ಬೆಂಗಳೂರು ವಿವಿಯಲ್ಲೊಂದು 'ಕಿರು ಅರಣ್ಯ'
ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ಬೇಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜನರು ಕಂಗಾಲಾಗಿದ್ದಾರೆ. ಆದರೆ, ಬಿಸಿಲ ಬೇಗೆಗೆ ಸವಾಲೊಡ್ಡುವಂತೆ ಬೆಂಗಳೂರು ವಿವಿ ಆವರಣ ಸದಾ ತಂಪಾಗಿರುತ್ತದೆ. ವಿವಿಯಲ್ಲಿರುವ ಕಿರು ಅರಣ್ಯ ಪ್ರದೇಶವೇ ಇದಕ್ಕೆ ಕಾರಣವಾಗಿದೆ.
ವಿವಿಯ ಆವರಣದಲ್ಲಿ 2ಲಕ್ಷಕ್ಕೂ ಅಧಿಕ ವಿವಿಧ ಬಗೆಯ ಮರ-ಗಿಡಗಳನ್ನು ಹೊಂದಿವೆ. ಪರಿಸರ ಕಾಪಾಡುವ ಮತ್ತು ಆರೋಗ್ಯಕರ ವಾತಾವರಣವನ್ನು ಕೊಡುವ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯ ಗಿಡಮರಗಳನ್ನು ಬೆಳೆಸುವ ಮತ್ತು ಅರಣ್ಯವನ್ನು ರಕ್ಷಿಸುವ ಕಾರ್ಯ ರಚನಾತ್ಮಕ ನಡೆಯುತ್ತಿದೆ.
ಅಭಿವೃದ್ಧಿಯ ಹೆಸರಿನಲ್ಲಿ ತಮ್ಮ ವೈಯಕ್ತಿಕ ಲಾಭಕ್ಕಾಗಿ ಆವರಣಗಳಲ್ಲಿರುವ ಮರ-ಗಿಡಗಳನ್ನು ಕಡಿದು ದೊಡ್ಡದೊಡ್ಡ ಕಟ್ಟಡಗಳನ್ನು ಕಟ್ಟುತ್ತಿರುವ ಸಂದರ್ಭದಲ್ಲಿ, ಬೆಂಗಳೂರು ವಿವಿ ಪರಿಸರವನ್ನು ಉಳಿಸುವ ಮತ್ತು ಬೆಳೆಸುವ ಕೆಲಸವನ್ನು ಮಾಡುತ್ತಿರುವುದು ಹೆಮ್ಮೆಯ ವಿಚಾರ. ವಿವಿ ಆವರಣವು 350 ಎಕರೆಗೂ ಹೆಚ್ಚು ಕಿರು ಅರಣ್ಯ ಪ್ರದೇಶ ಹೊಂದಿದೆ. ಇದರಲ್ಲಿ ಸರಿ ಸುಮಾರು 2ಲಕ್ಷ ಮರಗಿಡಗಳಿವೆ. ಈ ಅರಣ್ಯ ಸಂಪತ್ತನ್ನು ಕಾಪಾಡುವ ನಿಟ್ಟಿನಲ್ಲಿ ವಿವಿಯ ಬಯೋಪಾರ್ಕ್ ವಿಭಾಗವನ್ನು ಆರಂಭಿಸಿದೆ.
ಮರ ಗಿಡಗಳನ್ನು ನೆಡುವುದು ಮತ್ತು ಇರುವಂತಹ ಗಿಡ ಮರಗಳನ್ನು ಕಾಪಾಡುವುದು ಇದರ ಮುಖ್ಯ ಉದ್ದೇಶವಾಗಿದೆ. ಇಷ್ಟು ದೊಡ್ಡ ಬಯೋಪಾರ್ಕ್ ಅನ್ನು ಸುರಕ್ಷಿತವಾಗಿ ನಿರ್ವಹಿಸಲು ವಿಭಾಗಕ್ಕೆ ಒಬ್ಬ ನಿರ್ದೇಶಕರನ್ನು ನೇಮಕ ಮಾಡಿದೆ. ಬಯೋಪಾರ್ಕ್ ಮತ್ತು ಗಾರ್ಡನ್ ವಿಭಾಗ ನಿರ್ವಹಣೆ ಮಾಡಲು 30ಕ್ಕೂ ಹೆಚ್ಚಿನ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಬಯೋಪಾರ್ಕ್ ನಿರ್ವಹಣೆ ಮಾಡಲು ನಾಲ್ಕು ಹಂತಗಳಲ್ಲಿ ಕೆಲಸ ಮಾಡುತ್ತಿದೆ
ಬಯೋಪಾರ್ಕ್-1: ಈ ಹಂತದಲ್ಲಿ 40 ವರ್ಷ ಮೇಲ್ಪಟ್ಟ ದೊಡ್ಡ ಮರಗಳನ್ನು ಆರೈಕೆ ಮಾಡುವುದು. ಈ ವಿಭಾಗದಡಿಯಲ್ಲಿ 10 ಸಾವಿರಕ್ಕೂ ಹೆಚ್ಚಿನ ಮರಗಳನ್ನು ಕಾಣಬಹುದು.
