ಮಿಶ್ರ ಬೇಸಾಯದಲ್ಲಿ ಯಶಸ್ಸು ಕಂಡ ಛಾಯಾಗ್ರಾಹಕ

Update: 2024-03-11 10:42 GMT

ಮಂಡ್ಯ: ಮಂಡ್ಯದ ಹಿರಿಯ ಪತ್ರಕರ್ತ, ಛಾಯಾಗ್ರಾಹಕ ಬಸವರಾಜ ಹೆಗ್ಗಡೆ ಕೃಷಿಯಲ್ಲೂ ಮೋಡಿ ಮಾಡಿದ್ದಾರೆ. ತನ್ನ ಪೂರ್ವಿಕರ ಬದುಕಿನ ಆಧಾರವಾಗಿದ್ದ ಕೃಷಿಯತ್ತ ಅವರು ಮುಖಮಾಡಿದ್ದಾರೆ. ಕೃಷಿಯಲ್ಲೂ ಯಶಸ್ಸು ಕಾಣುವ ಅವರ ಕನಸು ನನಸಾಗುವ ಲಕ್ಷಣಗಳು ಗೋಚರವಾಗುತ್ತಿದೆ. ಕೇವಲ ಎರಡೂವರೆ ಎಕರೆಯ ಮಳೆಯಾಶ್ರಿತ ಭೂಮಿ ಹಸಿರಿನಿಂದ ಕಂಗೊಳಿಸುತ್ತಿದೆ.

ಬಸವರಾಜ ಹೆಗ್ಗಡೆ ಅವರ ಊರು ಮಂಡ್ಯ ತಾಲೂಕಿನ ಪುಟ್ಟಿಕೊಪ್ಪಲು. ಪಕ್ಕದಲ್ಲೇ ವಿಶ್ವೇಶ್ವರಯ್ಯ ನಾಲೆ ತುಂಬಿಹರಿದರೂ ಪುಟ್ಟಿಕೊಪ್ಪಲು ಗ್ರಾಮದ ಕೃಷಿಗೆ ನೀರಿನ ಭಾಗ್ಯ ಇಲ್ಲ. ಏಕೆಂದರೆ, ನಾಲೆಯ ಮೇಲ್ಭಾಗದಲ್ಲಿರುವ ಗ್ರಾಮವಾದ್ದರಿಂದ ಗ್ರಾಮದ ಭೂಮಿ ಕಾಲುವೆ ನೀರಿನಿಂದ ವಂಚಿತವಾಗಿದೆ. ಮಳೆಯೇ ಕೃಷಿಗೆ ಆಧಾರ. ‘ಕೃಷಿ ಎನ್ನುವುದು ಮಳೆಯೊಂದಿಗಿನ ಜೂಜಾಟ’ ಎಂಬುದು ಈ ಗ್ರಾಮಸ್ಥರಿಗೆ ಅಕ್ಷರಶಃ ಸತ್ಯ. ಹಾಗಾಗಿ ಆಡು, ಕುರಿ, ಹಸು ಸಾಕಣೆ ಅವರ ಜೀವನಾಧಾರ.

