'ಹೊಟ್ಟೆಪಾಡು ಚಾಟ್ಸ್' ತೆರೆದು ಮಾದರಿಯಾದ ವಿಶೇಷ ಚೇತನ

Update: 2024-02-12 06:47 GMT

ಬೆಂಗಳೂರು: ಹುಟ್ಟಿದ ಊರಿಗೂ ಅತಿಥಿಯನ್ನಾಗಿ ಮಾಡುವ ಈ ಬೆಂಗಳೂರು, ಅರಸಿ ಬಂದ ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ರೀತಿಯ ಬದುಕಿನ ದಾರಿಯನ್ನು ತೋರಿಸಿಬಿಡುತ್ತದೆ. ಅಂತೆಯೇ, ಸ್ವಾವಲಂಬಿಯಾಗಿ ತಾನು ಬದುಕುವುದರ ಜತೆಗೆ ನಾಲ್ಕು ಮಂದಿಗೆ ಉದ್ಯೋಗ ಕೊಟ್ಟು ಮಾದರಿ ಎನ್ನಿಸಿರುವ ಪದವೀಧರ ವಿಶೇಷ ಚೇತನನ ಸ್ಫೂರ್ತಿದಾಯಕ ಬದುಕಿನ ಕಥೆ ಇದು!

ಅಂಗಾಂಗಗಳೆಲ್ಲವೂ ಸರಿಯಿದ್ದೂ ದುಡಿಯಲು ಸೋಮಾರಿತನ ತೋರುವ ಈ ಹೊತ್ತಿನಲ್ಲಿ, ಹುಬ್ಬಳ್ಳಿ ಮೂಲದ ವೀರೇಶ್ ಎಂಬ ಯುವಕ ಒಂದು ಕಾಲು ಊನವಿದ್ದರೂ ಸುಮ್ಮನೆ ಕುಳಿತುಕೊಳ್ಳದೆ ಬೆಂಗಳೂರಿನ ನಾಗರಬಾವಿಯಲ್ಲಿ ಎರಡು ವರ್ಷದ ಹಿಂದೆಯಷ್ಟೇ ‘ಹೊಟ್ಟೆಪಾಡು ಚಾಟ್ಸ್’ ಎಂಬ ಹೆಸರಿನ ಚಾಟ್ಸ್ ಸೆಂಟರ್ ಒಂದನ್ನು ತೆರೆದು ಸ್ವಾವಲಂಬಿಯಾಗಿ ಬದುಕಲು ಪ್ರಾರಂಭಿಸಿದ್ದಾರೆ.

ಮೊದಲಿಗೆ ಚಿಕ್ಕದಾಗಿ ಟ್ರಕ್ ಒಂದರಲ್ಲಿ ಚಾಟ್ಸ್ ಸೆಂಟರ್ ಅನ್ನು ಶುರು ಮಾಡಿದ ವೀರೇಶ್, ಈಗ ಅದೇ ಚಾಟ್ಸ್ ಸೆಂಟರ್‌ನಲ್ಲಿ ನಾಲ್ಕು ಮಂದಿಗೆ ಉದ್ಯೋಗ ಕೊಡುವಷ್ಟರ ಮಟ್ಟಿಗೆ ಬೆಳೆದಿದ್ದಾರೆ.

‘ಬುಟ್ಟಿ ಚಾಟ್ಸ್’ ಸ್ಪೆಷಲ್ ತಿನಿಸು: ನಮ್ಮ ಹೊಟ್ಟೆಪಾಡಿಗೋಸ್ಕರವಾಗಿ ‘ಹೊಟ್ಟೇಪಾಡು ಚಾಟ್ಸ್’ ಅಂತಲೇ ಹೆಸರಿಟ್ಟುಕೊಂಡು ದುಡಿಮೆ ಪ್ರಾರಂಭ ಮಾಡ್ದೆ ಸಾರ್!, ನಮ್ಮಲ್ಲಿ ಹತ್ತು ತರಹೇವಾರಿ ತಿನಿಸುಗಳು ಸಿಗುತ್ತವೆ. ಅವುಗಳಲ್ಲಿ ‘ಬುಟ್ಟಿ ಚಾಟ್ಸ್’ ನಮ್ಮ ಚಾಟ್ಸ್ ಸೆಂಟರ್‌ನ ಅತೀ ಸ್ಪೆಷಲ್ ತಿನಿಸಾಗಿದೆ. ಮಸಾಲ ಪುರಿ, ಪಾನಿಪುರಿ, ದಹಿಪುರಿ, ಬೇಲ್‌ಪುರಿ ಸೇರಿ ಒಂಬತ್ತೂ ಚಾಟ್ಸ್‌ಗಳಿಗೆ ಕೇವಲ 30 ರೂ.ಗಳಾದರೆ, ಬುಟ್ಟಿ ಚಾಟ್ಸ್‌ಗೆ ಮಾತ್ರ 50 ರೂ. ಇದೆ ಎಂದು ವಿವರಿಸುತ್ತಾರೆ ವೀರೇಶ್.