ಬಯೋಪಾರ್ಕ್-2: ಈ ಹಂತದಲ್ಲಿ 10 ವರ್ಷ ವಯಸ್ಸಾಗಿರುವ ಮರಗಳನ್ನು ಆರೈಕೆ ಮಾಡುವುದು. 50 ಸಾವಿರಕ್ಕೂ ಹೆಚ್ಚಿನ ಮರಗಳಿವೆ.
ಬಯೋಪಾರ್ಕ್-3: ಈ ಹಂತದಲ್ಲಿ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ 5ಸಾವಿರಕ್ಕೂ ಹೆಚ್ಚಿನ ಹಣ್ಣು-ಹಂಪಲುಗಳ ಮರಗಳನ್ನು ಆರೈಕೆ ಮಾಡುವುದು.
ಬಯೋಪಾರ್ಕ್-4: ಈ ಹಂತದಲ್ಲಿ ಹಲವಾರು ಬಗೆಯ ಮರಗಳನ್ನು ಆರೈಕೆ ಮಾಡಲಾಗುತ್ತದೆ. ವಿಶ್ವವಿದ್ಯಾನಿಲಯವು ಈ ರೀತಿ ಹಂತ ಹಂತವಾಗಿ ಮರ ಗಿಡಗಳನ್ನು ಪೋಷಿಸುವ ಮತ್ತು ಆರೈಕೆ ಮಾಡುವ ಕೆಲಸ ಮಾಡುತ್ತಿದೆ. ಇಷ್ಟು ದೊಡ್ಡ ಅರಣ್ಯವನ್ನು ಕಾಪಾಡಿಕೊಳ್ಳಲು ವಿವಿ ಅರಣ್ಯದೊಳಗೆ 9 ಕೊಳವೆಬಾವಿಗಳನ್ನು ಕೊರೆಸಲಾಗಿದೆ. ಮಳೆ ಕೊರತೆ, ಬರಗಾಲದಿಂದ ಕೇವಲ ಮೂರು ಕೊಳವೆಬಾವಿಗಳು ಮಾತ್ರ ಕೆಲಸ ಮಾಡುತ್ತಿದೆ. ಆರು ಕೊಳವೆಬಾವಿಗಳು ನಿಂತು ಹೋಗಿವೆ. ಬರಗಾಲದಲ್ಲಿ ಜನರಿಗೆ ಕುಡಿಯಲು ನೀರು ಸಿಗದೇ ಇರುವಂತಹ ಸ್ಥಿತಿಯಲ್ಲಿ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ಪರಿಸರವನ್ನು ಉಳಿಸಿಕೊಳ್ಳುವ ಸಲುವಾಗಿ ಪ್ರತಿದಿನ ಟ್ಯಾಂಕರ್ ಮೂಲಕ ಮರ ಗಿಡಗಳಿಗೆ ನೀರು ಹಾಕಿಸುತ್ತಿದೆ.
ವಿಶ್ವವಿದ್ಯಾನಿಲಯದಲ್ಲಿ ಪ್ರತಿವರ್ಷ 10 ಸಾವಿರಕ್ಕಿಂತ ಹೆಚ್ಚು ಗಿಡಗಳನ್ನು ನೆಡುವ ಯೋಜನೆಯನ್ನು ಹಾಕಿಕೊಂಡಿದ್ದು, 3 ವರ್ಷಗಳಿಂದ ಯಶಸ್ವಿಯಾಗಿ ಮಾಡಿಕೊಂಡು ಬರುತ್ತಿದೆ. ಎರಡು ತಿಂಗಳ ಹಿಂದೆ, ಮೈಕ್ರೊ ಬಯಾಲಜಿ ವಿಭಾಗದ ಹಿಂಭಾಗ 5 ಸಾವಿರ ಗಿಡಗಳನ್ನು ನೆಟ್ಟು ಅದನ್ನು ಆರೈಕೆ ಮಾಡಲಾಗುತ್ತಿದೆ. ಅಷ್ಟು ಮಾತ್ರವಲ್ಲದೇ ಅರಣ್ಯದೊಳಗೆ ಮೊಲ, ನವಿಲು, ನರಿ ಮುಂತಾದ ಪ್ರಾಣಿ ಪಕ್ಷಿಗಳು ವಾಸ ಮಾಡುತ್ತಿರುವುದರಿಂದ, ವಿವಿಯ ಅರಣ್ಯದಲ್ಲಿ ಎರಡು ಚೆಕ್‌ಡ್ಯಾಮ್ ವ್ಯವಸ್ಥೆಯೂ ಮಾಡಿದೆ. ಪ್ರತೀ ವಾರಕ್ಕೊಮ್ಮೆ ಚೆಕ್‌ಡ್ಯಾಮ್‌ಗಳಿಗೆ ನೀರು ತುಂಬಿಸುವ ಪ್ರಯತ್ನ ಮಾಡುತ್ತಿದೆ.