ಇಂತಹ ಹಿನ್ನೆಲೆಯ ಗ್ರಾಮದಿಂದ ಹೊರ ಹೋಗಿ ಬಸವರಾಜ ಹೆಗ್ಗಡೆ ಶ್ರಮದಿಂದ ಯಶಸ್ಸು ಕಂಡುಕೊಂಡಿದ್ದಾರೆ. ಕುಟುಂಬದ ಆರ್ಥಿಕ ಸಮಸ್ಯೆಯಿಂದ ಎಸೆಸೆಲ್ಸಿವರೆಗೆ ಮಾತ್ರ ಓದಿದ ಅವರು, ಮೈಸೂರಿಗೆ ತೆರಳಿ ಖ್ಯಾತ ಫೋಟೊಗ್ರಾಫರ್ ಪ್ರಗತಿ ಗೋಪಾಲಕೃಷ್ಣರ ಶಿಷ್ಯನಾಗಿ ಛಾಯಾಗ್ರಹಣ ಕರಗತ ಮಾಡಿಕೊಂಡರು. ಹಲವು ವರ್ಷಗಳ ನಂತರ, ಮಂಡ್ಯಕ್ಕೆ ಬಂದು ಛಾಯಾಗ್ರಾಹಕ ಕ್ಷೇತ್ರದಲ್ಲಿ ಹೆಸರು ಮಾಡಿದರು. ವೈಲ್ಡ್ ಲೈಫ್ ಫೋಟೊಗ್ರಫಿಯಲ್ಲೂ ಛಾಪು ಮೂಡಿಸಿರುವ ಹೆಗ್ಗಡೆಯವರ ಛಾಯಾಚಿತ್ರ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ಹೆಗ್ಗಡೆಯವರು ತನ್ನ ಕುಟುಂಬದಿಂದ ಬಂದಿರುವ ಎರಡೂವರೆ ಎಕರೆ ‘ಭೂಮಿಯಲ್ಲಿ ಬಹುಬೆಳೆ’ ಪದ್ಧತಿ ಅಳವಡಿಸಿಕೊಂಡಿದ್ದಾರೆ. ತೆಂಗು, ಅಡಿಕೆ, ಬಾಳೆ, ಸೀಬೆ ಜತೆಯಲ್ಲಿ ಇತರ ಬೆಳೆಗಳನ್ನು ಬೆಳೆಸಿದ್ದಾರೆ. ಸುಮಾರು 4, 3, 2 ವರ್ಷದ 140 ತೆಂಗು, 2ರಿಂದ 5ವರ್ಷದ ಒಂದು ಸಾವಿರ ಅಡಿಕೆ, ಒಂದು ಸಾವಿರ ಬಾಳೆ, 70 ಸೀಬೆ ಗಿಡಗಳು ಹಸಿರಿನಿಂದ ಕಂಗೊಳಿಸುತ್ತಿವೆ. ಅಡಿಕೆ ಬೆಳೆಗಾಗಿ ಹಾಕಿದ ಬಾಳೆ ಫಸಲು ಕೊಟ್ಟಿದೆ. ಇದರಿಂದ ತೋಟಕ್ಕೆ ಮಾಡಿದ ವೆಚ್ಚದ ಬಹುಭಾಗ ಬಂದಂತಾಗಿದೆ

ಎನ್ನುತ್ತಾರೆ ಹೆಗ್ಗಡೆ. ಒಂದೆರಡು ವರ್ಷಗಳಲ್ಲಿ ತೆಂಗು ಮತ್ತು ಅಡಿಕೆ ಫಲ ಇವರ ಕೈಹಿಡಿಯುವುದು ಖಾತ್ರಿಯಾಗಿದೆ. ಶ್ರಮಕ್ಕೆ ಮೋಸವಾಗುವುದಿಲ್ಲವೆಂಬ ಭರವಸೆ ಮೂಡಿದೆ. ತೆಂಗು, ಅಡಿಕೆ, ಬಾಳೆ ಮುಖ್ಯ ಬೆಳೆಗಳ ಜತೆಗೆ ಸಾಂಬಾರ ಬೆಳೆ ಏಲಕ್ಕಿ ಬಿತ್ತಿದ್ದಾರೆ. ಕರಿಮೆಣಸು ಮತ್ತು ಕಾಫಿ ಗಿಡ ಹಾಕಲು ಸಿದ್ಧತೆ ಮಾಡಿಕೊಂಡಿದ್ದಾರೆ. ಬೆಳೆಗಳ ನಡುವೆ ಬಟರ್ ಫ್ರೂಟ್ ಗಿಡಗಳು ಗಮನ ಸೆಳೆಯುತ್ತವೆ. ಮಧುಮೇಹದಂತಹ ಬಹುರೋಗ ನಿವಾರಕ ಚಕ್ರಮುನಿ ಗಿಡವನ್ನೂ ಹಾಕಿದ್ದಾರೆ. ಬದುಗಳ ಮೇಲೆ, ಜಮೀನು ಸುತ್ತಾ ಮಹಾಗನಿ, ಟೀಕ್, ಹೆಬ್ಬೇವು, ಹರ್ಕ್ಯುಲಸ್ ಬೆಳೆಸಿದ್ದಾರೆ. ಬಸವರಾಜ ಹೆಗ್ಗಡೆಯವರ ಕೃಷಿ ಪ್ರಯೋಗ, ಸುತ್ತಮುತ್ತಲ ಗ್ರಾಮದ ರೈತರಲ್ಲೂ ಭರವಸೆ ಮೂಡಿಸುತ್ತಿದೆ.

