ಮತ್ತು ಆಧ್ಯಾತಿಕವಾಗಿ ಔನ್ನತ್ಯಕ್ಕೇರಿಸಲು ಶ್ರೀನಿವಾಸ ಪ್ರಸಾದ್ ಅವರ ಶ್ರಮ ಸ್ಮರಣೀಯ. ದಲಿತರ ಅಸ್ಮಿತೆಯಾಗಿ ದಲಿತರ ದನಿಯಾಗಿ ಬೆಳೆದು ಜನಮಾನಸದಲ್ಲಿ ಉಳಿದ ನಾಯಕ ಅವರು.

ಮೈಸೂರು ಪ್ರಾಂತದಲ್ಲಿ ದಲಿತರ ಮೇಲಿನ ದೌರ್ಜನ್ಯವನ್ನು ಪ್ರತಿಭಟಿಸುತ್ತಿದ್ದ ಮತ್ತು ಸಮುದಾಯದ ಧ್ವನಿಯಾಗಿದ್ದ ನಾಯಕನ ನಿರ್ಗಮನವೂ ದಲಿತ ಸಮಾಜಕ್ಕೆ ತುಂಬಲಾರದ ನಷ್ಟ.

ಅವರು ಯಾವುದೇ ಪಕ್ಷಕ್ಕೂ ಹೋದರೂ ದಲಿತರ ಹಿತಾಸಕ್ತಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ವಿಚಾರದಲ್ಲಿ ಅಪಸ್ವರ ಬಂದಾಗ ಪಕ್ಷದ ಸಿದ್ಧಾಂತವನ್ನು ಮೀರಿ ಸ್ವಾಭಿಮಾನದ ರಾಜಕಾರಣ ಮಾಡಿದ್ದಾರೆ. ಪ್ರಸಾದ್ ಅವರ ಸಮುದಾಯದ ವಿಚಾರವಾಗಿ ರಾಜಿ ರಹಿತವಾದ ಹೋರಾಟವನ್ನು ದಲಿತ ರಾಜಕಾರಣಿಗಳು ಅನುಸರಿಸಿ ಮುಂದುವರಿಸಬೇಕಿದೆ.

ಶ್ರೀನಿವಾಸ ಪ್ರಸಾದ್ ಮೈಸೂರು ಜಿಲ್ಲೆಗೆ ಸೇರಿದವರಾಗಿದ್ದರೂ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ 6 ಬಾರಿ ಜಯ ಸಾಧಿಸಿದ್ದಾರೆ. ಸಂಸದರಾಗಿ ಹಲವು ಕೊಡುಗೆಗಳನ್ನು ಕೊಟ್ಟಿದ್ದಾರೆ. ಆದರೆ, ಮಾಡಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಸಮುದಾಯದ ಜನರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು.

ಮೈಸೂರು ಭಾಗದಲ್ಲಿ ಬೌದ್ಧ ದಮ್ಮ ಪ್ರಸಾರಕ್ಕೆ ಶ್ರೀನಿವಾಸ ಪ್ರಸಾದ್ ಅವರ ಕೊಡುಗೆ ಅಪಾರ. ‘ಬುದ್ಧನೆಡೆಗೆ ಮರಳಿ ಮನೆಗೆ’ ಕಾರ್ಯಕ್ರಮದ ಮೂಲಕ ಬುದ್ಧರ ಪ್ರಜ್ಞೆಯನ್ನು ಬಿತ್ತಿದರು. ದಲಿತರು ಬೌದ್ಧ ದಮ್ಮದ ಕಡೆ ನಡೆಯಲು ಮುಂದಾಳತ್ವ ವಹಿಸಿದರು.

ಶತಮಾನ ಪೂರೈಸಿರುವ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸ್ಥಾಪಿಸುವಲ್ಲಿ ಅವರ ಪಾತ್ರ ಮಹತ್ವದ್ದು. ಪ್ರಖರವಾದ ಅಂಬೇಡ್ಕರ್ ಚಿಂತನೆ ರೂಪುಗೊಳ್ಳಲು ಸಾಧ್ಯವಾಯಿತು. ಅಂಬೇಡ್ಕರ್ ಕೇಂದ್ರದ ಆವರಣದಲ್ಲಿಯೇ ಬೌದ್ಧ ಅಧ್ಯಯನ ಕೇಂದ್ರ ಸ್ಥಾಪಿಸುವಲ್ಲಿ ಅವರ ಕೊಡುಗೆ ಇದೆ.

ಚಾಮರಾಜನಗರದಲ್ಲಿ ನಳಂದ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಪ್ರಸಾದ್ ಅವರ ಪ್ರೋತ್ಸಾಹ ಮತ್ತು ಸಹಕಾರ ಸ್ಮರಣೀಯವಾದದ್ದು. ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಸ್ಥಾಪಿಸಿದಂತೆ ಮೈಸೂರು ಭಾಗದಲ್ಲಿ ಬೃಹತ್ ಬೌದ್ಧ ಕೇಂದ್ರ ಸ್ಥಾಪಿಸಬೇಕೆಂಬ ಆಕಾಂಕ್ಷೆ ಜನರಲ್ಲಿ ಇತ್ತು. ಅದು ಈಡೇರಲಿಲ್ಲ. ಆದರೆ, ಬುದ್ಧರ ಪ್ರಜ್ಞೆ ವಿಸ್ತರಿಸಲು ಅವರ ಪಾತ್ರ ದೊಡ್ಡದು.

ದಲಿತರ ಇತಿಹಾಸದಲ್ಲಿ ಬದನವಾಳು ಘಟನೆ ವಿಶೇಷ ಸ್ಥಾನ ಪಡೆದುಕೊಂಡಿದೆ. ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಅದರ ಮುಂದಾಳತ್ವ ವಹಿಸಿಕೊಂಡ ವಿ. ಶ್ರೀನಿವಾಸ ಪ್ರಸಾದ್ ಅವರು ದಲಿತ ಸಮುದಾಯದ ದನಿಯಾಗಿ ರೂಪುಗೊಂಡರು. ಬದನವಾಳು ಘಟನೆಯೂ ಅವರ ಸಾರ್ವಜನಿಕ ಬದುಕಿನಲ್ಲಿ ನಿರ್ಣಾಯಕವಾದದ್ದು.

ಬದನವಾಳು ಎರಡು ಸಮುದಾಯಗಳ ನಡುವಿನ ಸಂಘರ್ಷವೂ ಪ್ರಸಾದ್ ಅವರ ಜೀವನದ ಮೇಲೆ ತುಂಬಾ ಪರಿಣಾಮ ಬೀರಿತು. ದಲಿತರ ಬ್ರ್ಯಾಂಡ್ ಆಗಿ ರೂಪುಗೊಂಡರು. ಅವರ ಸಮುದಾಯದ ಹಿತರಕ್ಷಣೆ ಮತ್ತು ಕಳಕಳಿ ಪ್ರಶ್ನಾತೀತವಾದದ್ದು. ಅವರ ಅಗಲಿಕೆಯಿಂದ ಪ್ರಭಾವಿ ನಾಯಕತ್ವವನ್ನು ದಲಿತ ಸಮುದಾಯ ಕಳೆದುಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಮಹಾದೇವ ಶಂಕನಪುರ ಕೊಳ್ಳೇಗಾಲ

contributor

Similar News