ಸಂಜೆ ಹೊತ್ತಿನಲ್ಲಿ ವಾಯು ವಿಹಾರಕ್ಕೆ ಹೋದಾಗ ನವಿಲುಗಳು ಗರಿ ಬಿಟ್ಟುಕೊಂಡು ನರ್ತನ ಮಾಡುತ್ತಿರುವುದನ್ನು ಕಾಣಬಹುದು. ಚೆಕ್‌ಡ್ಯಾಮ್‌ಗಳಲ್ಲಿ ಆಮೆಗಳು ಇಣುಕಿ ನೋಡುವುದು, ನೀರು ಕೋಳಿ, ಕೊಕ್ಕರೆಗಳನ್ನು ನೋಡಿದಾಗ ಸಂತೋಷವಾಗುತ್ತದೆ. ವಿವಿಯ ಅರಣ್ಯವನ್ನು ಉಳಿಸುವುದು ನಮ್ಮ ಜವಾಬ್ದಾರಿ. ಅನಗತ್ಯವಾಗಿ ವಿದ್ಯಾರ್ಥಿಗಳು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಹಾಕುವುದನ್ನು ನಿಲ್ಲಿಸಬೇಕು. ಆಗಾಗ ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡು ಸಾಕಷ್ಟು ಗಿಡಗಳು ಸತ್ತು ಹೋಗುತ್ತಿವೆ. ಇದನ್ನು ವಿವಿಯ ಆಡಳಿತ ಮಂಡಳಿ ಕ್ರಮ ವಹಿಸಬೇಕು.
-ನಂದಿನಿ, ವಿದ್ಯಾರ್ಥಿನಿ
ಬೆಂಗಳೂರು ವಿವಿಯಲ್ಲಿ ೫ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇಲ್ಲಿರುವ ಎಲ್ಲ ವಿದ್ಯಾರ್ಥಿಗಳಿಗೂ ಸ್ವಚ್ಛವಾದ ಗಾಳಿ, ನೀರು, ಕೊಡುವುದು ಮತ್ತು ಪರಿಸರವನ್ನು ಕಾಪಾಡುವುದು ನಮ್ಮ ಜವಾಬ್ದಾರಿ. ಆದುದರಿಂದ, ನಾವು ನಮ್ಮ ಅರಣ್ಯ ಪ್ರದೇಶವನ್ನು ಕಾಪಾಡುತ್ತಿದ್ದೇವೆ. ವಿವಿಯಲ್ಲಿ ಇನ್ನಷ್ಟು ಮರಗಿಡಗಳನ್ನು ಆರೈಕೆ ಮಾಡುವ ಸಲುವಾಗಿ ನಿಂತು ಹೋದ ಕೊಳವೆಬಾವಿಗಳನ್ನು ಶೀಘ್ರದಲ್ಲೇ ದುರಸ್ತಿ ಮಾಡಿಸುವ ಕೆಲಸವನ್ನು ಮಾಡುತ್ತೇವೆ. ಇನ್ನಷ್ಟು ಗಿಡಗಳನ್ನು ನೆಡುವುದರ ಮೂಲಕ ವಿವಿಯಲ್ಲಿ ದಟ್ಟವಾದ ಅರಣ್ಯವನ್ನು ಬೆಳಸುತ್ತೇವೆ. ಅರಣ್ಯ ಬೆಳೆದರೆ ಜನರಿಗೂ ಸ್ವಚ್ಛವಾದ ಗಾಳಿ ಕೊಡಲು ಸಾಧ್ಯ.
-ಶೇಖ್ ಲತೀಫ್, ಬೆಂಗಳೂರು ವಿವಿ ಕುಲ ಸಚಿವ