ಗ್ರಾಮಸ್ಥರಿಗೆ, ಪಕ್ಷಿಗಳಿಗೆ ಸೀಬೆಹಣ್ಣು

ಬಸವರಾಜ ಹೆಗ್ಗಡೆ ಅವರ ಮಿಶ್ರಬೇಸಾಯದಲ್ಲಿ ಎರಡು ವರ್ಷಗಳಿಂದ ಸೀಬೆ ಫಸಲು ಬರುತ್ತಿದೆ. ಮಾರುಕಟ್ಟೆಯಲ್ಲಿ ಸೀಬೆ ಹಣ್ಣಿಗೆ ಬೇಡಿಕೆ ಜತೆಗೆ, ಒಳ್ಳೆಯ ದರವೂ ಇದೆ. ಆದರೆ, ಬಸವರಾಜ ಹೆಗ್ಗಡೆ ಸೀಬೆಯ ಹಣ್ಣುಗಳನ್ನು ಮಾರಾಟ ಮಾಡುತ್ತಿಲ್ಲ. ಹಣ್ಣುಗಳನ್ನು ಗ್ರಾಮಸ್ಥರಿಗೆ ಪುಕ್ಕಟೆಯಾಗಿ ತಿನ್ನಲು ನೀಡುತ್ತಿದ್ದಾರೆ. ಪಕ್ಷಿಗಳಿಗೂ ಸೀಬೆಹಣ್ಣು ಆಹಾರವಾಗಿದೆ.

ತೆಂಗು, ಅಡಿಕೆ, ಬಾಳೆ ಜತೆಗೆ ಇತರ ಪೂರಕ ಬೆಳೆಗಳ ಮಿಶ್ರಬೇಸಾಯ ಅನುಸರಿಸಿದರೆ ಕೃಷಿಯಲ್ಲಿ ಲಾಭ ಕಾಣಬಹುದು. ತರಕಾರಿ, ಹೂವು ಬೆಳೆದುಕೊಂಡು ಕೈಸುಟ್ಟುಕೊಳ್ಳುತ್ತಿರುವ ರೈತರು, ಮಿಶ್ರ ಬೇಸಾಯ, ಅರಣ್ಯ ಕೃಷಿಯತ್ತ ಗಮನಹರಿಸುವುದು ಸೂಕ್ತ. ಐದು ವರ್ಷ ಕಷ್ಟಪಟ್ಟರೆ, ಜೀವನಪರ್ಯಂತ ಲಾಭಗಳಿಸಬಹುದು. ಇದಕ್ಕೆ ಹೆಚ್ಚು ಕೃಷಿ ಕಾರ್ಮಿಕರ ಅಗತ್ಯ ಇರುವುದಿಲ್ಲ. ಜತೆಗೆ, ಕಡಿಮೆ ನೀರಿದ್ದರೂ ಸಾಕು. ನನ್ನ ಎರಡು ಕೊಳವೆ ಬಾವಿಯಲ್ಲಿ ಸಿಗುತ್ತಿರುವ ಸ್ವಲ್ಪವೇ ನೀರಿನಿಂದ ನನ್ನ ಬೇಸಾಯವನ್ನು ನಿಭಾಯಿಸುತ್ತಿದ್ದೇನೆ. ಶ್ರಮ, ಶ್ರದ್ಧೆ ಇದ್ದರೆ ಫಲ ಖಂಡಿತ ಸಿಗುತ್ತದೆ.

 -ಬಸವರಾಜ ಹೆಗ್ಗಡೆ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಕುಂಟನಹಳ್ಳಿ ಮಲ್ಲೇಶ

contributor

Similar News