ಕನ್ನಡ ಮಾಧ್ಯಮದಲ್ಲಿ ಕಲಿತು ವೈದ್ಯೆಯಾದ ಗ್ರಾಮೀಣ ಪ್ರತಿಭೆ

Update: 2024-10-28 09:06 GMT
Editor : jafar sadik | Byline : ಹಂಝ ಮಲಾರ್

 ಮಂಗಳೂರು: ಉದ್ಯಮಿಯೊಬ್ಬರ ಬಳಿ ಟಿಂಬರ್ ರೈಟರ್ ಆಗಿದ್ದ ಅವರಿಗೆ ತನ್ನ ನಾಲ್ವರು ಮಕ್ಕಳ ಪೈಕಿ ಒಬ್ಬರನ್ನಾದರೂ ವೈದ್ಯರನ್ನಾಗಿಸಬೇಕು ಎಂಬ ಕನಸು. ತನ್ನ ಉದ್ಯೋಗದಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಸಾಧ್ಯವಿಲ್ಲ ಎಂಬ ವಾಸ್ತವದ ಅರಿವು ಅವರಿಗಿದ್ದರೂ ಕನಸನ್ನು ಜೀವಂತವಾಗಿರಿಸಿದ್ದರು. ತಂದೆಯ ಕನಸನ್ನು ಇಬ್ಬರು ಅಣ್ಣಂದಿರು ಮತ್ತು ಒಬ್ಬಳು ಅಕ್ಕ ಕೈ ಚೆಲ್ಲಿದರೂ ಕೊನೆಯ ಪುತ್ರಿ ಸಾಕಾರಗೊಳಿಸಿದ್ದಾಳೆ. ಆರ್ಥಿಕವಾಗಿ ಸಾಕಷ್ಟು ಸಮಸ್ಯೆ ಎದುರಾದರೂ ಅಣ್ಣಂದಿರ ಸಹಕಾರದಿಂದ ಛಲ ಬಿಡದೆ ಕಲಿತು ಇದೀಗ ವೈದ್ಯೆಯಾಗಿ ಹೊರ ಹೊಮ್ಮಿದ್ದಾರೆ.

ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಐವತ್ತೊಕ್ಲು ಗ್ರಾಮದ ಕೊಳ್ತಂಕರೆ ಮನೆಯ ದಿವಂಗತ ಯೂಸುಫ್ ಎಂ.ಕೆ. ಮತ್ತು ನಫೀಸಾ ದಂಪತಿಯ ಪುತ್ರಿಯಾಗಿರುವ ಡಾ.ಝಾಹಿದಾ ಯೂಸುಫ್ ಗ್ರಾಮೀಣ ಪ್ರದೇಶದ ಅಪ್ಪಟ ಪ್ರತಿಭೆ. ಸಾಮಾನ್ಯವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಹುಟ್ಟಿ ಬೆಳೆದವರಿಗೆ ಡಾಕ್ಟರ್, ಇಂಜಿನಿಯರ್ ಇತ್ಯಾದಿ ಕೈಗೆಟಕುವಂಥದ್ದಲ್ಲ. ಅದೆಲ್ಲಾ ನಗರ ಪ್ರದೇಶದಲ್ಲಿ ಬೆಳೆದವರಿಗೆ ಮಾತ್ರ ಸೀಮಿತ ಎಂಬ ಭಾವನೆ ಇರುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಉನ್ನತ ಶಿಕ್ಷಣದ ಬಗ್ಗೆ ಮಾಹಿತಿಯ ಕೊರತೆಯೂ ಇರುತ್ತದೆ. ಅದನ್ನೆಲ್ಲಾ ಡಾ.ಝಾಹಿದಾ ಸುಳ್ಳಾಗಿಸಿದ್ದಾರೆ. ಯೆನೆಪೊಯ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ತೃತೀಯ ಸ್ಥಾನದೊಂದಿಗೆ ಬಿಎಎಂಎಸ್ ತೇರ್ಗಡೆಯಾಗಿದ್ದಾರೆ.

ತನ್ನ ತಂದೆಯ ಕನಸನ್ನು ನನಸಾಗಿಸಲೇಬೇಕು ಎಂಬ ಹಠಕ್ಕೆ ಬಿದ್ದ ಝಾಹಿದಾ, ಆರ್ಥಿಕ ಅಡಚಣೆಗಳನ್ನೆಲ್ಲ ಮೀರಿ ಅಣ್ಣಂದಿರ ಸಹಕಾರದಿಂದ ರಾತ್ರಿ ಹಗಲೆನ್ನದೆ ಕಲಿತು ಇದೀಗ ಸುಳ್ಯದಂತಹ ಗ್ರಾಮಾಂತರ ಪ್ರದೇಶದ ವೈದ್ಯೆ ಎಂದು ಗುರುತಿಸಿಕೊಂಡಿದ್ದಾರೆ. ತೀರಾ ಹಳ್ಳಿ ಪ್ರದೇಶದಲ್ಲಿ ಹುಟ್ಟಿ ಬೆಳೆದು ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಕಲಿತ ಝಾಹಿದಾ ತನ್ನ ಗುರಿ ಈಡೇರಿಸಲು ಸತತವಾಗಿ ಪರಿಶ್ರಮ ಪಟ್ಟು ಅದರಲ್ಲಿ ಯಶಸ್ಸು ಸಾಧಿಸಿದ್ದಾರೆ.