ಚಿತ್ರ ನಿರ್ದೇಶಕರು ಸಹಾಯ ಮಾಡಿದರು: ನನಗೆ ಚಿತ್ರ ನಿರ್ದೇಶಕ ಶಿವಮಣಿ ಅವರ ಪರಿಚಯವಿತ್ತು. ಒಮ್ಮೆ ಅವರ ಬಳಿ ಹೋಗಿ ನನಗೆ ಕೆಲಸ ಇಲ್ಲ ಅಂತಾ ಹೇಳಿಕೊಂಡಿದ್ದೆ. ತಕ್ಷಣಕ್ಕೆ ಅವರು ನನಗೆ ಸಹಾಯ ಮಾಡಿದರು. ನಂತರ ಚಾಟ್ಸ್ ತೆರೆಯಲು ಅನುಕೂಲವಾಯ್ತು. ಸಿನಿಮಾ ಕಲಾವಿದ ಜಿಮ್ ರವಿ ಅವರು ಸಹ ನನಗೆ ನೆರವಾದರು. ಆ ಇಬ್ಬರಿಗೂ ಸದಾ ಖುಣಿಯಾಗಿದ್ದೇನೆ ಎಂದು ಸ್ಮರಿಸುತ್ತಾರೆ ವೀರೇಶ್.

ಯುವಜನರು ಓದು ಮುಗಿಸಿದ ಬಳಿಕ ಯಾವುದೇ ಕೆಲಸ ಇಲ್ಲವೆಂದು ಖಾಲಿ ಕೂರಬಾರದು. ದೇವರಿದ್ದಾನೆ ಎನ್ನುವ ನಂಬಿಕೆಯಿಂದ ಕೈಗೆ ಸಿಗುವ ಸಣ್ಣ-ಪುಟ್ಟ ಕೆಲಸವಾದರೂ ನಿಷ್ಠೆಯಿಂದ ಮಾಡಲು ಪ್ರಾರಂಭಿಸಿದರೆ ಯಶಸ್ಸು ತಾನಾಗೇ ಲಭಿಸುತ್ತದೆ ಎನ್ನುತ್ತಾರೆ ವೀರೇಶ್.

ನಟ ದರ್ಶನ್ ಗುರುತಿಸಿದ ಮೇಲೆ ಜೀವನ ಬದಲಾಯಿತು

ನಟ ದರ್ಶನ್ ಅವರು ಯೂಟ್ಯೂಬ್‌ನಲ್ಲಿ ನಮ್ಮ ಹೊಟ್ಟೆಪಾಡು ಚಾಟ್ಸ್ ಬಗ್ಗೆ ನೋಡಿ ಸುದ್ದಿ ಮಾಧ್ಯಮದ ಸಂದರ್ಶನವೊಂದರಲ್ಲಿ ಮಾತಾಡಿದಾಗ ನನ್ನಂತ ವಿಶೇಷ ಚೇತನ ವ್ಯಕ್ತಿಯನ್ನು ಗುರುತಿಸುವವರಿದ್ದಾರೆ ಅಂತಾ ಬಹಳ ಖುಷಿಯಾಯ್ತು. ನಮ್ಮಂಥವರನ್ನು ಗುರುತಿಸುವವರು ಕಡಿಮೆ. ಇದು ನನ್ನಂಥ ಹಲವರಿಗೆ ಸ್ಫೂರ್ತಿಯಾಗಲಿದೆ. ನಟ ದರ್ಶನ್ ನನ್ನ ಬಗ್ಗೆ ಆಡಿದ ಮಾತುಗಳು ನನ್ನ ಜೀವನವನ್ನು ಬದಲಾಯಿಸಿದೆ. ಅವರ ಹೇಳಿಕೆಯ ನಂತರ ಗ್ರಾಹಕರ ಸಂಖ್ಯೆಯೂ ಹೆಚ್ಚಳವಾಗಿದೆ. ನಟ ದರ್ಶನ್ ಅವರು ನಮ್ಮ ಅಂಗಡಿಗೆ ಒಂದು ದಿನ ಬರ್ತಿನಿ ಅಂತ ಹೇಳಿದ್ದಾರೆ. ಬರುವ ನಿರೀಕ್ಷೆ ಇದೆ. ಬಂದಲ್ಲಿ ನಮ್ಮ ಅಂಗಡಿಯ ಫೇವರಿಟ್ ತಿಂಡಿಯಾಗಿರುವ ಬುಟ್ಟಿ ಚಾಟ್ಸ್ ಅನ್ನು ನೀಡುತ್ತೇನೆ ಎನ್ನುತ್ತಾ ಖುಷಿಪಡುತ್ತಾರೆ ವೀರೇಶ್.