ಐವತ್ತೊಕ್ಲು, ಪಂಬೆತ್ತಾಡಿ, ಕಲ್ಮಡ್ಕ, ಎಣ್ಮೂರು ಎಂಬ ಆಸುಪಾಸಿನ ನಾಲ್ಕು ಗ್ರಾಮಗಳಲ್ಲೇ ಪ್ರಪ್ರಥಮ ಮುಸ್ಲಿಮ್ ವೈದ್ಯೆ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. 1ರಿಂದ 7ನೇ ತರಗತಿಯವರೆಗೆ ಪಡ್ಪಿನಂಗಡಿಯ ದ.ಕ. ಜಿಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿತ ಡಾ.ಝಾಹಿದಾ 8ರಿಂದ 10ನೇ ತರಗತಿಯ ವರೆಗೆ ಕಡಬದ ಸೈಂಟ್ ಆ್ಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿತರು. ಎಸೆಸೆಲ್ಸಿಯಲ್ಲಿ ಶಾಲೆಗೆ ಪ್ರಥಮ ಮತ್ತು ಕಡಬ ತಾಲೂಕಿಗೆ ದ್ವಿತೀಯ (602/625) ಸ್ಥಾನಿಯಾದರು. ಕಾಸರಗೋಡು ಜಿಲ್ಲೆಯ ದೇಳಿ ಎಂಬಲ್ಲಿನ ಸಅದಿಯ ಇಂಗ್ಲಿಷ್ ಮೀಡಿಯಂ ರೆಸಿಡೆನ್ಸಿಯಲ್ ಸೀನಿಯರ್ ಸೆಕೆಂಡರಿ ಸ್ಕೂಲ್‌ನಲ್ಲಿ 12ನೇ(ಸಿಬಿಎಸ್‌ಇ) ತರಗತಿ ಕಲಿತರು. ಅಲ್ಲದೆ ಕಾಲೇಜಿಗೆ ಪ್ರಥಮ (420/500) ಸ್ಥಾನಿಯಾದರು.

ಮೆರಿಟ್ ಸೀಟಿನೊಂದಿಗೆ ಶುಲ್ಕ ವಿನಾಯಿತಿ ಪಡೆದ ಅವರು ಮಂಜನಾಡಿ ಸಮೀಪದ ನರಿಂಗಾನ ಗ್ರಾಮದಲ್ಲಿರುವ ಯೆನೆಪೊಯ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಿಂದ ಬಿಎಎಂಎಸ್ ತೇರ್ಗಡೆ ಹೊಂದಿ ಕಾಲೇಜಿಗೆ ತೃತೀಯ ಸ್ಥಾನಿಯಾದರು. ಸದ್ಯ ಎಂ.ಡಿ. (ಆಯು) ಅರ್ಹತಾ ಪರೀಕ್ಷೆಯನ್ನು ಬರೆದಿರುವ ಡಾ.ಝಾಹಿದಾ ಇದರಲ್ಲಿ ರಾಜ್ಯದಲ್ಲೇ ಟಾಪ್ 10ರೊಳಗೆ ಸ್ಥಾನ ಪಡೆದಿದ್ದಾರೆ.

ಪಠ್ಯೇತರ ಚಟುವಟಿಕೆಯಲ್ಲೂ ಕ್ರಿಯಾಶೀಲರಾಗಿರುವ ಡಾ.ಝಾಹಿದಾ ಈ ಹಿಂದೆ ಇಂಟರ್ ಕಾಲೇಜ್ ಕ್ವಿಝ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿಯಾಗಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ಕಡಬ ತಾಲೂಕಿನ ಕಂದಾಯ ಇಲಾಖೆ, ಮಂಗಳೂರು ಸಿಟಿ ಎಚ್‌ಎಂಎಸ್ ಮತ್ತು ದ.ಕ. ಪ್ರಾಂಶುಪಾಲರ ಅಸೋಸಿಯೇಶನ್ ಸಹಿತ ಹಲವು ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಹಂಝ ಮಲಾರ್

contributor

Similar News