ಚಾಟ್ಸ್ ಸೆಂಟರ್‌ನಲ್ಲಿ ಕನ್ನಡ ಪ್ರೇಮ

ಚಾಟ್ಸ್ ಸೆಂಟರ್‌ನಲ್ಲಿ ಕನ್ನಡದ ಪ್ರಸಿದ್ಧ ಕವಿಗಳು, ವಚನಕಾರರು, ಹೋರಾಟಗಾರರು, ಚಿತ್ರನಟರ ಭಾವಚಿತ್ರಗಳು ಕಾಣಸಿಗುತ್ತವೆ. ಅಲ್ಲದೆ, ಬದುಕಿಗೆ ಸ್ಪೂರ್ತಿ ತುಂಬುವಂತಹ ಪ್ರಸಿದ್ಧ ನಾಣ್ಣುಡಿಗಳು, ಸುಭಾಷಿತಗಳು ಹೊಟ್ಟೆಪಾಡು ಚಾಟ್ಸ್ ಸೆಂಟರ್‌ನ ಹೈಲೈಟ್ ಆಗಿದ್ದು, ಅಲ್ಲಿಗೆ ಹೋಗುವ ಪ್ರತಿಯೊಬ್ಬರನ್ನು ಆಕರ್ಷಿಸುತ್ತವೆ. ಇದೆಲ್ಲವೂ ಜನಸಾಮಾನ್ಯರನ್ನು ಸೆಳೆಯುವ ವ್ಯಾವಹಾರಿಕ ದೃಷ್ಠಿಯಲ್ಲವೇ ಎಂದು ವೀರೇಶ್ ಅವರಲ್ಲಿ ಪ್ರಶ್ನಿಸಿದರೆ, ನನ್ನದು ನಿಜವಾದ ಕನ್ನಡ ಪ್ರೇಮ. ತೋರ್ಪಡಿಕೆಗೆ ಹಾಕಿಲ್ಲ. ಓದುವಾಗಿನಿಂದಲೂ ಕನ್ನಡ ಸಾಹಿತ್ಯ, ಕಥೆ, ಕಾದಂಬರಿ, ಕವಿತೆಗಳ ಓದುವ ಹುಚ್ಚು ಹೆಚ್ಚಾಗಿತ್ತು. ಅದನ್ನು ಕೆಲಸದಲ್ಲೂ ಮುಂದುವರಿಸಿದ್ದೇನೆ. ನನಗೆ ಅನ್ನ ನೀಡುತ್ತಿರುವುದು ಕರ್ನಾಟಕ, ನಮ್ಮ ಭಾಷೆಯನ್ನು ನಾವೇ ಉಳಿಸಬೇಕು ಅನ್ನುತ್ತಾರೆ ವೀರೇಶ್.

ನಾನು ಬಿಕಾಂ ಪದವಿ ಪಡೆದಿದ್ದು, ಸರಕಾರಿ ಕೆಲಸಕ್ಕೆಂದು ಹಲವಾರು ಸಲ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆದಿದ್ದೆ. ಉದ್ಯೋಗ ಸಿಗಲಿಲ್ಲ. ಮನೆಯ ಜವಾಬ್ದಾರಿ ನನ್ನ ಹೆಗಲಿಗೆ ಬಿತ್ತು. ಆಗ ಏನಾದರೂ ಕೆಲಸ ಶುರು ಮಾಡಬೇಕೆಂದುಕೊಂಡಾಗ ಚಾಟ್ಸ್ ಸೆಂಟರ್ ತೆರೆಯುವ ಯೋಚನೆ ಬಂತು. ಈಗ ನಾನು ಬೆಳಗ್ಗೆ ಬಂಡವಾಳ ಹೂಡಿದರೆ, ಸಂಜೆಯಷ್ಟರಲ್ಲಿ ನನಗೆ ಬಂಡವಾಳದ ಜತೆಗೆ ಹೆಚ್ಚಿನ ಲಾಭವೂ ಸಿಗುತ್ತದೆ.

-ವೀರೇಶ್

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಯೋಗೇಶ್ ಮಲ್ಲೂರು

contributor

Similar News